ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ದಿನವೂ ಕಚ್ಚಾ ತೈಲ ದರ ಏರಿಕೆ: ಪೆಟ್ರೋಲ್‌, ಡೀಸೆಲ್‌ ಬೆಲೆ ಅಲ್ಪ ಇಳಿಕೆ

Last Updated 11 ಮಾರ್ಚ್ 2020, 5:44 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಪೆಟ್ರೋಲ್, ಡೀಸೆಲ್ ಮೆಲಿನ ತೆರಿಗೆ ಪ್ರಮಾಣವನ್ನು ಕ್ರಮವಾಗಿ ಶೇ 32ರಿಂದ 35 ಮತ್ತು ಶೇ 21ರಿಂದ 24ಕ್ಕೆ ಏರಿಕೆ ಮಾಡಲಾಗಿದೆ. ತೆರಿಗೆ ಹೆಚ್ಚಳದಿಂದಾಗಿ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹1.60 ಮತ್ತು ಪ್ರತಿ ಲೀಟರ್ ಡಿಸೇಲ್ ದರ ₹1.59 ಏರಿಕೆಯಾಗಲಿದೆ.

ಬುಧವಾರ ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ಫ್ಯೂಚರ್ಸ್‌ ದರ ಶೇ 3.9ರಷ್ಟು ಏರಿಕೆಯಾಗುವ ಮೂಲಕ ಪ್ರತಿ ಬ್ಯಾರೆಲ್‌ಗೆ 38.66 ಡಾಲರ್‌ ಆಗಿದೆ. ಅಮೆರಿಕದ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೆಟ್‌ ಕಚ್ಚಾ ತೈಲ ಶೇ 3.3ರಷ್ಟು ಹೆಚ್ಚಳಗೊಂಡು ಪ್ರತಿ ಬ್ಯಾರೆಲ್‌ಗೆ 35.48 ಆಗಿದೆ.

ರಷ್ಯಾದೊಂದಿಗೆ ಸೌದಿ ಅರೇಬಿಯಾ ದರ ಸಮರಕ್ಕೆ ಮುಂದಾದ ಕಾರಣ ಸೋಮವಾರ, ಕಚ್ಚಾ ತೈಲ ದರ ಶೇ 31ರಷ್ಟು ಕುಸಿತ ಕಂಡಿತ್ತು. ಇಳಿಕೆಯಾಗಿದ್ದ ಕಚ್ಚಾ ತೈಲ ದರ ಮಂಗಳವಾರ ಶೇ 8ರವರೆಗೂ ಏರಿಕೆ ದಾಖಲಿಸಿತು. ಈಗ ಕಚ್ಚಾ ತೈಲ ದರ ಶೇ 3.9ರ ವರೆಗೂ ಏರಿಯಾಗಿರುವುದು ಷೇರುಪೇಟೆಗಳಲ್ಲಿ ಚೇತರಿಗೆ ಸೃಷ್ಟಿಸಿದೆ.

ಸೋಮವಾರದ ತೈಲ ದರ ಇಳಿಕೆಯಿಂದ ಭಾರತದ ರಿಲಯನ್ಸ್‌ ಇಂಡಸ್ಟ್ರೀಸ್‌, ಒಎನ್‌ಜಿಸಿ ಹಾಗೂ ಅಮೆರಿಕದ ಹಲವು ತೈಲ ಕಂಪನಿಗಳ ಷೇರು ತೀವ್ರ ಕುಸಿತಕ್ಕೆ ಒಳಗಾಗಿವೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಒಂದು ದಿನ ಮಹಾ ಕುಸಿತ ಹಾಗೂ ಸತತ ಎರಡು ದಿನ ಹೆಚ್ಚಳ ದಾಖಲಿಸಿದೆ. ಆದರೆ, ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಅಲ್ಪ ಇಳಿಕೆಯಷ್ಟೇ ಆಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಎರಡು ದಿನಗಳಲ್ಲಿ 50–60 ಪೈಸೆ ಇಳಿದಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹72.70 ಹಾಗೂ ಡೀಸೆಲ್‌ಗೆ ₹65.16 ಇದೆ.

ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹70.29 ಹಾಗೂ ಡೀಸೆಲ್‌ ದರ ₹63.01 ತಲುಪಿದೆ. 2019ರ ಜುಲೈ ನಂತರದಲ್ಲಿ ದೆಹಲಿಯಲ್ಲಿ ಮೊದಲ ಬಾರಿಗೆ ಸೋಮವಾರ ಪೆಟ್ರೋಲ್‌ ದರ ₹70.59 ತಲುಪಿತ್ತು. ಡೀಸೆಲ್‌ ದರ ₹63.26 ಆಗಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಫೆಬ್ರುವರಿ 27ರಿಂದ ತೈಲ ದರ ಇಳಿಮುಖವಾಗಿದೆ.

ಜಗತ್ತಿನ ಅತಿ ದೊಡ್ಡ ಕಚ್ಚಾ ತೈಲ ಉತ್ಪಾದಕ ಸೌದಿ ಅರಾಮ್ಕೊ, ಏಪ್ರಿಲ್‌ ವೇಳೆಗೆ ಪ್ರತಿ ದಿನದ ಕಚ್ಚಾ ತೈಲ ಪೂರೈಕೆಯನ್ನು 12.3 ಮಿಲಿಯನ್‌ ಬ್ಯಾರೆಲ್‌ಗೆ ಹೆಚ್ಚಳ ಮಾಡಲು ಯೋಜನೆ ರೂಪಿಸಿದೆ. ಅಮೆರಿಕದಲ್ಲಿ ನವೆಂಬರ್‌ಗೆ ಅಧ್ಯಕ್ಷೀಯ ಚುನಾವಣೆ ನಿಗದಿಯಾಗಿದ್ದು, ಸೌದಿ–ರಷ್ಯಾ ದರ ಸಮರ ಸೇರಿದಂತೆ ಜಾಗತಿಕ ವಹಿವಾಟು ಅಮೆರಿಕದ ಶೇಲ್‌ ಉದ್ಯಮದ ಮೇಲೆ ಪರಿಣಾಮ ಬೀರಬಹುದಾಗಿದೆ.

ಪ್ರತಿ ಬ್ಯಾರೆಲ್‌ ಕಚ್ಚಾ ತೈಲ ಉತ್ಪಾದನೆಗೆ ಸೌದಿ ಅರೇಬಿಯಾಗೆ ತಗುಲುವ ವೆಚ್ಚ 3–5 ಡಾಲರ್‌. ರಷ್ಯಾ ಪ್ರತಿ ಬ್ಯಾರೆಲ್‌ ತೈಲವನ್ನು 16–18 ಡಾಲರ್‌ ವೆಚ್ಚದಲ್ಲಿ ಸಂಸ್ಕರಿಸುತ್ತದೆ. ಆದರೆ, ಅಮೆರಿಕದ ಶೇಲ್‌ ಬಾವಿಗಳಿಂದ ತೈಲ ಉತ್ಪಾದನೆಗೆ 68 ಡಾಲರ್‌ ತಗುಲುತ್ತದೆ. ಭಾರತದ ಕಂಪನಿಗಳು ಅಮೆರಿಕದ ಶೇಲ್‌ ಗ್ಯಾಸ್‌ ವಲಯಗಳಲ್ಲಿ 4 ಬಿಲಿಯನ್‌ ಡಾಲರ್‌ (ಅಂದಾಜು ₹29,500 ಕೋಟಿ) ಹೂಡಿಕೆ ಮಾಡಿವೆ. ದ್ರವೀಕೃತ ನೈಸರ್ಗಿಕ ಅನಿಲ ಮತ್ತು ಕಚ್ಚಾ ತೈಲವನ್ನು ಭಾರತ ಅಮೆರಿಕದಿಂದ ಪಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT