ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕಾಸ್‌ಮಾತು' ಲೇಖನ 2: ಉಳಿಸೋಕೆ, ಗಳಿಸೋಕೆ ಹಣಕಾಸಿನ ಗುರಿ ಬೇಕಲ್ಲವೇ?

Last Updated 3 ಫೆಬ್ರುವರಿ 2020, 10:16 IST
ಅಕ್ಷರ ಗಾತ್ರ
ADVERTISEMENT
""
""

ಕೆಲವರು ‘ಹಣಕಾಸು’ ಎಂಬ ಪದ ಕೇಳಿದ ತಕ್ಷಣವೇ ಆತಂಕಕ್ಕೆ ಒಳಗಾಗುತ್ತಾರೆ. ಇದು ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗುತ್ತದೆ. ಏಕೆಂದರೆ, ಅವರು ‘ಹಣಕಾಸಿನ’ ವಿಚಾರಗಳನ್ನು ಆಳವಾಗಿ ಅರ್ಥ ಮಾಡಿಕೊಂಡಿರುವುದಿಲ್ಲ. ಬಹಳ ಕಾಲ ಇದನ್ನು ನಿರ್ಲಕ್ಷಿಸಿಬಿಟ್ಟಿರುತ್ತಾರೆ. ಇಂಥ ಸಮಸ್ಯೆಗಳಿಗೆಪರಿಹಾರ ಆಗಬಲ್ಲ; ಪರ್ಸನಲ್ ಫೈನಾನ್ಸ್‌ ವಿಚಾರವನ್ನು ಮತ್ತಷ್ಟು ಸರಳಗೊಳಿಸಬಲ್ಲ ಲೇಖನಗಳ ಸರಣಿ 'ಕಾಸ್‌ಮಾತು'

ಲೇಖಕರು:ವಿನಿತಾ ಜೈನ್,ಅನು ಸೇಠ್,ಪ್ರೀತಾ ವಾಲಿ

ಜೀವನದಲ್ಲಿ ಗುರಿ ಇರಬೇಕು ಎಂಬ ಮಾತನ್ನು ಎಲ್ಲರೂ ಹೇಳುತ್ತಾರೆ. ಆದರೆ, ಹಣಕಾಸಿನ ವಿಚಾರದಲ್ಲಿ ಕೂಡ ನಿರ್ದಿಷ್ಟ ಗುರಿಗಳು ಇರಬೇಕಾಗುತ್ತವೆ ಎಂಬುದನ್ನು ಎಷ್ಟು ಜನ ನಿಮಗೆ ಹೇಳಿದ್ದಾರೆ? ಶಾಲೆಗಳಲ್ಲಿ ಇದನ್ನು ಕಲಿಸಿದ್ದಾರೆಯೇ? ಹಣಕಾಸಿನ ಗುರಿ ಇಲ್ಲದೆ ವೈಯಕ್ತಿಕ ಬದುಕಿನಲ್ಲಿ ಯಶಸ್ಸು ಸಾಧಿಸಲು ಹೇಗೆ ಸಾಧ್ಯ?!

‘ಗುರಿ’. ಇದು ಜೀವನದಲ್ಲಿ ನಮ್ಮನ್ನು ಮುಂದಕ್ಕೆ ಒಯ್ಯುವ ಶಕ್ತಿ ಎನ್ನಲು ಅಡ್ಡಿಯಿಲ್ಲ. ಗುರಿ ಎಂಬುದು ನಾವು ಕಾಣುವ ಕನಸುಗಳ ಪಾಲಿಗೆ ಆಮ್ಲಜನಕ ಇದ್ದಂತೆ. ನಾವು ಜೀವನದಲ್ಲಿ ಆರಂಭಿಸುವ ಯಾವುದೇ ಯಾನ ಶುರುವಾಗುವುದು ಒಂದು ‘ಗುರಿ’ ನಿಗದಿ ಮಾಡಿಕೊಳ್ಳುವ ಮೂಲಕ. ಆ ಯಾನ ಕೊನೆಯಾಗುವುದು ಆ ಗುರಿ ತಲುಪಿದ ನಂತರವೇ.

ಆಸೆಗಳು, ಕನಸುಗಳು, ಗುರಿಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಗುರಿಗಳು ಕೂಡ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಬೇರೆಯಾಗಿರುತ್ತವೆ. ಇದನ್ನು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆ ಗಮನಿಸೋಣ. ಸಾವಿತ್ರಿ ಮತ್ತು ದಿವಿಜಾ (ಹೆಸರು ಬದಲಾಯಿಸಲಾಗಿದೆ) ಇಬ್ಬರಿಗೂ 35 ವರ್ಷ ವಯಸ್ಸಾಗಿದೆ. ಇಬ್ಬರೂ ಪ್ರತಿ ತಿಂಗಳು ತಲಾ ₹ 50 ಸಾವಿರ ವೇತನ ಪಡೆಯುತ್ತಾರೆ. ಆದರೆ, ಅವರಿಬ್ಬರ ಹಿನ್ನೆಲೆ ಆಧರಿಸಿ ಹೇಳುವುದಾದರೆ ಇಬ್ಬರ ಜೀವನದ ಗುರಿಗಳು ಸಂಪೂರ್ಣವಾಗಿ ಬೇರೆ ಬೇರೆ ಆಗಿರಬಹುದು.

ಸಾವಿತ್ರಿಗೆ ಇಬ್ಬರು ಮಕ್ಕಳು. ಹಿರಿಯ ಮಗುವಿಗೆ 10 ವರ್ಷ ವಯಸ್ಸು, ಕಿರಿಯ ಮಗುವಿಗೆ ಏಳು ವರ್ಷ ವಯಸ್ಸು. ಅಲ್ಲದೆ, ಸಾವಿತ್ರಿ ಪತಿಯ ಜೊತೆ ಇಲ್ಲ. ಆಕೆ ನಿವೃತ್ತಿಯ ಹಂತಕ್ಕೆ ಬಂದಿರುವ ತನ್ನ ತಂದೆ–ತಾಯಿಯನ್ನು ಕೂಡ ನೋಡಿಕೊಳ್ಳಬೇಕು. ಇಬ್ಬರು ಮಕ್ಕಳ ಉನ್ನತ ಶಿಕ್ಷಣದ ವೆಚ್ಚಗಳನ್ನು ಸಾವಿತ್ರಿಯೇ ನಿಭಾಯಿಸಬೇಕು. ಅಂದರೆ ಅದಕ್ಕಾಗಿ ದೊಡ್ಡ ಮೊತ್ತ ತೆಗೆದಿರಿಸಬೇಕು. ಸಾವಿತ್ರಿ ತನ್ನ ತಂದೆ–ತಾಯಿಗೆ ಇರುವ ಏಕೈಕ ಆಸರೆಯಾದ ಕಾರಣ, ಅವರಿಬ್ಬರ ವೃದ್ಧಾಪ್ಯದ ಕಷ್ಟ–ನಷ್ಟಗಳಿಗೆಲ್ಲ ಹೆಗಲು ಕೊಡಬೇಕು. ಆಕೆ ವೃತ್ತಿಯಿಂದ ನಿವೃತ್ತಳಾಗುವುದಕ್ಕೆ ಇನ್ನು 25 ವರ್ಷಗಳು ಬಾಕಿ ಇವೆ. ಈ ಅವಧಿಯಲ್ಲಿ ಆಕೆ ತನ್ನ ನಿವೃತ್ತ ಜೀವನಕ್ಕೆ ಅಗತ್ಯವಿರುವ ಹಣವನ್ನು ಒಗ್ಗೂಡಿಸಿಕೊಳ್ಳಬೇಕು.

ಈಗ ದಿವಿಜಾಳ ಜೀವನದ ಬಗ್ಗೆ ನೋಟ ಹರಿಸೋಣ. ಆಕೆಗೆ ಒಂದೇ ಮಗು. ಆ ಮಗುವಿಗೆ ಎಂಟು ವರ್ಷ ವಯಸ್ಸು. ಆಕೆಯ ಜೊತೆ ಕುಟುಂಬದ ಜವಾಬ್ದಾರಿಗಳಿಗೆ ಹೆಗಲು ಕೊಡಲು ಪತಿ ಇದ್ದಾನೆ. ದಿವಿಜಾಳ ಪತಿ ಪ್ರತಿ ತಿಂಗಳೂ ₹ 50 ಸಾವಿರ ಸಂಪಾದಿಸುತ್ತಾನೆ. ಸಾವಿತ್ರಿ ಹಾಗೂ ದಿವಿಜಾ ಅವರ ಜೀವನದ ಗುರಿಗಳು ಬೇರೆ ಬೇರೆ ಆಗಿರುತ್ತವೆ ಎಂಬುದು ಖಚಿತ.

ಹಣಕಾಸಿನ ವಿಚಾರದಲ್ಲಿ ಸ್ವತಂತ್ರರಾಗಬೇಕು ಎಂದಾದರೆ ಮೊದಲು ನೀವು ‘ಗುರಿ’ಯನ್ನು ಗುರುತು ಮಾಡಿಕೊಳ್ಳಬೇಕು. ಸಮಸ್ಯೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳದೆ ಇರುವುದೇ ದೊಡ್ಡ ಸಮಸ್ಯೆ ಎಂಬ ಮಾತು ಇದೆ. ಹಾಗೆಯೇ, ಗುರಿಯನ್ನು ಹೊಂದದೆ ಇರುವುದು ಕೂಡ ಒಂದು ಸಮಸ್ಯೆ. ಹಣಕಾಸಿನ ವಿಚಾರಗಳಲ್ಲಿ ಗುರಿಯನ್ನು ಗುರುತಿಸಿದ ನಂತರ, ಆ ಗುರಿ ಮುಟ್ಟಲು ಕ್ರಮಿಸಬೇಕಾದ ಹಾದಿ ಯಾವುದು ಎಂಬುದನ್ನು ಕಂಡುಕೊಳ್ಳುವ ಕೆಲಸ ಮಾತ್ರ ಉಳಿದುಕೊಳ್ಳುತ್ತದೆ.

‘ಗುರಿ’ ಎಂಬುದು ಜೀವನದಲ್ಲಿ ಮುನ್ನುಗ್ಗಲು, ಒಂದೇ ಲಕ್ಷ್ಯದೊಂದಿಗೆ ಸ್ಪರ್ಧಾತ್ಮಕವಾಗಿ ಕೆಲಸ ಮಾಡಲು ಹುರುಪು ನೀಡುತ್ತದೆ. ನೀವು ಗುರಿಯನ್ನು ಸಾಧಿಸುವತ್ತ ಗಮನ ಇಟ್ಟು ಕೆಲಸ ಮಾಡಲು ಆರಂಭಿಸಿದಾಗ, ಕನಸುಗಳನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಣಕಾಸಿನ ವಿಷಯದಲ್ಲಿ ಗುರಿಗಳು ಕಿರು ಅವಧಿಯದ್ದೋ, ಮಧ್ಯಮ ಅವಧಿಯದ್ದೋ ಅಥವಾ ದೀರ್ಘಾವಧಿಯದ್ದೋ ಆಗಿರಬಹುದು. ಆದರೆ, ಮಧ್ಯಮ ಅವಧಿಯ ಎಲ್ಲ ಗುರಿಗಳನ್ನು ಕಿರು ಅವಧಿಯ ಗುರಿಗಳನ್ನಾಗಿ ವಿಭಾಗ ಮಾಡಿಕೊಳ್ಳಬೇಕು. ಹಾಗೆ ವಿಭಾಗ ಮಾಡಿಕೊಂಡು, ಅವುಗಳನ್ನು ಕಾಲಕಾಲಕ್ಕೆ ಪರಿಶೀಲನೆ ಮಾಡುತ್ತ ಇರಬೇಕು.

ಮುಂದೆ ಬರಲಿರುವ ಹಬ್ಬಕ್ಕೆ ಮಾಡಬೇಕಿರುವ ಖರ್ಚು ನಿಮ್ಮ ಅಲ್ಪಾವಧಿಯ ಹಣಕಾಸು ಗುರಿ. ವರ್ಷಕ್ಕೊಮ್ಮೆ ಮಾಡಬೇಕಾದ ಶಿಕ್ಷಣದ ಮೇಲಿನ ವೆಚ್ಚ, ವಿಮೆ ಖರೀದಿ ಅಥವಾ ಚಿನ್ನಾಭರಣ ಖರೀದಿ ಮಧ್ಯಮ ಅವಧಿಯ ಗುರಿಗಳು. ಹಾಗೆಯೇ ಕಾರು ಖರೀದಿ ಕೂಡ ಮಧ್ಯಮ ಅವಧಿಯ ಗುರಿ. ಆದರೆ, ಮನೆ ಖರೀದಿ ಅಥವಾ ಮನೆ ನಿರ್ಮಾಣ, ನಿವೃತ್ತಿ ನಂತರದ ಬದುಕಿಗೆ ಅಗತ್ಯವಿರುವ ಇಡುಗಂಟನ್ನು ಮಾಡಿಕೊಳ್ಳುವುದು ದೀರ್ಘಾವಧಿಯ ಹಣಕಾಸು ಗುರಿ ಎನ್ನಬಹುದು.

ಗುರಿಯನ್ನು ನಿಗದಿ ಮಾಡಿಕೊಳ್ಳುವಲ್ಲಿ ಮೊದಲ ಹೆಜ್ಜೆಯಾಗಿ ನಮ್ಮ ಆಲೋಚನೆಗಳನ್ನು, ಕನಸುಗಳನ್ನು ಸ್ಪಷ್ಟ ಮಾಡಿಕೊಳ್ಳಬೇಕು. ಗುರಿ ನಿಗದಿ ಮಾಡಿಕೊಳ್ಳುವಾಗ ವಾಸ್ತವವಾದಿ ಆಗಿ ಆಲೋಚನೆ ಮಾಡುವುದು, ಪ್ರಾಮಾಣಿಕವಾಗಿ ಆಲೋಚನೆ ಮಾಡುವುದು, ಕಾರ್ಯಸಾಧು ಎಂಬಂಥ ಬಯಕೆಗಳನ್ನು ಇರಿಸಿಕೊಳ್ಳುವುದು ಉತ್ತಮ.

ಹಣಕಾಸು ಗುರಿಗಳನ್ನು ನಿಗದಿ ಮಾಡಿಕೊಳ್ಳುವ ಸಂದರ್ಭದಲ್ಲಿ ಹಣದುಬ್ಬರದ ಪ್ರಮಾಣವನ್ನು ಎಂದಿಗೂ ಮರೆಯಬಾರದು. ಹಣದುಬ್ಬರ ನಮ್ಮ ದೈನಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸರಳ ಉದಾಹರಣೆ ಮೂಲಕ ನೋಡೋಣ. ಹಣದುಬ್ಬರದ ಸರಾಸರಿ ದರ ಶೇಕಡ 5.5ರಷ್ಟು ಇದ್ದರೆ, ಈಗ ಒಂದು ಕುಟುಂಬದ ತಿಂಗಳ ಖರ್ಚು ₹ 10 ಸಾವಿರ ಇರುವುದು ಹತ್ತು ವರ್ಷಗಳ ನಂತರ ₹ 17 ಸಾವಿರ ಆಗುತ್ತದೆ. ಇಂದು ಮಕ್ಕಳ ಶಾಲಾ ಶಿಕ್ಷಣದ ತಿಂಗಳ ವೆಚ್ಚ ₹ 10 ಸಾವಿರ ಇದೆ ಎಂದಾದರೆ, ಅದು ಹತ್ತು ವರ್ಷಗಳ ನಂತರ ₹ 26 ಸಾವಿರ ತಲುಪಿದರೆ ಆಶ್ಚರ್ಯಪಡಬೇಕಾದ್ದೇನೂ ಇಲ್ಲ. ಏಕೆಂದರೆ ಶಿಕ್ಷಣದ ವೆಚ್ಚಗಳ ವಾರ್ಷಿಕ ಹಣದುಬ್ಬರ ದರ ಸರಿಸುಮಾರು ಶೇಕಡ 10ರಷ್ಟು ಇದೆ.

* ಪಯಣದ ಅಂತ್ಯ ಏನಿರುತ್ತದೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾನ ಆರಂಭಿಸಬೇಕು.

- ಸ್ಟೀಫನ್ ಕೋವೆ

ಹಣಕಾಸಿನ ‘ಗುರಿ’ಗಳ ಪೈಕಿ ಯಾವುದು ಮೊದಲು, ಯಾವುದು ನಂತರ ಎಂದು ಆದ್ಯತೆಯ ಅನುಸಾರ ವಿಂಗಡಣೆ ಮಾಡಿಕೊಳ್ಳುವುದು ಮುಖ್ಯವಾದ ಕೆಲಸ. ನಿಮ್ಮ ಹಣಕಾಸಿನ ಸ್ಥಿತಿ ಕುರಿತ ಎಲ್ಲ ಮಾಹಿತಿಯನ್ನು ಒಂದೆಡೆ ಬರೆದು, ಅವುಗಳ ಆಧಾರದಲ್ಲಿ ಹಣಕಾಸಿನ ಗುರಿಗಳಲ್ಲಿ ಯಾವುದಕ್ಕೆ ಮೊದಲ ಆದ್ಯತೆ ಎಂಬುದನ್ನು ಅಂತಿಮಗೊಳಿಸಿಕೊಳ್ಳಬೇಕು.

ನಿಗದಿ ಮಾಡಿಕೊಂಡ ಗುರಿಯನ್ನು ಸಾಧಿಸಲು ಅನುವಾಗುವಂತೆ ಕ್ರಿಯಾಯೋಜನೆಯನ್ನು ರೂಪಿಸುವುದು ಮೂರನೆಯ ಹಂತ. ಈ ಹಂತದಲ್ಲಿ, ಗುರಿ ಸಾಧಿಸಲು ಸಮಯ ಮಿತಿ ನಿಗದಿ ಮಾಡಿಕೊಳ್ಳುವುದು ಬಹಳ ಮುಖ್ಯ. ಇಂತಿಷ್ಟು ವರ್ಷಗಳ ನಂತರ, ನಿರ್ದಿಷ್ಟವಾದ ಗುರಿಯೊಂದನ್ನು ತಲುಪಲು ಇಂತಿಷ್ಟು ಹಣ ಬೇಕಾಗುತ್ತದೆ ಎಂಬುದು ನಿರ್ಧಾರವಾದ ನಂತರ ಅದಕ್ಕಾಗಿ ಪ್ರತಿ ತಿಂಗಳು ಮಾಡಬೇಕಿರುವ ಹೂಡಿಕೆ ಅಥವಾ ಉಳಿತಾಯದ ಮೊತ್ತ ಎಷ್ಟು ಎಂಬುದನ್ನು ಲೆಕ್ಕಹಾಕುವುದು ಮತ್ತೊಂದು ಮುಖ್ಯವಾದ ಕೆಲಸ.

ನಾವು ಹೂಡಿಕೆ ಮಾಡುತ್ತಿರುವ ಅಥವಾ ಮಾಡಲು ಉದ್ದೇಶಿಸಿರುವ ಹಣಕಾಸು ಉತ್ಪನ್ನಗಳ ಮೂಲಭೂತ ತಿಳಿವಳಿಕೆಯು ನಮ್ಮ ಗುರಿಗಳನ್ನು ತಲುಪುವಲ್ಲಿ ಇರುವ ನಾಲ್ಕನೆಯ ಪ್ರಮುಖ ಹಂತ. ಇಂದು ಇಂಟರ್ನೆಟ್‌ನಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿ ಸಾಕಷ್ಟು ದೊರೆಯುತ್ತಿದೆ. ಹಾಗಾಗಿ, ಯಾರೋ ಒಬ್ಬರು ನಮಗೆ ಹೇಳಿದರು ಎಂಬ ಒಂದೇ ಕಾರಣಕ್ಕೆ ನಾವು ಕೆಟ್ಟ ಹಣಕಾಸು ಉತ್ಪನ್ನವನ್ನು ಖರೀದಿಸುವಂತಾಗಬಾರದು.

ಗುರಿಗಳನ್ನು ಸಾಧಿಸಲು ಬೇಕಿರುವ ಹೂಡಿಕೆಗಳು ಅದರ ಪಾಡಿಗೆ ಅದು ಆಗುತ್ತಿರುವಂತೆ ಮಾಡುವುದು ಐದನೆಯ ಹೆಜ್ಜೆ. ಬಹಳ ಮುಖ್ಯವಾದ ಹೆಜ್ಜೆ. ಹೂಡಿಕೆ ಅಥವಾ ಉಳಿತಾಯಕ್ಕೆ ಮೀಸಲಿಟ್ಟ ಹಣವನ್ನು ಒಂದು ಖಾತೆಗೆ ಹಾಕಿ, ಅದು ಅಲ್ಲಿಂದ ನೇರವಾಗಿ ಹೂಡಿಕೆ ಅಥವಾ ಉಳಿತಾಯದ ಖಾತೆಗೆ ವರ್ಗಾವಣೆ ಆಗುವಂತೆ ಮಾಡಿ ಇಡಿ.

ಕೊನೆಯ ಹಾಗೂ ಬಹುಮುಖ್ಯವಾದ ಹಂತ ಎಂದರೆ, ನೀವು ಮಾಡಿದ ಹಣಕಾಸಿನ ಯೋಜನೆಗಳನ್ನು ಮತ್ತೆ ಮತ್ತೆ ಪರಿಶೀಲಿಸುತ್ತ ಇರುವುದು. ಹೂಡಿಕೆ ಯೋಜನೆಯಲ್ಲಿ, ಮೊತ್ತದಲ್ಲಿ ಅಥವಾ ಇನ್ಯಾವುದೇ ರೀತಿಯಲ್ಲಿ ಲೋಪ ಆಗಿದೆ ಎಂದು ನಿಮಗೆ ಗೊತ್ತಾದರೆ ಅದನ್ನು ತಕ್ಷಣ ಸರಿಪಡಿಸಿಕೊಳ್ಳಬೇಕು. ನಾವು ಹಣಕಾಸಿನ ವಿಚಾರದಲ್ಲಿ ತಪ್ಪು ಮಾಡಿದ್ದೇವೆ ಎಂದು ಒಪ್ಪಿಕೊಳ್ಳುವುದೇ ಬಹಳ ದೊಡ್ಡ ಹೆಜ್ಜೆ.

ಹಣಕಾಸಿನ ಗುರಿ ನಿಗದಿಯಲ್ಲಿ ಗಮನಿಸಿ

*ನಿಮ್ಮ ವಯಸ್ಸು

*ಹಣಕಾಸಿನ ವಿಚಾರದಲ್ಲಿ ರಿಸ್ಕ್‌ ತೆಗೆದುಕೊಳ್ಳುವ ಸಾಮರ್ಥ್ಯ

*ಹಣದ ಒಳಹರಿವು ಮತ್ತು ಹೊರಹರಿವಿನ ಅರಿವು

ಹಣಕಾಸಿನ ಗುರಿ ನಿಗದಿ ಮಾಡಿಕೊಳ್ಳುವುದರಿಂದ...

*ನಿಮ್ಮ ಹಣಕಾಸಿನ ವಹಿವಾಟಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ.

*ಕಷ್ಟಕಾಲದಲ್ಲಿ ಕೂಡ ಈಸಿ ಜಯಿಸಲು ಸಾಧ್ಯವಾಗುತ್ತದೆ.

*ನಿಮ್ಮಲ್ಲೊಂದು ಸ್ಫೂರ್ತಿಯ ಚಿಲುಮೆ ಇದ್ದೇ ಇರುತ್ತದೆ, ಹೂಡಿಕೆ ಮಾಡಿದ ಹಣದ ಮೇಲೆ ಅತಿಹೆಚ್ಚಿನ ಲಾಭ ಪಡೆಯುವ ನಿಟ್ಟಿನಲ್ಲಿ ನೀವು ಕೆಲಸ ಮಾಡುತ್ತೀರಿ.

*ಸಾಗಬೇಕಾದ ಹಾದಿಯ ಬಗ್ಗೆ ಸ್ಪಷ್ಟತೆ ಸಿಗುತ್ತದೆ.

*ನಿಮ್ಮ ತೀರ್ಮಾನಗಳು ಹೆಚ್ಚೆಚ್ಚು ಪರಿಪೂರ್ಣ ಆಗುತ್ತವೆ.

*ಹಣಕಾಸಿನ ವಿಚಾರದಲ್ಲಿ ನೀವು ಆಶಾವಾದಿ ಆಗುತ್ತೀರಿ, ಇನ್ನಷ್ಟು ಉತ್ಸಾಹ ನಿಮ್ಮಲ್ಲಿ ಮೂಡುತ್ತದೆ, ಏನಾದರೂ ಸಾಧನೆ ಮಾಡಬೇಕು ಎಂಬ ಹುಮ್ಮಸ್ಸು ಬರುತ್ತದೆ.

(ಆಕರ್ಷಣೆಯಾಗುತ್ತಿರುವ ಸಾಲದಹಿತ, ಅಹಿತದ ಕಥೆ– ಈ ಕುರಿತು ಮುಂದಿನ ಕಾಸ್‌ಮಾತು ಲೇಖನ ಸರಣಿಯಲ್ಲಿನಿರೀಕ್ಷಿಸಿ.ಓದ್ತಿರಿ: http://www.prajavani.net/personal-finance)

ಆರ್ಥಿಕ ಸುರಕ್ಷೆಗೆ ಸೂತ್ರಗಳು

1) ನಿಮ್ಮ ಹಣಕಾಸಿನ ಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸಿ

2) ನಿಮ್ಮ ಹಣಕಾಸಿನ ಗುರಿಗಳು ಏನು ಎಂಬುದನ್ನು ನಿಗದಿ ಮಾಡಿಕೊಳ್ಳಿ

3) ಆ ಗುರಿ ಸಾಧಿಸಲು ಕ್ರಿಯಾಯೋಜನೆಯೊಂದನ್ನು ರೂಪಿಸಿ

4) ಕ್ರಿಯಾಯೋಜನೆ ಜಾರಿಗೆ ತನ್ನಿ

5) ಗುರಿ ಸಾಧನೆಯ ಕಡೆ ನೀವು ಸಾಗುತ್ತಿದ್ದೀರಾ ಎಂಬುದನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರಿ.

ಸಂಗ್ರಹಾನುವಾದ: ವಿಜಯ್‌ ಜೋಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT