ಶುಕ್ರವಾರ, ಸೆಪ್ಟೆಂಬರ್ 24, 2021
24 °C
15ನೇ ಹಣಕಾಸು ಆಯೋಗದ ಗಮನಕ್ಕೆ ತಂದ ಆರ್‌ಬಿಐ

ರಾಜ್ಯಗಳ ವಿತ್ತೀಯ ಕೊರತೆ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಸರ್ಕಾರಗಳು ಘೋಷಿಸುವ ಜನಪ್ರಿಯ ಕಾರ್ಯಕ್ರಮಗಳಿಂದ ಅವುಗಳ ವಿತ್ತೀಯ ಕೊರತೆ ಗಮನಾರ್ಹವಾಗಿ ಹೆಚ್ಚಳಗೊಳ್ಳುತ್ತದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಕಳವಳ ವ್ಯಕ್ತಪಡಿಸಿದೆ.

ಹದಿನೈದನೆ ಹಣಕಾಸು ಆಯೋಗ ಮತ್ತು ಆರ್‌ಬಿಐ ಉನ್ನತ ಅಧಿಕಾರಿಗಳ ಮಧ್ಯೆ ಇಲ್ಲಿ ನಡೆದ ಸಭೆಯಲ್ಲಿ, ಸರ್ಕಾರಗಳು ಆರ್ಥಿಕ ಶಿಸ್ತಿನಿಂದ ವಿಮುಖವಾಗುತ್ತಿರುವ ಬಗ್ಗೆ ಕೇಂದ್ರೀಯ ಬ್ಯಾಂಕ್ ತನ್ನ ಆತಂಕವನ್ನು ಪುನರುಚ್ಚರಿಸಿದೆ.

ಕೃಷಿ ಸಾಲ ಮನ್ನಾ ಮತ್ತು ಹಣಕಾಸು ನೆರವು ನೀಡುವ ಘೋಷಣೆಗಳಿಂದ ಸರ್ಕಾರಗಳ ವಿತ್ತೀಯ ಕೊರತೆಯು ವರ್ಷದಿಂದ ವರ್ಷಕ್ಕೆ ಹೆಚ್ಚಳಗೊಳ್ಳುತ್ತದೆ ಎಂದು ಎಚ್ಚರಿಸಿದೆ.

ಹಣಕಾಸು ಆಯೋಗಕ್ಕೆ ಸಲ್ಲಿಸಿದ ಮಾಹಿತಿಯಲ್ಲಿ, ಕೇಂದ್ರೀಯ ಬ್ಯಾಂಕ್‌ ತನ್ನ ಆತಂಕ ದಾಖಲಿಸಿದೆ. ಈ ಹಿಂದೆ ವಿದ್ಯುತ್‌ ವಲಯಕ್ಕೆ ರಾಜ್ಯ ಸರ್ಕಾರಗಳು ಬಿಡುಗಡೆ ಮಾಡಿದ್ದ ಉದಯ್‌ ಬಾಂಡ್‌ಗಳಿಂದ ವಿತ್ತೀಯ ಕೊರತೆ ಹೆಚ್ಚಳಗೊಂಡಿತ್ತು.

ಈಗ, ಸಾರ್ವತ್ರಿಕ ಚುನಾವಣೆ ಮುನ್ನ ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ರೈತರು ಮತ್ತು ಬಡವರಿಗಾಗಿ ಅನೇಕ ಜನಪ್ರಿಯ ಯೋಜನೆಗಳನ್ನು ಪ್ರಕಟಿಸಿದ್ದವು.

ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಪಾವತಿಸಲಾಗುವುದು ಎಂದು ಪ್ರಮುಖ ರಾಜಕೀಯ ಪಕ್ಷಗಳು ಹೇಳಿಕೊಂಡಿವೆ. ಇದರಿಂದ ಸರ್ಕಾರಗಳ ವರಮಾನ ಮತ್ತು ವೆಚ್ಚದ ನಡುವಣ ಅಂತರ ಮತ್ತು ಸಾಲದ ಹೊರೆ ಹೆಚ್ಚುವ ಬಗ್ಗೆ ಆರ್‌ಬಿಐ ಗಮನ ಸೆಳೆದಿದೆ.

ರಾಜ್ಯಗಳ ಮಟ್ಟದಲ್ಲಿ ಹಣಕಾಸು ಆಯೋಗ ಸ್ಥಾಪಿಸುವ ಅಗತ್ಯವನ್ನೂ ಆರ್‌ಬಿಐ ಬಲವಾಗಿ ಪ್ರತಿಪಾದಿಸಿದೆ. ರಾಜ್ಯ ಸರ್ಕಾರಗಳು ನಗದು ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಅಗತ್ಯ ಇರುವುದನ್ನೂ ಸಭೆಯಲ್ಲಿ ಚರ್ಚಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು