ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಬ್ಯಾಂಕ್‌ ಮುಖ್ಯಸ್ಥರಾಗಿ ನಾಮನಿರ್ದೇಶನಗೊಂಡಿರುವ ಅಜಯ್‌ ಬಂಗಾ ಯಾರು?

Last Updated 24 ಫೆಬ್ರುವರಿ 2023, 10:14 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತೀಯ ಮೂಲದ ಮಾಸ್ಟರ್‌ಕಾರ್ಡ್‌ ಸಂಸ್ಥೆಯ ಮಾಜಿ ಸಿಇಒ ಅಜಯ್‌ ಬಂಗಾ ಅವರನ್ನು ವಿಶ್ವಬ್ಯಾಂಕ್‌ ಮುಖ್ಯಸ್ಥ ಹುದ್ದೆಗೆ ನಾಮನಿರ್ದೇಶನ ಮಾಡಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಗುರುವಾರ ಹೇಳಿದ್ದರು. ಇದರೊಂದಿಗೆ ಮತ್ತೋರ್ವ ಭಾರತೀಯ ಮೂಲದ ವ್ಯಕ್ತಿ ವಿಶ್ವದ ಉನ್ನತ ಸಂಸ್ಥೆಯ ಹುದ್ದೆ ಅಲಂಕರಿಸುವ ಸಾಧ್ಯತೆ ದಟ್ಟವಾಗಿದೆ.

ಪ್ರಸ್ತುತ ಈಕ್ವಿಟಿ ಕಂಪನಿ ಜನರಲ್‌ ಅಟ್ಲಾಂಟಿಕ್‌ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ 63 ವರ್ಷದ ಅಜಯ್‌ ಬಂಗಾ, ಹುಟ್ಟಿ ಬೆಳೆದಿದ್ದು ಪುಣೆಯಲ್ಲಿ. ದಿಲ್ಲಿಯ ಸೇಂಟ್‌ ಸ್ಟೀಫನ್ಸ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದು, ಅಹಮದಾಬಾದ್‌ನ ಐಐಎಂನಲ್ಲಿ ಎಂಬಿಎ ಪೂರ್ಣಗೊಳಿಸುತ್ತಾರೆ. ನಂತರ ನೆಸ್ಲೆಇಂಡಿಯಾದಲ್ಲಿ ಉದ್ಯೋಗ ಪ್ರಾರಂಭಿಸಿ 13 ವರ್ಷಗಳ ಕಾಲ ಕೆಲಸ ಮಾಡುತ್ತಾರೆ. ಬಳಿಕ 2 ವರ್ಷ ಪೆಪ್ಸಿಕೊ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ.

1996ರಲ್ಲಿ ಅಮೆರಿಕಕ್ಕೆ ಸಿಟಿ ಬ್ಯಾಂಕ್‌ ಸೇರುತ್ತಾರೆ. ಕಂಪನಿಯ ಏಷ್ಯಾ–ಫೆಸಿಫಿಕ್‌ ವಿಭಾಗದ ಸಿಇಒ ಆಗುವ ಮೊದಲು ಸಂಸ್ಥೆಯ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. 2009ರಲ್ಲಿ ಅಧ್ಯಕ್ಷರಾಗಿ ಮಾಸ್ಟರ್‌ಕಾರ್ಡ್‌ ಕಂಪನಿ ಸೇರಿ 2010ರಲ್ಲಿ ಸಿಇಒ ಆಗುತ್ತಾರೆ.

ವಿಶ್ವಬ್ಯಾಂಕ್‌ನ ಹಾಲಿ ಮುಖ್ಯಸ್ಥ ಡೇವಿಡ್‌ ಮಲ್‌ಪಾಸ್‌ ಅವರ ಅಧಿಕಾರವಧಿ 2024ರ ಏಪ್ರಿಲ್‌ಗೆ ಅಂತ್ಯಗೊಳ್ಳಲಿದ್ದು, 2023ರ ಜೂನ್‌ನಲ್ಲಿಯೇ ಅವರು ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ಬಳಿಕ ಪ್ರಮುಖ ಷೇರುದಾರರೆಲ್ಲ ಸಮ್ಮತಿಸಿದರೆ ಬಂಗಾ ಆ ಹುದ್ದೆ ಅಲಂಕರಿಸುತ್ತಾರೆ. 2016ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡ ಬಂದಿದೆ. ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಆಪ್ತರು ಕೂಡ. ಅಮೆರಿಕದ ವಾಣಿಜ್ಯ ವಲಯದಲ್ಲಿ ಇವರಿಗೆ ಉತ್ತಮ ಹೆಸರಿದೆ. ಅನೇಕ ಅತ್ಯುತ್ತಮ ಕಂಪನಿಗಳ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ.

ವಿಶ್ವಬ್ಯಾಂಕ್‌ನ ಪ್ರಮುಖ ಷೇರುದಾರರು ಯೂರೋಪಿನವರು. ಆದಾಗ್ಯೂ ಇದನ್ನು ಅಮೆರಿಕವೇ ಮುನ್ನಡೆಸುತ್ತಿದೆ. ಬ್ಯಾಂಕ್ ತನ್ನ 77 ವರ್ಷಗಳ ಇತಿಹಾಸದಲ್ಲಿ ಎಂದಿಗೂ ಮಹಿಳಾ ಮುಖ್ಯಸ್ಥರನ್ನು ಆಯ್ಕೆ ಮಾಡಿರದ ಕಾರಣ ಮಹಿಳೆಯೊಬ್ಬರು ಈ ಹುದ್ದೆಗೆ ನೇಮಿಸುವಂತೆ ಮತ್ತೋರ್ವ ಪ್ರಮುಖ ಷೇರುದಾರ ಜರ್ಮನಿ ಒತ್ತಾಯಿಸಿದೆ. ಮಾರ್ಚ್‌ 29ರವರೆಗೂ ವಿಶ್ವಬ್ಯಾಂಕ್‌ ನಾಮನಿರ್ದೇಶನ ಸ್ವೀಕರಿಸಲಿದ್ದು, ಬಳಿಕ ಹುದ್ದೆಗೆ ಅಂತಿಮ ಆಯ್ಕೆ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT