ಮಂಗಳವಾರ, ನವೆಂಬರ್ 30, 2021
21 °C

ಕಾರು ಕಳ್ಳತನ: ವಿಮೆ ಪಡೆಯಲು ನೀವು ಅನುಸರಿಸಬೇಕಾದ ಐದು ಹೆಜ್ಜೆಗಳು ಇಲ್ಲಿವೆ...

ವಿವೇಕ್ ಚತುರ್ವೇದಿ Updated:

ಅಕ್ಷರ ಗಾತ್ರ : | |

Prajavani

ನಾವು ಕಾರು ಕಳ್ಳತನದ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ. ಆದರೆ, ಅದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ಏಕೆಂದರೆ, ನಮ್ಮ ಕಾರು ಕಳ್ಳತನ ಆಗುವುದಿಲ್ಲ ಎಂದು ನಾವು ನಂಬಿರುತ್ತೇವೆ. ಹೀಗಿದ್ದರೂ, ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಕಾಯಿಲೆ ಬಂದ ನಂತರ ಅದನ್ನು ಗುಣಪಡಿಸುವುದಕ್ಕಿಂತ ಉತ್ತಮವಾದುದು. ಅನಿರೀಕ್ಷಿತ ಸಂದರ್ಭಗಳಿಗೆ ಸಿದ್ಧವಾಗಿ ಇರುವುದು ಯಾವಾಗಲೂ ಒಳ್ಳೆಯದು.

ಕಾರು ವಿಮೆಯ ರಕ್ಷೆಯು ನಿಮ್ಮ ಹಳೆಯ ವಾಹನವನ್ನು ಬದಲಿಸಿ ಕೊಡಲು ಸಾಧ್ಯವಿಲ್ಲ. ಆದರೆ ನೀವು ಅನುಭವಿಸಬಹುದಾದ ಹಣಕಾಸಿನ ನಷ್ಟವನ್ನು ಇದು ಸರಿದೂಗಿಸಿಕೊಡಬಹುದು. ಸಮಗ್ರ ಕಾರು ವಿಮಾ ಪಾಲಿಸಿಯು ನಿಮ್ಮ ಕಾರಿಗೆ ಸಂಪೂರ್ಣ ಮತ್ತು ಎಲ್ಲವನ್ನೂ ಒಳಗೊಂಡ ರಕ್ಷಣೆಯನ್ನು ಒದಗಿಸುತ್ತದೆ. ಬೇರೆಯವರು ನಿಮ್ಮ ಕಾರಿಗೆ ಉಂಟುಮಾಡಬಹುದಾದ ಹಾನಿಯಿಂದಲೂ, ನೀವೇ ನಿಮ್ಮ ಕಾರಿಗೆ ಮಾಡಿಕೊಳ್ಳಬಹುದಾದ ಹಾನಿಯಿಂದಲೂ ರಕ್ಷಣೆಯನ್ನು ಒದಗಿಸುತ್ತದೆ.

ಇದನ್ನೂ ಓದಿ: ಪ್ರಶ್ನೋತ್ತರ: ಪ್ಯಾನ್‌-ಆಧಾರ್‌ ಇದ್ದರೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕೇ?

ಕಳ್ಳತನದಂತಹ ಅನಿರೀಕ್ಷಿತಗಳು ‘ಸ್ವಂತ ಹಾನಿ’ ಎಂಬ ವ್ಯಾಖ್ಯಾನದ ಅಡಿಯಲ್ಲಿ ಬರುತ್ತವೆ. ಕಳ್ಳತನದ ಸಂದರ್ಭದಲ್ಲಿ ನೀವು ಮೊದಲು ಮಾಡಬೇಕಿರುವುದು ಕಳ್ಳತನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು, ಪ್ರಥಮ ಮಾಹಿತಿ ವರದಿ (ಎಫ್‍ಐಆರ್) ದಾಖಲಿಸುವುದು. ನಂತರ, ಕಳ್ಳತನ ಆಗಿರುವ ವಿಚಾರವನ್ನು ನಿಮ್ಮ ವಿಮಾ ಕಂಪನಿಗೆ ತಿಳಿಸುವುದು. ಈ ಪ್ರಕ್ರಿಯೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ಕಾರು ಕಳ್ಳತನದ ನಂತರ ವಿಮೆ ಮೊತ್ತ ಪಡೆಯಲು ಅನುಸರಿಸಬೇಕಾದ ಕ್ರಮಗಳನ್ನು ಪರಿಶೀಲಿಸೋಣ.

* ಎಫ್‍ಐಆರ್ ದಾಖಲಿಸಿ: ವಿಮೆಯ ರಕ್ಷೆಯನ್ನು ಪಡೆದವರು ಮಾಡಬೇಕಾದ ಮೊದಲ ಕೆಲಸ, ಕಳ್ಳತನದ ಬಗ್ಗೆ ತಕ್ಷಣವೇ ಪೊಲೀಸರಿಗೆ ದೂರು ಸಲ್ಲಿಸುವುದು.

* ವಿಮಾದಾರರಿಗೆ ಮಾಹಿತಿ ನೀಡಿ: ವಿಮಾ ರಕ್ಷಣೆ ನೀಡಿರುವ ಕಂಪನಿಯ ಕಸ್ಟಮರ್ ಕೇರ್ ನಂಬರ್‌ಗೆ ಕರೆ ಮಾಡಿ ಅಥವಾ ಆನ್‌ಲೈನ್‌ ಮೂಲಕ ಕಳ್ಳತನದ ಬಗ್ಗೆ ಮಾಹಿತಿ ನೀಡಬಹುದು. ಗ್ರಾಹಕರು ತಾವು ಖರೀದಿ ಮಾಡಿರುವ ವಿಮಾ ಪಾಲಿಸಿಯ ಬಗ್ಗೆ ಮೂಲ ವಿವರಗಳನ್ನು ಒದಗಿಸಿ ಈ ಕೆಲಸ ಮಾಡಬಹುದು.

* ಬೇಕಿರುವ ಅಗತ್ಯ ದಾಖಲೆಗಳು: ಈ ಕೆಳಗಿನ ದಾಖಲೆಗಳನ್ನು ಆನ್‍ಲೈನ್ ಮೂಲಕ ಅಥವಾ ವಿಮಾ ಏಜೆಂಟ್ ಮೂಲಕ ಸಲ್ಲಿಸಬೇಕು

1) ನಿಮ್ಮ ಕಾರಿನ ನೋಂದಣಿ ಪ್ರಮಾಣಪತ್ರದ (ಆರ್‌ಸಿ) ಪ್ರತಿ

2) ನಿಮ್ಮ ಚಾಲನಾ ಪರವಾನಗಿ ಪ್ರತಿ

3) ಎಫ್‍ಐಆರ್‌ ಪ್ರತಿ

4) ನಿಮ್ಮ ಕಾರಿನ ವಿಮಾ ಪಾಲಿಸಿಯ ಮೊದಲ ಎರಡು ಪುಟಗಳು

5) ಕಳ್ಳತನ ಆಗಿರುವುದನ್ನು ತಿಳಿಸಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗೆ (ಆರ್‌ಟಿಒ) ಬರೆದ ಪತ್ರ

* ಪತ್ತೆಯಾಗದ ವರದಿ ಪಡೆಯಿರಿ: ಪೊಲೀಸರು ನಿಮ್ಮ ವಾಹವನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ, ಆರು ತಿಂಗಳ ನಂತರವೂ ವಾಹನವು ಪತ್ತೆಯಾಗದೆ ಇದ್ದಲ್ಲಿ, ಪೊಲೀಸರು ‘ಪತ್ತೆಯಾಗದ ವರದಿ’ ನೀಡುತ್ತಾರೆ. ಆ ಮೂಲಕ ನಿಮ್ಮ ಕಳೆದುಹೋದ ಕಾರಿನ ಆರ್‌ಸಿಯನ್ನು ವಿಮಾ ಕಂಪನಿಗೆ ವರ್ಗಾಯಿಸುವ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ. ಕ್ಲೇಮ್‍ ಪ್ರಕ್ರಿಯೆಯನ್ನು ಅಧಿಕೃವಾಗಿ ಮುಂದುವರಿಸಲು ಆ ವರದಿಯನ್ನು ಸಲ್ಲಿಸಬೇಕು.

* ಅಗತ್ಯವಿರುವ ಎಲ್ಲ ದಾಖಲೆಗಳನ್ನು ವಿಮಾ ಕಂಪನಿಯವರು ಸ್ವೀಕರಿಸಿದ ನಂತರ, ಪಾಲಿಸಿಯನ್ನು ಖರೀದಿಸಿದಾಗ ಆಯ್ಕೆ ಮಾಡಿದ ಐಡಿವಿ ಅಥವಾ ವಿಮಾ ಮೊತ್ತದ ಅನುಸಾರ ಕ್ಲೇಮ್ ಇತ್ಯರ್ಥಪಡಿಸಲಾಗುತ್ತದೆ.

ವಾಹನ ಕಳ್ಳತನದ ಕ್ಲೇಮ್‌ ಇತ್ಯರ್ಥ ಮಾಡುವ ಪ್ರಕ್ರಿಯೆಯು ಇತರ ಯಾವುದೇ ವಿಮಾ ಕ್ಲೇಮ್‍ಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಏಕೆಂದರೆ, ಇಂತಹ ಪ್ರಕರಣಗಳಲ್ಲಿ ಪೊಲೀಸ್ ತನಿಖೆ ಆಗಬೇಕಾಗುತ್ತದೆ. ವಾಹನವನ್ನು ಪತ್ತೆ ಮಾಡಲು ಆಗುತ್ತಿಲ್ಲ ಎಂಬ ವರದಿಯನ್ನು ನೀಡಲು ಪೊಲೀಸರಿಗೆ ಆರು ತಿಂಗಳು ಸಮಯ ಬೇಕಾಗಬಹುದು. ಅಗತ್ಯವಿರುವ ಎಲ್ಲ ದಾಖಲೆಗಳು ಮತ್ತು ಕಾರಿನ ಕೀಲಿಯನ್ನು ಸ್ವೀಕರಿಸಿದ ನಂತರವೇ ವಿಮಾ ಕಂಪನಿಯು ಪ್ರಕ್ರಿಯೆಯನ್ನು ಮುಂದುವರಿಸುತ್ತದೆ.

ವಿಮೆದಾರರು ಕಾರಿನ ಕೀಲಿಯನ್ನು ಹಾಜರುಪಡಿಸಲು ವಿಫಲವಾದರೆ ಕ್ಲೇಮ್‌ ತಿರಸ್ಕಾರ ಆಗಬಹುದು. ಕಾರಿನ ಎರಡೂ ಕೀಲಿಗಳನ್ನು, ಎಫ್‍ಐಆರ್‌ ಪ್ರತಿಯನ್ನು ಸಲ್ಲಿಸುವುದರ ಜೊತೆಗೆ ವಿಮಾದಾರು ಪಾಲಿಸಿ ವಿವರಗಳನ್ನು ಮತ್ತು ವಾಹನದ ವಿವರಗಳನ್ನು ತಕ್ಷಣಕ್ಕೆ ಸಿಗುವಂತೆ ಇರಿಸಿಕೊಳ್ಳಬೇಕು.

(ಲೇಖಕ ‘ಡಿಜಿಟ್ ಇನ್ಸೂರೆನ್ಸ್’ ಕಂಪನಿಯ ಸಿಎಂಒ)

ಇದನ್ನೂ ಓದಿ: ಗೃಹಸಾಲ: ಈ ಐದು ತಪ್ಪುಗಳನ್ನು ಮಾಡಬೇಡಿ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು