ಸೋಮವಾರ, ನವೆಂಬರ್ 29, 2021
20 °C

ತೈಲ–ರಾಸಾಯನಿಕ ವಹಿವಾಟು: ರಿಲಯನ್ಸ್–ಆರಾಮ್ಕೊ ಒಪ್ಪಂದ ರದ್ದು?

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ನವದೆಹಲಿ/ದುಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ (ಆರ್‌ಐಎಲ್‌) ತೈಲ–ರಾಸಾಯನಿಕ ವಹಿವಾಟಿನಲ್ಲಿ ಒಂದು ಪಾಲನ್ನು ಖರೀದಿಸಲು, ರಿಲಯನ್ಸ್ ಮತ್ತು ಸೌದಿ ಆರಾಮ್ಕೊ ಕಂಪನಿಗಳ ನಡುವೆ ಆಗಿದ್ದ ಒಪ್ಪಂದ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.

ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ತಗ್ಗಿಸಬೇಕು ಎಂಬ ನಿಲುವು ವಿಶ್ವದ ಹಲವೆಡೆ ಬಲಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ರಿಲಯನ್ಸ್‌ನ ತೈಲ–ರಾಸಾಯನಿಕ ವಹಿವಾಟಿನ ಮೌಲ್ಯವನ್ನು ಹೇಗೆ ನಿಗದಿ ಮಾಡಬೇಕು ಎಂಬ ವಿಚಾರವಾಗಿ ಉಂಟಾದ ಗೊಂದಲದ ಕಾರಣದಿಂದಾಗಿ ಒಪ್ಪಂದ ರದ್ದಾಗಿದೆ ಎಂದು ಗೊತ್ತಾಗಿದೆ.

ರಿಲಯನ್ಸ್‌ನ ತೈಲ–ರಾಸಾಯನಿಕ ವಹಿವಾಟಿನಲ್ಲಿ ಶೇಕಡ 20ರಷ್ಟು ಪಾಲು ಖರೀದಿಸಲು ಆರಾಮ್ಕೊ ಕಂಪನಿಯು 2019ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದವನ್ನು ಪುನರ್‌ ಪರಿಶೀಲನೆಗೆ ಒಳಪಡಿಸುವುದಾಗಿ ಎರಡೂ ಕಂಪನಿಗಳು ಹಿಂದಿನ ವಾರ ಘೋಷಿಸಿದ್ದವು.

ಈ ಒಪ್ಪಂದ ಮುರಿದುಬಿದ್ದಿರುವುದು ಜಾಗತಿಕ ಮಟ್ಟದಲ್ಲಿ ಇಂಧನ ಬಳಕೆಯಲ್ಲಿ ಆಗುತ್ತಿರುವ ಪರಿವರ್ತನೆಗಳನ್ನು ಪ್ರತಿಫಲಿಸುವಂತೆ ಇದೆ. ಹವಾಮಾನ ಬದಲಾವಣೆ ವಿಚಾರವಾಗಿ ಗ್ಲಾಸ್ಗೊದಲ್ಲಿ ಈಚೆಗೆ ನಡೆದ ಮಾತುಕತೆಗಳ ನಂತರದಲ್ಲಿ ಕಚ್ಚಾ ತೈಲ ಸಂಸ್ಕರಣೆ ಮತ್ತು ಪೆಟ್ರೊಕೆಮಿಕಲ್ ಘಟಕಗಳ ಮೌಲ್ಯ ತಗ್ಗಿದೆ ಎಂದು ಮೂಲಗಳು ವಿವರಿಸಿವೆ.

ರಿಲಯನ್ಸ್ ಕಂಪನಿಯು ಗೋಲ್ಡ್‌ಮನ್‌ ಸ್ಯಾಚ್ಸ್‌ ಕಡೆಯಿಂದ ಸಲಹೆಗಳನ್ನು ಪಡೆಯುತ್ತಿತ್ತು. ಆರಾಮ್ಕೊ ಕಂಪನಿಯು ಸಿಟಿಗ್ರೂಪ್ ಕಡೆಯಿಂದ ಸಲಹೆ ತೆಗೆದುಕೊಳ್ಳುತ್ತಿತ್ತು. ಜೆಫರೀಸ್ ಸಂಸ್ಥೆಯು ರಿಲಯನ್ಸ್‌ನ ಇಂಧನ ವಹಿವಾಟಿನ ಅಂದಾಜು ಮೌಲ್ಯವನ್ನು ತಗ್ಗಿಸಿದೆ.

ಈ ನಡುವೆ, ಒಪ್ಪಂದ ಮುರಿದುಬಿದ್ದಿದೆಯೇ ಎಂಬುದನ್ನು ಆರಾಮ್ಕೊ ಕಂಪನಿಯು ಖಚಿತಪಡಿಸಿಲ್ಲ. ರಿಲಯನ್ಸ್ ಜೊತೆ ಬಹುಕಾಲದ ಸಂಬಂಧ ಇದೆ, ಭಾರತದಲ್ಲಿ ಹೂಡಿಕೆ ಅವಕಾಶ ಅರಸುವುದನ್ನು ಮುಂದುವರಿಸಲಾಗುತ್ತದೆ ಎಂದು ಆರಾಮ್ಕೊ ಹೇಳಿದೆ. ಆರಾಮ್ಕೊ ಪಾಲಿಗೆ ಭಾರತದಲ್ಲಿ ಖಾಸಗಿ ವಲಯದಲ್ಲಿನ ಹೂಡಿಕೆಗಳಿಗೆ ತಾನು ಆದ್ಯತೆಯ ಪಾಲುದಾರನಾಗಿ ಮುಂದುವರಿಯುವುದಾಗಿ ರಿಲಯನ್ಸ್ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು