ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕುಗಳು ಸ್ಥಳೀಯ ಭಾಷೆಯಲ್ಲೇ ವ್ಯವಹರಿಸಬೇಕು: ಕೇಂದ್ರದಿಂದ ಶೀಘ್ರ ಹೊಸ ಕ್ರಮ

Last Updated 28 ಫೆಬ್ರುವರಿ 2020, 12:55 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಸ್ಥಳೀಯ ಭಾಷೆ ಮಾತನಾಡಬಲ್ಲ ಒಬ್ಬನಾದರೂ ಉದ್ಯೋಗಿಯನ್ನು ಹೊಂದಿರುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸುವ ಸಾಧ್ಯತೆ ಇದೆ.

ಬಲಿಷ್ಠ ಶಾಖಾ ಬ್ಯಾಂಕಿಂಗ್ ವ್ಯವಸ್ಥೆ ರೂಪಿಸುವ ಮೂಲಕ ಬ್ಯಾಂಕ್‌ ಶಾಖೆಗಳು ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದುವಂತೆ ಮಾಡುವುದು, ಅಗತ್ಯವಿರುವ ವ್ಯಕ್ತಿ, ಕ್ಷೇತ್ರಗಳಿಗೆ ಸಾಲವಿತರಣೆ ಪ್ರಕ್ರಿಯೆ ಸುಗಮಗೊಳಿಸುವುದು ಮತ್ತು ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಈ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಈ ನಿಟ್ಟಿನಲ್ಲಿ, ಶಾಖಾ ಮಟ್ಟದಲ್ಲಿ ಗ್ರಾಹಕರೊಂದಿಗೆ ಉತ್ತಮ ಸಂಪರ್ಕ ಹೊಂದುವ ಸಲುವಾಗಿ ಪ್ರಾದೇಶಿಕ ಉದ್ಯೋಗಿಗಳಿಗೆ ತರಬೇತಿ ನೀಡುವಂತೆ ಭಾರತೀಯ ಬ್ಯಾಂಕ್‌ ಒಕ್ಕೂಟಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

ಸದ್ಯ ಬ್ಯಾಂಕುಗಳ ಸಾಲ ನೀಡಿಕೆ ಪ್ರಮಾಣ ನಿಧಾನಗತಿಯಲ್ಲಿದೆ. ಆರ್‌ಬಿಐ ಮಾಹಿತಿ ಪ್ರಕಾರ, ಸಾಲ ನೀಡಿಕೆ ಬೆಳವಣಿಗೆ ಪ್ರಮಾಣ ಬ್ಯಾಂಕುಗಳ ಠೇವಣಿ ಮೊತ್ತ ₹ 7.50 ಲಕ್ಷ ಕೋಟಿಯ ಅರ್ಧದಷ್ಟೂ ಇಲ್ಲ.

ಉಳಿದಂತೆ, ಸಾಲ ಮರುಪಾವತಿಯಾಗದು ಎಂಬ ಭೀತಿಯಿಂದ ಬ್ಯಾಂಕುಗಳು ವಿವಿಧ ಯೋಜನೆಗಳಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಇಂತಹ ಸಂದರ್ಭದಲ್ಲಿ, ಒಂದು ಶಾಖೆಯಲ್ಲಿ ಉಂಟಾಗುವ ನಷ್ಟವನ್ನು ಮತ್ತೊಂದು ಶಾಖೆಯ ಲಾಭದಿಂದ ಸರಿದೂಗಿಸುವ ಪ್ರಕ್ರಿಯೆಗೆ ಶಾಖಾ ಬ್ಯಾಂಕಿಂಗ್ ವ್ಯವಸ್ಥೆ ಉತ್ತೇಜನ ನೀಡಬಲ್ಲದು ಎಂದು ಮುಂದಿನ ಪೀಳಿಗೆಯ ಬ್ಯಾಂಕಿಂಗ್ ಸುಧಾರಣೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ತಿಂಗಳು ದೇಶದಾದ್ಯಂತ ಅನೇಕ ಜಿಲ್ಲೆಗಳಲ್ಲಿರುವ ಗರಿಷ್ಠ ಬ್ಯಾಂಕ್ ಶಾಖೆಗಳಿಗೆ ತೆರಳಿ ಅಲ್ಲಿನ ಸಿಬ್ಬಂದಿ ಜತೆ ಮಾತುಕತೆ ನಡೆಸಲಿರುವುದಾಗಿ ನಿರ್ಮಲಾ ಸೀತಾರಾಮನ್ ಅವರೇ ಹೇಳಿಕೊಂಡಿದ್ದಾರೆ. ಗ್ರಾಹಕರ ಜತೆ ವ್ಯವಹರಿಸುವಾಗ ಸಿಬ್ಬಂದಿ ಏನೇನು ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬುದನ್ನು ತಿಳಿಯುವ ಉದ್ದೇಶದಿಂದ ಸಚಿವರು ಈ ಕ್ರಮ ಕೈಗೊಂಡಿದ್ದಾರೆ.

‘ಇದು ಬ್ಯಾಂಕುಗಳಿಗೆ ತಮ್ಮ ದೊಡ್ಡ ಕಾರ್ಯಸೂಚಿಯನ್ನು ಸಾಧಿಸಲು ನೆರವಾಗಲಿದೆ’ ಎಂದು ಇತ್ತೀಚೆಗೆ ನಡೆದಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಭೆಯ ಬಳಿಕ ನಿರ್ಮಲಾ ಹೇಳಿದ್ದಾರೆ. ಈ ಸಭೆಯಲ್ಲಿ ಅವರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ನೀಡಿಕೆಗೆ ಸಂಬಂಧಿಸಿದ ಸ್ಥಿತಿಗತಿಯನ್ನು ಪರಿಶೀಲಿಸಿದ್ದಾರೆ. ‘ವಿವಾದ್ ಸೇ ವಿಶ್ವಾಸ್’ ಯೋಜನೆಯಡಿ ಗ್ರಾಹಕರ ಬಳಿ ಹೇಗೆ ಸಂವಹನ ನಡೆಸಲಾಗುತ್ತಿದೆ ಎಂಬುದನ್ನೂ ತಿಳಿದುಕೊಂಡಿದ್ದಾರೆ. ಶಾಖಾ ಮಟ್ಟದಲ್ಲಿ ಕಾರ್ಯನಿರ್ವಹಿಸುವಂತೆಯೂ ಗ್ರಾಹಕರ ಜತೆ ನೇರ ಸಂಪರ್ಕ ಹೊಂದುವಂತೆಯೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಸಚಿವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT