ಮಂಗಳವಾರ, ಜುಲೈ 14, 2020
28 °C

ರಿಲಯನ್ಸ್‌ ಸಿಬ್ಬಂದಿ ವೇತನ ಶೇ 10–50ರಷ್ಟು ಕಡಿತ: ಲಾಭಾಂಶ ಶೇ 39ರಷ್ಟು ಕುಸಿತ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌

ನವದೆಹಲಿ: ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕಾಗಿ ದೇಶದಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದ ಉದ್ಯಮಕ್ಕೆ ಹೊಡೆತ ಬಿದ್ದಿರುವ ಪರಿಣಾಮ, ಭಾರತದಲ್ಲಿ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಬಹುತೇಕ ಸಿಬ್ಬಂದಿಯ ವೇತನ ಕಡಿತಗೊಳಿಸುವ ನಿರ್ಧಾರ ಕೈಗೊಂಡಿದೆ. ಕಂಪನಿಯ ಮುಖ್ಯಸ್ಥ ಹಾಗೂ ದೇಶದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ತಮ್ಮ ಎಲ್ಲ ಸಂಭಾವನೆ ಪಡೆಯದಿರಲು ಸಮ್ಮತಿಸಿದ್ದಾರೆ.

ಕಂಪನಿಯ ನೌಕರರ ವೇತನದಲ್ಲಿ ಶೇ 10ರಿಂದ ಶೇ 50ರ ವರೆಗೂ ಕಡಿತಗೊಳಿಸಲು ರಿಲಯನ್ಸ್‌ ನಿರ್ಧರಿಸಿದೆ. ಇದರೊಂದಿಗೆ ವಾರ್ಷಿಕ ಬೋನಸ್‌ ಹಾಗೂ ಕಾರ್ಯನಿರ್ವಹಣೆ ಆಧರಸಿ ಪ್ರೋತ್ಸಾಹಕ ಧನ ನೀಡುವುದನ್ನೂ ಮುಂದೂಡಲಾಗಿದೆ. 

ಮಾರ್ಚ್‌ 25ರಿಂದ ಆರಂಭವಾದ ಲಾಕ್‌ಡೌನ್‌ನಿಂದ ತೈಲ ಬೇಡಿಕೆ ಕುಸಿದಿದೆ. ಕಾರ್ಖಾನೆಗಳು ಸ್ಥಗಿತಗೊಂಡಿವೆ, ಕಚೇರಿಗಳು ಮುಚ್ಚಿವೆ, ಬಸ್‌, ರೈಲು ಹಾಗೂ ವಿಮಾನ ಹಾರಾಟ ನಿಷೇಧಿಸಲಾಗಿದೆ. ಸಾರ್ವಜನಿಕರ ಓಡಾಟಕ್ಕೂ ನಿರ್ಬಂಧ ವಿಧಿಸಲಾಗಿದ್ದು, ಸರಕು ಸಾಗಣೆಗೂ ಅಡ್ಡಿಯಾಗಿದೆ. ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ಪೆಟ್ರೋಕೆಮಿಕಲ್‌ ಹಾಗೂ ಸಂಸ್ಕರಿಸಿದ ತೈಲ ಉತ್ಪನ್ನಗಳಿಗೆ ಬೇಡಿಕೆ ಕುಸಿದಿರುವುದರಿಂದ ರಿಲಯನ್ಸ್‌ ಹೈಡ್ರೊಕಾರ್ಬನ್‌ ಉದ್ಯಮಕ್ಕೆ ಪೆಟ್ಟು ಬಿದ್ದಿದೆ. 

ಕಾರ್ಯನಿರ್ವಹಣಾ ವೆಚ್ಚ ಹಾಗೂ ನಿಗದಿತ ವೆಚ್ಚಗಳನ್ನು ಸರಿದೂಗಿಸಲು ವೇತನ ಕಡಿತ ಅನಿವಾರ್ಯವಾಗಿದೆ ಎಂದು ಕಂಪನಿಯ ವಿವಿಧ ವಿಭಾಗಗಳ ಮುಖ್ಯಸ್ಥರು ಸಿಬ್ಬಂದಿಗೆ ರವಾನಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ. ಮುಕೇಶ್‌ ಅಂಬಾನಿ ತಮ್ಮ ₹15 ಕೋಟಿ ಸಂಭಾವನೆಯನ್ನು ಪಡೆಯದಿರಲು ನಿರ್ಧರಿಸಿದ್ದಾರೆ. ರಿಲಯನ್ಸ್‌ ಮಂಡಳಿಯ ಕಾರ್ಯಕಾರಿ ನಿರ್ದೇಶಕರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಶೇ 30ರಿಂದ ಶೇ 50ರಷ್ಟು ವೇತನ ಕಡಿತಕ್ಕೆ ಒಳಗಾಗಲಿದ್ದಾರೆ. 

ವಾರ್ಷಿಕ ₹15 ಲಕ್ಷಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ಸಿಬ್ಬಂದಿಗೆ ವೇತನ ಕಡಿತವಾಗುವುದಿಲ್ಲ. ಅದಕ್ಕಿಂತಲೂ ಹೆಚ್ಚು ವೇತನ ಪಡೆಯುತ್ತಿರುವವರಿಗೆ ನಿಗದಿತ ವೇತನದಲ್ಲಿ ಶೇ 10ರಷ್ಟು ಕಡಿತಗೊಳ್ಳಲಿದೆ. ಮುಕೇಶ್‌ ಅಂಬಾನಿ ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ವಾರ್ಷಿಕ ಸಂಭಾವನೆ ರೂಪದಲ್ಲಿ ₹15 ಕೋಟಿ ಪಡೆಯುತ್ತಿದ್ದಾರೆ. 2008–09ರಿಂದಲೂ ಅವರು ಪಡೆಯುತ್ತಿರುವ ವೇತನದಲ್ಲಿ ಬದಲಾವಣೆಯಾಗಿಲ್ಲ. 

ಲಾಭಾಂಶ ಶೇ 39ರಷ್ಟು ಕುಸಿತ: 

ರಿಲಯನ್ಸ್‌ ಇಂಡಸ್ಟ್ರೀಸ್‌ ಲಾಭಾಂಶ ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 39ರಷ್ಟು ಕಡಿಮೆಯಾಗಿ ₹6,348 ಕೋಟಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯ ಲಾಭಾಂಶ ₹10,362 ಕೋಟಿ ಗಳಿಕೆಯಾಗಿತ್ತು. ಕಂಪನಿಯ ಒಟ್ಟು ಆದಾಯ ಶೇ 2.3ರಷ್ಟು ಕಡಿಮೆಯಾಗಿ ಮಾರ್ಚ್‌ನಲ್ಲಿ ₹1,42,565 ಕೋಟಿಯಿಂದ ₹1,39,283 ಕೋಟಿಗೆ ತಲುಪಿದೆ.

ಹಕ್ಕಿನ ಷೇರುಗಳ ಮೂಲಕ ₹53,125 ಕೋಟಿ ಹಣ ಸಂಗ್ರಹಿಸುವ ಯೋಜನೆಗೆ ಕಂಪನಿ ಮುಂದಾಗಿದೆ. 1:15 ಅನುಪಾತದಲ್ಲಿ ಪ್ರತಿ ಷೇರು ₹1,257ರಲ್ಲಿ ಸಿಗಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು