ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ, ಕರ್ನಾಟಕದಲ್ಲಿ ಕಬ್ಬು ಅರೆಯುವಿಕೆ ವಿಳಂಬ: ಸಕ್ಕರೆ ಉತ್ಪಾದನೆ ಕುಸಿತ

Published 18 ಡಿಸೆಂಬರ್ 2023, 15:59 IST
Last Updated 18 ಡಿಸೆಂಬರ್ 2023, 15:59 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ 2023–24ನೇ ಸಾಲಿನ ಮಾರುಕಟ್ಟೆ ವರ್ಷದ ಎರಡೂವರೆ ತಿಂಗಳಲ್ಲಿ (ಅಕ್ಟೋಬರ್‌ನಿಂದ ಡಿಸೆಂಬರ್‌ 15ರ ವರೆಗೆ) ಸಕ್ಕರೆ ಉತ್ಪಾದನೆಯು ಶೇ 11ರಷ್ಟು ಕುಸಿತವಾಗಿದೆ.

ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿನ ಸಕ್ಕರೆ ಕಾರ್ಖಾನೆಗಳು ಈ ವರ್ಷ ಕಬ್ಬು ಅರೆಯುವಿಕೆಯನ್ನು 10ರಿಂದ 15 ದಿನಗಳ ಕಾಲ ತಡವಾಗಿ ಪ್ರಾರಂಭಿಸಿರುವುದೇ ಉತ್ಪಾದನೆ ಕಡಿಮೆಯಾಗಲು ಕಾರಣವಾಗಿದೆ. ಒಟ್ಟಾರೆ 8.9 ಲಕ್ಷ ಟನ್‌ನಷ್ಟು ಉತ್ಪಾದನೆ ಕುಸಿದಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಸ್ಥೆ (ಐಎಸ್‌ಎಂಎ) ತಿಳಿಸಿದೆ.

ಸರಕಿನ ಉತ್ಪಾದನೆ, ಮಾರುಕಟ್ಟೆ ಸೇರಿದಂತೆ ಆಹಾರಕ್ಕೆ ಬಳಕೆ, ಕಬ್ಬು ಬಿತ್ತನೆ, ರಫ್ತು ಆಧಾರದ ಮೇಲೆ ಮಾರುಕಟ್ಟೆ ವರ್ಷವನ್ನು ನಿಗದಿಪಡಿಸಲಾಗುತ್ತದೆ. ಇದರ ಅನ್ವಯ ಅಕ್ಟೋಬರ್‌ನಿಂದ ಸೆಪ್ಟೆಂಬರ್‌ವರೆಗೆ ಸಕ್ಕರೆಯ ಮಾರುಕಟ್ಟೆ ವರ್ಷವನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. 

ಉತ್ಪಾದನೆ ಎಷ್ಟು?

ಪ್ರಸಕ್ತ ಮಾರುಕಟ್ಟೆ ವರ್ಷದ ಅಕ್ಟೋಬರ್‌ನಿಂದ ಡಿಸೆಂಬರ್‌ 15ರವರೆಗೆ ಸಕ್ಕರೆ ಉತ್ಪಾದನೆಯು 74.05 ಲಕ್ಷ ಟನ್‌ಗೆ ತಲುಪಿದೆ. ಹಿಂದಿನ ವರ್ಷ ಈ ಅವಧಿಯಲ್ಲಿ 82.95 ಲಕ್ಷ ಟನ್‌ ಉತ್ಪಾದನೆಯಾಗಿತ್ತು ಎಂದು ಐಎಸ್‌ಎಂಎ ಹೇಳಿದೆ.

ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಕಬ್ಬು ಅರೆಯುವಿಕೆ ಸ್ಥಗಿತಗೊಳಿಸುವ ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಹೆಚ್ಚುತ್ತಿದೆ. ಒಟ್ಟು 497 ಕಾರ್ಖಾನೆಗಳು ಸ್ಥಗಿತಗೊಂಡಿವೆ ಎಂದು ತಿಳಿಸಿದೆ.

ಎಥೆನಾಲ್‌ ಉತ್ಪಾದನೆಗೆ ಸಕ್ಕರೆ ಬಳಕೆಯ ಮಿತಿ ಹೊರತುಪಡಿಸಿ ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ದೇಶದಲ್ಲಿ 325 ಲಕ್ಷ ಟನ್‌ ಸಕ್ಕರೆ ಉತ್ಪಾದನೆಯಾಗಲಿದೆ ಎಂದು ಕಳೆದ ವಾರದ ಐಎಸ್‌ಎಂಎ ಅಂದಾಜಿಸಿತ್ತು. ಅಲ್ಲದೇ, ಕಳೆದ ವರ್ಷ ಕಾರ್ಖಾನೆಗಳ ಬಳಿ ಮಾರಾಟವಾಗದ 56 ಲಕ್ಷ ಟನ್‌ನಷ್ಟು ಸಕ್ಕರೆ ದಾಸ್ತಾನಿದೆ. ಈ ವರ್ಷದ ಒಟ್ಟು 285 ಲಕ್ಷ ಟನ್‌ನಷ್ಟು ಬೇಡಿಕೆ ಇದೆ ಎಂದು ಅಂದಾಜಿಸಿದೆ.

ಮತ್ತೊಂದೆಡೆ ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಳ ಮತ್ತು ಬೆಲೆ ನಿಯಂತ್ರಿಸಲು ಪ್ರಸಕ್ತ ವರ್ಷದಲ್ಲಿ ಸಕ್ಕರೆ ರಫ್ತಿಗೂ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. 2022–23ನೇ ಸಾಲಿನಲ್ಲಿ 64 ಲಕ್ಷ ಟನ್‌ನಷ್ಟು ಸಕ್ಕರೆ ರಫ್ತು ಮಾಡಲಾಗಿದೆ.

ಅಲ್ಲದೇ, ಕಬ್ಬಿನ ಹಾಲು ಹಾಗೂ ಮೊಲಾಸಿಸ್‌–ಬಿ (ಕಾಕಂಬಿ) ಬಳಸಿ ಎಥೆನಾಲ್‌ ತಯಾರಿಕೆಗೆ ಸಕ್ಕರೆ ಬಳಕೆಯ ಮಿತಿಯನ್ನು 17 ಲಕ್ಷ ಟನ್‌ಗೆ ಸೀಮಿತಗೊಳಿಸಿದೆ.

ಉತ್ತರಪ್ರದೇಶದಲ್ಲಿ ಉತ್ಪಾದನೆ ಹೆಚ್ಚಳ

ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಹೋಲಿಸಿದರೆ ಉತ್ತರಪ್ರದೇಶದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಳವಾಗಿದೆ. ಎರಡೂವರೆ ತಿಂಗಳಿನಲ್ಲಿ 22.11 ಲಕ್ಷ ಟನ್‌ ಸಕ್ಕರೆ ಉತ್ಪಾದನೆಯಾಗಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 20.26 ಲಕ್ಷ ಟನ್‌ ಉತ್ಪಾದನೆಯಾಗಿತ್ತು ಎಂದು ಐಎಸ್‌ಎಂಎ ವಿವರಿಸಿದೆ. 

ಮಹಾರಾಷ್ಟ್ರದಲ್ಲಿ ಹಿಂದಿನ ವರ್ಷ (ಎರಡೂವರೆ ತಿಂಗಳಲ್ಲಿ) 33.02 ಲಕ್ಷ ಟನ್‌ ಸಕ್ಕರೆ ಉತ್ಪಾದನೆಯಾದರೆ, ಈ ವರ್ಷ 24.45 ಲಕ್ಷ ಟನ್‌ನಷ್ಟು ಉತ್ಪಾದನೆಯಾಗಿದೆ. ಕರ್ನಾಟಕದಲ್ಲಿ ಕಳೆದ ಬಾರಿ ಈ ಅವಧಿಯಲ್ಲಿ 19.20 ಲಕ್ಷ ಟನ್‌ ಉತ್ಪಾದನೆಯಾಗಿತ್ತು. ಈ ವರ್ಷ 16.95 ಲಕ್ಷ ಟನ್‌ ಉತ್ಪಾದನೆಯಾಗಿದೆ ಎಂದು ವಿವರಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT