ಗುರುವಾರ , ಏಪ್ರಿಲ್ 9, 2020
19 °C
‘ಚೈನ್‌ ಲಿಂಕ್‌’ ಎಂಬ ಮಾಯಾಜಾಲ!

ದುರಾಸೆಗೆ ಹಣ ಕಳೆದುಕೊಳ್ಳಬೇಡಿ

ಗವಿ ಬ್ಯಾಳಿ Updated:

ಅಕ್ಷರ ಗಾತ್ರ : | |

Prajavani

ಬೇಗ ಹಣ ಗಳಿಸಬೇಕು, ಬೇಗ ಶ್ರೀಮಂತರಾಗುವ ಜನರ ಹಪಾಹಪಿ ಮತ್ತು ಮನಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡುವ ಕಂಪನಿಗಳಿಗೆ ಬರವಿಲ್ಲ. ಹೆಚ್ಚಿನ ಬಂಡವಾಳ ಮತ್ತು ಶ್ರಮವಿಲ್ಲದೆ ಸುಲಭವಾಗಿ ಹಣಗಳಿಸುವ ಮಾರ್ಗ ತೋರಿಸುವುದಾಗಿ ಅಮಾಯಕ ಜನರನ್ನು ನಂಬಿಸುವ ಕಂಪನಿಗಳು ಕೊನೆಗೊಂದು ದಿನ ಸಾವಿರಾರು ಕೋಟಿ ರೂಪಾಯಿ ಲಪಟಾಯಿಸಿ ಪರಾರಿಯಾಗುತ್ತವೆ.  

ಅಂತಹ ಚೈನ್‌ ಮಾರ್ಕೆಟಿಂಗ್‌ ಸ್ಕೀಮ್‌ಗಳ (ಎಂಎಲ್‌ಎಂ) ಅಸಲಿ ಮುಖವಾಡವನ್ನು ಹೈದರಾಬಾದ್‌ನ ಹಿರಿಯ ಪತ್ರಕರ್ತೆ ಅರುಣಾ ರವಿಕುಮಾರ್‌ ತಮ್ಮ ‘ಮರಾಡರ್ಸ್‌ ಆಫ್‌ ಹೋಪ್‌’ (Marauders of Hope) ಪುಸ್ತಕದಲ್ಲಿ ಕಳಚಿಟ್ಟಿದ್ದಾರೆ. 166 ಪುಟಗಳ ಪುಸ್ತಕವನ್ನು ಕ್ರಾಸ್‌ವರ್ಡ್‌ ಬುಕ್‌ಸ್ಟೋರ್‌ ಪ್ರಕಟಿಸಿದೆ. 

ದೇಶದ ಆರ್ಥಿಕ ವ್ಯವಸ್ಥೆ ಬುಡಮೇಲು ಮಾಡಿದ ದೊಡ್ಡ ಹಗರಣ ಮತ್ತು ವಂಚಕ ಕಂಪನಿಗಳ ಬೆನ್ನು ಬಿದ್ದ ಅರುಣಾ ಅವರ ಅನುಭವಗಳ ಕಥನವೇ ಈ ಇಂಗ್ಲಿಷ್‌ ಕೃತಿ. ಪುಸ್ತಕಕ್ಕಾಗಿ ಅವರು ಒಂದೂವರೆ ವರ್ಷ ಕಷ್ಟಪಟ್ಟಿದ್ದಾರೆ. ಹಣ ಕಳೆದುಕೊಂಡವರನ್ನು, ಅಧಿಕಾರಿಗಳನ್ನು ಖುದ್ದಾಗಿ ಕಂಡು ಮಾತನಾಡಿಸಿದ್ದಾರೆ. ಸುಲಭವಾಗಿ ಶ್ರೀಮಂತರಾಗುವ ಆಸೆಗೆ ಬಿದ್ದು ಹಣ ಕಳೆದುಕೊಳ್ಳುವ ಜನರ ಕಣ್ಣು ತೆರೆಸುವ  ಸಾಮಾಜಿಕ ಕಳಕಳಿ ಈ ಪುಸ್ತಕದ್ದು. 

ಮೂರು ದಶಕದವರೆಗೆ ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡಿದ ಅನುಭವ ಅರುಣಾ ಅವರಿಗಿದೆ. ಪುಸ್ತಕ ಪರಿಚಯಿಸಲು ಈಚೆಗೆ ನಗರಕ್ಕೆ ಬಂದಾಗ ‘ಪ್ರಜಾವಾಣಿ’ ಜತೆ ಅವರು ಮಾತಿಗೆ ಸಿಕ್ಕರು. 

ಮಾರುಕಟ್ಟೆ ತಂತ್ರಗಾರಿಕೆ ಮತ್ತು ನಯವಾದ ಮಾತುಗಳಿಂದ ಜನರಲ್ಲಿ ಕನಸು ಬಿತ್ತುವ ವಂಚಕ ಕಂಪನಿಗಳು ಕೊನೆಗೊಂದು ದಿನ ಅವರನ್ನೇ ದೋಚುತ್ತವೆ. ಅದಕ್ಕಾಗಿಯೇ ಈ ಪುಸ್ತಕಕ್ಕೆ ‘ಮರಾಡರ್ಸ್‌ ಆಫ್‌ ಹೋಪ್‌’ (ಭರವಸೆ ಬಿತ್ತುವ ಲೂಟಿಗಾರರು) ಎಂದು ಹೆಸರಿಟ್ಟಿದ್ದೇನೆ ಎಂದು ಅರುಣಾ ಮಾತಿಗೆ ಶುರುವಿಟ್ಟುಕೊಂಡರು.

1990ರ ದಶಕದಲ್ಲಿ ಜಾಗತೀಕರಣ ಮತ್ತು ಉದಾರೀಕರಣಕ್ಕೆ ಭಾರತದ ಮಾರುಕಟ್ಟೆಯನ್ನು ಮುಕ್ತವಾಗಿ ತೆರೆದಾಗ ಕಾಲಿಟ್ಟಿದ್ದೇ ಈ ಮಲ್ಟಿ ಲೆವೆಲ್‌ ಮಾರ್ಕೆಟಿಂಗ್‌ ಅಥವಾ ನೆಟ್‌ವರ್ಕ್ ಮಾರ್ಕೆಟಿಂಗ್‌ ಎಂಬ ಭೂತ!

ನಿರುದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳು, ಗೃಹಿಣಿಯರು ಮತ್ತು ಮಧ್ಯಮ ವರ್ಗದವರು ನೆಟ್‌ವರ್ಕ್‌ ಮಾರ್ಕೆಟಿಂಗ್‌ನ ಮೊದಲ ಬಲಿಪಶುಗಳು. ನೆಟ್‌ವರ್ಕ್‌ ಮಾರ್ಕೆಟಿಂಗ್‌ನಿಂದ ಅಲ್ಪಾವಧಿಯಲ್ಲಿ ಹೇಗೆ ಕೋಟ್ಯಂತರ ಹಣ ಗಳಿಸಬಹುದು ಎಂಬ ಬಗ್ಗೆ ಆಕರ್ಷಕ ಭಾಷಣ, ಕಾರ್ಯಾಗಾರ, ಮೋಟಿವೇಷನಲ್‌ ವಿಡಿಯೊಗಳ ಮೂಲಕ ಗ್ರಾಹಕರ ಮನಪರಿವರ್ತನೆ ಮಾಡಲಾಗುತ್ತದೆ. ಹೊಸ ಸದಸ್ಯರನ್ನು ಸೇರಿಸುತ್ತ ಹೋದಂತೆ ಮತ್ತು ಅವರು ಉತ್ಪನ್ನಗಳನ್ನು ಖರೀದಿಸುತ್ತ ಹೋದಂತೆ ಬೋನಸ್‌ ಪಾಯಿಂಟ್‌, ಕಮಿಷನ್‌ ಮತ್ತು ಹುದ್ದೆಗಳು ಕೂಡ ಏರುತ್ತ ಸಾಗುತ್ತವೆ. ಇದರ ಆಸೆಗೆ ಬಿದ್ದ ಸದಸ್ಯರು ಹೊಸ ಸದಸ್ಯರನ್ನು ಮಾಡುತ್ತಾರೆ.   ‘ಇಂತಹ ಘಟನೆಗಳಿಂದ ಪಾಠ ಕಲಿಯದ ಅಮಾಯಕರು, ಕಂಪನಿಗಳು ಒಡ್ಡುವ ಆಮಿಷ ಮತ್ತು ತೋಡುವ ಖೆಡ್ಡಾಗಳಿಗೆ ಪದೇ ಪದೇ ಸುಲಭವಾಗಿ ಬೀಳುತ್ತಿದ್ದಾರೆ. ಎಲ್ಲರೂ ಉದ್ಯಮಿ ವಿಜಯ ಮಲ್ಯ ಅವರ ಬಗ್ಗೆ ಮಾತನಾಡುತ್ತಾರೆಯೇ ಹೊರತು ಇಂತಹ ಕಂಪನಿಗಳಲ್ಲಿ ಹಣ  ಕಳೆದುಕೊಂಡ ಸಂತ್ರಸ್ತರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎನ್ನುವುದು ಅವರ ಬೇಸರ. ಸಂತ್ರಸ್ತರ ಪ್ರತಿನಿಧಿಯಾಗಿ ನಾನು ಆ ಕೆಲಸ ಮಾಡಿರುವ ಧನ್ಯತಾ ಭಾವ ನನ್ನಲ್ಲಿದೆ’ ಎಂದು ಅವರು ಹೇಳುತ್ತಾರೆ.

 

ಮೂರ್ಖರಿಂದ ಮೂರ್ಖರ ಶಿಕಾರಿ!

‘ಒಬ್ಬ ಮೂರ್ಖನಿಗೆ ಮೋಡಿ ಮಾಡಿ. ಆತ ನೂರು ಮೂರ್ಖರನ್ನು ಹುಡುಕಿ ತರುತ್ತಾನೆ’ ಎಂಬುವುದು ‘ಬ್ಲೇಡ್’  ಕಂಪನಿಗಳ ಮೂಲಮಂತ್ರ. ಮೂರ್ಖರಿಂದಲೇ ಮೂರ್ಖರ ಶಿಕಾರಿ ವ್ಯಾಪಾರ ತಂತ್ರ!

ಒಂದು ಕಾರು ಇಲ್ಲದ ಕುಗ್ರಾಮಗಳಲ್ಲಿ ಕಾರು ತೊಳೆಯುವ ಸೋಪು, ಪೌಡರ್‌ ಮತ್ತು ಲಿಕ್ವಿಡ್‌ ಮಾರಾಟ ಮಾಡುವ ಚಾಕಚಕ್ಯತೆಯನ್ನು ಈ ಕಂಪನಿಗಳು ಹೊಂದಿರುತ್ತವೆ. ಯಾವುದೇ ಜಾಹೀರಾತು, ಖರ್ಚುವೆಚ್ಚಗಳಿಲ್ಲದೆ ಮಾರ್ಕೆಟಿಂಗ್‌ ಮಾಡುವುದು ಇವರಿಗೆ ಕರಗತ. ಬಾಯಿಂದ ಬಾಯಿಗೆ ಪ್ರಚಾರ, ವ್ಯಕ್ತಿಗಳ ನೇರ ಸಂಪರ್ಕ, ಕಾರ್ಯಾಗಾರ, ಮೋಟಿವೇಶನಲ್‌ ವಿಡಿಯೊ, ಸ್ಕೀಮ್‌ಗಳ ಮೂಲಕ ದಿಢೀರ್‌ ಶ್ರೀಮಂತರಾದವರ ಅನುಭವ, ಗಣ್ಯರು, ಸೆಲೆಬ್ರಿಟಿಗಳ ಹೆಸರು ಬಳಕೆ ಮುಂತಾದವು ಪ್ರಮುಖ ಮಾರುಕಟ್ಟೆ ತಂತ್ರಗಳು. 

ಭಾರತದಲ್ಲಿ ನೆಟ್‌ವರ್ಕ್ ಮಾರ್ಕೆಟಿಂಗ್‌ ಲಾಬಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಪ್ರಭಾವಿ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಮತ್ತು ಆಳುವ ಸರ್ಕಾರಗಳ ಶ್ರೀರಕ್ಷೆಯೂ ಇವರಿಗಿದೆ. ಇದರಲ್ಲಿ ಹಿರಿಯ ಅಧಿಕಾರಿಗಳ ಪಾತ್ರವೂ ಇದೆ. ಹೀಗಾಗಿಯೇ ಜನಸಾಮಾನ್ಯರನ್ನು ವಂಚಿಸುತ್ತಿರುವ ಜಾಲಗಳಿಗೆ ಕಡಿವಾಣ ಹಾಕುವ ರಾಜಕೀಯ ಇಚ್ಛಾಶಕ್ತಿ ಕಂಡುಬರುತ್ತಿಲ್ಲ ಎನ್ನುವುದು ಅರುಣಾ ಆರೋಪ.

ಶಂಕಾಸ್ಪದ ಹಣಕಾಸು ವಹಿವಾಟು ನಿಯಂತ್ರಿಸಲು ದೇಶದಲ್ಲಿ 16 ಸಂಸ್ಥೆಗಳಿದ್ದರೂ ಅವುಗಳ ಕೈಗಳನ್ನು ಕಟ್ಟಿ ಹಾಕಲಾಗಿದೆ. ‘ಪ್ರೈಜ್‌ ಚಿಟ್ಸ್‌ ಆ್ಯಂಡ್‌ ಮನಿ ಸರ್ಕ್ಯುಲೇಷನ್‌ ಸ್ಕೀಮ್ಸ್‌ ಬ್ಯಾನ್‌ ಆ್ಯಕ್ಟ್‌ (ಪಿಸಿಎಂಸಿಎಸ್‌) –1978 ’ ಕಾಯ್ದೆಗೆ 2016ರಲ್ಲಿ ತಿದ್ದುಪಡಿ ತರಲಾಗಿದೆಯಾದರೂ ಅವುಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ಅಲ್ಪಾವಧಿಯಲ್ಲಿ ದೊಡ್ಡ ಮಟ್ಟದ ಲಾಭ ತಂದುಕೊಡುವ ಆಮಿಷಗಳು ಎಂದಿಗೂ ನಿಜವಲ್ಲ. ಇವನ್ನು ನಂಬಿದರೆ ಉರುಳಿಗೆ ಕೊರಳು ಒಡ್ಡಿದಂತೆ ಎನ್ನುವುದು ಲೇಖಕಿ ಕಂಡುಕೊಂಡ ಸತ್ಯ.

 

ಬೀದಿಗೆ ಬಿದ್ದ ಸಂಸಾರಗಳು

ನೆಟ್‌ವರ್ಕ್‌ ಮಾರ್ಕೆಟಿಂಗ್‌ ತಂತ್ರಗಾರಿಕೆ ಕೇವಲ ದೇಶದ ಅರ್ಥ ವ್ಯವಸ್ಥೆಗೆ ಪೆಟ್ಟು ನೀಡಿಲ್ಲ. ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆಯನ್ನೂ ಹಾಳು ಮಾಡಿವೆ. ಇದರಿಂದಾಗಿ ಎಷ್ಟೋ ಸಂಸಾರಗಳು ಬೀದಿಗೆ ಬಿದ್ದಿವೆ.  ಸಂಬಂಧಗಳು ಹಾಳಾಗಿವೆ. ಮದುವೆಗಳು ಮುರಿದು ಬಿದ್ದಿವೆ. ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿವೆ. ಅಣ್ಣ–ತಮ್ಮಂದಿರು, ಸ್ನೇಹಿತರು ಹೊಡೆದಾಡಿಕೊಂಡಿದ್ದಾರೆ. ಹಣ ಕಳೆದುಕೊಂಡವರು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಪಿರಮಿಡ್‌ ಮಾದರಿಯ ಚೈನ್‌ ಸಿಸ್ಟಮ್‌ ಮಾರ್ಕೆಟಿಂಗ್‌ ಪದ್ಧತಿಯಲ್ಲಿ ತುತ್ತ ತುದಿಗೆ ಇರುವ ವ್ಯಕ್ತಿಗಳು ಈ ಎಲ್ಲ ಹಣ ಗಳಿಸುತ್ತಾರೆಯೇ ಹೊರತು ಹಣ ಹಾಕಿದವರಲ್ಲ. ನಿವೃತ್ತರ ಪಿಂಚಣಿ ಹಣ, ವೃದ್ಧಾಪ್ಯ ಹಣ, ವಿಧವಾ ವೇತನ, ಹೆಣ್ಣು ಮಕ್ಕಳ ಮದುವೆಗೆ ಕೂಡಿಟ್ಟ ಹಣ, ಮಕ್ಕಳ ವಿದ್ಯಾಭ್ಯಾಸ, ಭವಿಷ್ಯಕ್ಕಾಗಿ ಇಟ್ಟ ಹಣವನ್ನು ಕೂಡ  ಅಮಾಯಕ ಜನರು ಕಳೆದುಕೊಂಡಿದ್ದಾರೆ.

ಮಕ್ಕಳ ಮದುವೆಗೆಂದು ಕೂಡಿಟ್ಟ ಹಣ, ಪಿಂಚಣಿಯ ಹಣವನ್ನೂ ಕಳೆದುಕೊಂಡವರಿದ್ದಾರೆ. ಆ ಸಂತ್ರಸ್ತರಿಗೆ ಇದುವರೆಗೂ ನ್ಯಾಯ ಮತ್ತು ಹಣ ಸಿಕ್ಕಿಲ್ಲ! 

ಮೋಸ ಮಾಡುವ ಉದ್ದೇಶದಿಂದಲೇ ಹುಟ್ಟಿಕೊಂಡ ಕಂಪನಿಗಳಿಗೆ ಪಾಪಪ್ರಜ್ಞೆ ಇರುವುದಿಲ್ಲ. ಹೇಗೆ ಲೆಕ್ಕಾಚಾರ ಮಾಡಿದರೂ ನೆಟ್‌ವರ್ಕ್‌ ಮಾರ್ಕೆಟಿಂಗ್‌ ವಾಸ್ತವದಲ್ಲಿ ಕಾರ್ಯಸಾಧುವಲ್ಲ. ಇದು ಎಂದಿಗೂ ನನಸಾಗದ ಹಗಲುಗನಸು!

ಈ ಎಲ್ಲ ಹಣ ವಿದೇಶಗಳಲ್ಲಿ ಕುಳಿತವರ ಕೈಸೇರುತ್ತದೆ. ನೆಟ್‌ವರ್ಕ್‌ ಮಾರ್ಕೆಟಿಂಗ್‌ ಮೂಲಕ ಎರಡು ದಶಕಗಳಲ್ಲಿ ಅಂದಾಜು ₹7 ಲಕ್ಷ ಕೋಟಿ ಹಣ ಲಪಟಾಯಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಇಂತಹ ನೂರಾರು ‘ಪಾಂಜಿ ಸ್ಕೀಮ್‌’ಗಳಿದ್ದು, ಸಾಕಷ್ಟು ಪ್ರಕರಣ ವರದಿಯಾಗಿರುವುದು ಅದೇ ರಾಜ್ಯದಲ್ಲಿ.

ಹುಬ್ಬಳ್ಳಿಯ ಜಪಾನ್‌ ಬೆಡ್‌!

ಈ ಮಾಂತ್ರಿಕ ಹಾಸಿಗೆಯ ಮೇಲೆ ಮಲಗಿದರೆ ಸಾಕು ಎಲ್ಲ ರೋಗಗಳು ತಮ್ಮಿಂದ ತಾವಾಗಿಯೇ ವಾಸಿಯಾಗುತ್ತವೆ. ವೈದ್ಯರ ಬಳಿ ಹೋಗುವುದೇ ಬೇಡ! 20 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಜಪಾನ್‌ ಬೆಡ್‌ಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಯಿತು.

ನೂರು ರೂಪಾಯಿ ಕೊಟ್ಟು ಹತ್ತಿಯ ಹಾಸಿಗೆ ಖರೀದಿಸಲು ಚೌಕಾಶಿ ಮಾಡುತ್ತಿದ್ದ ಸಾವಿರಾರು ಜನರು ಲಕ್ಷ ರೂಪಾಯಿ ಕೊಟ್ಟು ಜಪಾನ್‌ ಹಾಸಿಗೆ ಖರೀದಿಸಿದರು. ಜಪಾನ್‌ ಮ್ಯಾಗ್ನೆಟಿಕ್‌ ಬೆಡ್‌ನಿಂದ ಯಾವುದೇ ರೋಗ ವಾಸಿಯಾಗುತ್ತಿಲ್ಲ ಎಂಬ ವಿಷಯ ತಿಳಿಯುತ್ತಲೇ ಜನರು ತಿರುಗಿ ಬಿದ್ದರು. ಪೊಲೀಸ್‌ ಠಾಣೆಗೆ ದೂರು ನೀಡಿದರು. ಹಣ ಮರಳಿ ಬರಲಿಲ್ಲ. 

ಒಂದು ಲಕ್ಷ ರೂಪಾಯಿಗೆ ಒಂದರಂತೆ ಜಪಾನ್‌ ಬೆಡ್‌ಗಳನ್ನು ಹುಬ್ಬಳ್ಳಿಯಲ್ಲಿ ಮಾರಾಟ ಮಾಡಲಾಯಿತು. ಈ ಹಗರಣದಲ್ಲಿ ಕನಿಷ್ಠ ಐದು ಸಾವಿರ ಜನರಿಂದ ಅಂದಾಜು ₹82 ಕೋಟಿ ಪಂಗನಾಮ ಹಾಕಲಾಯಿತು! ಬೊಜ್ಜು ಕರಗಿಸುವ ಆರೋಗ್ಯಕರ ಪೇಯ, ಗೃಹೋಪಯೋಗಿ ಸಲಕರಣೆ, ಕೃಷಿ ಉತ್ಪನ್ನ, ಮರಗಳ ಮೇಲೆ ಹೂಡಿಕೆ, ಸೌಂದರ್ಯವರ್ಧಕಗಳ ಹೆಸರಿನಲ್ಲಿ ನೆಟ್‌ವರ್ಕ್ ಮಾರ್ಕೆಟಿಂಗ್‌ ಈಗಲೂ ಭರ್ಜರಿ ವ್ಯಾಪಾರ ಮಾಡುತ್ತಿವೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು