ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೊಡಾಫೋನ್ ಐಡಿಯಾ: 18ರಿಂದ ಎಫ್‌ಪಿಒ ಆರಂಭ

Published 12 ಏಪ್ರಿಲ್ 2024, 14:38 IST
Last Updated 12 ಏಪ್ರಿಲ್ 2024, 14:38 IST
ಅಕ್ಷರ ಗಾತ್ರ

ನವದೆಹಲಿ: ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ವೊಡಾಫೋನ್‌  ಐಡಿಯಾ ಕಂಪನಿಯು, ಷೇರು ಮಾರಾಟ ಪ್ರಕ್ರಿಯೆ (ಎಫ್‌ಪಿಒ) ಮೂಲಕ ₹18 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದೆ.

ಇದು ದೇಶದ ಷೇರು ಮಾರುಕಟ್ಟೆಯಲ್ಲಿನ ಅತಿದೊಡ್ಡ ಎಫ್‌ಪಿಒ ಆಗಿದ್ದು, ಪ್ರತಿ ಷೇರಿಗೆ ₹10ರಿಂದ ₹11 ಬೆಲೆ ನಿಗದಿಪಡಿಸಿದೆ. 

ಏಪ್ರಿಲ್‌ 18ರಂದು ಎಫ್‌ಪಿಒ ಆರಂಭವಾಗಲಿದ್ದು, ಏಪ್ರಿಲ್‌ 22ರಂದು ಮುಕ್ತಾಯವಾಗಲಿದೆ. ಬಂಡವಾಳ ಸಂಗ್ರಹಿಸಲು ಆಡಳಿತ ಮಂಡಳಿಯು ಎಫ್‌ಪಿಒಗೆ ಒಪ್ಪಿಗೆ ನೀಡಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.

ವೊಡಾಫೋನ್‌ ಐಡಿಯಾದ ಪ್ರವರ್ತಕ ಘಟಕಗಳಲ್ಲಿ ಆದಿತ್ಯ ಬಿರ್ಲಾ ಗ್ರೂಪ್‌ ಕೂಡ ಒಂದಾಗಿದೆ. ಇದರ ಅಂಗಸಂಸ್ಥೆಯಾದ ಒರಿಯಾನಾ ಇನ್ವೆಸ್ಟ್‌ಮೆಂಟ್ಸ್ ಪ್ರೈವೆಟ್‌ ಲಿಮಿಟೆಡ್‌ಗೆ ಆದ್ಯತೆಯ ಷೇರುಗಳ ವಿತರಣೆ ಮೂಲಕ ಕಂಪನಿಯು ಒಟ್ಟು ₹2,075 ಕೋಟಿ ಬಂಡವಾಳ ಸಂಗ್ರಹಿಸಿದೆ.

ಭಾರತೀಯ ದೂರಸಂಪರ್ಕ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳಾದ ರಿಲಯನ್ಸ್‌ ಜಿಯೊ ಮತ್ತು ಭಾರ್ತಿ ಏರ್‌ಟೆಲ್‌ ವಿರುದ್ಧ ತನ್ನ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳಲು ಕಂಪನಿಗೆ ಈ ಮೊತ್ತವು ನೆರವಾಗಲಿದೆ.

ಈಗಾಗಲೇ, ಪ್ರತಿಸ್ಪರ್ಧಿ ಕಂಪನಿಗಳು 5ಜಿ ಸೇವೆ ಆರಂಭಿಸಿವೆ. ಆದರೆ, ವೊಡಾಫೋನ್‌ ಐಡಿಯಾದಿಂದ 5ಜಿ ಸೇವೆ ಆರಂಭಕ್ಕೆ ವಿಳಂಬವಾಗಿದೆ. ಹಾಗಾಗಿ, ತನ್ನ 4ಜಿ ಸೇವೆಯನ್ನು ಬಲಪಡಿಸಲು ಮತ್ತು ವ್ಯಾಪಾರಿಗಳ ಬಾಕಿ ಪಾವತಿಗೆ ಈ ಮೊತ್ತವು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.

ಕಂಪನಿಯು ₹2.1 ಲಕ್ಷ ಕೋಟಿ ಸಾಲ ಹೊಂದಿದ್ದು, ತ್ರೈಮಾಸಿಕ ಅವಧಿಯಲ್ಲಿ ನಷ್ಟ ದಾಖಲಿಸುತ್ತಿದೆ. ಜೊತೆಗೆ, ಪ್ರತಿ ತಿಂಗಳು ಕಂಪನಿಯ ಚಂದಾದಾರರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT