ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ಹುಡುಕಲು ಈ ಅನುಪಾತ ಗೊತ್ತಿರಲಿ

Published 4 ಫೆಬ್ರುವರಿ 2024, 19:12 IST
Last Updated 4 ಫೆಬ್ರುವರಿ 2024, 19:12 IST
ಅಕ್ಷರ ಗಾತ್ರ

ಉತ್ತಮ ಷೇರು ಹುಡುಕುವುದು ಹೇಗೆ ಎನ್ನುವುದು ಹೆಚ್ಚಿನವರ ಪ್ರಶ್ನೆ. ಆದರೆ, ಇದಕ್ಕೆ ಉತ್ತರ ಕಂಡುಕೊಳ್ಳಬೇಕು ಎಂದಾದರೆ ಹೂಡಿಕೆದಾರರಿಗೆ ಆರ್‌‌ಒಇ ಅನುಪಾತ ಮತ್ತು ಪಿಇ ಅನುಪಾತದ ಬಗ್ಗೆ ಗೊತ್ತಿರಲೇ ಬೇಕು. ಬನ್ನಿ ಷೇರು ಆಯ್ಕೆಯಲ್ಲಿ ಮಹತ್ವದ ಪಾತ್ರ ವಹಿಸುವ ಈ ಎರಡು ಪ್ರಮುಖ ಅನುಪಾತಗಳ ಬಗ್ಗೆ ತಿಳಿಯೋಣ.

ಆರ್‌ಒಇ ಅನುಪಾತ ಎಂದರೇನು?

‘ಎಕ್ಸ್‌ವೈಝೆಡ್‌’ ಅಂತ ಒಂದು ಕಂಪನಿಯಿದ್ದು ಅದು ₹400 ಕೋಟಿ ಲಾಭ ಗಳಿಸಿದೆ ಎಂದು ಭಾವಿಸಿ. ಮತ್ತೊಂದು ಎಬಿಸಿ ಅನ್ನೋ ಕಂಪನಿಯಿದ್ದು ಅದು ₹200 ಕೋಟಿ ಲಾಭ ಸೃಷ್ಟಿಸಿದೆ ಎಂದುಕೊಳ್ಳಿ. ಹೀಗಿದ್ದಾಗ ₹200 ಕೋಟಿ ಲಾಭ ಗಳಿಸಿರುವ ಕಂಪನಿ ಎಬಿಸಿ ಬಗ್ಗೆ ಏನನ್ನೂ ಯೋಚಿಸದೆಯೇ ₹400 ಕೋಟಿ ಲಾಭ ಗಳಿಸಿರುವ ‘ಎಕ್ಸ್‌ವೈಝೆಡ್‌’ ಕಂಪನಿ ಮೇಲೆ ನಾವು ಹೂಡಿಕೆ ಮಾಡಲು ಹೋಗುತ್ತೇವೆ.

ಆದರೆ, ಹೀಗೆ ಮಾಡುವುದು ತಪ್ಪು. ಯಾವುದೇ ಕಂಪನಿ ಮೇಲೆ ಹೂಡಿಕೆ ಮಾಡುವಾಗ ಷೇರು ಹೂಡಿಕೆ ಮೇಲಿನ ಗಳಿಕೆ (ಆರ್‌ಒಇ) ಲೆಕ್ಕಾಚಾರ ಮಾಡಬೇಕು. ಉದಾಹರಣೆಗೆ ನಾವು ಉಳಿತಾಯ ಖಾತೆಯಲ್ಲಿ ಹಣ ಇಟ್ಟರೆ ಶೇ 2.5ರಿಂದ ಶೇ 3ರಷ್ಟು ಬಡ್ಡಿ ಲಾಭ ಸಿಗುತ್ತದೆ. ನಿಶ್ಚಿತ ಠೇವಣಿಯಲ್ಲಿ (ಎಫ್.ಡಿ) ಹಣ ತೊಡಗಿಸಿದರೆ ಶೇ 7ರಷ್ಟು ಬಡ್ಡಿ ಗಳಿಕೆ ಲಭಿಸುತ್ತದೆ. ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ಶೇ 10ರಿಂದ 12ರಷ್ಟು ಲಾಭ ದಕ್ಕುತ್ತದೆ.

ಹೀಗೆಯೇ ನಾವು ಷೇರು ಮಾರುಕಟ್ಟೆಯಲ್ಲಿ ಕಂಪನಿಯೊಂದರ ಮೇಲೆ ಹೂಡಿಕೆ ಮಾಡಿದ ಹಣಕ್ಕೆ ಎಷ್ಟು ಲಾಭ ಸಿಕ್ಕಿದೆ ಎನ್ನುವುದನ್ನು ಷೇರು ಹೂಡಿಕೆ ಮೇಲಿನ ಗಳಿಕೆ ಅಥವಾ ಆರ್‌ಒಇ ತಿಳಿಸಿಕೊಡುತ್ತದೆ. ನಮ್ಮ ಹೂಡಿಕೆ ಹಣವನ್ನು ಬಳಸಿಕೊಂಡು ಕಂಪನಿ ಎಷ್ಟು ಸಂಪತ್ತು ಸೃಷ್ಟಿಸಿದೆ ಎನ್ನುವುದರ ಚಿತ್ರಣವನ್ನು ಆರ್‌ಒಇ ನೀಡುತ್ತದೆ.

ಆರ್‌ಒಇ ಸೂತ್ರ:

ಕಂಪನಿಯ ನಿವ್ವಳ ಲಾಭವನ್ನು ಹೂಡಿಕೆದಾರರ ಒಟ್ಟು ಷೇರುಗಳೊಂದಿಗೆ ಭಾಗಿಸಿದಾಗ ಆರ್‌ಒಇ ಅನುಪಾತ ಸಿಗುತ್ತದೆ. (ಕಂಪನಿಯ ನಿವ್ವಳ ಲಾಭ/ಹೂಡಿಕೆದಾರರ ಒಟ್ಟು ಷೇರು= ಆರ್‌ಒಇ ಅನುಪಾತ).

ಉದಾಹರಣೆ 1: ಇಬ್ಬರು ಸ್ನೇಹಿತರು ತಲಾ ಒಂದೊಂದು ಲಕ್ಷ ಹಣ ಹೂಡಿಕೆ ಮಾಡಿ ವ್ಯಾಪಾರ ಶುರು ಮಾಡಿದ್ದಾರೆ ಎಂದು ಭಾವಿಸಿ. ಇಂತಹ ಸಂದರ್ಭದಲ್ಲಿ ಆ ವ್ಯಾಪಾರ ಉತ್ತಮವಾಗಿ ನಡೆಯುತ್ತಿದೆಯಾ, ವ್ಯಾಪಾರ ಹೆಚ್ಚಾಗುತ್ತಿದೆಯಾ ಎಂದು ತಿಳಿಯಲು ಇರುವ ಒಂದೇ ಒಂದು ಮಾನದಂಡವೆಂದರೆ ನಮ್ಮ ಹೂಡಿಕೆ ಮೇಲೆ ಎಷ್ಟು ಲಾಭ ಮಾಡಿದ್ದೇವೆ ಎನ್ನುವುದು. ₹2 ಲಕ್ಷ ಹೂಡಿಕೆ ಮೇಲೆ ₹10 ಸಾವಿರ ಲಾಭ ಗಳಿಸಿದ್ದೇವೆ ಎಂದು ಭಾವಿಸಿ. ಆಗ ಹೂಡಿಕೆ ಮೇಲಿನ ಗಳಿಕೆ ಶೇ 5ರಷ್ಟು ಆಗುತ್ತದೆ. ವ್ಯಾಪಾರ ಮಾಡಿ ಇಷ್ಟು ಕಡಿಮೆ ಪ್ರಮಾಣದ ಲಾಭ ಗಳಿಸುವ ಬದಲು ಅದೇ ಹಣವನ್ನು ನಿಶ್ಚಿತ ಠೇವಣಿಯಲ್ಲಿ ಇಡುವುದು ಉತ್ತಮವಲ್ಲವೇ?

ಉದಾಹರಣೆ 2: ಕಂಪನಿಯೊಂದರ ಹೂಡಿಕೆದಾರರ ಷೇರಿನ ಮೌಲ್ಯ ₹1,000 ಕೋಟಿಯಿದ್ದು ಆ ಕಂಪನಿ ₹200 ಕೋಟಿ ಲಾಭ ಗಳಿಸಿದೆ ಎಂದಾದರೆ ಹೂಡಿಕೆ ಮೇಲಿನ ಗಳಿಕೆ ಶೇ 20 ರಷ್ಟಾಗುತ್ತದೆ. ಅಂದರೆ ಈ ಕಂಪನಿ ಹೂಡಿಕೆ ಮೇಲೆ ಉತ್ತಮ ಗಳಿಕೆ ತಂದುಕೊಟ್ಟಿದೆ ಎಂದರ್ಥ. ಸಾಮಾನ್ಯವಾಗಿ ಶೇ 14ರಿಂದ ಶೇ 20ರಷ್ಟು ಆರ್‌ಒಇ ಇದ್ದರೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.

ಪಿಇ ಅನುಪಾತ ಎಂದರೇನು?

ಪಿಇ ಅನುಪಾತ ಎಂದರೆ ಪ್ರೈಸ್ ಟು ಅರ್ನಿಂಗ್ಸ್ ರೇಷಿಯೊ (ಬೆಲೆ ಮೇಲಿನ ಗಳಿಕೆ ಅನುಪಾತ). ನಿರ್ದಿಷ್ಟ ಕಂಪನಿಯೊಂದರ ಷೇರಿನ ಬೆಲೆ ಹೆಚ್ಚಿದೆಯಾ ಅಥವಾ ಕಡಿಮೆ ಇದೆಯಾ ಎಂದು ತಿಳಿಯುವುದೇ ಪಿಇ ಅನುಪಾತದ ಮೂಲಕ. ಕಂಪನಿಯ ಒಂದು ರೂಪಾಯಿ ಗಳಿಕೆಗೆ ನೀವು ಎಷ್ಟು ರೂಪಾಯಿ ಕೊಡಲು ತಯಾರಿದ್ದೀರಿ ಎನ್ನುವುದನ್ನು ಪಿಇ ಅನುಪಾತ ತಿಳಿಸಿಕೊಡುತ್ತದೆ.

ಒಂದು ಷೇರಿನ ಪಿಇ ಅನುಪಾತ 20 ಇದೆ ಎಂದು ಭಾವಿಸಿ ಆಗ ಒಂದು ರೂಪಾಯಿ ಗಳಿಕೆಗೆ ₹20 ಕೊಡಲು ತಯಾರಿದ್ದೀರಿ ಎಂದರ್ಥ. ಮತ್ತೊಂದು ಷೇರಿನ ಪಿಇ ಅನುಪಾತ 40 ಇದ್ದು ಅದರ ಖರೀದಿಗೆ ಮುಂದಾದರೆ ಒಂದು ರೂಪಾಯಿ ಗಳಿಕೆಗೆ ₹40 ಕೊಡಲು ತಯಾರಿದ್ದೀರಿ ಎಂದಾಗುತ್ತದೆ. ಒಂದು ವಲಯದ ಕಂಪನಿಯನ್ನು ಮತ್ತೊಂದು ವಲಯದ ಕಂಪನಿಯೊಂದಿಗೆ ಹೋಲಿಕೆ ಮಾಡಿ ಪಿಇ ಅನುಪಾತ ತೆಗೆದುಕೊಳ್ಳಲು ಸಾಧ್ಯವಿಲ್ಲ.

ಉದಾಹರಣೆಗೆ ಮಾಹಿತಿ ತಂತ್ರಜ್ಞಾನ ವಲಯದ ಷೇರನ್ನು ಬ್ಯಾಂಕಿಂಗ್ ವಲಯದ ಷೇರಿನ ಜೊತೆ ಹೋಲಿಕೆ ಮಾಡುವಂತಿಲ್ಲ. ಮಾಹಿತಿ ತಂತ್ರಜ್ಞಾನದ ಷೇರನ್ನು ಅದೇ ವಲಯದ ಮತ್ತೊಂದು ಷೇರಿಗೆ ಹೋಲಿಕೆ ಮಾಡಬಹುದು. ಅದೇ ರೀತಿ ಒಂದು ಬ್ಯಾಂಕಿಂಗ್ ವಲಯದ ಷೇರನ್ನು ಮತ್ತೊಂದು ಬ್ಯಾಂಕಿಂಗ್ ಷೇರಿಗೆ ಹೋಲಿಕೆ ಮಾಡಬಹುದು. ಷೇರಿನ ಪ್ರಸ್ತುತ ಮಾರುಕಟ್ಟೆ ಬೆಲೆಯೊಂದಿಗೆ ಪ್ರತಿ ಷೇರಿನ ಮೇಲಿನ ಗಳಿಕೆಯನ್ನು ಭಾಗಿಸಿದಾಗ ಪಿಇ ಅನುಪಾತ ಸಿಗುತ್ತದೆ. (ಷೇರಿನ ಪ್ರಸ್ತುತ ಮಾರುಕಟ್ಟೆ ಬೆಲೆ/ ಪ್ರತಿ ಷೇರಿನ ಮೇಲಿನ ಗಳಿಕೆ= ಪಿಇ ಅನುಪಾತ).

(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)

ಉತ್ತಮ ಗಳಿಕೆ ಕಂಡ ಷೇರುಪೇಟೆ ಸೂಚ್ಯಂಕಗಳು

ಸತತ ಎರಡು ವಾರಗಳಿಂದ ಕುಸಿತದ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಗಳಿಕೆಯ ಲಯಕ್ಕೆ ಮರಳಿವೆ. ಫೆಬ್ರುವರಿ 2ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಉತ್ತಮ ಗಳಿಕೆ ಕಂಡಿವೆ.

72,085 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 2ರಷ್ಟು ಗಳಿಸಿಕೊಂಡಿದೆ. 21,853 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 2.34ರಷ್ಟು ಜಿಗಿದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸಕಾರಾತ್ಮಕತೆ, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (ಐಎಂಎಫ್) ಭಾರತದ ಜಿಡಿಪಿ ಬೆಳವಣಿಗೆ ಗುರಿ ಹೆಚ್ಚಳ, ಬಡ್ಡಿದರ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಅಮೆರಿಕದ ಫೆಡರಲ್ ಬ್ಯಾಂಕ್, ಮಧ್ಯಂತರ ಬಜೆಟ್‌ಗೆ ಸಿಕ್ಕ ಉತ್ತಮ ಪ್ರತಿಕ್ರಿಯೆ, ತ್ರೈಮಾಸಿಕ ಫಲಿತಾಂಶಗಳಲ್ಲಿ ನಿರೀಕ್ಷಿತ ಗಳಿಕೆ ಸೇರಿ ಹಲವು ಅಂಶಗಳು ಮಾರುಕಟ್ಟೆ ಪುಟಿದೇಳಲು ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 11.5, ಅನಿಲ ಮತ್ತು ತೈಲ ಸೂಚ್ಯಂಕ ಶೇ 9, ಎನರ್ಜಿ ಸೂಚ್ಯಂಕ ಶೇ 8ರಷ್ಟು ಗಳಿಸಿಕೊಂಡಿವೆ. ಉಳಿದಂತೆ ನಿಫ್ಟಿ ಲೋಹ, ಆಟೊ ಮತ್ತು ರಿಯಲ್ ಎಸ್ಟೇಟ್ ತಲಾ ಶೇ 4ರಷ್ಟು ಹೆಚ್ಚಳ ಕಂಡಿವೆ. ಕಳೆದ ವಾರ ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹10,102.62 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹2,008.68 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಭಾರತ್‌ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಪವರ್ ಗ್ರಿಡ್ ಕಾರ್ಪೊರೇಷನ್, ಬ್ಯಾಂಕ್ ಆಫ್ ಬರೋಡಾ ಮತ್ತು ಅದಾನಿ ಪೋರ್ಟ್ ಆ್ಯಂಡ್‌ ಸ್ಪೆಷಲ್ ಎಕಾನಾಮಿಕ್ ಜೋನ್ ಗಳಿಕೆ ಕಂಡಿವೆ. ಪೇಟಿಎಂ, ಚೋಳಮಂಡಲಂ ಇನ್ವೆಸ್ಟೆಮೆಂಟ್ ಅಂಡ್ ಫೈನಾನ್ಸ್ ಕಂಪನಿ, ಎಸ್‌ಬಿಐ ಕಾರ್ಡ್ಸ್ ಆ್ಯಂಡ್‌ ಪೇಮೆಂಟ್ಸ್ ಮತ್ತು ಲಾರ್ಸನ್ ಆ್ಯಂಡ್‌ ಟ್ಯೂಬ್ರೋ ಕುಸಿದಿವೆ.

ಮುನ್ನೋಟ:

ಈ ವಾರ ಅಶೋಕ್ ಲೇಲ್ಯಾಂಡ್, ಬಜಾಜ್ ಕನ್ಸ್ಯೂಮರ್ ಕೇರ್ ಲಿ., ಬಜಾಜ್ ಎಲೆಕ್ಟ್ರಿಕಲ್ಸ್ ಲಿ., ಏರ್‌ಟೆಲ್, ಬಾರ್ಬಿಕ್ಯೂ ನೇಷನ್ ಹಾಸ್ಪಿಟಾಲಿಟಿ, ಐಡಿಯಾ ಫೋರ್ಜ್ ಟೆಕ್ನಾಲಜಿ, ಸಿಎಎಂಎಸ್, ಗೋ ಕಲರ್ಸ್, ಗೋದ್ರೇಜ್ ಪ್ರಾಪರ್ಟೀಸ್‌, ಜೆಕೆ ಟೈರ್, ನೈಕಾ, ಟಿಟಿಕೆ ಪ್ರೆಸ್ಟೀಜ್, ಅಪೋಲೋ ಟೈರ್, ಜೆಕೆ ಪೇಪರ್, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್, ಲುಪಿನ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ವರದಿ ಪ್ರಕಟಿಸಲಿವೆ. ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT