ಬುಧವಾರ, ಸೆಪ್ಟೆಂಬರ್ 18, 2019
23 °C
ಸಿಐಐ, ಎಫ್‌ಕೆಸಿಸಿಐ ವಿಶ್ಲೇಷಣೆ

ಆರ್ಥಿಕ ಸ್ಥಿರತೆಗೆ ಉತ್ತೇಜನಾ ಕೊಡುಗೆ

Published:
Updated:

ನವದೆಹಲಿ: ಕೇಂದ್ರ ಸರ್ಕಾರವು ಆರ್ಥಿಕತೆಯ ವಿವಿಧ ವಲಯಗಳಿಗೆ ಬಹುಬಗೆಯ ಕೊಡುಗೆಗಳನ್ನು ಪ್ರಕಟಿಸಿರುವುದರಿಂದ ಬೆಳವಣಿಗೆಯ ಹೊಸ ಶಕೆಗೆ ನಾಂದಿಯಾಗಲಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ವಿಶ್ಲೇಷಿಸಿದೆ.

ವಿಶ್ವದ ಎರಡು ಅತಿದೊಡ್ಡ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾ ಮಧ್ಯೆ ವಾಣಿಜ್ಯ ಸಮರ ನಡೆಯುತ್ತಿರುವ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ನಿಧಾನಗೊಂಡಿರುವ ಸಂದರ್ಭದಲ್ಲಿ ಪ್ರಕಟಗೊಂಡಿರುವ ಈ ಕೊಡುಗೆಗಳು ಆರ್ಥಿಕತೆಯಲ್ಲಿ ಸ್ಥಿರತೆ ಮೂಡಿಸಲಿವೆ. ಮುಂಬರುವ ತಿಂಗಳುಗಳಲ್ಲಿ ಆರ್ಥಿಕತೆ ಚೇತರಿಸಿಕೊಳ್ಳಲಿದೆ ಎಂದು ಸಿಐಐ ಆಶಾವಾದ ವ್ಯಕ್ತಪಡಿಸಿದೆ.

‘ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಆರು ಆಯಾಮಗಳ ಕೊಡುಗೆಗಳನ್ನು ಪ್ರಕಟಿಸಿರುವುದು ಪ್ರಶಂಸನೀಯವಾಗಿದೆ’ ಎಂದು ಸಿಐಐ ಅಧ್ಯಕ್ಷ ವಿಕ್ರಂ ಕಿರ್ಲೋಸ್ಕರ್‌ ಹೇಳಿದ್ದಾರೆ. ‘ಹಲವಾರು ಉಪಕ್ರಮಗಳು ಬಂಡವಾಳ ಹೂಡಿಕೆ ಉತ್ತೇಜಿಸಲಿವೆ’ ಎಂದು ‘ಸಿಐಐ’ನ ನಿಯೋಜಿತ ಅಧ್ಯಕ್ಷ ಉದಯ್‌ ಕೋಟಕ್‌ ಹೇಳಿದ್ದಾರೆ.

‘ದೇಶಿ ಕೈಗಾರಿಕೋದ್ಯಮಿಗಳ ಆತಂಕ ದೂರ ಮಾಡಿರುವ ಸಚಿವೆ ನಿರ್ಮಲಾ ಅವರು, ಉದ್ಯಮಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕೊಡುಗೆ ಪ್ರಕಟಿಸಿದ್ದಾರೆ. ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯ ಚೇತರಿಕೆಗೆ ಈ ಕೊಡುಗೆಗಳು ಭರವಸೆದಾಯಕವಾಗಿವೆ’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) ಅಧ್ಯಕ್ಷ ಸಿ. ಆರ್‌. ಜನಾರ್ಧನ ಹೇಳಿದ್ದಾರೆ.

Post Comments (+)