ನವದೆಹಲಿ (ಪಿಟಿಐ): ಯುಟಿಲಿಟಿ ವಾಹನಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ದೇಶೀಯ ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಜನವರಿಯಲ್ಲಿ ಶೇ 14ರಷ್ಟು ಏರಿಕೆಯಾಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟವು (ಎಸ್‌ಐಎಎಂ) ಬುಧವಾರ ತಿಳಿಸಿದೆ.
ಜನವರಿಯಲ್ಲಿ ಒಟ್ಟು 3,93,074 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ತಿಂಗಳಲ್ಲಿ 3,46,080 ವಾಹನಗಳು ಮಾರಾಟವಾಗಿದ್ದವು ಎಂದು ತಿಳಿಸಿದೆ.
ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 26ರಷ್ಟು ಹೆಚ್ಚಾಗಿದೆ. ಒಟ್ಟು 14,95,183 ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 11,84,376 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು.
ತ್ರಿಚಕ್ರ ವಾಹನಗಳ ಮಾರಾಟವು ಶೇ 9ರಷ್ಟು ಹೆಚ್ಚಾಗಿದ್ದು, ಒಟ್ಟು 53,537 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 48,903 ವಾಹನ ಮಾರಾಟವಾಗಿದ್ದವು ಎಂದು ಒಕ್ಕೂಟ ತಿಳಿಸಿದೆ.
ಜನವರಿಯಲ್ಲಿ ಮಾರುತಿ ಸುಜುಕಿ ಇಂಡಿಯಾದ 1,66,802, ಹುಂಡೈ ಮೋಟರ್ ಇಂಡಿಯಾದ 57,115 ವಾಹನಗಳು ಮಾರಾಟವಾಗಿವೆ.
ದ್ವಿಚಕ್ರ ವಾಹನ ವಿಭಾಗದಲ್ಲಿ ಹೀರೊ ಮೋಟೊಕಾರ್ಪ್ 3,89,752, ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ 1,83,638, ಬಜಾಜ್ ಆಟೊ 1,78,056, ಟಿವಿಎಸ್ 1,24,664 ಹಾಗೂ ಸುಜುಕಿ ಮೋಟರ್ ಸೈಕಲ್ ಇಂಡಿಯಾದ 78,477 ದ್ವಿಚಕ್ರ ವಾಹನಗಳು ಮಾರಾಟವಾಗಿವೆ ಎಂದು ತಿಳಿಸಿದೆ.