ಮಂಗಳವಾರ, ಮಾರ್ಚ್ 28, 2023
22 °C

ಅಡುಗೆ ಎಣ್ಣೆ ರಿಟೇಲ್‌ ದರ ₹5 - 20ರವರೆಗೆ ಇಳಿಕೆ: ಸುಧಾಂಶು ಪಾಂಡೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಾದ್ಯಂತ ಪ್ರಮುಖ ರಿಟೇಲ್‌ ಮಾರುಕಟ್ಟೆಗಳಲ್ಲಿ ಅಡುಗೆ ಎಣ್ಣೆಯ ರಿಟೇಲ್‌ ದರವು ಪ್ರತಿ ಕೆ.ಜಿಗೆ ₹ 5 ರಿಂದ 20ರವರೆಗೆ ಇಳಿಕೆ ಆಗಿದೆ ಎಂದು ಆಹಾರ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಆಮದು ಸುಂಕ ಕಡಿತ ಮತ್ತು ಇತರೆ ಕ್ರಮಗಳಿಂದಾಗಿ ಅಡುಗೆ ಎಣ್ಣೆಯ ರಿಟೇಲ್‌ ದರದಲ್ಲಿ ಈ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.

ದೆಹಲಿಯಲ್ಲಿ ರಿಟೇಲ್‌ ತಾಳೆ ಎಣ್ಣೆ ದರವು ಕೆ.ಜಿಗೆ ₹139 ರಿಂದ ₹133ಕ್ಕೆ ಇಳಿಕೆ ಆಗಿದೆ. ಉತ್ತರ ಪ್ರದೇಶದ ಅಲಿಘಡನಲ್ಲಿ ಕೆ.ಜಿಗೆ ₹140ರಷ್ಟು ಇದ್ದಿದ್ದು ₹122ಕ್ಕೆ ಅಂದರೆ ₹18ರಷ್ಟು ಇಳಿಕೆ ಆಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 31 ರಿಂದ ನವೆಂಬರ್‌ 3ರವರೆಗಿನ ಅವಧಿಯಲ್ಲಿ ಕಡಲೆಕಾಯಿ ಎಣ್ಣೆ ದರವು ಕೆ.ಜಿಗೆ ₹ 5 ರಿಂದ 10ರವರೆಗೆ, ಸೋಯಾಬಿನ್‌ ಎಣ್ಣೆ ಬೆಲೆ ಕೆ.ಜಿಗೆ ₹ 5 ರಿಂದ 11ರವರೆಗೆ ಹಾಗೂ ಸೂರ್ಯಕಾಂತಿ ಎಣ್ಣೆಯ ಬೆಲೆ ಕೆ.ಜಿಗೆ ₹ 5 ರಿಂದ 20ರವರೆಗೂ ಇಳಿಕೆ ಆಗಿದೆ.

ಹಳೆಯ ದಾಸ್ತಾನಿಗೂ ಆಮದು ಸುಂಕ ಕಡಿತವನ್ನು ಅನ್ವಯಿಸಿ ಗ್ರಾಹಕರಿಗೆ ಸುಂಕ ಕಡಿತದ ಪ್ರಯೋಜನ ನೀಡುವಂತೆ ವಿತರಕರು, ರಿಟೇಲ್‌ ಮತ್ತು ಸಗಟು ವ್ಯಾಪಾರಿಗಳಿಗೆ ಸಾಲ್ವೆಂಟ್‌ ಎಕ್ಸ್‌ಟ್ರಾಕ್ಟರ್ಸ್‌ ಅಸೋಸಿಯೇಷನ್ (ಎಸ್‌ಇಎ) ಸಲಹೆ ನೀಡಿರುವುದಾಗಿ ಅವರು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕಳೆದ 10 ದಿನಗಳಲ್ಲಿ ಅಡುಗೆ ಎಣ್ಣೆಗಳ ಬೆಲೆ ಗರಿಷ್ಠ ಮಟ್ಟದಲ್ಲಿ ಇದೆ. ಹೀಗಿದ್ದರೂ ದೇಶದಲ್ಲಿ ಆಮದು ಸುಂಕ ಕಡಿತ, ದಾಸ್ತಾನು ಮಿತಿಯಂತಹ ನಿರ್ಧಾರಗಳಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ದರವು ಇಳಿಕೆ ಆಗಿದೆ. ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಇಳಿಕೆ ಆಗಿರುವುದರಿಂದಾಗಿ ಉತ್ಪನ್ನಗಳ ವಿತರಣಾ ವೆಚ್ಚ ಕಡಿಮೆ ಆಗಲಿದೆ. ಇದರಿಂದಾಗಿ ಸ್ಥಳೀಯವಾಗಿ ಅಡುಗೆ ಎಣ್ಣೆ ದರವು ಇನ್ನಷ್ಟು ಕಡಿಮೆ ಆಗಲಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು