ಸೋಮವಾರ, ಡಿಸೆಂಬರ್ 9, 2019
17 °C

ಥಾಮಸ್‌ ಕುಕ್‌ ಕಂಪನಿ ದಿವಾಳಿ: ಸಂಕಷ್ಟಕ್ಕೆ ಸಿಲುಕಿದ ಗ್ರಾಹಕರು

Published:
Updated:
Prajavani

ಲಂಡನ್‌: ಬ್ರಿಟನ್‌ನ  ಪ್ರವಾಸ ಸಂಯೋಜಕ ಕಂಪನಿ ‘ಥಾಮಸ್‌ ಕುಕ್‌‘ ಆರ್ಥಿಕ ಸಂಕಷ್ಟದಿಂದ ದಿವಾಳಿ ಎದ್ದಿದ್ದು, ಪ್ರವಾಸಕ್ಕಾಗಿ ವಿವಿಧ ದೇಶಗಳಿಗೆ ತೆರಳಿದ್ದ ಲಕ್ಷಾಂತರ ಮಂದಿ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

178 ವರ್ಷಗಳ ಇತಿಹಾಸವಿರುವ ಈ ಕಂಪನಿಯು ದಿವಾಳಿಯಾದ ಬಳಿಕ ವಿವಿಧ ಪ್ರವಾಸಿ ತಾಣಗಳಲ್ಲಿ ಸಿಲುಕಿ ಕೊಂಡಿರುವ ಬ್ರಿಟನ್‌ನ 1.5ಲಕ್ಷ ಗ್ರಾಹಕರನ್ನು ಕರೆತರಲು ಸರ್ಕಾರ ಕಾರ್ಯಾಚರಣೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡನೇ ವಿಶ್ವಮಹಾಯುದ್ಧದ ಬಳಿಕ ಬ್ರಿಟನ್‌ ನಡೆಸುತ್ತಿರುವ ಅತಿ ದೊಡ್ಡ ಶಾಂತಿಕಾಲ ಕಾರ್ಯಾಚರಣೆ ಇದಾಗಿದೆ ಎಂದಿದ್ದಾರೆ. ತುರ್ತು ನಿಧಿ ಯನ್ನು ಪಡೆದುಕೊಳ್ಳಲು ವಿಫಲವಾದ ಕಾರಣ ಕಂಪನಿ ಸೋಮವಾರ ದಿವಾಳಿಯಾಗಿತ್ತು.

ಥಾಮಸ್‌ ಕುಕ್‌ ಕಂಪನಿಯು ವ್ಯವಹಾರ ಸ್ಥಗಿತಗೊಳಿಸಿದ್ದು, ಅದರ ಅಧೀನದಲ್ಲಿದ್ದ ನಾಲ್ಕು ವಿಮಾನಯಾನ ಸಂಸ್ಥೆಗಳು ಪತನ ಕಂಡಿವೆ. ಬ್ರಿಟನ್‌ನ 9ಸಾವಿರ ಮಂದಿ ಸೇರಿದಂತೆ 16 ದೇಶಗಳಲ್ಲಿರುವ ಕಂಪನಿಯ 22ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳಲಿ ದ್ದಾರೆ ಎಂದು ಬ್ರಿಟನ್‌ನ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.

ಬ್ರೆಕ್ಸಿಟ್‌ನ ಅನಿಶ್ಚಿತತೆಯಿಂದ ಟಿಕೆಟ್‌ ಕಾಯ್ದಿರಿಸುವಿಕೆ ಕುಸಿದಿದೆ ಎಂದು ಕಂಪನಿ ಈ ಹಿಂದೆ ಹೇಳಿತ್ತು.

ದಿವಾಳಿಯಾಗುವುದನ್ನು ತಡೆಯಲು ₹1,775 ಕೋಟಿ ಅಗತ್ಯ ಇದೆ ಎಂದು ಕಂಪನಿ ಈಚೆಗೆ ಹೇಳಿತ್ತು. ಅಲ್ಲದೆ ಷೇರು ದಾರರು ಮತ್ತು ಸಾಲಗಾರರ ಜೊತೆಗೂ ಮಾತುಕತೆ ನಡೆಸಿತ್ತು.

‘ಕಂಪನಿಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದರಲ್ಲಿ ವಿಷಾದವಿದೆ. ಹಲವಾರು ತಿಂಗಳುಗಳಿಂದ ಪ್ರಯತ್ನ ಪಟ್ಟರೂ ಸಂಸ್ಥೆಯ ವ್ಯವಹಾರ ವನ್ನು ಸುಸ್ಥಿತಿಗೆ ತರಲು ನಮಗೆ ಸಾಧ್ಯವಾಗಲಿಲ್ಲ’ ಎಂದು ಸಿಇಒ ಪೀಟರ್‌ ಫಾಂಕ್‌ಹೌಸರ್‌ ಖೇದ ವ್ಯಕ್ತಪಡಿಸಿದ್ದಾರೆ.

‘ಪ್ರವಾಸ ಸಂಯೋಜಕ ಕಂಪನಿಗಳು ಭವಿಷ್ಯದಲ್ಲಿ ದಿವಾಳಿಯಾಗದಂತೆ ನೋಡಿಕೊಳ್ಳಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ’ ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಹೇಳಿದ್ದಾರೆ.

ಪ್ರವಾಸಿಗರನ್ನು ಕರೆತರಲು ಕಾರ್ಯಾಚರಣೆ

ಬಲ್ಗೇರಿಯಾ, ಕ್ಯೂಬಾ, ಟರ್ಕಿ ಮತ್ತು ಅಮೆರಿಕದಲ್ಲಿ  ಸಿಲುಕಿಕೊಂಡಿರುವ ಬ್ರಿಟನ್‌ನ ಪ್ರವಾಸಿಗರನ್ನು ಕರೆತರಲು ಸರ್ಕಾರ ’ಆಪರೇಷನ್‌ ಮ್ಯಾಟರ್‌ಹಾರ್ನ್‌‘ ಆರಂಭಿಸಿದೆ.

ಸರ್ಕಾರ ಮತ್ತು ನಾಗರಿಕ ವಿಮಾನಯಾನ ಪ್ರಾಧಿಕಾರ ಜಂಟಿಯಾಗಿ ವಿಶೇಷ ವಿಮಾನಗಳ ಮೂಲಕ ಗ್ರಾಹಕರನ್ನು ಉಚಿತವಾಗಿ ಕರೆತರಲಿದೆ ಎಂದು ಬ್ರಿಟನ್‌ನ ಸಾರಿಗೆ ಕಾರ್ಯದರ್ಶಿ ಗ್ರಾಂಟ್‌ ಶಾಪ್ಸ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು