ಸೋಮವಾರ, ಮೇ 23, 2022
24 °C

ರೆಪೊ ದರ ಏರಿಕೆ: ಉಳಿತಾಯ ಮಾಡುವವರಿಗೆ ಸಿಹಿ

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೆಪೊ ದರವನ್ನು ಶೇಕಡ 0.4ರಷ್ಟು ಹೆಚ್ಚಳ ಮಾಡಿರುವುದರಿಂದ ಸಣ್ಣ ಹೂಡಿಕೆದಾರರು ಹಾಗೂ ಉಳಿತಾಯ ಮನೋಭಾವದವರಿಗೆ ಒಂದಿಷ್ಟು ‍ಪ್ರಯೋಜನ ಆಗಲಿದೆ ಎಂದು ತಜ್ಞರು ಹೇಳಿದ್ದಾರೆ.

‘ಸಾಲದ ಮೇಲಿನ ಬಡ್ಡಿ ದರ ಹೆಚ್ಚಾಗುತ್ತದೆ ಎಂಬುದು ಬಹುತೇಕ ಖಚಿತ. ಆದರೆ, ಇದರ ಜೊತೆಯಲ್ಲೇ ಸರ್ಕಾರಿ ಸಾಲಪತ್ರಗಳ ಮೇಲಿನ ಹೂಡಿಕೆಗೆ ಸಿಗುವ ಲಾಭಾಂಶದಲ್ಲಿ ತುಸು ಹೆಚ್ಚಳ ಆಗಬಹುದು. ಇದು ಸಣ್ಣ ಹೂಡಿಕೆದಾರರಿಗೆ ಒಳ್ಳೆಯ ಸುದ್ದಿ’ ಎಂದು ಹೂಡಿಕೆ ಸಲಹಾ ಸಂಸ್ಥೆ ಪ್ರೈಮ್‌ ಇನ್ವೆಸ್ಟರ್‌ ಡಾಟ್‌ ಇನ್‌ ಸಂಸ್ಥೆಯ ಸಹ ಸಂಸ್ಥಾಪಕಿ ವಿದ್ಯಾ ಬಾಲಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರ್‌ಬಿಐ ತನ್ನ ರಿಟೇಲ್ ಡೈರೆಕ್ಟ್ ಯೋಜನೆಯ ಮೂಲಕ ಸರ್ಕಾರಿ ಸಾಲಪತ್ರಗಳಲ್ಲಿ ಹೂಡಿಕೆ ಮಾಡಲು ಸಣ್ಣ ಹೂಡಿಕೆದಾರರಿಗೂ ಅವಕಾಶ ಕಲ್ಪಿಸಿದೆ. 10 ವರ್ಷಗಳ ಅವಧಿಯ ಜಿ–ಸೆಕ್‌ನಿಂದ ಸಿಗುವ ಲಾಭಾಂಶವು ಶೇಕಡ 7.39ಕ್ಕೆ ತಲುಪಿದೆ. ಉಳಿತಾಯ ಮಾಡುವವರಿಗೆ ಇದು ಒಳ್ಳೆಯ ಅವಕಾಶ’ ಎಂದು ವಿದ್ಯಾ ಹೇಳಿದರು. ಆದರೆ, ಜಿ–ಸೆಕ್‌ಗಳ ಟ್ರೇಡಿಂಗ್‌ ಸದ್ಯಕ್ಕೆ ಬೇಡ ಎಂದು ಕಿವಿಮಾತು ಹೇಳಿದರು.

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವು ಹೆಚ್ಚಳ ಆಗಬಹುದು ಎಂದು ಅವರು ಅಂದಾಜಿಸಿದರು. ಈಗ ಪಿಪಿಎಫ್‌ ಹೂಡಿಕೆಗೆ ಶೇ 7.1ರಷ್ಟು, ಎನ್‌ಎಸ್‌ಸಿ ಹೂಡಿಕೆಗೆ ಶೇ 6.8ರಷ್ಟು ಬಡ್ಡಿ ಸಿಗುತ್ತಿದೆ.

ಈಗ ಸಣ್ಣ ಅವಧಿಯ, ಸಾಲಪತ್ರ ಆಧಾರಿತ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ತುಸು ಉತ್ತಮ ಲಾಭ ಪಡೆದುಕೊಳ್ಳಬಹುದು. ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವವರಿಗೆ, ಮಾರುಕಟ್ಟೆಯಲ್ಲಿನ ಅಸ್ಥಿರತೆಯ ಕಾರಣದಿಂದಾಗಿ ಉತ್ತಮ ಷೇರುಗಳನ್ನು ಆಯ್ಕೆ ಮಾಡುವುದು ತುಸು ಕಷ್ಟವಾಗಬಹುದು ಎಂದು ತಿಳಿಸಿದರು.

ರೆಪೊ ದರ ಹೆಚ್ಚಾದ ಕಾರಣದಿಂದಾಗಿ ವಾಹನ ಸಾಲ, ಗೃಹ ಸಾಲದ ಮೇಲಿನ ಬಡ್ಡಿ ದರವು ಶೇ 0.5ರವರೆಗೆ ಹೆಚ್ಚಳ ಕಾಣಬಹುದು ಎಂದು ಚಾರ್ಟರ್ಡ್‌ ಅಕೌಂಟೆಂಟ್ ಕುಮಾರ್ ಪ್ರಸಾದ್ ಅಂದಾಜಿಸಿದರು. ಆದರೆ, ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಠೇವಣಿಗಳ ಮೇಲಿನ ಬಡ್ಡಿ ದರವು ಶೇ 0.5ರಷ್ಟು ಜಾಸ್ತಿ ಆಗಬಹುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು