ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಡಾಲರ್‌ಗೆ ಕಚ್ಚಾ ತೈಲ ದರ?

ಬೇಡಿಕೆ ಕುಸಿಯುತ್ತಿದ್ದರೂ ಮಾರುಕಟ್ಟೆಗೆ ಹೆಚ್ಚುತ್ತಿರುವ ಪೂರೈಕೆ
Last Updated 28 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಲಂಡನ್‌: ‘ಕೊರೊನಾದಿಂದಾಗಿ ಜಾಗತಿಕವಾಗಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಕೈಗಾರಿಕೆಗಳು ಆರಂಭವಾಗದೇ ಇದ್ದರೆ, ಮುಂದಿನ ತಿಂಗಳುಗಳಲ್ಲಿಕಚ್ಚಾ ತೈಲ ದರ ಪ್ರತಿ ಬ್ಯಾರಲ್‌ಗೆ 10 ಡಾಲರ್‌ಗಳಿಗೆ ಕುಸಿದರೂ ಅಚ್ಚರಿಯೇನಲ್ಲ’ ಎಂದು ತಜ್ಞರು ಹೇಳಿದ್ದಾರೆ.

ಜಾಗತಿಕವಾಗಿ, ತೈಲ ಸಂಗ್ರಹ ಮಟ್ಟವು ಈಗಾಗಲೇ ಶೇ 75ರಷ್ಟನ್ನು ತಲುಪಿದೆ. ಬೇಡಿಕೆ ಇಲ್ಲದೇ ಇರುವ ಇಂತಹ ಸಂದರ್ಭದಲ್ಲಿಉತ್ಪಾದನೆ ಕಡಿಮೆ ಮಾಡಿ, ಪೂರೈಕೆ ನಿಯಂತ್ರಿಸದೇ ಇದ್ದರೆ ತೈಲ ದರ ಭಾರಿ ಕುಸಿತ ಕಾಣಲಿದೆ ಎಂದು ವಿವರಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ತೈಲ ದರ ಈಗಾಗಲೇ 17 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಬಹುತೇಕ ದೇಶಗಳಲ್ಲಿ ವಿಮಾನ, ಸಾರಿಗೆ ವ್ಯವಸ್ಥೆಯು ಸ್ಥಿಗಿತಗೊಂಡಿದ್ದು, ಕೈಗಾರಿಕಾ ಚಟುವಟಿಕೆಗಳೂ ನಡೆಯುತ್ತಿಲ್ಲ. ಇದರಿಂದಾಗಿಜಾಗತಿಕ ತೈಲ ಬೇಡಿಕೆ ಕಡಿಮೆಯಾಗುತ್ತಲೇ ಇರುವುದರಿಂದ ಪೂರೈಕೆ ಹೆಚ್ಚಾಗಿ, ದರದಲ್ಲಿ ಕುಸಿತವಾಗಿದೆ.

ಮೇ ತಿಂಗಳಿನಲ್ಲಿ ಮಾರಾಟ ಮಾಡುವ ತೈಲ ದರ ಶೇ 7.33ರಷ್‌ಟು ಕಡಿಮೆಯಾಗಿದ್ದು, ಪ್ರತಿ ಬ್ಯಾರಲ್‌ಗೆ 24.41 ಡಾಲರ್‌ಗೆ ತಲುಪಿದೆ. ವೆಸ್ಟ್‌ ಟೆಕ್ಸಸ್‌ ಇಂಟರ್‌ಮಿಡಿಯೇಟ್‌ ತೈಲ ದರ ಶೇ 5.97ರಷ್ಟು ಕಡಿಮೆಯಾಗಿ ಒಂದು ಬ್ಯಾರಲ್‌ಗೆ 21.25 ಡಾಲರ್‌ಗೆ ಇಳಿಕೆಯಾಗಿದೆ.

ಕಚ್ಚಾ ತೈಲ ಉತ್ಪಾದನೆ ತಗ್ಗಿಸುವ ಕುರಿತು ತೈಲ ಉತ್ಪಾದನಾ ರಾಷ್ಟ್ರಗಳು ಮಾಡಿಕೊಂಡಿರುವ ಒಪ್ಪಂದ ಮಾರ್ಚ್‌ 31ಕ್ಕೆ ಅಂತ್ಯವಾಗಲಿದೆ.

ಕೊರೊನಾದಿಂದ ಬೇಡಿಕೆ ಗಣನಿಯವಾಗಿ ಕಡಿಮೆಯಾಗುತ್ತಿದ್ದು, ಮತ್ತೊಂದು ಹಂತದ ಉತ್ಪಾದನೆ ಕಡಿತ ಮಾಡಲು ಸೌದಿ ಅರೇಬಿಯಾ ಮತ್ತು ರಷ್ಯಾ ಮಧ್ಯೆ ಒಮ್ಮತ ಮೂಡಿಲ್ಲ. ಹೀಗಾಗಿ ಸೌದಿ ಅರೇಬಿಯಾವು ರಷ್ಯಾದ ವಿರುದ್ಧ ದರ ಸಮರ ಆರಂಭಿಸಿದೆ. ಏಪ್ರಿಲ್‌ನಿಂದ ಏಕಕಾಲಕ್ಕೆ ದರದಲ್ಲಿ ಇಳಿಕೆ ಮಾಡುವುದಲ್ಲದೆ ಉತ್ಪಾದನೆಯನ್ನೂ ಹೆಚ್ಚಿಸಲು ನಿರ್ಧರಿಸಿದೆ. ಇದು ತೈಲ ದರದಲ್ಲಿ ಇನ್ನಷ್ಟು ಇಳಿಕೆಗೆ ಕಾರಣವಾಗಲಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ತೈಲ ಮಾರುಕಟ್ಟೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಒಪೆಕ್‌ ಮತ್ತು ರಷ್ಯಾ 2016ರಿಂದಲೂ ಒಪ್ಪಂದ ಮಾಡಿಕೊಂಡು ಬರುತ್ತಿವೆ. ಆದರೆ, ಈ ಬಾರಿ ಉತ್ಪಾದನೆ ತಗ್ಗಿಸಲು ರಷ್ಯಾ ಸಿದ್ಧವಿಲ್ಲ. ಇದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೊಸ ಬಿಕ್ಕಟ್ಟು ಸೃಷ್ಟಿಸುತ್ತಿದೆ.

ದರ ಕುಸಿತ ತಡೆಗೆ ಒತ್ತಡ
ತೈಲ ದರ ಕುಸಿತ ತಡೆಯುವಂತೆ ಸೌದಿ ಅರೇಬಿಯಾದ ಮೇಲೆವಾಷಿಂಗ್ಟನ್‌ ಒತ್ತಡ ತರುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸುತ್ತಿಲ್ಲ ಎಂದು ಸೌದಿ ಸ್ಪಷ್ಟಪಡಿಸಿದೆ.

ಕೊರೊನಾದಿಂದ ಜಾಗತಿಕ ಮಟ್ಟದಲ್ಲಿಯೇ ಹಲವು ದೇಶಗಳು ಲಾಕ್‌ಡೌನ್‌ ವಿಧಿಸಿವೆ. ಇದರಿಂದ ತೈಲ ದರ ಕುಸಿಯುತ್ತಿದ್ದು, ಉತ್ಪಾದನೆ ತಗ್ಗಿಸುವ ಮೂಲಕ ಪೂರೈಕೆಯನ್ನು ನಿಯಂತ್ರಿಸಿ, ದರ ಕುಸಿತವನ್ನು ತಡೆಯಬೇಕು. ಇದಕ್ಕೆ ರಷ್ಯಾವು ಒಪೆಕ್‌ ಜತೆಗಿನ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಬೇಕಿದೆ.

ಸದ್ಯದ ಮಟ್ಟಿಗಂತೂ ಯಾವುದೇ ಮಾತುಕತೆ, ಚರ್ಚೆ ನಡೆದಿಲ್ಲ ಎಂದು ಸೌದಿ ಅರೇಬಿಯಾದ ಇಂಧನ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೆಚ್ಚ ತಗ್ಗಿಸಿದ ಕಂಪನಿಗಳು: ಬೇಡಿಕೆ ಕುಸಿಯುತ್ತಿರುವುದರಿಂದ ತೈಲ ಉತ್ಪಾದನಾ ಕಂಪನಿಗಳು ತಮ್ಮ ಬಂಡವಾಳ ವೆಚ್ಚದಲ್ಲಿ ಶೇ 24ರಷ್ಟು ಕಡಿಮೆ ಮಾಡಿವೆ. ಸೌದಿ ಅರಾಮ್ಕೊ, ಶೆಲ್‌, ಎನರ್ಜಿಯನ್‌ ಆಯಿಲ್ ಆ್ಯಂಡ್‌ ಗ್ಯಾಸ್, ಪ್ರೀಮಿಯರ್‌ ಆಯಿಲ್‌ ಸೇರಿದಂತೆ ಪ್ರಮುಖ ಕಂಪನಿಗಳು ವೆಚ್ಚದಲ್ಲಿ ಇಳಿಕೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT