ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ನಾನು ಇದ್ದರೂ ಕೋಟಿ ರೂಪಾಯಿ; ಸತ್ತರೂ ಕೋಟಿ ರೂಪಾಯಿ

Last Updated 8 ನವೆಂಬರ್ 2020, 6:35 IST
ಅಕ್ಷರ ಗಾತ್ರ
ADVERTISEMENT
""

‘ಹಚ್ಚಗಿದ್ದಲ್ಲಿ ತಿಂದು ಬೆಚ್ಚಗಿದ್ದಲ್ಲಿ ಮಲಗಿದರೆ ಆಯ್ತು’ ಎನ್ನುವ ಅನುಭಾವ ನುಡಿಯ ಕಾಲ ಇದಲ್ಲ. ಇದು ನಮ್ಮ ವರ್ತಮಾನ–ಭವಿಷ್ಯದ ಬಾಳ್ವೆಗೆ ಭಾಷ್ಯ ಬರೆಯುವ ಹೊತ್ತು. ದುಡಿಮೆ, ಉಳಿತಾಯ, ಖರ್ಚಿನ ನಡುವೆ ನಾಳೆ ಬರಬಹುದಾದ ಕಂಟಕದ ಅಪತ್ತಿಗೂ ನಾವೇ ನಿಧಿ ಸ್ಥಾಪಿಸಿಕೊಳ್ಳುವ ದುರಿತ ಕಾಲ.

ಘಟನೆ ಒಂದು

ಆ ಜೋಡಿಯ ದಾಂಪತ್ಯಕ್ಕೆ ಡಿಸೆಂಬರ್‌ 25 ಬಂದಿದ್ದರೆ ಎಂಟು ವರ್ಷ ತುಂಬುತ್ತಿತ್ತು. ಪರಸ್ಪರರ ನಡುವೆ ಹೊಂದಾಣಿಕೆ ಗೌರವ ಇಟ್ಟುಕೊಂಡಿದ್ದ ಸುಂದರ ಸಂಸಾರ ಅದು. ‘ಆಕೆ’ ಮದುವೆ ಆಗಿ ನಾಲ್ಕು ವರ್ಷ ಖಾಸಗಿ ಕಾಲೇಜಿನಲ್ಲಿ ಅಧ್ಯಾಪಕಿ ಆಗಿದ್ದಳು. ಆಕೆಯ ಪತಿ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ. ಮಕ್ಕಳಾಗಿಲ್ಲ ಎಂದು ತಜ್ಞರನ್ನು ಇಬ್ಬರೂ ಸಂದರ್ಶಿಸಿದರು. ಚಿಕಿತ್ಸೆ ಆರಂಭವಾಯಿತು, ಮಗಳು ಜನಿಸಿದಳು. ಆ ಸಂದರ್ಭದಲ್ಲಿ ‘ಆಕೆ’ ಉದ್ಯೋಗ ಬಿಟ್ಟಿದ್ದಳು. ಒಬ್ಬನ ಸಂಪಾದನೆಯಲ್ಲಿಯೇ ಗೃಹಸಾಲ, ಕಾರಿನ ಸಾಲದ ಇಎಂಐ ಸರಿದೂಗಿಸಿಕೊಂಡು ಹೋಗುತ್ತಿದ್ದರು. ವಿಷ ಗಳಿಗೆಗೆ ಕಾಯ್ದು ಕುಳಿತಿದ್ದ ಜವರಾಯ ಬೈಕ್‌ ಡಿಕ್ಕಿ ಹೊಡೆದಾಗ ‘ಆಕೆ’ಯ ಪತಿಯನ್ನು ಕರೆದೊಯ್ದುಬಿಟ್ಟ. ಪತಿಯ ಅಗಲಿಕೆಯ ವೇದನೆಯ ನಡುವೆ ‘ಆಕೆ’ ಸಂಸಾರ ತೂಗಿಸಬೇಕು. ಜೊತೆಗೆ ಸಾಲದ ಮನೆ– ಕಾರು. ಟಾಪ್‌ ಆಫ್‌ ಸಾಲ ತಂದು ಫ್ಲಾಟ್‌ ಇಂಟಿರಿಯರ್‌ಗೆ ಎಂಟು ಲಕ್ಷ ಖರ್ಚು ಮಾಡಿದ್ದರು. ಪತಿಯ ಅಗಲಿಕೆಯ ನಂತರ ಬ್ಯಾಂಕಿನ ಸಾಲದ ಹೊರೆಯನ್ನು ಇಳಿಸಿಕೊಳ್ಳಲು ತಮ್ಮ ಕನಸಿನ ಮನೆಯನ್ನೇ ಮಾರಾಟಕ್ಕೆ ಇಟ್ಟರು. ‌

ಘಟನೆ ಎರಡು

ಅರೆಮಲೆನಾಡು ಸೀಮೆಯ ರೈತಾಪಿ ಕುಟುಂಬದಿಂದ ಬಂದ ‘ಅವನು’ ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ. ತನ್ನ ಪ್ರೌಢ ಶಾಲೆಯ ದಿನಗಳಲ್ಲಿ ಇಷ್ಟಪಟ್ಟಿದ್ದ ಅವರ ಶಾಲೆಯ ಹೆಡ್‌ಮಾಸ್ತರ್‌ ಮಗಳನ್ನು ಮದುವೆಯಾಗಿದ್ದ. ಜಾತಿ ಅಂತರದ ಕಾರಣಕ್ಕೆ ಹುಡುಗಿ ಮನೆಯ ಕಡೆಯಿಂದ ಆರಂಭದಲ್ಲಿ ವಿರೋಧ ಇತ್ತು. ಆಮೇಲೆ ಎಲ್ಲ ಸರಿಯಾಗಿ ಖುಷಿಯಾಗಿಯೇ ಇದ್ದರು. ‘ಅವನ’ ಮಾವ ನಿವೃತ್ತಿಯಾದ ಬಳಿಕ ಸ್ವಲ್ಪ ದಿನ ತನ್ನ ಪತ್ನಿ ಜೊತೆ ಬಂದು ಅಳಿಯನ ಮನೆಯಲ್ಲೇ ಇದ್ದರು. ಮಗಳ ಬಾಣಂತನವನ್ನೂ ಮಾಡಿದ್ದರು. ‘ಅವನಿಗೆ’ ಇಬ್ಬರು ಮಕ್ಕಳು ಹಿರಿಯದಕ್ಕೆ ನಾಲ್ಕು, ಕಿರಿಯದಕ್ಕೆ ಎರಡು ವರ್ಷ. ಅವನಿಗಿನ್ನೂ 39 ತುಂಬಿರಲಿಲ್ಲ ಹೃದಯಘಾತಕ್ಕೆ ಬಲಿಯಾಗಿಬಿಟ್ಟ. ‘ಅವನ’ ಪತ್ನಿ ಗೃಹಿಣಿ, ಹೊರ ಹೋಗಿಯೇ ಗೊತ್ತಿಲ್ಲ. ಅಕ್ಷರಶಃ ಇಬ್ಬರ ಮಕ್ಕಳ ತಾಯಿ ಬೀದಿಗೆ ಬಿದ್ದಳು.

***

ಈ ಘಟನೆಗಳು ಸಾವಿನ ನಿರೀಕ್ಷೆ ನಿಶ್ಚಿತ. ಅನಿರೀಕ್ಷತವಾಗಿ ಅದನ್ನು ಬರಮಾಡಿಕೊಳ್ಳುತ್ತೇವೆ ಎಂದೇ ಹೇಳುತ್ತವೆ. ಜೊತೆಗೆ ಅಕಾಲಿಕ ಅಗಲಿಕೆಯಲ್ಲಿ ಇರಬೇಕಾದ ಆರ್ಥಿಕ ಎಚ್ಚರಿಕೆಯ ಪಾಠವನ್ನೂ ಬೋಧಿಸುತ್ತಿವೆ. ದುಡಿಯುವ ವ್ಯಕ್ತಿ ಸತ್ತನೆಂದು ಪ್ರಾಣವನ್ನೇ ಮುಡುಪಾಗಿಟ್ಟವರ ಬದುಕು ಪೈಸೆ ಪೈಸೆಗೂ ಪರದಾಡುವಂತೆ ಆಗಬಾರದು. ಅವರು ಹಣಕ್ಕಾಗಿ ಶೋಕದಲ್ಲಿ ಮುಳುಗದಂತೆ ಬದುಕಿದ್ದಾಗಲೇ ಎಚ್ಚರಿಕೆ ತೆಗೆದುಕೊಳ್ಳಬೇಕು.

ಸಾಂದರ್ಭಿಕ ಚಿತ್ರ

ಹೆಂಡತಿ ‘ರೀ ದೀಪಾವಳಿಗೆ ಬೋನಸ್‌ ಬಂದಿದೆ. ಮಗಳಿಗೆ ಒಂದು ಸೆಟ್‌ ಓಲೆ ತನ್ನಿ. ನಿಮ್ಮ ಮಗಳಿಗೆ ದೊಡ್ಡವಳಾದ ಮೇಲೂ ಉಪಯೋಗಕ್ಕೆ ಬರುತ್ತವೆ’ ಎಂದು ಹೇಳಿದರೆ, ‘ಯಾಕೆ ತಲೆ ಕೆಡಿಸಿಕೊಳ್ಳುತ್ತೀಯಾ? ಕೋಟಿ ಬೆಲೆ ಬಾಳುವ ಈ ಜೀವ ಇದೆ. ಮುಂದೆ ಯಾವತ್ತೋ ಬೇಕಾಗುತ್ತೆ ಎಂದು ಇವತ್ತೇ ಯಾಕೆ ಚಿಂತಿ ಮಾಡ್ತೀ?’ ಎಂದು ಹೇಳಿ ಬೇಡಿಕೆಯ ಬಾಯಿ ಮುಚ್ಚಿಸುವ ಪತಿ ರಾಯರೇ ಹೆಚ್ಚು. ನಿಜ, ಜೀವ ಇದ್ದರೆ ಕೋಟಿ ರೂಪಾಯಿ. ಒಂದು ಪಕ್ಷ ಅವಘಡಕ್ಕೆ ತುತ್ತಾಗಿ ಹೆಣವಾದರೆ? ಅದರ ವಿಲೇವಾರಿಗೇ ಸಾವಿರಾರು ರೂಪಾಯಿ ತೆತ್ತಬೇಕು. ಕೋಟಿ ಮೌಲ್ಯದ ಜೀವಕ್ಕೆ ಎಂತಹ ಪಾಡು. ಜೀವ ಇದ್ದಾಗ ಕೋಟಿ ರೂಪಾಯಿಯ ಹಮ್ಮು ತೋರಿಸಿ ಎದೆತಟ್ಟಿಕೊಳ್ಳವ ಸ್ಥೈರ್ಯ, ಆಕಸ್ಮಿಕವಾಗಿ ಹೆಣ ಬಿದ್ದಾಗ ಕೋಟಿ ರೂಪಾಯಿ ಸುರಿಯುವಂತೆ ಲೆಕ್ಕಾಚಾರದ ಯೋಜನೆ ರೂಪಿಸುವ ಜಾಣತನದಲ್ಲಿ ಅಡಗಿದೆ.

ಹುಟ್ಟಿದ ಮನುಷ್ಯ ಸಾಯಲೇ ಬೇಕು. ಎಲ್ಲರ ಬಾಳ ಪಯಣ ಸಾವನ್ನು ಎದರುಗೊಳ್ಳುವತ್ತ ಸಾಗುತ್ತದೇ ಎನ್ನುವುದೂ ಸತ್ಯ. ಯಾವ ಕ್ಷಣದಲ್ಲಿ ಯಾರು ಆ ಗುರಿಯನ್ನು ಮುಟ್ಟುತ್ತಾರೆ ಎನ್ನುವುದು ಮಾತ್ರ ನಿಗೂಢ. ಆದರೂ ಭರವಸೆ ನೂರಾರು ಕನಸಿನ ಬೀಜ ಬಿತ್ತಿ, ಸಾವಿರಾರು ಆಸೆಯ ಹುಟ್ಟಿಗೆ ಒಡಲು ಒಡ್ಡಿರುತ್ತದೆ. ಕೆಲವೊಮ್ಮೆ ಅನಿಶ್ಚಿತಬದುಕು ಎದೆಯನ್ನು ಡವಗುಟ್ಟಿಸುತ್ತಿರುತ್ತದೆ. ಈ ಎಚ್ಚರ ಜಾಗೃತ ಆದರೆ, ಖಂಡಿತ ಅಪಾಯಕ್ಕೊಂದು ಉಪಾಯವನ್ನು ಕಂಡುಕೊಳ್ಳಬಹುದು. ದುಡಿಯುವ ವ್ಯಕ್ತಿ ತನ್ನ ಮನೆಗೆ ಆಧಾರ ಸ್ಥಂಭ. ಯಾವುದೋ ದುರ್ಘಟನೆಯಲ್ಲಿ ಆತನೇ ಕುಸಿದರೆ, ಅವನ ಸಂಸಾರದ ಆಶ್ರಯವೇ ಉರುಳಿದಂತಾಗುತ್ತದೆ. ಆತ ಆಕಸ್ಮಿಕವಾಗಿ ಇಲ್ಲದೆ ಇದ್ದರೂ, ಆತನ ಆಶ್ರಯದಲ್ಲಿ ನೆಲೆಸಿದ ಜೀವಗಳನ್ನು ಭದ್ರವಾಗಿ ಕಾಪಾಡಲು ಒಂದೇ ಒಂದು ‘ಟರ್ಮ್‌ ಇನ್ಸೂರೆನ್ಸ್‌’ ಅಂದರೆ ‘ಅವಧಿ ವಿಮೆ’ ಇದ್ದರೆ ಸಾಕು.

ಅವಧಿ ವಿಮೆ ಅಂದರೆ ಏನು?

ದುಡಿಯುವ ವ್ಯಕ್ತಿ ಆಕಸ್ಮಿಕವಾಗಿ ಅಸುನೀಗಿದರೆ ಅವಲಂಬಿತರಿಗೆ ಹಣಕಾಸಿನ ತೊಂದರೆಯಾಗದಂತೆ ಕಾಪಾಡುವ ನಿಧಿ ‘ಟರ್ಮ್ ಇನ್ಸೂರೆನ್ಸ್‌’ ಅಥವಾ ‘ಅವಧಿ ವಿಮೆ’. ಅಂದರೆ ಲಾಭಕ್ಕಾಗಿಯೋ ಹೂಡಿಕೆಗಾಗಿಯೋ ಮಾಡುವ ಯೋಜನೆ ಇದಲ್ಲ. ಆರೋಗ್ಯ ವಿಮೆಯಂತೆಯೇ ಆಪತ್ತಿನ ನೆರವಿಗೆ ತೆಗೆದುಕೊಳ್ಳುವ ಮುಂಜಾಗ್ರತೆಯ ಯೋಜನೆ. ಈ ಇನ್ಸೂರೆನ್ಸ್‌ ಅವಧಿಯಲ್ಲಿ ದುಡಿಯುವ ವ್ಯಕ್ತಿ ಮಡಿದರೆ ತಾನು ತನ್ನ ಜೀವಕ್ಕೆ ಮೌಲ್ಯ ಕಟ್ಟಿ ಖರೀದಿ ಮಾಡಿದ ವಿಮೆಯ ಸಂಪೂರ್ಣ ಹಣ ಅವಲಂಬಿತರ ಕೈ ಸೇರುತ್ತದೆ. ದುಡಿಮೆ ಆರಂಭಿಸಿದ ವ್ಯಕ್ತಿ ತನ್ನ 99ನೇ ವರ್ಷದ ತನಕವೂ ಈ ಇನ್ಸೂರೆನ್ಸ್‌ ತೆಗೆದುಕೊಳ್ಳಬಹುದು. ಆತ ವಿಮೆ ಕೊಂಡುಕೊಂಡ ಸಂದರ್ಭದ ಮೊತ್ತವನ್ನು ಸಮಾನ ಕಂತಿನಲ್ಲಿ ನಿಗದಿತ ಅವಧಿಯ ತನಕವೂ ಕಟ್ಟಬೇಕಾಗುತ್ತದೆ. 50 ಲಕ್ಷದಿಂದ ಕೋಟಿಗಳ ತನಕ ಇನ್ಸೂರೆನ್ಸ್‌ ಕೊಂಡುಕೊಳ್ಳಬಹುದು. 25 ವರ್ಷದ ಒಬ್ಬ ತನ್ನ 60ನೇ ವರ್ಷದವರೆಗೆ ಒಂದು ಕೋಟಿಗೆ ಟರ್ಮ್‌ ಇನ್ಸೂರೆನ್ಸ್‌ ತೆಗೆದುಕೊಂಡರೆ ಪ್ರತಿ ವರ್ಷಅಂದಾಜು 15 – 16 ಸಾವಿರ ರೂಪಾಯಿ ಕಟ್ಟಬೇಕಾಗಬಹುದು. ಅಂದರೆ ತಿಂಗಳಿಗೆ ಏಳೆಂಟು ನೂರು ರೂಪಾಯಿಯನ್ನು ಆಪತ್ತಿಗಾಗಿ ಎತ್ತಿ ಇಟ್ಟಿದ್ದೇ ಆದರೆ, ‘ತಾನೇನಾದರೂ ಆಕಸ್ಮಿಕವಾಗಿ ಅವಧಿ ಪೂರ್ವದಲ್ಲಿ ಸತ್ತರೆ ತನ್ನ ಕುಟುಂಬ ಬೀದಿಗೆ ಬೀಳುವುದಿಲ್ಲ’ ಎನ್ನುವ ಸಮಾಧಾನದಿಂದ ಬದುಕುವ ಧೈರ್ಯವನ್ನು ಅದು ಕೊಡುತ್ತದೆ.

ಟರ್ಮ್‌ ಇನ್ಸೂರೆನ್ಸ್‌ ಹೊಂದಲು ಏನು ಮಾಡಬೇಕು?

ಬಹುತೇಕ ಸರ್ಕಾರಿ– ಖಾಸಗಿ ಬ್ಯಾಂಕ್‌ಗಳು ಸೇರಿದಂತೆ ಎಲ್ಲ ಇನ್ಸೂರೆನ್ಸ್‌ ಕಂಪನಿಗಳು ಟರ್ಮ್‌ ಇನ್ಸೂರೆನ್ಸ್‌ ಮಾರಾಟ ಮಾಡುತ್ತವೆ. ಶೇ 98ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕ್ಲೈಮ್‌ ಮಾಡಿರುವ ಕಂಪನಿಯ ಇತಿಹಾಸವನ್ನು ನೋಡಿ ನಮಗೆ ಸೂಕ್ತವಾಗುವ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹಣಕಾಸಿನ ದೃಷ್ಟಿಯಿಂದ ಯಾವುದು ಕಡಿಮೆ ಆಗುತ್ತದೆ ಎನ್ನುವುದನ್ನು ಗಮನಿಸಿ ಖರೀದಿ ಮಾಡಬೇಕು. ಏಜೆಂಟ್‌ ಮೂಲಕ ತೆಗೆದುಕೊಳ್ಳುವುದಕ್ಕಿಂತ ಆನ್‌ಲೈನ್‌ ಮೂಲಕ ತೆಗೆದುಕೊಂಡರೆ ಏಜೆಂಟ್‌ ಕಮಿಷನ್‌ ಕೂಡ ಉಳಿತಾಯ ಮಾಡಬಹುದು. ಮೊಬೈಲ್‌ನಲ್ಲಿ ಟರ್ಮ್ಸ್‌ ಇನ್ಸೂರೆನ್ಸ್‌ ಬಗ್ಗೆ ಸರ್ಚ್‌ ಮಾಡಿ ಹೆಸರು ನೋಂದಾಯಿಸಿಕೊಂಡರೆ ಕಂಪನಿಯ ಉದ್ಯೋಗಿಗಳೇ ನಮಗೆ ಕರೆ ಮಾಡಿ ಮಾಹಿತಿ ನೀಡಲು ಮುಂದಾಗುತ್ತಾರೆ. ನಮ್ಮಲ್ಲಿರುವ ಹತ್ತಾರು ಅನುಮಾನಗಳನ್ನು ಅವರು ಪರಿಹರಿಸುತ್ತಾರೆ. ಇದೆಲ್ಲ ಹಣಕಾಸಿನ ವಿಷಯ ಆಗಿದ್ದರಿಂದ ನಮಗೆ ಅನುಕೂಲವಾಗುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದು ಬಾರಿಯಲ್ಲ ಹತ್ತಾರುಬಾರಿ ಅವರ ಜೊತೆ ಚರ್ಚಿಸಿ ನಿರ್ಧಾರಕ್ಕೆ ಬರಬಹುದು. ಕನ್ನಡದಲ್ಲಿಯೇ ವ್ಯವಹರಿಸವ ಸಿಬ್ಬಂದಿ ಆ ಕಂಪನಿಯಲ್ಲಿ ಇರುತ್ತಾರೆ ಎನ್ನುವುದನ್ನು ಮರೆಯಬಾರದು.

ಅವಧಿ ವಿಮೆ ತೆಗೆದುಕೊಳ್ಳಲು ನಿಗದಿತ ಆದಾಯ ಹೊಂದಿರಬೇಕು. ಅದಕ್ಕೆ ಪೂರಕವಾದ ದಾಖಲೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಖರೀದಿಯ ಪೂರ್ವದಲ್ಲಿ ಪದವೀಧರನಾಗಿರಬೇಕು, ಆರೋಗ್ಯವಂತನಾಗಿರಬೇಕು. ಈ ವಿಮೆ ಖರೀದಿಯಿಂದ ಆದಾಯ ತೆರಿಗೆ ರಿಯಾಯ್ತಿ ಕೂಡ ಸಿಗುತ್ತದೆ. ಖರೀದಿ ಮಾಡಿದ ವ್ಯಕ್ತಿ ಯಾವುದೇ ರೂಪದಲ್ಲಿ ಸಾವಿಗೆ ತುತ್ತಾದರೂ ಅವರ ಅವಲಂಬಿತರಿಗೆ ಸಂಪೂರ್ಣ ಹಣ ಬರುತ್ತದೆ. ಶಾಶ್ವತ ಅಂಗವಿಕಲತೆ ಸಂಭವಿಸಿದರೂ ಪರಿಹಾರ ಸಿಗುತ್ತದೆ. ಈ ಬಗ್ಗೆ ಯೋಚಿಸಿ ಸೂಕ್ತ ನಿರ್ಧಾರಕ್ಕೆ ಬಂದರೆ ‘ನಾನೇದಾರೂ ಆಕಸ್ಮಿಕವಾಗಿ ಹೋದರೆ, ನನ್ನ ಮಕ್ಕಳ ಕಥೆ ಏನು?’ ಎಂಬ ಪ್ರಶ್ನೆ ಜೀವನದಲ್ಲಿ ಕಾಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT