ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಜಾರಿಯಾಗದ ಬೆಂಬಲ ಬೆಲೆ: ರಬ್ಬರ್‌ ದರ ಏರಿಕೆಯ ‘ತಾತ್ಕಾಲಿಕ’ ಖುಷಿ

ನುರಿತ ಟ್ಯಾಪಿಂಗ್ ಕಾರ್ಮಿಕರ ಕೊರತೆ
Published 3 ಫೆಬ್ರುವರಿ 2024, 0:30 IST
Last Updated 3 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಮಂಗಳೂರು: ಎರಡು ತಿಂಗಳಿಂದ ಆರ್‌ಎಸ್‌ಎಸ್–4 (ರಿಬ್ಬ್‌ಡ್‌ ಸ್ಮೋಕ್ಡ್‌ ಶೀಟ್‌) ದರ್ಜೆಯ ರಬ್ಬರ್‌ ಧಾರಣೆ ಏರುತ್ತಿದೆ.

ಒಂದು ಕೆ.ಜಿಗೆ ₹147ರಿಂದ ₹148ರ ಆಸುಪಾಸಿನಲ್ಲಿದ್ದ ಬೆಲೆಯು ಒಂದು ವಾರದಿಂದ ₹161ಕ್ಕೆ ತಲುಪಿದ್ದು ರಾಜ್ಯದ ಬೆಳೆಗಾರರಲ್ಲಿ ಖುಷಿ ಮೂಡಿಸಿದೆ. ಇದರ ನಡುವೆಯೇ ಎಷ್ಟು ದಿನಗಳವರೆಗೆ ಈ ಬೆಲೆ ಇರಲಿದೆ ಎಂಬ ಪ್ರಶ್ನೆಯೂ ಕಾಡತೊಡಗಿದೆ.

ಬೆಳೆಗಾರರ ಪ್ರಕಾರ ದಶಕದ ಹಿಂದೆ ರಾಜ್ಯದಲ್ಲಿ ರಬ್ಬರ್ ಧಾರಣೆಯು ಕೆ.ಜಿಗೆ ₹240 ಆಗಿತ್ತು. ನಂತರ ಬೆಲೆ ಕುಸಿಯುತ್ತ ಬಂದಿದೆ. ಇತ್ತೀಚಿನ ದಿನಗಳಲ್ಲಿ ₹200ರ ಆಸುಪಾಸು ತಲುಪಿದ್ದೇ ಇಲ್ಲ. ಆದ್ದರಿಂದ ಈಗಿನ ದಾರಣೆ ಸಮಾಧಾನಕರ ಎನಿಸಿದರೂ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಇದು ತೀರಾ ಕಡಿಮೆ ಎಂಬುದು ಅವರ ಅಭಿಪ್ರಾಯ.

ಹೀಗಾಗಿ, ಕೇರಳದಂತೆ ಕರ್ನಾಟಕದಲ್ಲೂ ಬೆಂಬಲ ಬೆಲೆ ನೀಡಬೇಕೆಂಬುದು ಬೆಳೆಗಾರರ ಒತ್ತಾಯ. 

ರಬ್ಬರ್‌ನಲ್ಲಿ ಅತ್ಯುತ್ತಮ ಗುಣಮಟ್ಟದ್ದು ಆರ್‌ಎಕ್ಸ್‌ ದರ್ಜೆ. ಭಾರತದಲ್ಲಿ ಹೆಚ್ಚು ಚಾಲ್ತಿಯಲ್ಲಿರುವುದು ಆರ್‌ಎಸ್‌ಎಸ್‌–4. ರಬ್ಬರ್ ಮಂಡಳಿಯ 2016ರ ಅಂದಾಜಿನ ಪ್ರಕಾರ ಇದರ ಉತ್ಪಾದನಾ ವೆಚ್ಚ ಕೆ.ಜಿಗೆ ₹178. ಆದರೆ, ಈಗ ಸುಮಾರು ₹240 ವೆಚ್ಚ ತಗಲುತ್ತದೆ. ಹೀಗಾಗಿ ಕೆ.ಜಿಗೆ ₹ 260 ಸಿಕ್ಕಿದರೆ ಲಾಭ ಆಗುತ್ತದೆ. ಸದ್ಯ ₹161 ಸಿಗುತ್ತಿರುವುದು ಸ್ವಲ್ಪ ಸಮಾಧಾನ ಎನ್ನುತ್ತಾರೆ ಕರ್ನಾಟಕ ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ಪಕಳಕುಂಜ ಗೋಪಾಲಕೃಷ್ಣ ಭಟ್‌.

ವಾರ್ಷಿಕ 11 ಲಕ್ಷ ಟನ್ ನೈಸರ್ಗಿಕ ರಬ್ಬರ್‌ಗೆ ದೇಶದಲ್ಲಿ ಬೇಡಿಕೆ ಇದೆ. ಅಷ್ಟು ಉತ್ಪಾದನೆ ಆಗುತ್ತಿಲ್ಲ. ಕೊರತೆ ನೀಗಿಸಲು ಮಲೇಷ್ಯಾ ಮತ್ತಿತರ ಕಡೆಗಳಿಂದ ‘ಬ್ಲಾಕ್‌ ರಬ್ಬರ್‌’ ಅನ್ನು ಆಮದು ಮಾಡಲಾಗುತ್ತಿದೆ. ಅದು ಸುಲಭವಾಗಿ ಬೆಳೆಯುವ ರಬ್ಬರ್‌. ದೇಶದಲ್ಲಿ ಗುಣಮಟ್ಟದ ರಬ್ಬರ್ ಬೆಳೆಯುವವರು ಇದ್ದರೂ ನಿರೀಕ್ಷಿತ ಬೆಲೆ ಸಿಗದ ಕಾರಣ ಈ ಕೃಷಿಯಿಂದ ವಿಮುಖರಾಗುತ್ತಿದ್ದಾರೆ.

ದಕ್ಷಿಣ ಕನ್ನಡದ ಸುಳ್ಯದ ಗುಡ್ಡ ಪ್ರದೇಶಗಳಲ್ಲಿ ಅತಿಹೆಚ್ಚು ರಬ್ಬರ್ ಬೆಳೆಯುತ್ತಿದ್ದು ಮಾಣಿಲ, ವಿಟ್ಲ ಮತ್ತಿತರ ಕಡೆಗಳಲ್ಲೂ ಉತ್ತಮ ಬೆಳೆ ಇದೆ. ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ ಭಾಗದಲ್ಲೂ ರಬ್ಬರ್ ಬೆಳೆಗಾರರು ಇದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಸುಮಾರು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ಬೆಳೆ ಇದೆ. ಆದರೆ, ಬೇರೆ ಬೇರೆ ಸಮಸ್ಯೆಗಳಿಂದ ರಬ್ಬರ್ ತೋಟಗಳು ಅಡಿಕೆ ತೋಟಗಳಾಗಿ ಪರಿವರ್ತನೆಯಾಗಿವೆ.

‘ರಬ್ಬರ್ ಉತ್ಪನ್ನಗಳಿಗೆ ನಿರಂತರವಾಗಿ ಉತ್ತಮ ಬೆಲೆ ಸಿಗುತ್ತಿದೆ. ಆದರೆ, ಬೆಳೆಗಾರರಿಗೆ ರಬ್ಬರ್ ಲಾಭದಾಯಕ ಅಲ್ಲ. ಹೀಗಾಗಿ ಬೆಳೆಯುವ ಪ್ರದೇಶ ಕಡಿಮೆ ಆಗುತ್ತಿದೆ. ಟ್ಯಾಪಿಂಗ್‌ಗೆ ಕಾರ್ಮಿಕರು ಸಿಗುತ್ತಿಲ್ಲ. ಟ್ಯಾಪಿಂಗ್ ಸಮರ್ಪಕವಾಗಿ ಆಗದೇ ಇದ್ದರೆ ಬೆಳೆ ಹಾಳಾಗುತ್ತದೆ. ಕೇರಳದಲ್ಲಿ ಕೆ.ಜಿಗೆ ₹175 ಬೆಂಬಲ ಬೆಲೆ ಸಿಗುತ್ತಿದೆ. ನಮ್ಮ ರಾಜ್ಯದಲ್ಲಿ ಬೆಂಬಲೆ ಬೆಲೆಯ ಕೂಗು ಸಂಬಂಧಪಟ್ಟವರಿಗೆ ಇನ್ನೂ ಕೇಳಿಸಲಿಲ್ಲ’ ಎನ್ನುತ್ತಾರೆ ಗೋಪಾಲಕೃಷ್ಣ ಭಟ್‌.

‘ಕೆಲವು ದಿನಗಳಿಂದ ಕೆಜಿಗೆ ₹161 ಸಿಗುತ್ತಿದೆ. ಕನಿಷ್ಠ ₹175 ಆದರೂ ಸಿಕ್ಕಿದರೆ ಇನ್ನಷ್ಟು ಅನುಕೂಲ ಆಗುತ್ತಿತ್ತು. ಸದ್ಯ ರಬ್ಬರ್ ಬೆಳೆಯಲ್ಲಿ ಹೆಚ್ಚು ಲಾಭವೇನೂ ಇಲ್ಲ. ಆದರೂ ನಿರೀಕ್ಷೆಯಿಂದ ಬೆಳೆಯುತ್ತಿದ್ದೇವೆ’ ಎಂದು ಸುಳ್ಯ ತಾಲ್ಲೂಕಿನ ಪಡಪ್ಪಾಡಿಯ ನಿತ್ಯಾನಂದ ಮುಂಡೋಡಿ ತಿಳಿಸಿದರು. 

ಟ್ಯಾಪಿಂಗ್‌ ತರಬೇತಿ ಕಾರ್ಯಾಗಾರ

ಕರ್ನಾಟಕದಲ್ಲಿ ರಬ್ಬರ್ ತೋಟಗಳ ಮಾಲೀಕರ ತೊಂದರೆ ಗಮನಕ್ಕೆ ಬಂದಿದೆ. ಟ್ಯಾಪಿಂಗ್ ಕಾರ್ಮಿಕರು ಇಲ್ಲದೇ ಇರುವುದು ಇಲ್ಲಿನ ದೊಡ್ಡ ಸಮಸ್ಯೆ ಎನ್ನುತ್ತಾರೆ ರಬ್ಬರ್ ಮಂಡಳಿ ಮಂಗಳೂರು ವಲಯದ ಮುಖ್ಯಸ್ಥೆ ಶೀಜಾ. ಟ್ಯಾಪಿಂಗ್ ಕಾರ್ಯಕ್ಕೆ ಬಹುತೇಕ ಮಾಲೀಕರು ಕೇರಳ ಮತ್ತು ಜಾರ್ಖಂಡ್‌ನಿಂದ ಕೆಲಸಗಾರರನ್ನು ಕರೆದುಕೊಂಡು ಬರುತ್ತಾರೆ. ಸ್ಥಳೀಯವಾಗಿ ನುರಿತ ಕಾರ್ಮಿಕರು ಸಿಗುವುದು ಕಡಿಮೆ. ತಮ್ಮ ತೋಟಗಳಲ್ಲಿ ತಾವೇ ಟ್ಯಾಪಿಂಗ್‌ ಮಾಡುವ ಸಂಪ್ರದಾಯವೂ ಇಲ್ಲಿಲ್ಲ. ಈ ಸಮಸ್ಯೆ ನೀಗಿಸಲು ರಬ್ಬರ್ ಮಂಡಳಿ ಟ್ಯಾಪಿಂಗ್ ತರಬೇತಿ ನೀಡುತ್ತಿದೆ. ಮಹಿಳೆಯರೂ ಸೇರಿದಂತೆ ಅನೇಕ ಮಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ವಿವರಿಸಿದರು.

ಒಂದು ದಶಕದಿಂದ ರಾಜ್ಯದಲ್ಲಿ ಬೆಳೆಗಾರರಿಗೆ ಒಳ್ಳೆಯ ಬೆಲೆ ಸಿಗಲಿಲ್ಲ. ಈಗ ಆಗಿರುವ ಏರಿಕೆ ಮಳೆಗಾಲ ಆರಂಭದವರೆಗಾದರೂ ಇರಲಿ ಎಂಬುದು ಎಲ್ಲರ ಆಶಯ.
– ಶೀಜಾ, ರಬ್ಬರ್ ಮಂಡಳಿ ಮಂಗಳೂರು ವಲಯದ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT