ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

54 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್‌

ಕಾರ್ಪೊರೇಟ್‌ ಕಂಪನಿಗಳ ನಿರೀಕ್ಷೆಗೂ ಮೀರಿದ ಹಣಕಾಸು ಸಾಧನೆ
Last Updated 4 ಆಗಸ್ಟ್ 2021, 15:26 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು. ಇದೇ ಮೊದಲ ಬಾರಿಗೆ 54 ಸಾವಿರದ ಗಡಿ ದಾಟಿ ವಹಿವಾಟು ನಡೆಸಿತು.

ಜಾಗತಿಕ ಷೇರುಪೇಟೆಗಳ ಸಕಾರಾತ್ಮಕ ಚಲನೆ ಮತ್ತು ಕಾರ್ಪೊರೇಟ್‌ ಕಂಪನಿಗಳ ನಿರೀಕ್ಷೆಗೂ ಮೀರಿದ ಹಣಕಾಸು ಸಾಧನೆಯು ಷೇರುಪೇಟೆಯಲ್ಲಿ ಸೂಚ್ಯಂಕದ ಈ ಓಟಕ್ಕೆ ಕಾರಣವಾಯಿತು ಎಂದು ತಜ್ಞರು ಹೇಳಿದ್ದಾರೆ.

ಎಸ್‌ಬಿಐನ ನಿವ್ವಳ ಲಾಭವು ಶೇ 55ರಷ್ಟು ಏರಿಕೆ ಕಂಡ ವರದಿ ಬಿಡುಗಡೆ ಆದ ಬಳಿಕ ಬ್ಯಾಂಕಿಂಗ್‌ ಮತ್ತು ಹಣಕಾಸು ವಲಯದ ಷೇರುಗಳು ಭಾರಿ ಖರೀದಿ ವಹಿವಾಟಿಗೆ ಒಳಗಾದವು.

ಬಿಎಸ್‌ಇ ಸೆನ್ಸೆಕ್ಸ್‌ 546 ಅಂಶ ಏರಿಕೆ ಕಂಡು ದಾಖಲೆಯ 54,369 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ವಹಿವಾಟಿನ ಒಂದು ಹಂತದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 54,465 ಅಂಶಗಳಿಗೂ ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 128 ಅಂಶ ಹೆಚ್ಚಾಗಿ ಗರಿಷ್ಠ ಮಟ್ಟವಾದ 16,246 ಅಂಶಗಳಿಗೆ ತಲುಪಿತು.

ಸೆನ್ಸೆಕ್ಸ್‌ನಲ್ಲಿ ಎಚ್‌ಡಿಎಫ್‌ಸಿ ಷೇರು ಶೇಕಡ 4.77ರಷ್ಟು ಗರಿಷ್ಠ ಗಳಿಕೆ ಕಂಡಿತು. ಕೋಟಕ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಆ್ಯಕ್ಸಿಸ್‌ ಬ್ಯಾಂಕ್‌ ಷೇರುಗಳು ಸಹ ಗಳಿಕೆ ಕಂಡುಕೊಂಡಿವೆ.

ಪ್ರಮುಖ ಹಣಕಾಸು ಕಂಪನಿಗಳ ಉತ್ತಮ ಗಳಿಕೆಯಿಂದಾಗಿ ದೇಶಿ ಷೇರುಪೇಟೆಗಳ ಏರುಮುಖ ಚಲನೆಯು ಮುಂದುವರಿಯಿತು ಎಂದು ರಿಲಯನ್ಸ್‌ ಸೆಕ್ಯುರಿಟೀಸ್‌ನ ಯೋಜನಾ ಮುಖ್ಯಸ್ಥ ವಿನೋದ್‌ ಮೋದಿ ಹೇಳಿದ್ದಾರೆ.

ಬಿಎಸ್‌ಇನಲ್ಲಿ ವಲಯವಾರು ಬ್ಯಾಂಕಿಂಗ್‌, ಹಣಕಾಸು ಮತ್ತು ಇಂಧನದ ಸೂಚ್ಯಂಕಗಳು ಶೇ 2.60ರವರೆಗೆ ಏರಿಕೆ ಕಂಡಿವೆ. ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 1.06ರವರೆಗೂ ಇಳಿಕೆ ಕಂಡಿವೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 9 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 74.19ರಂತೆ ವಿನಿಮಯಗೊಂಡಿತು. ಐದು ವಾರಗಳ ಗರಿಷ್ಠ ಮಟ್ಟ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT