ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ವಿಚಾರ: ಉಳಿತಾಯ, ತೆರಿಗೆ ಕುರಿತ ಪ್ರಶ್ನೋತ್ತರ

Last Updated 10 ನವೆಂಬರ್ 2020, 23:54 IST
ಅಕ್ಷರ ಗಾತ್ರ

*ಪ್ರಶ್ನೆ: ನಾನು ಸದ್ಯದಲ್ಲೇ ನಿವೃತ್ತಿ ಹೊಂದಲಿದ್ದೇನೆ. ನನ್ನ ಸರಾಸರಿ ವೇತನ ತಿಂಗಳಿಗೆ ₹ 62,069 ಇದೆ. ನನ್ನ ಮಗ ಬಿ.ಇ. ಮುಗಿದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ. ಸಂಬಳ ₹ 20 ಸಾವಿರ. ಮಗಳು ಪ್ರಥಮ ಬಿ.ಕಾಂ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ನಿವೃತ್ತಿಯಿಂದ ನನಗೆ ಬರಬಹುದಾದ ಹಣ, ಎಷ್ಟು ಪಿಂಚಣಿ ಮತ್ತು ಇತರೆ ಲಾಭಗಳ ವಿಚಾರ ತಿಳಿಸಿ. ನಾನು 6–2–1991ರಲ್ಲಿ ಸರ್ಕಾರಿ ಸೇವೆಗೆ ಸೇರಿದ್ದಾಗಿದೆ. ಬರುವ ಹಣ ಎಲ್ಲಿ ಹೂಡಲಿ?

–ಹೆಸರು: ಎಂ.ಕುಮಾರ್‌, ಬೆಂಗಳೂರು

ಉತ್ತರ: ನೀವು 29 ವರ್ಷ ಸೇವೆ ಸಲ್ಲಿಸಿದಂತಿದೆ. ಸಮೀಪದಲ್ಲಿ ಸಂಪೂರ್ಣ ಪಿಂಚಣಿ ಪಡೆಯುವಿರಿ. ನಿಮಗೆ ಅಂದಾಜು ₹ 29 ಸಾವಿರ ಪಿಂಚಣಿ ತಿಂಗಳಿಗೆ ಬರಬಹುದು. ಪಿಂಚಣಿಯಲ್ಲಿ 1/3 ಕಮ್ಯುಟೇಷನ್‌ ಮಾಡಬಹುದು. ರಜಾ ಸಂಬಳ, ಕಮ್ಯುಟೇಷನ್‌, ಗ್ರಾಚುಟಿ ಸೇರಿ ಕನಿಷ್ಠ ₹ 30 ಲಕ್ಷ ನಿವೃತ್ತಿಯಿಂದ ಬರುತ್ತದೆ. ಹೀಗೆ ಬಂದ ಹಣದಲ್ಲಿ ₹ 10 ಲಕ್ಷ ಮಗಳ ಮದುವೆಗೆ ಮೀಸಲಾಗಿಡಿ. ಉಳಿದ ₹ 20 ಲಕ್ಷದಲ್ಲಿ ₹ 15 ಲಕ್ಷ ಅಂಚೆ ಕಚೇರಿ ಹಿರಿಯ ನಾಗರಿಕ ಠೇವಣಿಯಲ್ಲಿ ಇಡಿ. ಇನ್ನುಳಿದ ₹ 5 ಲಕ್ಷ ಪಿಂಚಣಿ ಪಡೆಯುವ ಬ್ಯಾಂಕ್‌ನಲ್ಲಿ ಅವಧಿ ಠೇವಣಿಯಲ್ಲಿ ಇರಿಸಿರಿ. ಹೆಚ್ಚಿನ ಬಡ್ಡಿ, ಉಡುಗೊರೆ, ಹಣ ದ್ವಿಗುಣ ಇವುಗಳ ಗೋಜಿನಿಂದ ಹೊರಗುಳಿಯಿರಿ. ನಿಮ್ಮ ನಿವೃತ್ತ ಜೀವನ ಸೊಗಸಾಗಿರುತ್ತದೆ.

*ಪ್ರಶ್ನೆ: ನಿವೃತ್ತಿಯಿಂದ ₹ 68 ಲಕ್ಷ ಬಂದಿದೆ. ಕಮ್ಯುಟೇಷನ್‌ ಹೋಗಿ ತಿಂಗಳಿಗೆ ₹ 39,000 ಪಿಂಚಣಿ ಬರುತ್ತಿದೆ. ನನಗೆ ಬಂದಿರುವ ಹಣದಲ್ಲಿ ₹ 15 ಲಕ್ಷ ಅಂಚೆ ಕಚೇರಿ ಹಿರಿಯ ನಾಗರಿಕ ಠೇವಣಿ ಹಾಗೂ ₹ 15 ಲಕ್ಷ ಕೆನರಾ ಬ್ಯಾಂಕ್‌ನಲ್ಲಿ ಇರಿಸಿದ್ದೇನೆ. ಉಳಿದ ಹಣ ನನ್ನ ಪತ್ನಿಯ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ತಿಂಗಳ ಆದಾಯ ಯೋಜನೆಯಲ್ಲಿ ₹ 4.50 ಲಕ್ಷ, ಕೆನರಾ ಬ್ಯಾಂಕ್‌ನಲ್ಲಿ ₹ 15 ಲಕ್ಷ ಇರಿಸಿದ್ದೇನೆ. ಈಗ ನನ್ನ ಉಳಿತಾಯ ಖಾತೆಯಲ್ಲಿ ₹ 15 ಲಕ್ಷವಿದೆ. ನನಗೆ ಒಬ್ಬಳೇ ಮಗಳು (12 ವರ್ಷ). ತೆರಿಗೆ ವಿಚಾರ, ಮಗಳ ಭವಿಷ್ಯ ಹಾಗೂ ನಿವೃತ್ತಿ ಜೀವನದ ನಿರ್ವಹಣೆಯ ವಿಚಾರದಲ್ಲಿ ಸಲಹೆ ನೀಡಿ.

–ಹೆಸರು, ಊರು ಬೇಡ

ಉತ್ತರ: ನಿಮ್ಮ ಇದುವರೆಗಿನ ಎಲ್ಲಾ ಹೂಡಿಕೆಗಳು ತುಂಬಾ ಭದ್ರವಾಗಿದ್ದು, ಅವುಗಳನ್ನು ಮುಂದುವರಿಸಿ. ಊಹಾಪೋಹಗಳಿಗೆ ಒಳಗಾಗುವ ಹೂಡಿಕೆ ಮಾಡದಿರುವುದಕ್ಕೆ ನಿಮ್ಮನ್ನು ಅಭಿನಂದಿಸುತ್ತೇನೆ. ನಿಮಗೆ ಪಿಂಚಣಿ ಚೆನ್ನಾಗಿ ಬರುತ್ತಿದ್ದು, ಕುಟುಂಬದಲ್ಲಿ ಬರೇ ಮೂವರು ಇರುವುದರಿಂದ ಆರ್ಥಿಕ ನಿರ್ವಹಣೆ ಬಹಳ ಸುಲಭ. ನಿಮಗೆ ಒಬ್ಬಳೇ ಮಗಳಾಗಿದ್ದರಿಂದ ಎಲ್ಲಾ ಠೇವಣಿಗಳನ್ನು ಅವಳ ಹೆಸರಿನಲ್ಲಿ ನಾಮ ನಿರ್ದೇಶನ ಮಾಡಿರಿ. ಉಳಿತಾಯ ಖಾತೆಯಲ್ಲಿ ₹15 ಲಕ್ಷ ಇರುವುದನ್ನು ಮಗಳ ಹೆಸರಿನಲ್ಲಿ 10 ವರ್ಷಗಳ ಒಮ್ಮೆಲೇ ಬಡ್ಡಿ ಬರುವ ಕೆನರಾ ಬ್ಯಾಂಕ್‌ನ ಕಾಮಧೇನು ಠೇವಣಿ ಮಾಡಿ. ಬಂಧು ಮಿತ್ರರಿಗೆ ನಿಮ್ಮ ಹೂಡಿಕೆ ವಿಚಾರದಲ್ಲಿ ಏನೂ ತಿಳಿಸದಿರಿ. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ನನಗೆ ಕರೆ ಮಾಡಿ.

*ಪ್ರಶ್ನೆ: ನನ್ನ ಬಳಿ 5 ಎಕರೆ ಹೊಲವಿದ್ದು, ಮಾರಾಟ ಮಾಡಿದಲ್ಲಿ ಅಂದಾಜು ₹ 2 ಕೋಟಿ ಬರುತ್ತದೆ. ಖರೀದಿದಾರರು ₹ 20 ಲಕ್ಷವನ್ನು ಚೆಕ್‌ ಮೂಲಕ ಹಾಗೂ ಇನ್ನುಳಿದ ಹಣವನ್ನು ನಗದಾಗಿ ಕೊಡುವುದಾಗಿ ಹೇಳುತ್ತಾರೆ. ಹೀಗಾದಲ್ಲಿ ₹ 1.80 ಕೋಟಿ ಯಾವ ರೀತಿ ವಿನಿಯೋಗಿಸಲಿ. ನನಗೆ ನಿವೇಶನ, ಮನೆ, ಸ್ಥಿರ ಆಸ್ತಿ ಮಾಡುವ ಆಸೆ ಇಲ್ಲ. ಮಾರ್ಗದರ್ಶನ ಮಾಡಿ.

–ಹೆಸರು ಬೇಡ, ಕೂಡ್ಲಗಿ

ಉತ್ತರ: ನೀವು ಮಾರಾಟ ಮಾಡುವ ಹೊಲ, ಕೃಷಿ ಜಮೀನಾಗಿದ್ದು, ಪಟ್ಟಣ ಪ್ರದೇಶದಿಂದ 8 ಕಿ.ಮೀ ದೂರದಲ್ಲಿದ್ದು ನಿಮಗೆ ಸೆಕ್ಷನ್‌ 48ರ ಆಧಾರದ ಮೇಲೆ ಬಂಡವಾಳ ವೃದ್ಧಿ ತೆರಿಗೆ ಬರುವುದಿಲ್ಲ. ನೀವು ಜಮೀನು ಮಾರಾಟ ಮಾಡುವಾಗ ಕ್ರಯ ಪತ್ರದಲ್ಲಿ ನಮೂದಿಸಿದ ಹಣವನ್ನು ಚೆಕ್‌–ಡಿ.ಡಿ ಮುಖಾಂತರವೇ ಪಡೆಯಿರಿ. ಕ್ರಯ ಪತ್ರದಲ್ಲಿ ಮಾರಾಟದ ಬೆಲೆ ಕಡಿಮೆ ತೋರಿಸಿ, ನಂತರ ಹೆಚ್ಚಿನ ಹಣ ನಗದು ರೂಪದಲ್ಲಿ ಪಡೆಯುವುದು ಅಪರಾಧವಾಗುತ್ತದೆ. ಜತೆಗೆ ಈ ಹಣ ಕಪ್ಪು ಹಣ ಎಂದು ಪರಿಗಣಿತವಾಗುತ್ತದೆ. ಹಾಗೆ ಮಾಡಿದರೆ ನೀವು ಮುಂದೆ ತೊಂದರೆಗೀಡಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT