ಮುಂಬೈ: ಆರ್‌ಬಿಐನ ಎಂಪಿಸಿ ಸಭೆಯು ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದರಿಂದ ದೇಶದ ಷೇರುಪೇಟೆಗಳಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ, ಸೂಚ್ಯಂಕಗಳು ಇಳಿಕೆ ದಾಖಲಿಸಿವೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 581 ಅಂಶ ಇಳಿಕೆ (ಶೇ 0.73ರಷ್ಟು) ಕಂಡಿದ್ದು, 78,886 ಅಂಶಗಳಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 180 ಅಂಶ ಇಳಿಕೆ (ಶೇ 0.74ರಷ್ಟು) ಕಂಡು 24,117 ಅಂಶಗಳಲ್ಲಿ ಸ್ಥಿರಗೊಂಡಿತು.
ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಿದೆ. ಅಮೆರಿಕ ಮತ್ತು ಯುರೋಪಿಯನ್ ಮಾರುಕಟ್ಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆದಿರುವುದರಿಂದ ದೇಶೀಯ ಷೇರುಪೇಟೆಗಳು ಇಳಿಕೆ ಕಂಡಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
‘ಚಿಲ್ಲರೆ ಹಣದುಬ್ಬರದ ಏರಿಕೆಯಿಂದಾಗಿ ರೆಪೊ ದರ ಇಳಿಕೆಗೆ ಎಂಪಿಸಿ ಸಭೆಯು ಮುಂದಾಗಿಲ್ಲ. ಅಲ್ಲದೆ, ಜೂನ್ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯನ್ನು ಪರಿಷ್ಕರಿಸಿಲ್ಲ. ಹಾಗಾಗಿ, ಷೇರು ಸೂಚ್ಯಂಕಗಳು ಇಳಿಕೆ ದಾಖಲಿಸಿವೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ (ಸಂಶೋಧನಾ ವಿಭಾಗ) ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಸೆನ್ಸೆಕ್ಸ್ ಗುಚ್ಛದಲ್ಲಿನ ಏಷ್ಯನ್ ಪೇಂಟ್ಸ್, ಇನ್ಫೊಸಿಸ್, ಜೆಎಸ್‌ಡಬ್ಲ್ಯು ಸ್ಟೀಲ್, ಅಲ್ಟ್ರಾಟೆಕ್ ಸಿಮೆಂಟ್, ಪವರ್ ಗ್ರಿಡ್, ಎಲ್ ಆ್ಯಂಡ್ ಟಿ, ಎಚ್‌ಸಿಎಲ್ ಟೆಕ್ನಾಲಜೀಸ್, ಟಾಟಾ ಸ್ಟೀಲ್ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.
ಟಾಟಾ ಮೋಟರ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಭಾರ್ತಿ ಏರ್‌ಟೆಲ್, ಐಟಿಸಿ, ಇಂಡಸ್ ಇಂಡ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.
ಬಿಎಸ್‌ಸಿ ಮಿಡ್ ಕ್ಯಾಪ್ ಶೇ 0.44ರಷ್ಟು ಹಾಗೂ ಸ್ಮಾಲ್ ಕ್ಯಾಪ್ ಶೇ 0.16ರಷ್ಟು ಇಳಿಕೆಯಾಗಿದೆ.
ಲೋಹ (ಶೇ 2.02), ಐ.ಟಿ (ಶೇ 1.82), ಯುಟಿಲಿಟಿ (ಶೇ 1.62), ಸರಕು (ಶೇ 1.45), ಟೆಕ್ (ಶೇ 1.40) ಮತ್ತು ರಿಯಾಲ್ಟಿ (ಶೇ 1.22) ಸೂಚ್ಯಂಕಗಳು ಇಳಿಕೆ ಕಂಡಿವೆ. ಹೆಲ್ತ್‌ಕೇರ್ ಸೂಚ್ಯಂಕ ಏರಿಕೆಯಾಗಿದೆ.
ಬುಧವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹3,314 ಕೋಟಿ ಮೌಲ್ಯದ ಷೇರುಗಳನ್ನುಮಾರಾಟ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.