ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎನ್‌ಸಿಎಲ್‌ಎಟಿ’ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ

ಸೈರಸ್‌ ಮಿಸ್ತ್ರಿ ವಜಾ ಪ್ರಕರಣ: ಟಾಟಾ ಸನ್ಸ್‌ ಮೊರೆ
Last Updated 2 ಜನವರಿ 2020, 22:25 IST
ಅಕ್ಷರ ಗಾತ್ರ

ನವದೆಹಲಿ: ಸೈರಸ್‌ ಮಿಸ್ತ್ರಿ ಅವರನ್ನು ಮರು ನೇಮಕ ಮಾಡಿಕೊಳ್ಳಬೇಕೆಂಬ ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ನಿರ್ಧಾರವನ್ನು ಟಾಟಾ ಸನ್ಸ್‌ ಪ್ರೈವೇಟ್‌ ಲಿಮಿಟೆಡ್‌ (ಟಿಎಸ್‌ಪಿಎಲ್‌) ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ನ್ಯಾಯಮಂಡಳಿಯ ಆದೇಶವು ಕಾರ್ಪೊರೇಟ್‌ ಪ್ರಜಾಪ್ರಭುತ್ವದ ಮಹತ್ವ ಕುಗ್ಗಿಸಲಿದೆ. ಕಂಪನಿಯ ನಿರ್ದೇಶಕ ಮಂಡಳಿಯ ಹಕ್ಕುಗಳನ್ನೂ ಮೊಟಕುಗೊಳಿಸಲಿದೆ. ಈ ಆದೇಶವು ಕಾರ್ಪೊರೇಟ್‌ ಕಾಯ್ದೆಗಳಿಗೆ ವಿರುದ್ಧವಾಗಿದೆ. ವಾಸ್ತವ ಸಂಗತಿಗಳನ್ನು ಪರಿಗಣಿಸದ ಆದೇಶವನ್ನು ಸಮರ್ಥಿಸುವ ನಿಯಮಗಳು ಕಾಯ್ದೆಯಲ್ಲಿಯೇ ಇಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಸೈರಸ್‌ ಮಿಸ್ತ್ರಿ ಅವರನ್ನು ಟಾಟಾ ಸನ್ಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ಮರು ನೇಮಕ ಮಾಡಿಕೊಳ್ಳಬೇಕು. ಎನ್‌. ಚಂದ್ರಶೇಖರನ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಕಾನೂನುಬಾಹಿರ ಎಂದು ನ್ಯಾಯಮಂಡಳಿಯು ಹಿಂದಿನ ತಿಂಗಳು ಆದೇಶ ನೀಡಿತ್ತು.

ಟಾಟಾ ಸಮೂಹದ ವಿಶ್ರಾಂತ ಅಧ್ಯಕ್ಷ ರತನ್‌ ಟಾಟಾ ಅವರು ಮಿಸ್ತ್ರಿ ವಿರುದ್ಧ ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದರು ಎಂದೂ ನ್ಯಾಯಮಂಡಳಿಯು ತನ್ನ ಆದೇಶದಲ್ಲಿ ಹೇಳಿತ್ತು. ಈ ಆದೇಶ ಜಾರಿಗೆ ನಾಲ್ಕು ವಾರಗಳ ಕಾಲಾವಕಾಶವನ್ನೂ ನೀಡಿತ್ತು.

ಮಿಸ್ತ್ರಿ ಅವರನ್ನು ಮರು ನೇಮಕ ಮಾಡಬೇಕು ಎಂದು ಸೈರಸ್‌ ಇನ್‌ವೆಸ್ಟಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಕೇಳಿಕೊಂಡಿರಲಿಲ್ಲ. ಮಿಸ್ತ್ರಿ ಅವರ ಅಧ್ಯಕ್ಷ ಮತ್ತು ನಿರ್ದೇಶಕ ಅವಧಿಯು 2017ರ ಮಾರ್ಚ್‌ನಲ್ಲಿಯೇ ಕೊನೆಗೊಂಡಿತ್ತು ಎನ್ನುವುದನ್ನು ಟಾಟಾ ಸನ್ಸ್‌ ಕೋರ್ಟ್‌ನ ಗಮನಕ್ಕೆ ತಂದಿದೆ. ಇದೇ 6ರಂದು ಸುಪ್ರೀಂಕೋರ್ಟ್‌ನಲ್ಲಿ ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದೂ ಟಾಟಾ ಸನ್ಸ್‌ ಮನವಿ ಮಾಡಿಕೊಳ್ಳಲಿದೆ.

ಬಹುತೇಕ ಪ್ರಕರಣಗಳು ವಜಾ
‘ಎನ್‌ಸಿಎಲ್‌ಎಟಿ’ ನೀಡಿರುವ ಆದೇಶಗಳಲ್ಲಿ ಹೆಚ್ಚಿನವು ಸುಪ್ರೀಂಕೋರ್ಟ್‌ನಲ್ಲಿ ವಜಾಗೊಂಡಿವೆ ಇಲ್ಲವೆ ಮಾರ್ಪಾಡಿಗೆ ಒಳಪಟ್ಟಿವೆ.

2019ರಲ್ಲಿ ‘ಎನ್‌ಸಿಎಲ್ಎಟಿ’ಯು ಟಾಟಾ – ಮಿಸ್ತ್ರಿ ಕಲಹ ಸೇರಿದಂತೆ ದಿವಾಳಿ ಸಂಹಿತೆಗೆ ಸಂಬಂಧಿಸಿದಂತೆ ಎಸ್ಸಾರ್‌ ಸ್ಟೀಲ್‌, ಜೆಟ್‌ ಏರ್‌ವೇಸ್‌, ಐಎಲ್‌ಆ್ಯಂಡ್‌ಎಫ್ಎಸ್‌ , ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಪ್ರಕರಣಗಳಲ್ಲಿ ಆದೇಶಗಳನ್ನು ನೀಡಿತ್ತು. ಇವುಗಳ ಪೈಕಿ ಅನೇಕವು ಸುಪ್ರೀಂಕೋರ್ಟ್‌ನಿಂದ ವಜಾಗೊಂಡಿವೆ ಇಲ್ಲವೇ ಬದಲಾವಣೆಗೆ ಒಳಪಟ್ಟಿವೆ.

ಟಾಟಾ ಸನ್ಸ್‌ ಅನ್ನು ಸಾರ್ವಜನಿಕ ಕಂಪನಿಯಿಂದ ಖಾಸಗಿ ಕಂಪನಿಯಾಗಿ ಪರಿವರ್ತಿಸಿರುವುದನ್ನೂ ಮೇಲ್ಮನವಿ ನ್ಯಾಯಮಂಡಳಿಯು ರದ್ದುಪಡಿಸಿದೆ. ಈ ಆದೇಶ ಮಾರ್ಪಾಡು ಮಾಡಬೇಕು ಎಂದು ಕಂಪನಿಗಳ ರಿಜಿಸ್ಟ್ರಾರ್‌ (ಆರ್‌ಒಸಿ) ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT