ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕ್‌ ಮೈ ಟ್ರಿಪ್‌ ಜೊತೆ ‘ಸವಾರಿ’ ಒಪ್ಪಂದ

Published 29 ಫೆಬ್ರುವರಿ 2024, 14:05 IST
Last Updated 29 ಫೆಬ್ರುವರಿ 2024, 14:05 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮೂಲದ ಬಾಡಿಗೆ ಕಾರಿನ ಸೌಲಭ್ಯ ಕಲ್ಪಿಸುವ ‘ಸವಾರಿ’ ಸಂಸ್ಥೆಯು ಮೇಕ್‌ ಮೈ ಟ್ರಿಪ್‌ ಜೊತೆ ಒಪ್ಪಂದ ಮಾಡಿಕೊಂಡಿದೆ. 

ಪ್ರಯಾಣಿಕರ ಅನುಕೂಲ ಕಲ್ಪಿಸಲು, ದೇಶದ ಎಲ್ಲಡೆ ನಮ್ಮ ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಕಂಪನಿಯಲ್ಲಿನ ಶೇ 50ಕ್ಕೂ ಹೆಚ್ಚು ಷೇರನ್ನು ಮೇಕ್‌ ಮೈ ಟ್ರಿಪ್‌ ಖರೀದಿಸಿದೆ ಎಂದು ಸವಾರಿ ಕಾರುಗಳ ಸಂಸ್ಥಾಪಕ ಗೌರವ್‌ ಅಗರ್ವಾಲ್‌ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಯಾಣಿಕರ ಹಿತರಕ್ಷಣೆ ನಮಗೆ ಮುಖ್ಯ. ಅದಕ್ಕಾಗಿ ಟ್ರ್ಯಾಕಿಂಗ್ ಆ್ಯಪ್‌, 24/7 ಕಸ್ಟಮರ್‌ ಕೇರ್‌ ಸೆಂಟರ್‌, ಚಾಲಕರ ನೇಮಕಾತಿ ವೇಳೆ ಅವರ ದಾಖಲೆಗಳ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳುವುದು ಸೇರಿದಂತೆ ಅನೇಕ ಕ್ರಮಕೈಗೊಂಡಿದ್ದೇವೆ. ಪ್ರಯಾಣಿಕರು ಕಂಪನಿಯ ವೆಬ್‌ಸೈಟ್‌, ಕಾಲ್‌ ಸೆಂಟರ್‌, ಆ್ಯಪ್‌ ಮೂಲಕ ಕ್ಯಾಬ್‌ಗಳನ್ನು ಬುಕ್‌ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. 

ದೇಶದ ಮಹಾನಗರಗಳು ಸೇರಿದಂತೆ 2,000ಕ್ಕೂ ಹೆಚ್ಚು ನಗರಗಳಲ್ಲಿ ಸವಾರಿ ಸೌಲಭ್ಯವಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ರೌಂಡ್‌ ಟ್ರಿಪ್‌, ಸಿಂಗಲ್‌ ಟ್ರಿಪ್‌, ಇಂಟರ್‌ ಸಿಟಿ, ಲೋಕಲ್‌ ರೆಂಟ್ಸ್‌, ಏರ್‌ಪೋರ್ಟ್‌ ಕ್ಯಾಬ್‌ ಸೇವೆಯನ್ನು ಕಲ್ಪಿಸಲಾಗಿದೆ. ಬೇರೆ ಕಂಪನಿಗಳಿಗೆ ಹೋಲಿಸಿದರೆ ನಮ್ಮಲ್ಲಿ ದರವು ಕಡಿಮೆ ಇರಲಿದೆ ಎಂದು ವಿವರಿಸಿದರು.

ದೇಶದಲ್ಲಿ 25 ಸಾವಿರ ಕ್ಯಾಬ್‌ಗಳು, 25 ಸಾವಿರ ಚಾಲಕರು ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದಾರೆ. ಪ್ರಯಾಣದ ಸಮಯದಲ್ಲಿ ಕಾರು ಚಾಲಕರು ಪ್ರವಾಸಿ ಗೈಡ್‌ ಆಗಿಯೂ ಸಹ ಕಾರ್ಯ ನಿರ್ವಹಿಸುತ್ತಾರೆ ಎಂದರು. 

ಸವಾರಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಹಾಗೂ ಉಪಾಧ್ಯಕ್ಷ ಆನಂದ್‌ ದೊರೈರಾಜ್‌ ಮಾತನಾಡಿ, ಎರಡು ಮತ್ತು ಮೂರನೇ ಶ್ರೇಣಿಯ ನಗರದಲ್ಲಿ (ಟೈರ್‌ 2 ಮತ್ತು ಟೈರ್‌ 3) ನಮ್ಮ ಸೇವೆಯನ್ನು ಹೆಚ್ಚಿಸಲಿದ್ದೇವೆ. ಪರಿಸರ ಸಂರಕ್ಷಣೆಗೆ ಪೂರಕವಾಗಿ ಕೆಲಸ ಮಾಡಲು ವಿದ್ಯುತ್‌ ಚಾಲಿತ ವಾಹನಗಳನ್ನು ಶೀಘ್ರ ಖರೀದಿಸಲಿದ್ದೇವೆ ಎಂದರು.

2006ರಲ್ಲಿ ಸವಾರಿಯನ್ನು ಆರಂಭಿಸಲಾಯಿತು. ಅಂದಿನಿಂದ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಿದ್ದೇವೆ. ಕೋವಿಡ್‌ ಸಮಯದಲ್ಲಿ ವ್ಯವಹಾರ ಹಿನ್ನಡೆ ಕಂಡಿತು. ಆದರೆ ನಂತರದ ದಿನಗಳಲ್ಲಿ ಸಾರಿಗೆ ವಲಯವು ಚೇತರಿಕೆ ಕಂಡಿತು. ನಮ್ಮ ಕ್ಯಾಬ್‌ನ ಪ್ರತಿ ಕಿ.ಮೀ. ದರ ₹11 ರಿಂದ ಪ್ರಾರಂಭವಾಗಲಿದೆ (ವಾಹನದ ಮಾದರಿ ಆಧರಿಸಿ). 2024–25ರ ಹಣಕಾಸು ವರ್ಷದಲ್ಲಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಮತ್ತಷ್ಟು ಹೂಡಿಕೆ ಮಾಡಲಾಗುವುದು. ಇದರ ಜೊತೆಗೆ ಬ್ಯುಸಿನೆಸ್‌ ಡೆವಲಪ್‌ಮೆಂಟ್‌, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಬೆಂಗಳೂರಲ್ಲಿ ರೌಂಡ್ ಟ್ರಿಪ್‌ ₹11 (ವಾಹನದ ಮಾದರಿ ಆಧರಿಸಿ), ಸ್ಥಳೀಯ ಬಾಡಿಗೆ ₹1,800, ಬೆಂಗಳೂರು–ಮೈಸೂರು ಏಕಮುಖ ಸಂಚಾರಕ್ಕೆ ₹2,100 ಮತ್ತು ಬೆಂಗಳೂರು ವಿಮಾನ ನಿಲ್ದಾಣಕ್ಕೆ ₹850ರಿಂದ ದರ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT