ನೀವು ಬಿಸ್ಕತ್, ಕುರುಕಲು ತಿಂಡಿ ಪೊಟ್ಟಣವನ್ನು ತೆಗೆದಾಗ ಮೊದಲಿಗಿಂತ ಇದರಲ್ಲಿರುವ ಪ್ರಮಾಣ ಈಗ ಕಡಿಮೆ ಅಂತ ಅನಿಸಿದೆಯಾ? ಉತ್ಪನ್ನದ ಪೊಟ್ಟಣದ ಗಾತ್ರವನ್ನು ಕಡಿಮೆ ಮಾಡಿದ್ದಾರೆ ಎಂಬ ಅನುಮಾನ ನಿಮ್ಮಲ್ಲಿ ಮೂಡಿದೆಯಾ? ಹಾಗಾದರೆ ನಿಮಗೆ ‘ಶ್ರಿಂಕ್ಫ್ಲೇಷನ್’ನ ಅನುಭವ ಆಗಿದೆ. ಕಂಪನಿಗಳು ನಿರ್ದಿಷ್ಟ ಉತ್ಪನ್ನವೊಂದರ ಪ್ರಮಾಣ ಅಥವಾ ಗಾತ್ರವನ್ನು ಕಡಿಮೆ ಮಾಡಿ ಅದರ ಬೆಲೆಯನ್ನು ಯಥಾವತ್ತಾಗಿ ಕಾಯ್ದುಕೊಳ್ಳುವುದನ್ನು ‘ಶ್ರಿಂಕ್ಫ್ಲೇಷನ್’ ಎನ್ನುತ್ತಾರೆ. ಅಂದರೆ ನೀವು ಕೊಳ್ಳುವ ವಸ್ತುವಿನ ಬೆಲೆ ಹೆಚ್ಚಳವಾಗುವುದಿಲ್ಲ; ಅದರ ಗಾತ್ರ, ಪ್ರಮಾಣ ತಗ್ಗಿರುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಈ ‘ಶ್ರಿಂಕ್ಫ್ಲೇಷನ್’ ನಿಮ್ಮ ಗಮನಕ್ಕೆ ಬರುವುದೇ ಇಲ್ಲ. ‘ಶ್ರಿಂಕ್ಫ್ಲೇಷನ್’ ಅಂದರೆ ಏನು, ಅದನ್ನು ಕಂಪನಿಗಳು ಹೇಗೆ ಅಳವಡಿಸಿಕೊಳ್ಳುತ್ತವೆ, ಗ್ರಾಹಕರಿಗೆ ಈ ಬಗ್ಗೆ ಏಕೆ ಗೊತ್ತಿರಬೇಕು ಎಂಬಿತ್ಯಾದಿ ವಿಷಯಗಳ ಅರಿವು ಅಗತ್ಯ.

‘ಶ್ರಿಂಕ್ಫ್ಲೇಷನ್’ ಅಂದರೆ ಏನು?

‘ಶ್ರಿಂಕ್ಫ್ಲೇಷನ್ ಎನ್ನುವುದು ಬೆಲೆ ಏರಿಕೆಯ ಮತ್ತೊಂದು ರೂಪ. ಸದ್ದಿಲ್ಲದ ಬೆಲೆ ಏರಿಕೆಯನ್ನು ‘ಶ್ರಿಂಕ್ಫ್ಲೇಷನ್’ ಎಂದು ಕರೆಯಬಹುದು. ಕಂಪನಿಗಳು ಇಲ್ಲಿ ಉತ್ಪನ್ನಗಳ ಗರಿಷ್ಠ ಮಾರಾಟ ದರ (ಎಂಆರ್ಪಿ) ಹೆಚ್ಚಿಸುವುದಿಲ್ಲ. ಬದಲಿಗೆ, ನಿರ್ದಿಷ್ಟ ಉತ್ಪನ್ನವೊಂದರ ತೂಕ, ಪ್ರಮಾಣ ಅಥವಾ ಗಾತ್ರವನ್ನು ಗ್ರಾಹಕನ ಗಮನಕ್ಕೆ ಬರದಂತೆ ತಗ್ಗಿಸಿಬಿಡುತ್ತಾರೆ. ಉದಾಹರಣೆಗೆ, ಈ ಮೊದಲು ₹10ಕ್ಕೆ ನಿಮಗೆ 100 ಗ್ರಾಂ ಬಟ್ಟೆ ತೊಳೆಯುವ ಸೋಪು ಸಿಗುತ್ತಿತ್ತು ಎಂದುಕೊಳ್ಳಿ. ಈಗ ಅದೇ ₹10ಕ್ಕೆ 80 ಗ್ರಾಂ ಸೋಪು ಸಿಗುವುದನ್ನು ‘ಶ್ರಿಂಕ್ಫ್ಲೇಷನ್’ ಎನ್ನುತ್ತಾರೆ. ಅಂದರೆ ಮೊದಲು ₹10ಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದ್ದ ವಸ್ತುವೊಂದು ಈಗ ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಉತ್ಪನ್ನ ಖರೀದಿಸುವಾಗ ‘ಶ್ರಿಂಕ್ಫ್ಲೇಷನ್’ ವಿಚಾರ ಗ್ರಾಹಕನಿಗೆ ಗೊತ್ತೇ ಆಗುವುದಿಲ್ಲ. ಆದರೆ, ಆ ಉತ್ಪನ್ನವನ್ನು ಬಳಸುವ ಪ್ರಕ್ರಿಯೆಯಲ್ಲಿ ಇದು ಗಮನಕ್ಕೆ ಬರುತ್ತದೆ.

ಕಂಪನಿಗಳೇಕೆ ‘ಶ್ರಿಂಕ್ಫ್ಲೇಷನ್’ ಆಶ್ರಯಿಸುತ್ತವೆ?

ನಿರ್ದಿಷ್ಟ ಉತ್ಪನ್ನವೊಂದರ ಕಚ್ಚಾವಸ್ತುಗಳ ಬೆಲೆ, ಸಾಗಣೆ ವೆಚ್ಚ ಮುಂತಾದವುಗಳ ಹೆಚ್ಚಳದಿಂದ ತಯಾರಿಕಾ ವೆಚ್ಚ ಹೆಚ್ಚಳವಾಗುತ್ತದೆ. ಇಂತಹ ಸಂದರ್ಭದಲ್ಲಿ ಕಂಪನಿಗಳಿಗೆ ಎರಡು ಆಯ್ಕೆಗಳಿರುತ್ತವೆ. ಒಂದನೆಯದ್ದು, ಉತ್ಪನ್ನದ ಬೆಲೆ ಹೆಚ್ಚಳ ಮಾಡುವುದು. ಎರಡನೆಯದ್ದು, ಉತ್ಪನ್ನದ ಪ್ರಮಾಣ ತಗ್ಗಿಸುವುದು. ಬೆಲೆ ಏರಿಕೆ ಮಾಡಿದರೆ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಆದರೆ ಉತ್ಪನ್ನದ ಪ್ರಮಾಣ ತಗ್ಗಿಸಿದರೆ ಹೆಚ್ಚಿನ ಗ್ರಾಹಕರಿಗೆ ಅದು ಗಮನಕ್ಕೆ ಬರುವುದಿಲ್ಲ. ಹಾಗಾಗಿ ಕಂಪನಿಗಳು ಈ ದಾರಿ ಹಿಡಿಯುತ್ತವೆ.

ಭಾರತದಲ್ಲಿ ‘ಶ್ರಿಂಕ್ಫ್ಲೇಷನ್’

ಭಾರತದಲ್ಲಿ ‘ಶ್ರಿಂಕ್ಫ್ಲೇಷನ್’ ಸರ್ವವ್ಯಾಪಿ ಎನ್ನಬಹುದು. ಬಿಸ್ಕತ್ತಿನ ಪೊಟ್ಟಣ, ಕುರುಕಲು ತಿಂಡಿ ಪೊಟ್ಟಣ, ಸಾಬೂನು, ಪೇಸ್ಟ್, ಶಾಂಪೂ, ಮಸಾಲೆ ಪದಾರ್ಥಗಳು, ಚಹಾ ಮತ್ತು ಕಾಫಿ ಪುಡಿ ಪೊಟ್ಟಣಗಳು, ಚಾಕೊಲೇಟ್, ಸಿಹಿ ಪದಾರ್ಥಗಳು, ಬೇಕರಿ ಪದಾರ್ಥಗಳು ಹೀಗೆ ಎಲ್ಲಾ ಕಡೆ ‘ಶ್ರಿಂಕ್ಫ್ಲೇಷನ್’ನ ಪ್ರಭಾವ ಇದೆ. ನಿರ್ದಿಷ್ಟ ವಸ್ತುವಿನ ತೂಕವನ್ನು ಗಮನಿಸಿದಾಗ ‘ಶ್ರಿಂಕ್ಫ್ಲೇಷನ್’ ಹೇಗೆ ಸದ್ದಿಲ್ಲದೆ ನಿಮ್ಮ ಜೇಬಿಗೆ ಕತ್ತರಿ ಹಾಕುತ್ತಿದೆ ಎನ್ನುವುದು ಅರಿವಿಗೆ ಬರುತ್ತದೆ.

‘ಶ್ರಿಂಕ್ಫ್ಲೇಷನ್’ ಹಿಂದಿನ ಲೆಕ್ಕಾಚಾರ

ಉತ್ಪನ್ನದ ಬೆಲೆ ₹10 ಇದ್ದಿದ್ದು ₹12 ಆದರೆ ಅದಕ್ಕೆ ನಾವು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡುತ್ತೇವೆ. ₹10 ಇದ್ದ ಉತ್ಪನ್ನದ ಬೆಲೆಯನ್ನು ಒಂದೇ ಸಲಕ್ಕೆ ₹12ಕ್ಕೆ ಏರಿಕೆ ಮಾಡಿದ್ದಾರೆ ಎಂದು ಹೌಹಾರುತ್ತೇವೆ. ಆದರೆ ಬೆಲೆ ಏರಿಕೆ ಮಾಡದೆ 100 ಗ್ರಾಂನ ಪೊಟ್ಟಣವನ್ನು ಅನ್ನು 85 ಗ್ರಾಂಗೆ ಇಳಿಕೆ ಮಾಡಿದರೆ ನಮಗೆ ಅಷ್ಟಾಗಿ ಗೊತ್ತಾಗುವುದಿಲ್ಲ. ಏಕೆಂದರೆ ಕಂಪನಿಗಳು ಪ್ಯಾಕಿಂಗ್ ಅನ್ನು ಹಳೆಯ ಗಾತ್ರಕ್ಕೆ ಮಾಡಿರುತ್ತವೆ. ಇದು, ಅಷ್ಟೇ ಪ್ರಮಾಣದ ಉತ್ಪನ್ನ ಸಿಕ್ಕಿದೆ ಎಂಬ ಭಾವನೆಯನ್ನು ಗ್ರಾಹಕನಲ್ಲಿ ಮೂಡಿಸುತ್ತದೆ. ಹಾಗಾಗಿ ಕಂಪನಿಗಳು ಇದನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತವೆ.

ಸ್ಕಿಂಪ್ಫ್ಲೇಷನ್ ಕೂಡ ಇದೆ

‘ಸ್ಕಿಂಪ್ಫ್ಲೇಷನ್’ ಎನ್ನುವುದು ಮತ್ತೊಂದು ಮಾರುಕಟ್ಟೆ ತಂತ್ರ. ಇಲ್ಲಿ ಕಂಪನಿಗಳು ಉತ್ಪನ್ನದ ಗಾತ್ರ ಅಥವಾ ಪ್ರಮಾಣವನ್ನು ಕಡಿಮೆ ಮಾಡುವುದಿಲ್ಲ. ಬದಲಿಗೆ ಬೆಲೆ ಏರಿಕೆಯನ್ನು ಹೊಂದಿಸಿಕೊಳ್ಳಲು ಕಡಿಮೆ ಗುಣಮಟ್ಟದ ಕಚ್ಚಾ ವಸ್ತು ಬಳಸಿ ಉತ್ಪನ್ನ ತಯಾರಿಸುತ್ತವೆ. ಅಂದರೆ, ನಿಮಗೆ ಬೇಕಾದ ಉತ್ಪನ್ನವು ಬೇಕಾದ ಬೆಲೆಗೇ ಸಿಗುತ್ತದೆ. ಆದರೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲಾಗಿರುತ್ತದೆ.

ರಕ್ಷಣೆ ಹೇಗೆ?

ಯಾವುದೇ ಉತ್ಪನ್ನದ ಖರೀದಿಸುವಾಗ ಕೇವಲ ಎಂಆರ್ಪಿ ನೋಡಿ ಖರೀದಿಸಬೇಡಿ. ಬದಲಿಗೆ, ಯೂನಿಟ್ ಬೆಲೆ ಆಧರಿಸಿ ಕೊಳ್ಳಿರಿ. ಉದಾಹರಣೆಗೆ ಪ್ರತಿ 10 ಗ್ರಾಂನ ಬೆಲೆ, ಪ್ರತಿ 100 ಗ್ರಾಂ ಬೆಲೆ ಎಂಬ ಬರಹ ಪ್ಯಾಕೆಟ್ಗಳಲ್ಲಿ ನಮೂದಾಗಿರುವುದನ್ನು ಗಮನಿಸಿ. ಪ್ಯಾಕೆಟ್ ಗಾತ್ರ ನೋಡಿ ಕೊಳ್ಳಬೇಡಿ. ಹಲವು ಸಲ ಪ್ಯಾಕೆಟ್ ವಿನ್ಯಾಸವನ್ನು ಹಾಗೇ ಇಟ್ಟು ಉತ್ಪನ್ನದ ಪ್ರಮಾಣ ಇಳಿಸಿರುತ್ತಾರೆ ಎನ್ನುವುದನ್ನು ಮರೆಯದಿರಿ.

ಏಕೆ ಜಾಗೃತಿ ಅಗತ್ಯ?

ವಿವಿಧ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳು ನಿಮ್ಮ ಮನೆ ಬಾಗಿಲಿಗೆ ಬಂದು ಯಾವ ವಸ್ತುವಿನ ಬೆಲೆ ಏರಿಕೆ ಮಾಡಿದ್ದೇವೆ ಎಂಬುದನ್ನು ಪಾರದರ್ಶಕವಾಗಿ ಹೇಳುವುದಿಲ್ಲ. ಸದ್ದಿಲ್ಲದೆ ಅದು ನಿಮ್ಮ ಅಡುಗೆ ಮನೆ ಪ್ರವೇಶಿಸಿರುತ್ತದೆ. ಮಾರುಕಟ್ಟೆ ತಂತ್ರಗಾರಿಕೆಯ ಭಾಗವಾಗಿ ಕಂಪನಿಗಳು ‘ಶ್ರಿಂಕ್ಫ್ಲೇಷನ್’ ಬಳಸುವುದನ್ನು ಮುಂದುವರಿಸುತ್ತವೆ. ಹಾಗಾಗಿ ನೀವು ಎಷ್ಟು ಜಾಗರೂಕರಾಗಿ ಇರುತ್ತೀರೋ ಅಷ್ಟು ಅನುಕೂಲವಾಗುತ್ತದೆ. ಉತ್ಪನ್ನಗಳನ್ನು ಅಳೆದು–ತೂಗಿ ಖರೀದಿಸಿದಾಗ ‘ಶ್ರಿಂಕ್ಫ್ಲೇಷನ್’ನ ಬಲೆಯಿಂದ ತಪ್ಪಿಸಿಕೊಳ್ಳಲು ಅಲ್ಪಸ್ವಲ್ಪ ಪ್ರಯತ್ನವನ್ನಾದರೂ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.