ಗುರುವಾರ , ಸೆಪ್ಟೆಂಬರ್ 24, 2020
27 °C
ಸ್ವಾವಲಂಬಿ ಬದುಕಿನ ಜತೆಗೆ 30ಕ್ಕೂ ಹೆಚ್ಚು ಜನರಿಗೆ ಉದ್ಯೋಗ

ತೆಲಗಿ ಸಹೋದರರ ಕೈ ಹಿಡಿದ ಐಸ್‌ ಕ್ರೀಂ ಉದ್ಯಮ

ಚಂದ್ರಶೇಖರ ಕೋಳೇಕರ Updated:

ಅಕ್ಷರ ಗಾತ್ರ : | |

Deccan Herald

ಆಲಮಟ್ಟಿ: 2000ನೇ ಇಸ್ವಿಯ ಕಾಲಘಟ್ಟ... ಒಂದೆಡೆ ಆಲಮಟ್ಟಿ ಪ್ರವಾಸಿ ತಾಣವಾಗಿ ರೂಪುಗೊಳ್ಳುವುದು ಆರಂಭಗೊಂಡಿತ್ತು, ಇನ್ನೊಂದೆಡೆ ಹಲ ಸಂತ್ರಸ್ತರು ಪ್ರವಾಸಿಗರನ್ನೇ ಕೇಂದ್ರೀಕರಿಸಿಕೊಂಡು, ತಮ್ಮ ಬದುಕು ಕಟ್ಟಿಕೊಳ್ಳಲು ವ್ಯಾಪಾರವನ್ನೇ ಅವಲಂಬಿಸಿದ್ದರು.

ಬದುಕಿನ ಸಂಕಷ್ಟ ಕಾಲದಲ್ಲಿ ಅವರಿವರ ಬಳಿ ಕೈ ಸಾಲ ಪಡೆದ ಸಹೋದರರು, ಐಸ್‌ ಕ್ರೀಂ ತಯಾರಿಕೆ ಘಟಕ ಆರಂಭಿಸಿ, ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ ಯಶೋಗಾಥೆಯಿದು. ಇದೀಗ ತೆಲಗಿ ಸಹೋದರರು ಚಿಕ್ಕ ಉದ್ದಿಮೆದಾರರಾಗಿದ್ದಾರೆ.

ಆಲಮಟ್ಟಿಯ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಿದರೆ ಸನಾ, ಡೆಲಿಸಿಯಸ್, ಖುರ್ಷಿದ್, ಸರಫ್‌ರಾಜ್‌ ಸೇರಿದಂತೆ ಹಲ ವಿಧವಾದ ಐಸ್‌ ಕ್ರೀಂ ಸಿಗುತ್ತದೆ. ಇವೆಲ್ಲವೂಗಳು ತೆಲಗಿ ಸಹೋದರರ ತಯಾರಿಕೆ.

1998ರವರೆಗೂ ಬಾಳೆಹಣ್ಣು ವ್ಯಾಪಾರ ಮಾಡುತ್ತಿದ್ದ ಕುಟುಂಬದಲ್ಲಿ, ವಿಭಿನ್ನವಾಗಿ ಯೋಚಿಸಿ, ಚಿಕ್ಕದಾಗಿ ಕಡ್ಡಿ ಐಸ್‌ ಕ್ರೀಂ ತಯಾರಿಸಿ ಮಾರಾಟ ಆರಂಭಿಸಿದವರು ತೆಲಗಿ ಸಹೋದರರ ಹಿರಿಯಣ್ಣ ರಸೂಲ್‌ಖಾನ್‌ ಹಾಸಿಂಖಾನ್‌ ತೆಲಗಿ. ಈ ಎಲ್ಲಾ ಐಸ್‌ ಕ್ರೀಂ ಪಾರ್ಲರ್‌ಗಳ ರೂವಾರಿ ಇವರೇ.

1999ರಲ್ಲಿ ಕಡ್ಡಿ ಐಸ್ ಕ್ರೀಂ ವಹಿವಾಟನ್ನು ಇನ್ನಷ್ಟು ವಿಸ್ತರಿಸಿ, ಹಾಲ್ ಐಸ್‌ ತಯಾರಿಸುವ ಯಂತ್ರ ಖರೀದಿಸಲು ಕೊಲ್ಹಾಪುರಕ್ಕೆ ಹೋದಾಗ, ಅವರ ಯೋಚನೆಯ ದಾಟಿಯೇ ಬದಲಾಯಿತು. ಕಡ್ಡಿಯೊಳಗೆ ಹಾಲ್ ಐಸ್‌ ಎಲ್ಲವೂ ಹಳೆಯ ವಿಧಾನ. ಈಗ ಕಪ್, ಚಾಕೋಲೇಟ್, ಪ್ರೂಟ್‌, ಕುಲ್ಫಿ ಸೇರಿದಂತೆ ಹಲ ಹೊಸ ಐಸ್‌ ಕ್ರೀಂಗಳು ಬಂದಿದ್ದು, ಅದನ್ನು ತಯಾರಿಸುವ ವಿಧಾನದ ಬಗ್ಗೆ ಅಲ್ಲಿಯೇ ಒಂದೆರೆಡು ದಿನ ತರಬೇತಿ ಪಡೆದರು. ಜತೆಗೆ ತಯಾರಿಕೆ ಯಂತ್ರದ ಮಾಹಿತಿಯನ್ನು ಅಲ್ಲಿನ ವ್ಯಾಪಾರಿಗಳಿಂದ ಪಡೆದರು.

ವಿವಿಧ ನಮೂನೆಯ ಐಸ್‌ ಕ್ರೀಂ ತಯಾರಿಸುವ ಯಂತ್ರಕ್ಕೆ ಆಗಿನ ಕಾಲಘಟ್ಟದಲ್ಲಿ ₹ 1.5 ಲಕ್ಷವಿತ್ತು. ಬೆಲೆ ಕೇಳಿ ಹೌಹಾರಿದ ರಸೂಲ್‌ ತೆಲಗಿ, ಅಷ್ಟು ಹಣವನ್ನು ಹೊಂದಿಸಲು ಪಟ್ಟ ಪರಿಪಾಟಲು ಅಪಾರ. ಪ್ರಧಾನಮಂತ್ರಿ ರೋಜಗಾರ್ ಯೋಜನೆಯಲ್ಲಿ ಹಣ ಮಂಜೂರಾದರೂ; ಬ್ಯಾಂಕ್‌ನವರು ಕೇಳುವ ದಾಖಲೆಗಳನ್ನು ಹೊಂದಿಸಲು ಪೀಕಲಾಟ, ದಾಖಲೆಗಳನ್ನು ಹೊಂದಿಸಿದರೂ ಬ್ಯಾಂಕ್ ಮ್ಯಾನೇಜರ್ ಸಾಲ ನೀಡಲು ನಿರಾಕರಣೆ, ಇದನ್ನು ಮೆಟ್ಟಿ ರಸೂಲ್‌ ಅವರಿವರ ಬಳಿ ಕೈಸಾಲ ಪಡೆದು, ಹಣ ಹೊಂದಿಸಿ ಐಸ್‌ ಕ್ರೀಂ ತಯಾರಿಕೆ ಯಂತ್ರ ಖರೀದಿಸಿದರು.

ಈ ಯಂತ್ರ ಬಳಸಿಕೊಂಡು ನಾಲ್ವರು ಸಹೋದರರು ಸೇರಿ, ವಿವಿಧ ಬಗೆಯ ಐಸ್‌ ಕ್ರೀಂ ತಯಾರಿಸಿ, ಸ್ವತಃ ತಾವೇ ಮಾರಾಟ ಮಾಡಲು ಆರಂಭಿಸಿದ್ದು 2000ರಲ್ಲಿ. ಆಗಿನಿಂದ ಆರಂಭಗೊಂಡ ಇವರ ಚಿಕ್ಕ ಉದ್ಯಮ ಇಡೀ ನಾಲ್ವರ ಸಂಸಾರವನ್ನು ನಡೆಸುವುದರ ಜತೆಗೆ 30ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ನೀಡಿದೆ.

ಮಾರುಕಟ್ಟೆ ಪರಿಣಿತರು
ಐಸ್‌ ಕ್ರೀಂ ತಯಾರಿಸಿದ ಬಳಿಕ ತಾವೇ ಮಾರುಕಟ್ಟೆ ವಿಸ್ತರಿಸಿಕೊಂಡ ಪರಿಣಿತರಿವರು. ನಾನಾ ತಂತ್ರಗಳನ್ನು ಕರಗತ ಮಾಡಿಕೊಂಡು ಜನರ ಮೆಚ್ಚುಗೆ ಗಳಿಸಿದ್ದಾರೆ. ಆಟೊಗಳನ್ನೇ ಐಸ್‌ ಕ್ರೀಂ ಪಾರ್ಲರ್‌ಗಳನ್ನಾಗಿ ಪರಿವರ್ತಿಸಿದರು.

ಜಾತ್ರೆ, ಕ್ರೀಡಾಕೂಟ, ಮದುವೆ, ಪ್ರವಾಸಿ ತಾಣ ಸೇರಿದಂತೆ ಜನ ಸೇರಿದೆಡೆ ಇವರ ಆಟೊ ಹಾಜರ್. ಕೂಲರ್, ರೆಫ್ರಿಜರೇಟರ್‌ ಹೊಂದಿರುವ ಈ ಆಟೊದಲ್ಲಿ ಬಗೆ ಬಗೆಯ ಐಸ್‌ ಕ್ರೀಂ ಲಭ್ಯ. ಸೈಕಲ್‌ಗಳಿಗೂ ಚಿಕ್ಕ ಚಿಕ್ಕ ರೆಫ್ರಿಜರೇಟರ್‌ ಅಳವಡಿಸಿ, ಕಮಿಷನ್‌ ಇಲ್ಲವೇ ದಿನಗೂಲಿ ಆಧಾರದಲ್ಲಿ ಬಾಡಿಗೆ ನೀಡಿ, ತಮ್ಮ ವಹಿವಾಟು ವಿಸ್ತರಿಸಿಕೊಂಡ ಚಾಣಾಕ್ಷರಿವರು.

ಕೆಲ ವರ್ಷಗಳ ಹಿಂದೆ ತೆಲಗಿ ಸಹೋದರರು ಪ್ರತ್ಯೇಕವಾಗಿದ್ದು, ಪ್ರತಿಯೊಬ್ಬರು ತಮ್ಮದೇ ಆದ ಸ್ವಂತ ಐಸ್‌ ಕ್ರೀಂ ವಹಿವಾಟು ಉದ್ದಿಮೆ ಆರಂಭಿಸಿ, ಎಲ್ಲರೂ ಯಶಸ್ವಿಯಾಗಿದ್ದಾರೆ. ಮೆಹಬೂಬ್‌ ತೆಲಗಿ, ಅಬ್ದುಲ್‌ ಹಾಸಿಂಖಾನ್‌ ತೆಲಗಿ, ಇಬ್ರಾಹಿಂ ತೆಲಗಿ ಕೂಡಾ ಇದೀಗ ಪ್ರತ್ಯೇಕ ಉದ್ದಿಮೆ ಹೊಂದಿದ್ದಾರೆ.

₹10ರಿಂದ ₹40ರವರೆಗೂ ಐಸ್ ಕ್ರೀಂ ಇಲ್ಲಿದ್ದು, ಕೋನ್‌, ಚಾಕೋಬಾರ್‌, ಕಪ್‌, ಫ್ರೂಟ್‌, ಕುಲ್ಫಿ, ಗಡಬಡ್‌, ಫ್ಯಾಮಿಲಿ ಪ್ಯಾಕ್‌ ಲಭ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು