ಭಾನುವಾರ, ಅಕ್ಟೋಬರ್ 24, 2021
21 °C

ಸರ್ಕಾರಿ ಸ್ವಾಮ್ಯದ ‘ಏರ್‌ ಇಂಡಿಯಾ’ ₹18,000 ಕೋಟಿಗೆ ‘ಟಾಟಾ ಸನ್ಸ್‌’ಗೆ 

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಸರಿಸುಮಾರು 90 ವರ್ಷಗಳ ಹಿಂದೆ ತಾನೇ ಆರಂಭಿಸಿದ್ದ ವಿಮಾನಯಾನ ಕಂಪನಿಯನ್ನು ಟಾಟಾ ಸನ್ಸ್‌ ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ. ಏರ್‌ ಇಂಡಿಯಾ ಖರೀದಿಗೆ ಟಾಟಾ ಸನ್ಸ್‌ ಸಲ್ಲಿಸಿದ್ದ ₹ 18 ಸಾವಿರ ಕೋಟಿ ಮೊತ್ತದ ಬಿಡ್‌ಅನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಸಾಲದ ಸುಳಿಯಲ್ಲಿ ಇರುವ ಏರ್‌ ಇಂಡಿಯಾದ ಶೇಕಡ 100ರಷ್ಟು ಷೇರುಗಳನ್ನು ಟಾಟಾ ಸನ್ಸ್ ತನ್ನದಾಗಿಸಿಕೊಳ್ಳಲಿದೆ.

ಟಾಟಾ ಸಮೂಹವು ₹ 2,700 ಕೋಟಿ ನಗದು ಪಾವತಿಸಿ, ₹ 15,300 ಕೋಟಿ ಮೊತ್ತದ ಸಾಲವನ್ನು ತಾನು ವಹಿಸಿಕೊಳ್ಳುವ ಮೂಲಕ ಏರ್‌ ಇಂಡಿಯಾ ಕಂಪನಿಯನ್ನು ತನ್ನದಾಗಿಸಿಕೊಳ್ಳಲಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಅವರು ಸುದ್ದಿಗಾರರಿಗೆ ತಿಳಿಸಿದರು.

ಸ್ಪೈಸ್‌ಜೆಟ್‌ ಕಂಪನಿಯ ಪ್ರವರ್ತಕ ಅಜಯ್ ಸಿಂಗ್ ಅವರು ₹ 15,100 ಕೋಟಿ ಮೊತ್ತದ ಬಿಡ್ ಸಲ್ಲಿಸಿದ್ದರು. 2004–05ರ ನಂತರದ ಮೊದಲ ಖಾಸಗೀಕರಣ ಪ್ರಕ್ರಿಯೆ ಇದು. ಏರ್‌ ಇಂಡಿಯಾ ಕಂಪನಿಯು ಟಾಟಾ ಸಮೂಹದ ಪಾಲಿಗೆ ಮೂರನೆಯ ವಿಮಾನಯಾನ ಕಂಪನಿ ಆಗಿರಲಿದೆ.

ನೂರಕ್ಕೂ ಹೆಚ್ಚು ವಿಮಾನಗಳು, ಸಾವಿರಾರು ಪೈಲಟ್‌ಗಳು ಮತ್ತು ಸಿಬ್ಬಂದಿ, ವಿಶ್ವದ ಹಲವೆಡೆ ವಿಮಾನ ನಿಲ್ದಾಣಗಳಲ್ಲಿ ನಿಲುಗಡೆ ಸ್ಥಳಗಳು ಟಾಟಾ ಸಮೂಹದ ಪಾಲಿಗೆ ಸಿಗಲಿವೆ.

2017ರಿಂದಲೂ ಏರ್‌ ಇಂಡಿಯಾ ಕಂಪನಿಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಯತ್ನ ನಡೆದಿತ್ತು. ಆದರೆ ಆ ಯತ್ನಗಳು ಫಲ ನೀಡಿರಲಿಲ್ಲ. ಇದು ಮೂರನೆಯ ಪ್ರಯತ್ನವಾಗಿತ್ತು. ಏರ್‌ ಇಂಡಿಯಾದ ಸಾಲದಲ್ಲಿ ಎಷ್ಟು ಪಾಲನ್ನು ತಾವು ವಹಿಸಿಕೊಳ್ಳಲು ಸಿದ್ಧ ಎಂಬುದನ್ನು ಬಿಡ್ ಮಾಡುವ ಕಂಪನಿಗಳೇ ತಿಳಿಸಬಹುದು ಎಂದು ಕಳೆದ ಅಕ್ಟೋಬರ್‌ನಲ್ಲಿ ಕೇಂದ್ರ ಹೇಳಿತ್ತು. ಏರ್ ಇಂಡಿಯಾ ಕಂಪನಿ ಮತ್ತು ಇಂಡಿಯನ್ ಏರ್‌ಲೈನ್ಸ್ ಕಂಪನಿಯನ್ನು 2007ರಲ್ಲಿ ವಿಲೀನ ಮಾಡಿದಾಗಿನಿಂದಲೂ ನಷ್ಟ ಉಂಟಾಗುತ್ತಿದೆ.

‘ಏರ್‌ ಇಂಡಿಯಾಕ್ಕೆ ಸ್ವಾಗತ. ಏರ್‌ ಇಂಡಿಯಾ ಬಿಡ್ ಗೆದ್ದುಕೊಂಡಿರುವುದು ದೊಡ್ಡ ಸುದ್ದಿ. ವಿಮಾನಯಾನ ಕಂಪನಿಯನ್ನು ಮರಳಿ ಕಟ್ಟಲು ಗಣನೀಯ ಪ್ರಯತ್ನ ಬೇಕು. ವಿಮಾನಯಾನ ಉದ್ಯಮದಲ್ಲಿ ಟಾಟಾ ಸಮೂಹಕ್ಕೆ ಬಲಿಷ್ಠ ಮಾರುಕಟ್ಟೆ ಅವಕಾಶವನ್ನು ಇದು ಕಲ್ಪಿಸಲಿದೆ ಎಂದು ಆಶಿಸುತ್ತೇನೆ’ ಎಂದು ಟಾಟಾ ಸನ್ಸ್‌ನ ಗೌರವಾಧ್ಯಕ್ಷ ರತನ್ ಟಾಟಾ ಹೇಳಿದ್ದಾರೆ.

‘ಜೆಆರ್‌ಡಿ ಟಾಟಾ ಅವರು ಈಗ ನಮ್ಮ ನಡುವೆ ಇದ್ದಿದ್ದರೆ ಅತ್ಯಂತ ಖುಷಿಪಡುತ್ತಿದ್ದರು’ ಎಂದೂ ರತನ್ ಟಾಟಾ ಹೇಳಿದ್ದಾರೆ.

ಏರ್‌ ಇಂಡಿಯಾ ಮತ್ತು ಅದಕ್ಕೆ ಸಂಬಂಧಿಸಿದ ಕಂಪನಿಗಳ ಒಟ್ಟು ಸಾಲ ₹ 61,562 ಕೋಟಿ. ಈ ಪೈಕಿ ₹ 15,300 ಕೋಟಿ ಸಾಲವನ್ನು ಟಾಟಾ ಸನ್ಸ್‌ ಹೊತ್ತುಕೊಳ್ಳಲಿದೆ. ಇನ್ನುಳಿದ ಮೊತ್ತವು ಏರ್‌ ಇಂಡಿಯಾ ಅಸೆಟ್ಸ್‌ ಹೋಲ್ಡಿಂಗ್ ಲಿಮಿಟೆಡ್‌ಗೆ ವರ್ಗಾವಣೆ ಆಗಲಿದೆ.

ಬಿಡ್ಡಿಂಗ್ ಷರತ್ತುಗಳ ಅನ್ವಯ ಟಾಟಾ ಸಮೂಹವು ಏರ್‌ ಇಂಡಿಯಾದ ಹಾಲಿ ಉದ್ಯೋಗಿಗಳನ್ನು ಒಂದು ವರ್ಷವಾದರೂ ಇರಿಸಿಕೊಳ್ಳಬೇಕು. ನಂತರದಲ್ಲಿ ಅವರಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌) ಪ್ರಕಟಿಸಬಹುದು. ಒಟ್ಟು 12,082 ನೌಕರರು ಏರ್‌ ಇಂಡಿಯಾದಲ್ಲಿ ಇದ್ದಾರೆ. ಏರ್‌ ಇಂಡಿಯಾ ಬ್ರ್ಯಾಂಡ್‌ ಮತ್ತು ಲಾಂಛನವನ್ನು ಟಾಟಾ ಐದು ವರ್ಷಗಳವರೆಗೆ ಬೇರೆಯವರಿಗೆ ವರ್ಗಾವಣೆ ಮಾಡುವಂತಿಲ್ಲ. ನಂತರ, ಭಾರತೀಯ ಕಂಪನಿಗೆ ಮಾತ್ರ ಅದನ್ನು ಮಾರಾಟ ಮಾಡಬಹುದು.

ಕಂಪನಿಯನ್ನು ಟಾಟಾ ಸಮೂಹಕ್ಕೆ ವರ್ಗಾಯಿಸುವ ಪ್ರಕ್ರಿಯೆಯು ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದು ಕೇಂದ್ರವು ವಿಶ್ವಾಸ ವ್ಯಕ್ತಪಡಿಸಿದೆ

ವರದಿ ನಿರಾಕರಿಸಿದ್ದ ಕೇಂದ್ರ 

'ಏರ್‌ ಇಂಡಿಯಾ' ಹರಾಜು ಪ್ರಕ್ರಿಯೆಯಲ್ಲಿ ಟಾಟಾ ಸನ್ಸ್‌ ಸಲ್ಲಿಸಿರುವ ಬಿಡ್‌ಗೆ ಅನುಮೋದನೆ ದೊರೆತಿರುವುದಾಗಿ ಅಕ್ಟೋಬರ್‌ 1ರಂದು ವರದಿಯಾಗಿತ್ತು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಅಂತಹ ಯಾವುದೇ ಬೆಳವಣಿಗೆ ಆಗಿಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೆ, ಈಗ ಹರಾಜು ಪ್ರಕ್ರಿಯೆಯಲ್ಲಿ ಟಾಟಾ ಸನ್ಸ್‌ ಸಂಸ್ಥೆಯೇ ಯಶಸ್ವಿ ಬಿಡ್ಡರ್‌ ಆಗಿ ಆಯ್ಕೆಯಾಗಿರುವುದಾಗಿ ಅಧಿಕೃತವಾಗಿ ಘೋಷಣೆಯಾಗಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು