ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

AI ಅಳವಡಿಕೆ ಬಳಿಕ ಉದ್ಯೋಗಿಗಳನ್ನು ವಜಾಗೊಳಿಸಲ್ಲ: ಇನ್ಫೊಸಿಸ್‌ ಸಿಇಒ ಸಲೀಲ್ ಪರೇಖ್

Published : 25 ಆಗಸ್ಟ್ 2024, 13:49 IST
Last Updated : 25 ಆಗಸ್ಟ್ 2024, 13:49 IST
ಫಾಲೋ ಮಾಡಿ
Comments

ನವದೆಹಲಿ: ‘ಇನ್ಫೊಸಿಸ್‌ನಿಂದ ಸೇವೆ ಸ್ವೀಕರಿಸುವ ಗ್ರಾಹಕರು ಜನರೇಟಿವ್‌ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇದರ ಅಳವಡಿಕೆಗೆ ಕಂಪನಿಯೂ ಸಜ್ಜಾಗಿದೆ. ಎ.ಐ ಅಳವಡಿಕೆ ಬಳಿಕ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಿಲ್ಲ’ ಎಂದು ಇನ್ಫೊಸಿಸ್‌ ಕಂಪನಿಯ ಸಿಇಒ ಸಲೀಲ್ ಪರೇಖ್ ಹೇಳಿದ್ದಾರೆ.

ಕಂಪನಿಯ ಕಾರ್ಯಾಚರಣೆ ದಕ್ಷತೆ ಹೆಚ್ಚಿಸಲು ಮತ್ತು ವೆಚ್ಚ ಕಡಿತಗೊಳಿಸಲು ಈ ತಂತ್ರಜ್ಞಾನ ಬಳಕೆಯಾಗಲಿದೆ. ಇದರ ಅಳವಡಿಕೆಯಿಂದ ಉದ್ಯಮಗಳಿಗೆ ಆಗುವ ಲಾಭ ಮತ್ತು ವ್ಯಾ‍ಪಾರದ ಫಲಿತಾಂಶ ಆಧಾರದ ಮೇಲೆ ಈ ತಂತ್ರಜ್ಞಾನ ಮತ್ತಷ್ಟು ವಿಸ್ತರಣೆಯಾಗಲಿದೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

‘ಸಮಯ ಕಳೆದಂತೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ವೇಗವೂ ಹೆಚ್ಚುತ್ತದೆ ಎಂದು ನಾವು ಆಲೋಚಿಸುತ್ತಿದ್ದೇವೆ. ಅದು ಹೇಗೆ ಅಭಿವೃದ್ಧಿ ಹೊಂದಲಿದೆ ಎಂಬ ಬಗ್ಗೆಯೂ ಕಾಯುತ್ತೇವೆ’ ಎಂದು ತಿಳಿಸಿದ್ದಾರೆ.

‘ಕೆಲವು ವರ್ಷಗಳ ಹಿಂದೆ ಡಿಜಿಟಲ್‌ ಅಥವಾ ಕ್ಲೌಡ್‌ನೊಟ್ಟಿಗೆ ಎ.ಐ ತಂತ್ರಜ್ಞಾನವನ್ನು ಅಳವಡಿಕೆ ಮಾಡಿದ್ದೇವೆ. ನಮ್ಮ ಗ್ರಾಹಕರಿಗೆ ಇದರಿಂದ ಯಾವ ರೀತಿಯ ಪ್ರಯೋಜನ ದೊರೆಯಲಿದೆ ಎಂಬುದನ್ನು ಎದುರು ನೋಡುತ್ತಿದ್ದೇವೆ. ಅವರಿಗೆ ಹೆಚ್ಚಿನ ಪ್ರಯೋಜನ ಲಭಿಸಿದರೆ ನಾವು ಎ.ಐ ತಂತ್ರಜ್ಞಾನವನ್ನು ಮತ್ತಷ್ಟು ಅಳವಡಿಸಿಕೊಳ್ಳಲು ಮುಂದಾಗುತ್ತೇವೆ’ ಎಂದು ಹೇಳಿದ್ದಾರೆ.

ಜನರೇಟಿವ್‌ ಎ.ಐ ಅಳವಡಿಕೆಯಿಂದ ಉದ್ಯೋಗಗಳು ಕಡಿತವಾಗುವುದಿಲ್ಲ. ಹೊಸ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಜಾಗತಿಕ ಉದ್ಯಮಗಳಿಗೆ ಉತ್ತಮ ಸೇವೆ ನೀಡಲು ಇದನ್ನು ಬಳಸುತ್ತೇವೆ ಎಂದು ತಿಳಿಸಿದ್ದಾರೆ.

ತನ್ನ ಗ್ರಾಹಕರಿಗಾಗಿ 225 ಜನರೇಟಿವ್‌ ಎ.ಐ ಪ್ರೋಗ್ರಾಂಗಳಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ. ಕಂಪನಿಯು 2.25 ಲಕ್ಷ ಉದ್ಯೋಗಿಗಳಿಗೆ ಈ ತಂತ್ರಜ್ಞಾನ ಕುರಿತು ತರಬೇತಿ ನೀಡಲಾಗಿದೆ ಎಂದು ಪ್ರಸಕ್ತ ವರ್ಷದ ಆರಂಭದಲ್ಲಿ ಇನ್ಫೊಸಿಸ್‌ ಹೇಳಿಕೆ ನೀಡಿತ್ತು.

ಜಿಎಸ್‌ಟಿ ವಂಚನೆ:

₹32,403 ಕೋಟಿ ಜಿಎಸ್‌ಟಿ ವಂಚನೆಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಲೀಲ್‌ ಪರೇಖ್‌ ಅವರು, ‘ಈ ಕುರಿತು ಈಗಾಗಲೇ ಕಂಪನಿಯು ಸ್ಪಷ್ಟನೆ ನೀಡಿದೆ. ಬಿಎಸ್‌ಇಗೂ ಈ ಕುರಿತು ವರದಿ ಸಲ್ಲಿಸಿದೆ. ಇದರ ಹೊರತಾಗಿ ಹೊಸದಾಗಿ ಹೇಳುವುದು ಏನೂ ಇಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT