ಗುರುವಾರ , ಜೂನ್ 4, 2020
27 °C
ಷೇರುಪೇಟೆ ಸಂವೇದಿ ಸೂಚ್ಯಂಕ 886 ಅಂಶ ಕುಸಿತ

ಷೇರುಪೇಟೆಯ ವಹಿವಾಟಿನಲ್ಲಿ ಉತ್ಸಾಹ ಮೂಡಿಸದ ಪರಿಹಾರ ಪ್ಯಾಕೇಜ್‌ನ ಮೊದಲ ಕಂತು

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಆರ್ಥಿಕತೆಗೆ ಉತ್ತೇಜನ ನೀಡಲು ಘೋಷಿಸಲಾದ ₹ 20 ಲಕ್ಷ ಕೋಟಿ ಮೊತ್ತದ ಉತ್ತೇಜನಾ ಕೊಡುಗೆಯ ಮೊದಲ ಕಂತು ಷೇರುಪೇಟೆಯ ವಹಿವಾಟಿನಲ್ಲಿ ಉತ್ಸಾಹ ಮೂಡಿಸುವಲ್ಲಿ ವಿಫಲವಾಗಿದೆ.

ಕೊರೊನಾ ವೈರಾಣು ಪಿಡುಗಿನ ಆತಂಕ ಸದ್ಯಕ್ಕೆ ದೂರವಾಗದು ಎನ್ನುವ ವಿಶ್ವ ಆರೋಗ್ಯ ಸಂಘಟನೆಯ ಎಚ್ಚರಿಕೆ ಮತ್ತು ಅಮೆರಿಕದ ಆರ್ಥಿಕ ಪ್ರಗತಿಯ ಅನಿಶ್ಚಿತತೆ ಕುರಿತು ಫೆಡರಲ್‌ ರಿಸರ್ವ್‌ ವ್ಯಕ್ತಪಡಿಸಿರುವ ಆತಂಕದ ಕಾರಣಕ್ಕೆ ಜಾಗತಿಕ ಷೇರುಪೇಟೆಗಳಲ್ಲಿಯೂ ವಹಿವಾಟು ಕುಸಿದಿದೆ. ದೇಶಿ ಷೇರುಪೇಟೆಯಲ್ಲಿಯೂ ಇದು ಪ್ರತಿಫಲಿಸಿತು.

ಬೇಡಿಕೆ ಹೆಚ್ಚಿಸುವುದಕ್ಕೆ ಬದಲು ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರದ ಕೊಡುಗೆಯಲ್ಲಿ ಹೆಚ್ಚಿನ ಮಹತ್ವ ದೊರೆತಿದೆ. ₹ 6 ಲಕ್ಷ ಕೋಟಿ ಮೊತ್ತದ ಕೊಡುಗೆಗಳು ಅಲ್ಪಾವಧಿಯಲ್ಲಿ ಆರ್ಥಿಕತೆಗೆ ಯಾವುದೇ ಉತ್ತೇಜನ ನೀಡುವ ಸಾಧ್ಯತೆ ಇಲ್ಲ ಎಂದು ಮಾರುಕಟ್ಟೆ ಪರಿಣತರು ವಿಶ್ಲೇಷಿಸಿದ್ದಾರೆ.

ವಿತ್ತೀಯ ಉತ್ತೇಜನಾ ಕೊಡುಗೆಗಳಲ್ಲಿ ತಕ್ಷಣಕ್ಕೆ ವೆಚ್ಚ  ಮಾಡಬಹುದಾದ ಮೊತ್ತವು ಕಡಿಮೆ ಇರುವುದರಿಂದ ಪೇಟೆಯ ವಹಿವಾಟುದಾರರಲ್ಲಿ ನಿರಾಶೆ ಮನೆ ಮಾಡಿದೆ. ಭಾರಿ ಮೊತ್ತದ ಕೊಡುಗೆಗಳಿಗೆ ಪ್ರತಿಯಾಗಿ ಆರ್ಥಿಕ ಪ್ರಗತಿಯಲ್ಲಿ ತಕ್ಷಣಕ್ಕೆ ಚೇತರಿಕೆ ಕಂಡುಬರುವ ಬಗ್ಗೆ ಪೇಟೆಯಲ್ಲಿ ಅನುಮಾನ ಮನೆ ಮಾಡಿದೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬುಧವಾರ ಪ್ರಕಟಿಸಿರುವ ಕೊಡುಗೆಗಳಲ್ಲಿ ಹೆಚ್ಚಿನವು ಸಾಲ ಖಾತರಿಗೆ ಸಂಬಂಧಿಸಿವೆ. ಆರ್ಥಿಕ ಉತ್ತೇಜನಾ ಕೊಡುಗೆಗಳಿಗೆ ಹಣ ಹೊಂದಿಸುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲದಿರುವುದರಿಂದಲೂ ಪೇಟೆಯಲ್ಲಿ ಖರೀದಿ ಉತ್ಸಾಹ ಕಂಡು ಬಂದಿಲ್ಲ. ₹ 6 ಲಕ್ಷ ಕೋಟಿ ಮೊತ್ತದ ಕೊಡುಗೆ ಘೋಷಿಸಿದ್ದರೂ ವಾಸ್ತವದಲ್ಲಿ ಸರ್ಕಾರದ ವೆಚ್ಚ ಗರಿಷ್ಠ ₹ 1.9 ಲಕ್ಷ ಕೋಟಿಗೆ ಸೀಮಿತಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ.

ರಿಲಯನ್ಸ್‌ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ, ಇನ್ಫೊಸಿಸ್‌, ಐಸಿಐಸಿಐ ಬ್ಯಾಂಕ್‌ ಷೇರುಗಳಲ್ಲಿನ ಮಾರಾಟ ಒತ್ತಡದಿಂದಾಗಿ ಸಂವೇದಿ ಸೂಚ್ಯಂಕವು 886 ಅಂಶ ಕುಸಿತ ಕಂಡು 31,122 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 240 ಅಂಶ ಕುಸಿದು 9,142 ರಲ್ಲಿ ವಹಿವಾಟು ಕೊನೆಗೊಳಿಸಿತು.

ಕರಗಿದ ₹ 1.99 ಲಕ್ಷ ಕೋಟಿ ಸಂಪತ್ತು

ಷೇರುಗಳ ಮಾರಾಟ ಒತ್ತಡದಿಂದಾಗಿ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ₹ 1.99 ಲಕ್ಷ ಕೋಟಿ ಸಂಪತ್ತು ಕರಗಿದೆ. ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವ ಕಂಪನಿಗಳ ಮಾರುಕಟ್ಟೆ ಮೌಲ್ಯವು ಈಗ ₹ 122 ಲಕ್ಷ ಕೋಟಿಗೆ ಇಳಿದಿದೆ.

- ತಕ್ಷಣಕ್ಕೆ ವೆಚ್ಚ ಮಾಡುವ ಮೊತ್ತ ಕಡಿಮೆ

- ಅಲ್ಪಾವಧಿಯಲ್ಲಿ ಆರ್ಥಿಕತೆ ಚೇತರಿಕೆ ಕಾಣುವ ಸಾಧ್ಯತೆ ಕ್ಷೀಣ- ಪೂರಕ ಪ್ರಕಟಣೆಗಳನ್ನು ಎದುರು ನೋಡುತ್ತಿರುವ ವಹಿವಾಟುದಾರರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು