ಗುರುವಾರ , ಜೂನ್ 4, 2020
27 °C
2021ರ ಮಾರ್ಚ್‌ವರೆಗೆ ಜಾರಿ

ತೆರಿಗೆ ಕಡಿತ: ಕೇಂದ್ರದಿಂದ ಪರಿಷ್ಕೃತ ಅಧಿಸೂಚನೆ ‍ಪ್ರಕಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮೂಲದಲ್ಲಿಯೇ ತೆರಿಗೆ ಕಡಿತ (ಟಿಡಿಎಸ್‌) ಮತ್ತು ಮೂಲದಲ್ಲಿಯೇ ತೆರಿಗೆ ಸಂಗ್ರಹದ (ಟಿಸಿಎಸ್‌) ಪರಿಷ್ಕೃತ  ದರಗಳ ಕುರಿತು ಹೊಸ ಅಧಿಸೂಚನೆ ಹೊರಡಿಸಲಾಗಿದೆ.

ಹೊಸ ದರಗಳು ಮೇ 14 ರಿಂದ ಮುಂದಿನ ವರ್ಷದ (2021) ಮಾರ್ಚ್ 31ರವರೆಗೆ ಅನ್ವಯಗೊಳ್ಳಲಿವೆ. ಲಾಭಾಂಶ ಪಾವತಿ, ವಿಮೆ ಪಾಲಿಸಿ, ಬಾಡಿಗೆ, ವೃತ್ತಿ ಶುಲ್ಕ ಮತ್ತು ಸ್ಥಿರಾಸ್ತಿ ಖರೀದಿಗೆ ಸಂಬಂಧಿಸಿದಂತೆ ಮೂಲದಲ್ಲಿಯೇ ಮುರಿದುಕೊಳ್ಳುವ ತೆರಿಗೆಯನ್ನು ಶೇ 25ರಷ್ಟು ಕಡಿತಗೊಳಿಸಲಾಗಿದೆ. ವೇತನಯೇತರ ಪಾವತಿಗೆ ಸಂಬಂಧಿಸಿದಂತೆ ಮೂಲದಲ್ಲಿಯೇ ತೆರಿಗೆ ಕಡಿತ ಮತ್ತು ಸಂಗ್ರಹದ ದರವನ್ನು ತಗ್ಗಿಸಲಾಗಿದೆ.

ಕೊರೊನಾ ವೈರಾಣುವಿಗೆ ಕಡಿವಾಣ ಹಾಕಲು ದೇಶದಾದ್ಯಂತ ಜಾರಿಗೊಳಿಸಿರುವ ದಿಗ್ಬಂಧನದ ಕಾರಣಕ್ಕೆ ತೆರಿಗೆದಾರರು ಮತ್ತು ಕಂಪನಿಗಳಿಗೆ ಎದುರಾಗಿರುವ ಸಂಕಷ್ಟದ ಹೊರೆ ತಗ್ಗಿಸಲು ಕೇಂದ್ರ ಸರ್ಕಾರ ‘ಟಿಡಿಎಸ್‌’ ಮತ್ತು ‘ಟಿಸಿಎಸ್‌’ ದರ ತಗ್ಗಿಸಿದೆ. ಇದರಿಂದ ಜನರ ಕೈಯಲ್ಲಿ ₹ 50 ಸಾವಿರ ಕೋಟಿ ಮೊತ್ತವು ಹೆಚ್ಚುವರಿಯಾಗಿ ಹರಿದಾಡಲಿದೆ.

23 ಬಗೆಯ ಸರಕುಗಳ ಮೇಲಿನ ‘ಟಿಡಿಎಸ್‌’ ತಗ್ಗಿಸಲಾಗಿದೆ. ₹ 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವಾಹನ ಮಾರುವ ಸಂದರ್ಭದಲ್ಲಿನ ‘ಟಿಸಿಎಸ್‌’ ದರವನ್ನು ಶೇ 1ರಿಂದ ಶೇ 0.75ಕ್ಕೆ ಇಳಿಸಲಾಗಿದೆ ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ತಿಳಿಸಿದೆ.

ಅರಣ್ಯ ಉತ್ಪನ್ನ, ಖನಿಜಗಳಾದ ಕಲ್ಲಿದ್ದಲು, ಕಬ್ಬಿಣದ ಅದಿರು ಮಾರಾಟದ ‘ಟಿಸಿಎಸ್‌’ ಕಡಿತಗೊಳಿಸಲಾಗಿದೆ.

ಪ್ಯಾನ್‌ ಮತ್ತು ಆಧಾರ್‌ ಸಲ್ಲಿಸದ ಕಾರಣಕ್ಕೆ ಹೆಚ್ಚಿನ ದರದಲ್ಲಿ ತೆರಿಗೆ ಕಡಿತಗೊಳಿಸುವ ಸಂದರ್ಭದಲ್ಲಿ   ದರ ಕಡಿತದ ಪ್ರಯೋಜನವು ಅನ್ವಯಿಸುವುದಿಲ್ಲ ಎಂದು ‘ಸಿಬಿಡಿಟಿ’ ತಿಳಿಸಿದೆ.

‘ಟಿಡಿಎಸ್’ ಅನ್ನು ಶೇ 25ರಷ್ಟು ಕಡಿತಗೊಳಿಸಿರುವ ನಿರ್ಧಾರವು ವ್ಯವಸ್ಥೆಯಲ್ಲಿ ನಗದು ಹೆಚ್ಚಿಸುವ ನೇರ ಮತ್ತು ಕಾರ್ಯರೂಪಕ್ಕೆ ತರಬಹುದಾದ ಕ್ರಮವಾಗಿದೆ’ ಎಂದು ಪಿಡಬ್ಲ್ಯುಸಿ ಇಂಡಿಯಾ ಪಾರ್ಟ್ನರ್‌ (ತೆರಿಗೆ ಮತ್ತು ನಿಯಂತ್ರಣ) ವಿಕ್ರಂ ಡಿ. ಪ್ರತಿ್ಕ್ರಿಯಿಸಿದ್ದಾರೆ.

‘ವೇತನಯೇತರ ಪಾವತಿಗೆ ಸಂಬಂಧಿಸಿದ ’ಟಿಡಿಎಸ್‌’ ಮತ್ತು ‘ಟಿಸಿಎಸ್‌’ ದರವನ್ನು ಶೇ 25ರಷ್ಟು ಕಡಿತಗೊಳಿಸುವುದರಿಂದ  ಮಾರಾಟಗಾರರ ಬಳಿ ಹೆಚ್ಚುವರಿ ಹಣ ಉಳಿಯುವಂತೆ ಮಾಡಲಿದೆ. ಇದರಿಂದ ಆರ್ಥಿಕತೆಯಲ್ಲಿ ಹಣದ ಲಭ್ಯತೆ ಹೆಚ್ಚಲಿದೆ’ ಎಂದು ನಂಗಿಯಾ ಆ್ಯಂಡರ್ಸನ್‌ ಎಲ್‌ಎಲ್‌ಪಿ ನಿರ್ದೇಶಕ ಸಂದೀಪ್‌ ಝುಂಝನವಾಲಾ ಹೇಳಿದ್ದಾರೆ.

‘ಈ ಹಣಕಾಸು ವರ್ಷಾಂತ್ಯದವರೆಗೆ ಈ ದರ ಕಡಿತದ ಪ್ರಯೋಜನ ಜಾರಿಯಲ್ಲಿ ಇರುವುದರಿಂದ ನಗದು ಹರಿವು ಹೆಚ್ಚಲಿದೆ. ಎಲ್ಲ ವಹಿವಾಟುದಾರರು ಇದರ ಪ್ರಯೋಜನ ಪಡೆಯಲಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು