ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಪರಿಣಾಮ: ಭಾರತದಲ್ಲಿ 6 ಕೋಟಿ ಜನ ಕೆಲಸ ಕಳೆದುಕೊಳ್ಳುವ ಸಾಧ್ಯತೆ?

Last Updated 29 ಏಪ್ರಿಲ್ 2020, 14:58 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸರ್ಕಾರ ಇಡೀ ದೇಶವನ್ನು ಲಾಕ್‌ಡೌನ್‌ ಮಾಡಿರುವುದರ ಪರಿಣಾಮಸುಮಾರು 6 ಕೋಟಿ ಜನರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಗಳಿವೆ.

ಲಾಕ್‌ಡೌನ್‌ ಪರಿಣಾಮ 10 ಉದ್ಯೋಗಿಗಳಲ್ಲಿ ಒಬ್ಬ ವ್ಯಕ್ತಿ ಕೆಲಸ ಕಳೆದುಕೊಳ್ಳಬಹುದು ಎಂದು ಇಂಡಿಯನ್ ಸ್ಟಾಫಿಂಗ್ ಫೆಡರೇಶನ್ (ಐಎಸ್ಎಫ್) ನೀಡಿದ ದತ್ತಾಂಶಗಳ ಆಧಾರದ ಮೇಲೆ ಡೆಕ್ಕನ್ ಹೆರಾಲ್ಡ್ ಪತ್ರಿಕೆ ವಿಶ್ಲೇಷಿಸಿದೆ. ದೇಶದ ಸುಮಾರು 60 ಕೋಟಿ ಉದ್ಯೋಗಿಗಳಲ್ಲಿ 6 ಕೋಟಿ ಜನರು ಕೆಲಸ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ. ಲಾಕ್‌ಡೌನ್‌ ಬಳಿಕ ಮತ್ತೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ದೇಶ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಿದೆ.

ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಅಸಂಘಟಿತ ವಲಯ, ಶೇ 88ರಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ. ಆದರೆ ಲಾಕ್‌ಡೌನ್‌ ಪರಿಣಾಮ ಈ ವಲಯದ ಸಾಕಷ್ಟು ಜನರು ಉದ್ಯೋಗ ಕಳೆದುಕೊಳ್ಳಲ್ಲಿದ್ದಾರೆ. ಸರ್ಕಾರಿ ನೌಕರರನ್ನು ಹೊರತುಪಡಿಸಿ ಸಂಘಟಿತ ವಲಯದಲ್ಲೂ ಸಾಕಷ್ಟು ಉದ್ಯೋಗ ನಷ್ಟವಾಗಲಿದೆಎಂದುಐಎಸ್ಎಫ್ ದತ್ತಾಂಶಗಳಿಂದ ತಿಳಿದುಬಂದಿದೆ.

130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ 60 ಕೋಟಿ ಜನರು ಉದ್ಯೋಗದಲ್ಲಿದ್ದಾರೆ. ಇವರಲ್ಲಿ 53 ಕೋಟಿ ಜನರು ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದರೆ, 7 ಕೋಟಿ ಜನರು ಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. 7 ಕೋಟಿ ಉದ್ಯೋಗಿಗಳಲ್ಲಿ 1 ಕೋಟಿ ಜನರು ಸರ್ಕಾರಿ ನೌಕರರಾಗಿದ್ದು ಇವರ ಉದ್ಯೋಗಗಳಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂಬುದು ಐಎಸ್‌ಎಫ್‌ ದತ್ತಾಂಶಗಳ ಮಾಹಿತಿಯಿಂದ ತಿಳಿದುಬಂದಿದೆ.

ಕೊರೊನಾ ವೈರಸ್‌ ಹರಡುವುದನ್ನು ತಡೆಯಲು ಇಡೀ ದೇಶವನ್ನು ಲಾಕ್‌ಡೌನ್‌ ಮಾಡಲಾಗಿದೆ. ಇದರಿಂದ ಆರ್ಥಿಕತೆಯ ವಿವಿಧ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದರ ಪರಿಣಾಮ ಅನೇಕ ವಲಯಗಳಲ್ಲಿ ಉದ್ಯೋಗ ನಷ್ಟವಾಗಬಹುದು. ಮುಂದಿನ 3 ರಿಂದ 6 ತಿಂಗಳಲ್ಲಿ ಸಂಘಟಿತ ಮತ್ತು ಅಸಮಘಟಿತ ವಲಯಗಳು ಸೇರಿದಂತೆ ಶೇ 10 ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಐಎಸ್‌ಎಫ್‌ ಅಧ್ಯಕ್ಷ ಲೋಹಿತ್ ಭಾಟಿಯಾ ತಿಳಿಸಿದ್ದಾರೆ.

ಸಂಘಟಿತ ವಲಯಗಳ ವ್ಯಾಪ್ತಿಗೆ ಬರುವ ವಿಮಾನಯಾನ ಸಂಸ್ಥೆಗಳು, ಸಾರಿಗೆ, ಪ್ರವಾಸೋಧ್ಯಮ ಮತ್ತು ವಸತಿ ಕ್ಷೇತ್ರಗಳು ಸಂಪೂರ್ಣವಾಗಿ ಬಂದ್‌ ಆಗಿವೆ. ಬರುವ ಜೂನ್‌ವರೆಗೂ ವಿಮಾನ ಹಾರಾಟದ ಸಾಧ್ಯತೆಗಳಿಲ್ಲ. ಬಹುತೇಕ ಹೋಟೆಲ್‌ಗಳನ್ನು ಮುಚ್ಚಲಾಗಿದ್ದು ಒಂದು ಅಥವಾ ಎರಡು ಹೋಟೆಲ್‌ಗಳನ್ನು ತೆರೆದಿರಬಹುದು. ಇದು ಮಾನವಶಕ್ತಿ ಕಡಿತಕ್ಕೆ ಕಾರಣವಾಗಲಿದೆ. ಮಾಲ್‌ಗಳು, ಸಿನಿಮಾ ಮಂದಿರಗಳನ್ನು ತೆರೆಯಲಾಗುವುದಿಲ್ಲ ಹಾಗೇ ಟ್ರಕ್‌, ಟ್ಯಾಕ್ಸಿ ಸೇವೆಗಳು, ಡಾಬಾಗಳು, ಹೆದ್ದಾರಿ ವ್ಯವಹಾರಗಳು ಮತ್ತೆ ಮೊದಲಿನಂತೆ ಕಾರ್ಯಾಚರಿಸಲು ತಕ್ಷಣಕ್ಕೆ ಕಷ್ಟಸಾಧ್ಯವಾಗಬಹುದು. ಇದರಿಂದ ಉದ್ಯೋಗ ನಷ್ಟವಾಗಲಿದೆ ಎಂದು ಅವರು ವಿವರಿಸಿದರು.

ಟೆಲಿಕಾಂ ಕಂಪನಿಗಳು, ಇ–ಕಾಮರ್ಸ್‌, ಬ್ಯಾಂಕಿಂಗ್‌ ಹಾಗೂ ಐಟಿ ಕಂಪನಿಗಳ ಮೇಲೆ ಲಾಕ್‌ಡೌನ್‌ ಪರಿಣಾಮದಿಂದ ಉದ್ಯೋಗ ನಷ್ಟ ಉಂಟಾಗಿಲ್ಲ. ಬ್ರ್ಯಾಡ್‌ಬ್ಯಾಂಡ್‌ಗೆ ಬೇಡಿಕೆ ಸೃಷ್ಟಿಯಾಗಿದೆ. ಟೆಲಿಕಾಂ ಮತ್ತು ಇ–ಕಾರ್ಮಸ್‌ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಬೇಡಿಕೆ ಉಂಟಾಗಿದೆ.

ಟೆಲಿಕಾಂ ಮತ್ತು ಇ–ಕಾರ್ಮಸ್‌ ಕಂಪನಿಗಳು ಲಾಕ್‌ಡೌನ್‌ ತೆರವಿಗೆ ಕಾಯುತ್ತಿದ್ದು ಶಾಪ್‌ಗಳನ್ನು ಆರಂಭಿಸಲು ಉತ್ಸುಕವಾಗಿವೆ. ಈ ವಲಯಗಳಲ್ಲಿ ದೊಡ್ಡ ಮಟ್ಟದಲ್ಲಿ ನೇಮಕಾತಿ ನಡೆಯಬಹುದು. ಬ್ಯಾಂಕುಗಳು ಸಹ ನೇಮಕಾತಿ ಮಾಡಿಕೊಳ್ಳಲಿವೆ. ಐಟಿ ಕಂಪನಿಗಳಾದ ವಿಪ್ರೊ, ಟಿಸಿಎಸ್‌, ಇನ್ಪೋಸಿಸ್ ಉದ್ಯೋಗ ಕಡಿತ ಮಾಡುವುದಿಲ್ಲ ಎಂದು ಈಗಾಗಲೇ ಪ್ರಕಟಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT