ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಸ್‌ಆರ್‌ ನಿಧಿ ಶಿಕ್ಷಣಕ್ಕೆ ಬಳಸಿ: ಡಿ.ಕೆ. ಶಿವಕುಮಾರ್‌ ಸಲಹೆ

Published 4 ಆಗಸ್ಟ್ 2024, 14:21 IST
Last Updated 4 ಆಗಸ್ಟ್ 2024, 14:21 IST
ಅಕ್ಷರ ಗಾತ್ರ

ಬೆಂಗಳೂರು: ‘ಕಂಪನಿಗಳು ತಮ್ಮ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯನ್ನು ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಬಳಸಬೇಕು. ಸರ್ಕಾರವು ಇದನ್ನು ಕಡ್ಡಾಯಗೊಳಿಸುವ ಬಗ್ಗೆ ಹೊಸ ನೀತಿ ರೂಪಿಸಲು ಚಿಂತನೆ ನಡೆಸಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ನಗರದಲ್ಲಿ ಇತ್ತೀಚೆಗೆ ನಡೆದ ಬೆಂಗಳೂರು ಚೇಂಬರ್ ಆಫ್‌ ಇಂಡಸ್ಟ್ರಿ ಆ್ಯಂಡ್‌ ಕಾಮರ್ಸ್‌ನ (ಬಿಸಿಐಸಿ) 47ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಕರ್ನಾಟಕದ ಕಡೆಗೆ ಇಡೀ ಜಗತ್ತು ತಿರುಗಿ ನೋಡುತ್ತಿದೆ. ಇದಕ್ಕಾಗಿ ಬೆಂಗಳೂರಿನ ಬೆಳವಣಿಗೆ ಬಹಳ ಮುಖ್ಯವಾಗಿದೆ. ಉದ್ದಿಮೆದಾರರೊಟ್ಟಿಗೆ ನಿಲ್ಲುವ ಜೊತೆಗೆ ಕೈಗಾರಿಕೆಗಳ ಬೆಳವಣಿಗೆಗೆ ಅಗತ್ಯ ಸಹಾಯ ನೀಡಲು ಸರ್ಕಾರ ಬದ್ಧವಾಗಿದೆ. ಉದ್ಯೋಗದ ಸಮಸ್ಯೆ ಬಗೆಹರಿಸಲು ಗಮನಹರಿಸುವುದು ನಮ್ಮ ಗುರಿಯಾಗಿದೆ’ ಎಂದು ಹೇಳಿದರು.

ರಾಜ್ಯದಲ್ಲಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಕಾರ್ಪೊರೇಟ್ ಕಂಪನಿಗಳು ಮುಂದೆ ಬರಬೇಕಿದೆ. ಕೈಗಾರಿಕೆಗಳು ಇದ್ದಲ್ಲಿ ಮಾತ್ರ ಉದ್ಯೋಗಗಳ ಸೃಷ್ಟಿ ಸಾಧ್ಯ. ಹೂಡಿಕೆದಾರರಿಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡಲು ಪ್ರತ್ಯೇಕ ವಿಭಾಗ ತೆರೆಯುತ್ತೇವೆ. ಕರಾವಳಿ ಪ್ರದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ನೂತನ ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಬ್ರಿಗೇಡ್ ಹಾಸ್ಪಿಟಾಲಿಟಿ ನಿರ್ದೇಶಕ ಮತ್ತು ವರ್ಲ್ಡ್ ಟ್ರೇಡ್ ಸೆಂಟರ್ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕ ವಿನೀತ್ ವರ್ಮಾ ಬಿಸಿಐಸಿ ಅಧ್ಯಕ್ಷರಾಗಿ ಇದೇ ವೇಳೆ ಅಧಿಕಾರ ಸ್ವೀಕರಿಸಿದರು. 

ಬಳಿಕ ಮಾತನಾಡಿದ ಅವರು ವಾಹನದ ಬಿಡಿಭಾಗಗಳು, ಜವಳಿ, ಆಹಾರ ಸಂಸ್ಕರಣೆ, ವಿದ್ಯುನ್ಮಾನ ಇತ್ಯಾದಿ ವಿಭಿನ್ನ ಕ್ಷೇತ್ರಗಳನ್ನು ರಾಜ್ಯದ ಇತರೆ ಭಾಗಗಳಿಗೂ ವಿಸ್ತರಿಸುವುದು ನಮ್ಮ ಗುರಿಯಾಗಿದೆ. ಬ್ರಿಗೇಡ್‌ನೊಂದಿಗೆ ನಮ್ಮ ಸಹಭಾಗಿತ್ವದ ಭಾಗವಾಗಿ ದೇವನಹಳ್ಳಿಯಲ್ಲಿ ಆಗಸ್ಟ್ 7ರಂದು ಬ್ರಿಗೇಡ್ ಬಿಸಿಐಸಿ ಕೌಶಲಾಭಿವೃದ್ಧಿ ಪಾರ್ಕ್ ಉದ್ಘಾಟನೆಯಾಗಲಿದೆ ಎಂದರು.

ಬಹ್ಲರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಗೋಖಲೆ ಅವರನ್ನು ಬಿಸಿಐಸಿಯ ಹಿರಿಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು.

ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ಸ್ಥಾಪಕ ಕುಲಪತಿ ಎಂ.ಕೆ. ಶ್ರೀಧರ್, ಬೆಂಗಳೂರಿನ ಸೆಂಟರ್ ಫಾರ್ ಕಲೆಕ್ಟಿವ್ ಡೆವಲಪ್‌ಮೆಂಟ್‌ನ ಸ್ಥಾಪಕ ಡಾ. ತ್ರಿಲೋಚನ ಶಾಸ್ತ್ರಿ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ಹಣಕಾಸು ಅಧಿಕಾರಿ ಭಾಸ್ಕರ್ ಆನಂದ್‌ರಾವ್, ಶಿಲ್ಪಿ ಅರುಣ್ ಯೋಗಿರಾಜ್, ಬಿಸಿಐಸಿ ಮಾಜಿ ಅಧ್ಯಕ್ಷ ಎಸ್.ಕೆ. ಶರ್ಮಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT