ಸೋಮವಾರ, ಸೆಪ್ಟೆಂಬರ್ 20, 2021
20 °C

ಪ್ರಶ್ನೋತ್ತರ: ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಯು.ಪಿ. ಪುರಾಣಿಕ್ Updated:

ಅಕ್ಷರ ಗಾತ್ರ : | |

Prajavani

ರಮಾಮಣಿ, ಕೆ.ಆರ್‌. ಪುರ, ಬೆಂಗಳೂರು

l ಪ್ರಶ್ನೆ: ನಾನು ಐ.ಟಿ. ಕಂಪನಿಯೊಂದರಲ್ಲಿ ಕೆಲಸ ಮಾಡುತ್ತೇನೆ. ನನ್ನ ವಯಸ್ಸು 23 ವರ್ಷ. ತಿಂಗಳ ಸಂಬಳ ₹ 82 ಸಾವಿರ. ಕಡಿತ; ಪಿಎಫ್‌ ₹8,200, ಎಲ್‌ಐಸಿ ₹ 5 ಸಾವಿರ. ತಿಂಗಳಿಗೆ ಎಲ್ಲ ಖರ್ಚು ಕಳೆದು ₹ 50 ಸಾವಿರ ಉಳಿಸಬಹುದು. ಆರ್‌.ಡಿ. ಹಾಗೂ ನಗದು ಸರ್ಟಿಫಿಕೇಟ್‌ಗಳಲ್ಲಿ ಗೊಂದಲವಿದೆ. ತೆರಿಗೆ ಉಳಿಸಲು ಹಾಗೂ ಆರ್ಥಿಕ ಶಿಸ್ತು ಪಾಲಿಸಲು ನನಗೆ ಐದು ವರ್ಷಗಳ ಸರಳ ಆರ್ಥಿಕ ಯೋಜನೆ ಹಾಕಿಕೊಡಿ. ನಾನು ವಿದ್ಯಾರ್ಥಿಯಾಗಿದ್ದಾಗಿನಿಂದ ನಿಮ್ಮ ಅಂಕಣ ಓದುತ್ತಿದ್ದೇನೆ.

ಉತ್ತರ: ಪಿಎಫ್‌ ಹಾಗೂ ವಿಮೆಗೆ ನೀವು ಗರಿಷ್ಠ ₹ 1.50 ಲಕ್ಷ ತುಂಬುತ್ತಿದ್ದು, ಸೆಕ್ಷನ್‌ 80ಸಿಯ ವಿನಾಯಿತಿಯನ್ನು ಸಂಪೂರ್ಣ ಪಡೆದಂತಾಗಿದೆ. ಸೆಕ್ಷನ್‌ 80ಸಿಸಿಡಿ (1ಬಿ) ಆಧಾರದ ಮೇಲೆ ವಾರ್ಷಿಕವಾಗಿ ಕನಿಷ್ಠ ₹ 50 ಸಾವಿರವನ್ನು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ತೊಡಗಿಸಿದರೆ 80ಸಿ ಹೊರತಾಗಿ ₹ 50 ಸಾವಿರವನ್ನು ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಇನ್ನು, ಉಳಿತಾಯದ ವಿಚಾರ. ನಿಮ್ಮ ಮದುವೆಯ ತನಕ ₹ 5 ಸಾವಿರದ ಒಂದು ವರ್ಷದ ಆರ್‌.ಡಿ. ಮಾಡುತ್ತಾ ಬಂದು ವರ್ಷಾಂತ್ಯಕ್ಕೆ ಬಂಗಾರದ ನಾಣ್ಯ ಕೊಳ್ಳಿ ಹಾಗೂ ಬ್ಯಾಂಕ್‌ ಲಾಕರಿನಲ್ಲಿ ಇಡಿ. ಎನ್‌ಪಿಎಸ್‌ ಹಾಗೂ ₹ 5 ಸಾವಿರ ಆರ್‌.ಡಿ. ನಂತರ ಉಳಿಯುವ ₹ 40 ಸಾವಿರವನ್ನು ಐದು ವರ್ಷಗಳ ಅವಧಿಗೆ ಆರ್‌.ಡಿ. ಮಾಡಿದರೆ ಐದು ವರ್ಷಗಳ ಅಂತ್ಯಕ್ಕೆ ₹ 27.66 ಲಕ್ಷ ಪಡೆಯಿರಿ. ಈ ದೊಡ್ಡ ಮೊತ್ತದಿಂದ ಒಂದು ನಿವೇಶನ ಕೊಳ್ಳಿರಿ. ಆರ್‌.ಡಿ. ಮತ್ತು ನಗದು ಸರ್ಟಿಫಿಕೇಟ್‌ ಇವುಗಳ ವ್ಯತ್ಯಾಸದ ವಿಚಾರ. ಆರ್‌.ಡಿ. ಪ್ರತಿ ತಿಂಗಳೂ ಕಡ್ಡಾಯವಾಗಿ ತುಂಬುವ ಒಂದು ಕ್ರಮಬದ್ಧವಾದ ಉಳಿತಾಯ. ಇದರಿಂದ ಆರ್ಥಿಕ ಶಿಸ್ತು ಬಂದಂತಾಗುತ್ತದೆ. ಒಮ್ಮೆ ಆರ್‌.ಡಿ. ಮಾಡಿದರೆ ಅವಧಿ ತನಕ ಬಡ್ಡಿದರದಲ್ಲಿ ಬದಲಾವಣೆ ಇರುವುದಿಲ್ಲ. ನಗದು ಸರ್ಟಿಫಿಕೇಟ್‌ ಪ್ರತಿ ತಿಂಗಳು ಕೊಳ್ಳುವಾಗ ಬಡ್ಡಿದರದಲ್ಲಿ ಬದಲಾಗಬಹುದು. ಈ ಎರಡೂ ಠೇವಣಿಗಳಲ್ಲಿ ಗ್ರಾಹಕರು ಚಕ್ರಬಡ್ಡಿ ಪಡೆಯಬಹುದು. ಇನ್ನೂ ಹೆಚ್ಚಿನ ಮಾಹಿತಿಗೆ ನನಗೆ ಕರೆ ಮಾಡಿ.

ರಾಮಚಂದ್ರಪ್ಪ ಸಿ.ಆರ್‌., ದಾವಣಗೆರೆ

l ಪ್ರಶ್ನೆ: ನಮ್ಮ ಆಸ್ತಿ ಯಾವುದೋ ಕಾರಣದಿಂದ ನಮ್ಮ ಅಣ್ಣನ ಮಗನ ಹೆಸರಿಗೆ ವರ್ಗಾವಣೆ ಆಗಿತ್ತು. ಈಗ ಅವನು ನಮ್ಮ ಹೆಸರಿಗೆ ದಾನ ಪತ್ರ ಮುಖೇನ ಆಸ್ತಿಯನ್ನು ತಿರುಗಿ ವರ್ಗಾಯಿಸಬಹುದೇ? ಇದರಿಂದ ತೆರಿಗೆ ಬಾರದಿರಲು ಮಾರ್ಗ ತಿಳಿಸಿರಿ.

ಉತ್ತರ: 1998ರ ಅಕ್ಟೋಬರ್ 1ರಿಂದ ಗಿಫ್ಟ್‌ ಟ್ಯಾಕ್ಸ್‌ ರದ್ದುಪಡಿಸಲಾಗಿದೆ. ಆದರೆ ಆಸ್ತಿ ವರ್ಗಾವಣೆ ವಿಚಾರದಲ್ಲಿ ಬಂಡವಾಳವೃದ್ಧಿ ತೆರಿಗೆ ಇರುತ್ತದೆ. ರಕ್ತ ಸಂಬಂಧಿಗಳೊಳಗೆ ಹಣ ಅಥವಾ ಆಸ್ತಿಯನ್ನು ದಾನ ರೂಪದಲ್ಲಿ ವರ್ಗಾಯಿಸಿದರೆ ಯಾವ ತೆರಿಗೆಯೂ ಬರುವುದಿಲ್ಲ. ಆದರೆ ಹೀಗೆ ದಾನ ಪಡೆದವರು ಮುಂದೆ ಆಸ್ತಿ ಮಾರಾಟ ಮಾಡುವಾಗ ತೆರಿಗೆ ಕೊಡಬೇಕಾಗುತ್ತದೆ. ನಿಮ್ಮ ಅಣ್ಣನ ಮಗ ನಿಮಗೆ ದಾನ ಪತ್ರದ ಮುಖಾಂತರ ಆಸ್ತಿಯನ್ನು ವರ್ಗಾಯಿಸಬಹುದು ಹಾಗೂ ಈ ವಿಚಾರದಲ್ಲಿ ನಿಮಗಾಗಲಿ ನಿಮ್ಮ ಅಣ್ಣನ ಮಗನಿಗಾಗಲಿ ಯಾವ ತೆರಿಗೆಯೂ ಬರುವುದಿಲ್ಲ.

ಶಾಂತಾ, ಜೆ.ಪಿ. ನಗರ, ಬೆಂಗಳೂರು

l ಪ್ರಶ್ನೆ: ನನ್ನ ಪತಿ ತಮ್ಮ ಹೆಸರಿನಲ್ಲಿರುವ ನಿವೇಶನದಲ್ಲಿ ಮನೆ ಕಟ್ಟಿಸಲು ಗೃಹ ಸಾಲ ಪಡೆದಿದ್ದಾರೆ. ಅವರಿಗೆ ಹೆಚ್ಚಿನ ವಾರ್ಷಿಕ ವರಮಾನ ಇರುವುದಿಲ್ಲವಾದ್ದರಿಂದ ಗೃಹಸಾಲವನ್ನು ಬ್ಯಾಂಕ್‌ನವರು ನನ್ನ ಜಾಮೀನಿನ ಮೇರೆಗೆ ಕೊಟ್ಟಿರುತ್ತಾರೆ. ನನ್ನ ಪತಿಗಿಂತ ನನಗೆ ಹೆಚ್ಚಿನ ವಾರ್ಷಿಕ ವರಮಾನವಿದ್ದು ಗೃಹ ಸಾಲದ ತೆರಿಗೆ ವಿನಾಯಿತಿ ಪಡೆಯಲು ನನಗೆ ಮಾರ್ಗದರ್ಶನ ಮಾಡಿ.

ಉತ್ತರ: ಗೃಹ ಸಾಲದ ಮಾಸಿಕ ಕಂತು ಸೆಕ್ಷನ್‌ 80ಸಿ ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಹಾಗೂ ಗೃಹ ಸಾಲದ ಬಡ್ಡಿ ಸೆಕ್ಷನ್‌ 24 (ಬಿ) ಆಧಾರದ ಮೇಲೆ ಗರಿಷ್ಠ ₹ 2 ಲಕ್ಷ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದಾದರೂ ಈ ಸವಲತ್ತು ಪಡೆಯಲು ನಿವೇಶನ ಹೊಂದಿದ ವ್ಯಕ್ತಿಗೆ ಮಾತ್ರ ಸೀಮಿತವಾಗಿದೆ. ನಿವೇಶನ ಜಂಟಿ ಹೆಸರಿನಲ್ಲಿದ್ದರೆ ಇಬ್ಬರೂ ವಿನಾಯಿತಿ ಮಿತಿಯೊಳಗೆ ವಿನಾಯಿತಿ ಪಡೆಯಬಹುದು. ನಿವೇಶನ ನಿಮ್ಮ ಪತಿಯ ಹೆಸರಿನಲ್ಲಿದ್ದು ನೀವು ಗೃಹ ಸಾಲಕ್ಕೆ ಜಾಮೀನು ಹಾಕಿದ್ದರೂ ಸೆಕ್ಷನ್‌ 80ಸಿ ಹಾಗೂ 24 (ಬಿ) ಇವುಗಳ ಪ್ರಯೋಜನ ಪಡೆಯುವಂತಿಲ್ಲ. ಯುವ ಜನರಿಗೊಂದು ಕಿವಿಮಾತು; ಮುಖ್ಯವಾಗಿ ಕೆಲಸದಲ್ಲಿರುವ ದಂಪತಿ ನಿವೇಶನ, ಮನೆ, ಫ್ಲ್ಯಾಟ್ ಕೊಳ್ಳುವಾಗ ಜಂಟಿಯಾಗಿ ಕೊಳ್ಳಿರಿ. ಹೀಗೆ ಮಾಡುವುದರಿಂದ ಗೃಹ ಸಾಲ ಪಡೆಯುವಾಗ ತೆರಿಗೆ ವಿನಾಯಿತಿ ಪಡೆಯುವುದು ಮಾತ್ರವಲ್ಲ ಜೀವನದಲ್ಲಿ ಭದ್ರತೆ ಕೂಡಾ ಇರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು