ಮಂಗಳವಾರ, ಆಗಸ್ಟ್ 16, 2022
28 °C

ವೇತನ ಕಡಿತ ತೋರಿದ ಲಕ್ಷ್ಮಣರೇಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿನಯ್ ಮತ್ತು ಲಲಿತಾ (ಇಬ್ಬರ ಹೆಸರನ್ನೂ ಬದಲಾಯಿಸಲಾಗಿದೆ) ಕುಟುಂಬದ ಮಾಸಿಕ ಆದಾಯ ₹ 60 ಸಾವಿರ. ಇವರಿಬ್ಬರಲ್ಲಿ ಹಣ ಸಂಪಾದನೆ ಮಾಡುವವರು ವಿನಯ್ ಮಾತ್ರ. ಲಾಕ್‌ಡೌನ್‌ ಜಾರಿಗೆ ಬಂದ ನಂತರ, ವಿನಯ್ ಅವರ ವೇತನದಲ್ಲಿ ಶೇಕಡ 10ರಷ್ಟು (₹ 6,000) ಕಡಿತ ಆಯಿತು.

ವೈಯಕ್ತಿಕ ಹಣಕಾಸು ವಿಚಾರಗಳಲ್ಲಿ ಶಿಸ್ತನ್ನು ಪಾಲಿಸಿಕೊಂಡು ಬಂದಿದ್ದ ವಿನಯ್ ಅವರಿಗೆ ತಿಂಗಳ ಸಂಬಳದಲ್ಲಿ ಕ್ರೆಡಿಟ್ ಕಾರ್ಡ್ ಇಎಂಐ ಪಾವತಿಗೆ ₹ 5,000 ಹಾಗೂ ವೈಯಕ್ತಿಕ ಸಾಲವೊಂದರ ಮರುಪಾವತಿಗೆ ₹ 7,000 (ಒಟ್ಟು ₹ 12,000) ಬೇಕಾಗುತ್ತಿತ್ತು. ಅಂದರೆ ಅವರ ತಿಂಗಳ ವೇತನದಲ್ಲಿ ಶೇಕಡ 20ರಷ್ಟು ಹಣ ಸಾಲ ಮರುಪಾವತಿ ಕಂತುಗಳಿಗಾಗಿ ಮೀಸಲಿಡಬೇಕಾಗಿತ್ತು.

‘ವೇತನ ಕಡಿತ ಜಾರಿಗೆ ಬಂದ ತಕ್ಷಣ, ನನ್ನ ಮಾಸಿಕ ವೇತನದಲ್ಲಿ ಆರು ಸಾವಿರ ರೂಪಾಯಿ ಕಡಿಮೆ ಆಯಿತು. ಪ್ರತಿ ತಿಂಗಳು ಅರವತ್ತು ಸಾವಿರ ರೂಪಾಯಿ ಬದಲಿಗೆ, ಐವತ್ತನಾಲ್ಕು ಸಾವಿರ ರೂಪಾಯಿ ಮಾತ್ರ ಕೈಗೆ ಸಿಗುವಂತಾಯಿತು. ಮನೆ ಬಾಡಿಗೆ ಹಾಗೂ ಕುಟುಂಬದ ಇತರ ಖರ್ಚುಗಳನ್ನು ತಕ್ಷಣಕ್ಕೆ ಕಡಿಮೆ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಹಾಗಾಗಿ, ಸಾಲದ ಕಂತುಗಳನ್ನು ಸರಿಯಾದ ಸಮಯದಲ್ಲಿ ಮರುಪಾವತಿಸಲು ನಾನು ಬಹಳ ಕಷ್ಟಪಡಬೇಕಾಯಿತು’ ಎಂದು ಹೇಳುತ್ತಾರೆ ವಿನಯ್.

ಇಂತಹ ಸ್ಥಿತಿಯನ್ನು ವೇತನ ಅಥವಾ ಆದಾಯ ಕಡಿತ ಅನುಭವಿಸಿದ ಹಲವರು ಎದುರಿಸಿದ್ದಾರೆ. ಉದ್ಯೋಗ ಕಳೆದುಕೊಂಡವರ ಸ್ಥಿತಿ ಬೇರೆಯದೇ ಆಗಿದೆ. ಆದರೆ, ವಿನಯ್ ಅವರಂಥವರು ಸಾಲ ಹಾಗೂ ಸಾಲದ ಕಂತುಗಳ ಮೊತ್ತದ ವಿಚಾರದಲ್ಲಿ ಮಿತಿಯನ್ನು ಮೀರಿರದಿದ್ದ ಕಾರಣ ಪರಿಸ್ಥಿತಿಯನ್ನು ನಿಭಾಯಿಸಲು ಒಂದಿಷ್ಟು ಮಟ್ಟಿಗೆ ಸಾಧ್ಯವಾಯಿತು.

‘ಸಾಲದ ಕಂತು ಪಾವತಿಸುವುದು ಆರಂಭದಲ್ಲಿ ಕಷ್ಟವೇ ಆಗಿತ್ತು. ಸರಿಯಾದ ಸಮಯಕ್ಕೆ ಕಂತು ಪಾವತಿಸಬೇಕು ಎಂದಾದರೆ, ನಾನು ನನ್ನ ಉಳಿತಾಯ, ಹೂಡಿಕೆಯ ಮೊತ್ತವನ್ನು ಕಡಿಮೆ ಮಾಡಿ, ಅದನ್ನು ಸಾಲ ತೀರಿಸಲು ಬಳಸಬೇಕಿತ್ತು. ಹಾಗೆ ಮಾಡಲು ಮನಸ್ಸಿರಲಿಲ್ಲ. ಆಪತ್ತಿನ ಕಾಲಕ್ಕಿರಲಿ ಎಂದು ತೆಗೆದಿರಿಸಿದ್ದ ಹಣವನ್ನು ಬಳಸಿ ಸಾಲದ ಹೊರೆ ತಗ್ಗಿಸಿಕೊಂಡೆ. ಹೂಡಿಕೆ, ಉಳಿತಾಯಕ್ಕೆ ಧಕ್ಕೆಯಾಗದಂತೆ ನೋಡಿಕೊಂಡೆ’ ಎಂದು ಅವರು ಹೇಳುತ್ತಾರೆ.

ವ್ಯಕ್ತಿಯೊಬ್ಬ ಮಾಡಿದ ಅಷ್ಟೂ ಬಗೆಯ ಸಾಲಗಳ ಮರುಪಾವತಿಗೆ ಪ್ರತಿ ತಿಂಗಳು ಬೇಕಿರುವ ಮೊತ್ತವು, ಆ ವ್ಯಕ್ತಿಯ ತಿಂಗಳ ಸಂಬಳದ ಶೇಕಡ 30ರಷ್ಟನ್ನು ಯಾವ ಕಾರಣಕ್ಕೂ ಮೀರಬಾರದು ಎಂದು ವೈಯಕ್ತಿಕ ಹಣಕಾಸು ಸಲಹೆಗಾರರು ಹೇಳುತ್ತಾರೆ. ಆ ಮಿತಿಯನ್ನು ಮೀರಿದ ವ್ಯಕ್ತಿಗೆ, ಆಪತ್ತಿನ ಕಾಲಕ್ಕೆ ಹಣ ಮೀಸಲಿಟ್ಟುಕೊಳ್ಳುವುದು ಸೇರಿದಂತೆ ಇತರ ಯಾವ ಉದ್ದೇಶಕ್ಕೂ ಸೂಕ್ತ ಮೊತ್ತವನ್ನು ತೆಗೆದಿರಿಸುವುದು ಸಾಧ್ಯವಾಗುವುದಿಲ್ಲ ಎಂಬ ಮಾತಿದೆ.

‘ಕೋವಿಡ್–19 ಇರಲಿ, ಇಲ್ಲದಿರಲಿ; ಆರ್ಥಿಕ ಹಿಂಜರಿತ ಇರಲಿ, ಇಲ್ಲದಿರಲಿ ಸಾಲಕ್ಕೆ ಮಿತಿ ಎಲ್ಲ ಸಂದರ್ಭಗಳಲ್ಲೂ ಇರಲೇಬೇಕು. ಇಎಂಐ ಪಾವತಿಗೆ ವೇತನದ ಶೇಕಡ 30ಕ್ಕಿಂತ ಹೆಚ್ಚು ಹಣ ವಿನಿಯೋಗಿಸುವ ವ್ಯಕ್ತಿಯಿಂದ ಒಳ್ಳೆಯ ಪ್ರಮಾಣದಲ್ಲಿ ಹೂಡಿಕೆ ಮಾಡಲು ಆಗುತ್ತದೆ ಎನ್ನಲಾಗದು. ಸಾಲ ಹೆಚ್ಚಾದಾಗ ವ್ಯಕ್ತಿಯಿಂದ ಆರ್ಥಿಕ ಅನಿಶ್ಚಿತತೆಗಳನ್ನು ನಿಭಾಯಿಸಲು ಆಗದು. ಯಾವ ಕಾರಣಕ್ಕೂ ಶೇಕಡ 30ರ ಲಕ್ಷಣರೇಖೆಯನ್ನು ದಾಟದಿರಿ’ ಎಂದು ಕಿವಿಮಾತು ಹೇಳುತ್ತಾರೆ ಇಂಡಿಯನ್‌ಮನಿ.ಕಾಂ ಸಂಸ್ಥೆಯ ಉಪಾಧ್ಯಕ್ಷ ಎಂ.ಎಸ್. ಶರತ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು