ಶನಿವಾರ, ಜೂಲೈ 11, 2020
23 °C
ನಿವೃತ್ತಿ ನಂತರ ಉದ್ಯಮಿಯಾದ ವಿಶ್ವನಾಥ ಪೂಜಾರಿ

ಗ್ರಾಮೀಣ ಪ್ರದೇಶದಲ್ಲಿ ಗಾರ್ಮೆಂಟ್ಸ್ ಉದ್ಯಮ

ಬಸವರಾಜ್ ಎಸ್.ಉಳ್ಳಾಗಡ್ಡಿ Updated:

ಅಕ್ಷರ ಗಾತ್ರ : | |

Prajavani

ಕೊಲ್ಹಾರ: ನಿವೃತ್ತಿಯ ನಂತರ ಎಷ್ಟೋ ಜನ ನೌಕರರು, ವಿಶ್ರಾಂತಿಯಲ್ಲೇ ತಮ್ಮ ಜೀವನ ಕಳೆಯುತ್ತಾರೆ. ಆದರೆ ಬಬಲೇಶ್ವರ ತಾಲ್ಲೂಕಿನ ತೊಣಶ್ಯಾಳ ಗ್ರಾಮದ ವಿಶ್ವನಾಥ ಪೂಜಾರಿ ಇದಕ್ಕೆ ವಿಭಿನ್ನವಾದವರು.

ಅಕೌಂಟೆಂಟ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಸ್ವಗ್ರಾಮಕ್ಕೆ ಮರಳಿ, ಡೇರಿ ಹಾಗೂ ಗಾರ್ಮೆಂಟ್ಸ್‌ ಉದ್ಯಮ ಸ್ಥಾಪಿಸಿ, 500ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ. ಇದರ ಜತೆಯಲ್ಲೇ ತಮ್ಮೂರನ್ನು ವ್ಯಸನಮುಕ್ತ ಆದರ್ಶ ಗ್ರಾಮವಾಗಿ ಪರಿವರ್ತಿಸುವ ಪಣ ತೊಟ್ಟಿರುವುದು ವಿಶೇಷ.

ವಿಶ್ವನಾಥ ಮಳಯ್ಯ ಪೂಜಾರಿ ಧಾರವಾಡದಲ್ಲಿ ಎಂ.ಕಾಂ. ಶಿಕ್ಷಣ ಪಡೆದು, ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯ ನಂತರ ಸ್ವಗ್ರಾಮಕ್ಕೆ ಮರಳಿ, ಕೃಷಿಗಾಗಿಯೇ ಹೊನಗನಹಳ್ಳಿಯ ಬಳಿ 16 ಎಕರೆ ಜಮೀನು ಖರೀದಿಸಿ, 2012ರಲ್ಲಿ ಹೈನೋದ್ಯಮ ಸ್ಥಾಪಿಸಿದರು.

ವಿಶ್ವನಾಥ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ, ಲಾಭದ ಮೂಲಕ ಆರ್ಥಿಕವಾಗಿ ಸದೃಢರಾದವರು. ಪತ್ನಿ ಸುಧಾ ಪೂಜಾರಿಯ ಇಚ್ಛೆಯಂತೆ 2018ರಲ್ಲಿ ಹೊನಗನಹಳ್ಳಿಯ ತಮ್ಮ ಜಮೀನಿನಲ್ಲಿ ಶ್ರೀ ಸದಾಶಿವ ಗಾರ್ಮೆಂಟ್ಸ್ ಆರಂಭಿಸಿದ್ದಾರೆ.

ಜತೆಗೆ ಕೆಲಸಗಾರರಿಗೆ ವೃತ್ತಿ ಕೌಶಲ ತರಬೇತಿ ನೀಡಲಿಕ್ಕಾಗಿಯೇ ತೊಣಶ್ಯಾಳದಲ್ಲಿ ಹೊಲಿಗೆ ತರಬೇತಿ ಕೇಂದ್ರ ಸ್ಥಾಪಿಸಿದ್ದಾರೆ. ನಿರುದ್ಯೋಗಿಗಳಿಗೆ ಮೂರು ತಿಂಗಳು ಉಚಿತ ತರಬೇತಿ ನೀಡಿ, ತಮ್ಮ ಗಾರ್ಮೆಂಟ್ಸ್‌ನಲ್ಲೇ ಉದ್ಯೋಗ ನೀಡುತ್ತಾರೆ. ಪ್ರಸ್ತುತ 550ಕ್ಕೂ ಹೆಚ್ಚು ಮಹಿಳೆಯರು, ಯುವಕರು ಕೆಲಸ ಮಾಡುತ್ತಿದ್ದಾರೆ.

ಈ ಗಾರ್ಮೆಂಟ್ಸ್‌ ಪಕ್ಕದಲ್ಲೇ ಶ್ರೀ ಸದಾಶಿವ ಸೌಹಾರ್ದ ಸಹಕಾರಿ ಬ್ಯಾಂಕ್ ಸ್ಥಾಪಿಸಿ, ಬ್ಯಾಂಕ್ ಮೂಲಕ ತಮ್ಮ ನೌಕರರು ಹಾಗೂ ಗ್ರಾಮಸ್ಥರ ಮಕ್ಕಳ ಶಿಕ್ಷಣಕ್ಕಾಗಿ, ಮದುವೆ, ಇನ್ನಿತರೆ ಕೌಟುಂಬಿಕ ಅನುಕೂಲಗಳಿಗಾಗಿ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುತ್ತಿದ್ದಾರೆ.

ಇಲ್ಲಿ ತಯಾರಾಗುವ ಉಡುಪುಗಳು ಗುಣಮಟ್ಟ ಕಾಯ್ದುಕೊಂಡಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಹೊಂದಿವೆ. ತೊಣಶ್ಯಾಳ ಅಕ್ಕಪಕ್ಕದ ಹಳ್ಳಿಗಳಾದ ಹೊನಗನಹಳ್ಳಿ, ಸವನಹಳ್ಳಿ, ಕಾರಜೋಳ, ಸಾರವಾಡ, ದದಾಮಟ್ಟಿ, ಜುಮನಾಳ ಸೇರಿದಂತೆ ವಿಜಯಪುರದಿಂದಲೂ ಸಹ ಅನೇಕರು ಇಲ್ಲಿಗೆ ಉದ್ಯೋಗಕ್ಕಾಗಿ ಬರುವುದು ವಿಶೇಷ.

ಇಲ್ಲಿಗೆ ಬರಲು ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆಯಿದೆ. ಕ್ಯಾಂಟೀನ್ ಸೌಲಭ್ಯವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೈಮಗ್ಗ ಹಾಗೂ ಕಸೂತಿ ವೃತ್ತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೊಲ್ಹಾರ, ವಂದಾಲ, ಡೊಣ್ಣೂರು, ವಿಜಯಪುರದಲ್ಲಿಯೂ ಸಹ ಘಟಕಗಳನ್ನು ಆರಂಭಿಸಿದ್ದಾರೆ. ಇದೀಗ ಎರಡನೇ ಗಾರ್ಮೆಂಟ್ಸ್‌ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಇದು ಆರಂಭಗೊಂಡರೆ 300 ಜನರಿಗೆ ಕೆಲಸ ಸಿಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.