ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಕಾಂ : ಅನಿಲ ಅಂಬಾನಿರಾಜೀನಾಮೆ ಪತ್ರ ತಿರಸ್ಕೃತ

Last Updated 24 ನವೆಂಬರ್ 2019, 13:46 IST
ಅಕ್ಷರ ಗಾತ್ರ

ನವದೆಹಲಿ: ಕಂಪನಿಯ ಅಧ್ಯಕ್ಷ ಅನಿಲ್‌ ಅಂಬಾನಿ ಮತ್ತು ಇತರ ನಾಲ್ವರು ನಿರ್ದೆಶಕರು ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ಸಾಲಗಾರರು ತಿರಸ್ಕರಿಸಿದ್ದಾರೆ ಎಂದು ರಿಲಯನ್ಸ್‌ ಕಮ್ಯುನಿಕೇಷನ್ಸ್‌ ತಿಳಿಸಿದೆ.

ಈ ತಿಂಗಳ 20ರಂದು ಸಭೆ ಸೇರಿದ್ದ ಸಾಲಗಾರರ ಸಮಿತಿಯು ಈ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬಂದಿದೆ. ಈ ರಾಜೀನಾಮೆ ಪತ್ರಗಳನ್ನು ಸ್ವೀಕರಿಸುವುದಿಲ್ಲ. ಕಂಪನಿ ವಿರುದ್ಧ ಈಗಾಗಲೇ ನಡೆಯುತ್ತಿರುವ ಸಾಲ ವಸೂಲಾತಿ ಪ್ರಕ್ರಿಯೆಗೆ ಸಹಕರಿಸಬೇಕು ಎಂದು ಸಭೆ ಒಮ್ಮತದ ತೀರ್ಮಾನಕ್ಕೆ ಬಂದಿರುವುದನ್ನು ಕಂಪನಿಯು ಷೇರುಪೇಟೆಗೆ ತಿಳಿಸಿದೆ.

ಅನಿಲ್‌ ಅಂಬಾನಿ ಮತ್ತು ನಾಲ್ವರು ನಿರ್ದೇಶಕರು ಇತ್ತೀಚೆಗೆ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದರು.

ರಾಜೀನಾಮೆ ಪತ್ರ ಸ್ವೀಕರಿಸದಿರುವುದನ್ನು ಅನಿಲ್‌ ಮತ್ತು ಇತರ ನಿರ್ದೇಶಕರ ಗಮನಕ್ಕೆ ತರಲಾಗಿದೆ. ತಮ್ಮ ಹುದ್ದೆಯಲ್ಲಿ ಮುಂದುವರೆದು ಕರ್ತವ್ಯ ಮತ್ತು ಹೊಣೆಗಾರಿಕೆಗಳನ್ನು ನಿಭಾಯಿಸಬೇಕು. ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ಸಹಕರಿಸಬೇಕು ಎನ್ನುವುದನ್ನು ಅವರೆಲ್ಲರ ಗಮನಕ್ಕೆ ತರಲಾಗಿದೆ.

ಸರ್ಕಾರಕ್ಕೆ ಶಾಸನಬದ್ಧ ಶುಲ್ಕ ಪಾವತಿಸಲು ಸುಪ್ರೀಂಕೋರ್ಟ್‌ ತೀರ್ಪು ನೀಡಿದ ನಂತರ ಕಂಪನಿಯು ₹ 28,314 ಕೋಟಿಗಳನ್ನು ಪ್ರತ್ಯೇಕವಾಗಿ ತೆಗೆದು ಇರಿಸಿದೆ. ಹೀಗಾಗಿ ಈ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು ₹ 30,142 ಕೋಟಿ ನಷ್ಟ ದಾಖಲಿಸಿದೆ.

ಸ್ವೀಡನ್ನಿನ ದೂರಸಂಪರ್ಕ ಸಂಸ್ಥೆ ಎರಿಕ್ಸನ್‌ ಕೋರಿಕೆ ಸಂಬಂಧ ಕಂಪನಿಯು ಈಗಾಗಲೇ ಸಾಲ ವಸೂಲಾತಿ ಪ್ರಕ್ರಿಯೆಗೆ ಒಳಪಟ್ಟಿದೆ. ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯು (ಎನ್‌ಸಿಎಲ್‌ಟಿ) ಕಂಪನಿಯ ಮೇಲಿನ ನಿಯಂತ್ರಣವನ್ನು ಸಾಲ ವಸೂಲಿ ಸಂಸ್ಥೆಗೆ ವಹಿಸಿದೆ.

ಸಾಲ ಮರುಪಾವತಿಸಲು ಕಂಪನಿಯು ತನ್ನೆಲ್ಲ ಸಂಪತ್ತನ್ನು ಮಾರಾಟಕ್ಕೆ ಇರಿಸಿದೆ. 122 ಮೆಗಾಹರ್ಟ್ಸ್‌ ತರಂಗಾಂತರ (₹ 14 ಸಾವಿರ ಕೋಟಿ), ಮೊಬೈಲ್‌ ಟವರ್ ವಹಿವಾಟು (₹ 7 ಸಾವಿರ ಕೋಟಿ), ಆಪ್ಟಿಕಲ್‌ ಫೈಬರ್‌ ಸಂಪರ್ಕ ಜಾಲ (₹ 3 ಸಾವಿರ ಕೋಟಿ) ಮತ್ತು ₹ 4 ಸಾವಿರ ಕೋಟಿ ಮೊತ್ತದ ಡೇಟಾ ಕೇಂದ್ರಗಳನ್ನು ಮಾರಾಟ ಮಾಡಲು ಮುಂದಾಗಿದೆ.

2005ರಲ್ಲಿ ಅಣ್ಣ ಮುಕೇಶ್‌ ಅಂಬಾನಿ ಜತೆಗೆ ಸಂಪತ್ತು ಹಂಚಿಕೊಂಡ ನಂತರ ಅನಿಲ‌್ ಅವರು ಆರ್‌ಕಾಂ ಮುಖಸ್ಥನ ಹುದ್ದೆಗೆ ಏರಿದ್ದರು. ಹಿಂದೊಮ್ಮೆ ವಿಶ್ವದ ಮುಂಚೂಣಿ 10 ಸಿರಿವಂತರ ಪಟ್ಟಿಯಲ್ಲಿದ್ದ ಅನಿಲ್‌, ಈಗ ಸಾಲ ಬಾಕಿ ತೀರಿಸಲು ತಮ್ಮ ಸಂಪತ್ತು ಮಾರಾಟ ಮಾಡಲು ಹರ ಸಾಹಸ ಪಡುತ್ತಿದ್ದಾರೆ.

₹ 33,000 ಕೋಟಿ

ಆರ್‌ಕಾಂ ಗ್ರೂಪ್‌ನ ಒಟ್ಟಾರೆ ಜಾಮೀನು ಆಧಾರಿತ ಸಾಲ

₹ 49,000

ಸಾಲಗಾರರು ಮುಂದಿಟ್ಟಿರುವ ಬಾಕಿ ಸಾಲದ ಮೊತ್ತ

₹ 30,142 ಕೋಟಿ

ದ್ವಿತೀಯ ತ್ರೈಮಾಸಿಕದಲ್ಲಿನ ನಷ್ಟ

₹ 28,314

ಶುಲ್ಕ ಪಾವತಿಗೆ ತೆಗೆದು ಇರಿಸಿದ ಮೊತ್ತ

₹ 23,327 ಕೋಟಿ

ಸರ್ಕಾರಕ್ಕೆ ಪಾವತಿಸಬೇಕಾಗಿರುವ ಲೈಸೆನ್ಸ್‌ ಶುಲ್ಕ

₹ 4,987 ಕೋಟಿ

ತರಂಗಾಂತರ ಬಳಕೆ ಶುಲ್ಕದ ಬಾಕಿ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT