ಮಂಗಳವಾರ, ಜೂನ್ 15, 2021
21 °C

ದಾಖಲೆಯ ಮಟ್ಟದಲ್ಲಿ ಸಗಟು ಹಣದುಬ್ಬರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸಗಟು ಮಾರಾಟ ದರ ಆಧರಿಸಿದ ಹಣದುಬ್ಬರ ಸೂಚ್ಯಂಕವು (ಡಬ್ಲ್ಯುಪಿಐ) ಏಪ್ರಿಲ್ ತಿಂಗಳಿನಲ್ಲಿ ಸಾರ್ವಕಾಲಿಕ ದಾಖಲೆಯ ಮಟ್ಟವಾದ ಶೇಕಡ 10.49ಕ್ಕೆ ತಲುಪಿದೆ. ತಯಾರಾದ ಉತ್ಪನ್ನಗಳು ಹಾಗೂ ತೈಲ ಬೆಲೆಯಲ್ಲಿ ಆದ ಹೆಚ್ಚಳ ಹಣದುಬ್ಬರ ಏರಿಕೆ ಕಾಣಲು ಪ್ರಮುಖ ಕಾರಣ.

ಈ ವರ್ಷದ ಮಾರ್ಚ್‌ನಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ 7.39ರಷ್ಟಿತ್ತು. ಹಿಂದಿನ ವರ್ಷದ ಏಪ್ರಿಲ್‌ನಲ್ಲಿ ಇದು ಶೇ (–)1.57ರಷ್ಟಾಗಿತ್ತು. ಸಗಟು ಹಣದುಬ್ಬರ ಪ್ರಮಾಣವು ಸತತ ನಾಲ್ಕು ತಿಂಗಳುಗಳಿಂದ ಹೆಚ್ಚಳ ಆಗುತ್ತಿದೆ. ‘ಪೆಟ್ರೋಲ್, ಡೀಸೆಲ್ ಮತ್ತು ತಯಾರಾದ ಉತ್ಪನ್ನಗಳ ಬೆಲೆಯು ಹಿಂದಿನ ವರ್ಷದ ಏಪ್ರಿಲ್‌ನ ಮಟ್ಟಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಾಗಿದೆ. ಹೀಗಾಗಿ ಈ ವರ್ಷದ ಏಪ್ರಿಲ್‌ನಲ್ಲಿ ಹಣದುಬ್ಬರ ಜಾಸ್ತಿ ಆಗಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.

ಪ್ರೊಟೀನ್‌ಯುಕ್ತ ಆಹಾರ ವಸ್ತುಗಳಾದ ಮೊಟ್ಟೆ, ಮಾಂಸ ಮತ್ತು ಮೀನಿನ ಬೆಲೆ ಜಾಸ್ತಿ ಆದ ಪರಿಣಾಮವಾಗಿ ಏಪ್ರಿಲ್‌ನಲ್ಲಿ ಆಹಾರ ವಸ್ತುಗಳ ಹಣದುಬ್ಬರವು ಶೇ 4.92ಕ್ಕೆ ತಲುಪಿದೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು ಏಪ್ರಿಲ್‌ ತಿಂಗಳಿನಲ್ಲಿ ಶೇ 4.29ಕ್ಕೆ ಇಳಿಕೆ ಕಂಡಿದೆ.

‘ವರ್ಷದ ಮುಂದಿನ ದಿನಗಳಲ್ಲಿ ಹಣದುಬ್ಬರವು ಯಾವ ಪ್ರಮಾಣದಲ್ಲಿ ಇರಲಿದೆ ಎಂಬುದು ಕೋವಿಡ್–19 ಹರಡುವಿಕೆ ಹೇಗಿರಲಿದೆ ಎನ್ನುವುದನ್ನು ಆಧರಿಸಿರುತ್ತದೆ. ಅಲ್ಲದೆ, ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಸ್ಥಳೀಯ ಮಟ್ಟದಲ್ಲಿ ಜಾರಿಗೆ ಬರುವ ನಿಯಂತ್ರಣ ಕ್ರಮಗಳು ಪೂರೈಕೆ ವ್ಯವಸ್ಥೆ ಮತ್ತು ಸರಕು ಸಾಗಣೆ ವ್ಯವಸ್ಥೆ ಮೇಲೆ ಯಾವ ‍ಪರಿಣಾಮ ಬೀರಲಿದೆ ಎಂಬುದು ಕೂಡ ಹಣದುಬ್ಬರದ ಮೇಲೆ ಪ್ರಭಾವ ಬೀರಲಿದೆ’ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಈ ಹಿಂದೆ ಹೇಳಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು