ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಏನು ಮಾಡಬೇಕು?

Published 26 ಮಾರ್ಚ್ 2024, 20:38 IST
Last Updated 26 ಮಾರ್ಚ್ 2024, 20:38 IST
ಅಕ್ಷರ ಗಾತ್ರ

ಪ್ರಶ್ನೆ: ನಾನು ಈ ಹಿಂದೆ ಕೆಲವು ಬ್ಯಾಂಕ್ ಹಾಗೂ ಕ್ರೆಡಿಟ್ ಕಾರ್ಡ್ ಸಂಸ್ಥೆಗಳಿಂದ ವೈಯಕ್ತಿಕ ಸಾಲ ಪಡೆದಿದ್ದೆ. ಈ ಸಂದರ್ಭದಲ್ಲಿ ನನ್ನ ಉದ್ಯೋಗಕ್ಕೆ ತೊಂದರೆಯಾದ ಕಾರಣ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಸಾಧ್ಯವಾಗಲಿಲ್ಲ. ಈಗ ನನ್ನ ಕ್ರೆಡಿಟ್ ಸ್ಕೋರ್ 600ರ ಹತ್ತಿರದಲ್ಲಿದೆ. ಈ ಅಂಕ ಹೊಂದಿದರೆ ಮುಂದೆ ಸಾಲ ಸಿಗುವ ಸಾಧ್ಯತೆ ಇಲ್ಲ ಎಂಬುದಾಗಿ ನನ್ನ ಸ್ನೇಹಿತರಲ್ಲಿ ಕೇಳಿದಾಗ ಹೇಳುತ್ತಾರೆ. ಒಂದು ವೇಳೆ ಇದನ್ನು ವಿಶ್ವಾಸಾರ್ಹ ಮಟ್ಟಕ್ಕೆ ಏರಿಸಲು ಏನು ಮಾಡಬೇಕು. ಮುಂದೆ ನಾನು ಗೃಹ ಸಾಲ ಪಡೆಯಬೇಕಾಗಿದೆ. ಇದಕ್ಕೆ ತೊಂದರೆಯಾಗುತ್ತದೆಯೇ? 

-ನಾಗೇಂದ್ರ ಪ್ರಸಾದ್, ವೈಯಾಲಿಕಾವಲ್‌, ಬೆಂಗಳೂರು.

ಉತ್ತರ: ಕ್ರೆಡಿಟ್ ಸ್ಕೋರ್ ಯಾವುದೇ ವ್ಯಕ್ತಿಯ ಆರ್ಥಿಕ ವಹಿವಾಟಿನ ಒಟ್ಟಾರೆ ಗುಣಮಟ್ಟ ಹಾಗೂ ವಿಶ್ವಸನೀಯತೆಯ ಬಗೆಗಿನ ಹಿಂದಿನ ಕೆಲವು ವರ್ಷಗಳ ಮಾಹಿತಿ ನೀಡುತ್ತದೆ. ಇದು ಮುಂದೆ ಯಾವುದೇ ವ್ಯಕ್ತಿಯಿಂದ ಸಾಲದ ಕೋರಿಕೆ ಬಂದ ಸಂದರ್ಭದಲ್ಲಿ ಸಾಲ ನೀಡಬೇಕೆ, ಬೇಡವೇ ಅಥವಾ ಯಾವ ಷರತ್ತಿನ ಮೇಲೆ ಸಾಲ ನೀಡಬಹುದು ಹಾಗೂ ಬಡ್ಡಿದರ ಏನಿರಬೇಕು ಎಂಬಿತ್ಯಾದಿ ನಿಗದಿಪಡಿಸುವಲ್ಲಿ ಮತ್ತು ಪೂರ್ವ ಸೂಚನೆಯನ್ನು ಸಾಲ ನೀಡುವ ಸಂಸ್ಥೆಗೆ ಸಾಲ ಪಡೆಯುವವನ ಬಗ್ಗೆ ತಿಳಿಯುವಂತೆ ಮಾಡುತ್ತದೆ.

ಇದನ್ನು ಮುಖ್ಯವಾಗಿ ವೈಯಕ್ತಿಕ ಸಾಲ ನೀಡುವ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸುತ್ತಾರೆ. ಆದರೆ, ಮನೆ ಸಾಲ ಅಥವಾ ಕಟ್ಟಡ ನಿರ್ಮಾಣ ಸಾಲಗಳನ್ನು ಅಡಮಾನವಾಗಿ ಭೂಮಿ-ಕಟ್ಟಡ ಇತ್ಯಾದಿ ಸ್ಥಿರ ಆಸ್ತಿ ಪರಿಗಣಿಸಿ ವಿತರಿಸಲಾಗುತ್ತದೆ. ಹೀಗಿರುವಾಗ, ಅಂತಹ ಸಾಲಗಳನ್ನು ಕ್ರೆಡಿಟ್ ಸ್ಕೋರ್ ಶ್ರೇಯಾಂಕ ಆಧಾರದಲ್ಲಿ ಮಾತ್ರವಲ್ಲದೆ, ಪ್ರಸ್ತುತ ಮರುಪಾವತಿ ಸಾಮರ್ಥ್ಯ ಹಾಗೂ ಭದ್ರತೆಯ ದೃಷ್ಟಿಯನ್ನು ಹೆಚ್ಚಾಗಿ ಪರಿಗಣಿಸಿ ನೀಡಲಾಗುತ್ತದೆ.        

ಸುಮಾರು 750ಕ್ಕೂ ಮೀರಿ 900 ಅಂಕಗಳ ತನಕ, ಅದನ್ನು ಅತ್ಯುತ್ತಮ ಅಂಕವೆಂದೂ, 650ಕ್ಕಿಂತ ಕಡಿಮೆ ಅಂಕ ಪಡೆದಿದ್ದರೆ ತುಂಬಾ ಆರ್ಥಿಕ ಸಂಕಷ್ಟ ಹೊಂದಿದ್ದಾರೆಂದೂ ಪರಿಗಣಿಸಲಾಗುತ್ತದೆ. ನಿಮ್ಮ ವಿಚಾರದಲ್ಲಿ ಕ್ರೆಡಿಟ್ ಶ್ರೇಯಾಂಕ ಹೆಚ್ಚಿಸಲು ಕೆಲವು ಅಗತ್ಯ ಕ್ರಮ ಅನುಸರಿಸಬೇಕಿದೆ. ಅದೆಂದರೆ, ಸಮಯಕ್ಕೆ ಸರಿಯಾಗಿ ಯಾವುದೇ ಸಾಲದ ಮೊತ್ತ ಪಾವತಿ ಮಾಡುವುದು. ನಿಮ್ಮ ಕಾರ್ಡ್ ಮಿತಿಯನ್ನು ಸಂಪೂರ್ಣವಾಗಿ ಉಪಯೋಗಿಸದೆ ಸುಮಾರು ಶೇ 30ರಿಂದ ಶೇ 40ರಷ್ಟನ್ನು ಮಾತ್ರ ಉಪಯೋಗಿಸುವುದು ಸಮರ್ಪಕವಾದುದು.

ನೀವು ಕಾರ್ಡ್ ಮೇಲೆ ಹೊಂದಿರುವ ಸಾಲವನ್ನು ಪ್ರತಿ ತಿಂಗಳೂ ಸಂಪೂರ್ಣ ಪಾವತಿಸಿದರೆ ಅಂಕ ವೃದ್ಧಿಯಾಗುತ್ತದೆ. ಕೆಲವೊಮ್ಮೆ ಇರುವ ಬಾಕಿ ಮುಂದೂಡಲು ಇನ್ನಷ್ಟು ಕಂತುಗಳಲ್ಲಿ ಪಾವತಿಗೆ ಬಡ್ಡಿ ಸಹಿತ ಅವಕಾಶ ಇದೆ. ಆದರೆ, ಇದು ನಮ್ಮ ಮರುಪಾವತಿ ಸಾಮರ್ಥ್ಯ ಕಡಿಮೆ ಎಂಬುದನ್ನು ಸಾಬೀತುಪಡಿಸುತ್ತದೆ. ಹಾಗಾಗಿ, ಕಂತುಗಳಲ್ಲಿ ಪಾವತಿಸುವುದು ಸೂಕ್ತವಲ್ಲ. ವಿವಿಧ ವರ್ಗದ ಸಾಲ ಯೋಜನೆ ಉತ್ಪನ್ನಗಳನ್ನು ಪಡೆದಂತೆ ಅಲ್ಪ ಪ್ರಮಾಣದಲ್ಲಿ ಅಂಕ ವೃದ್ಧಿಯಾಗುತ್ತದೆ.  

ಪ್ರಶ್ನೆ: ನಾನು ಈ ವರ್ಷ ಅನೇಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದೇನೆ. ನನ್ನ ಹೂಡಿಕೆಯ ವಿಧಾನವೆಂದರೆ, ಮೊದಲ ಹಂತದಲ್ಲಿ ನಾನು ಸಾಮಾನ್ಯ ಆದಾಯ ನೀಡುವ ಲಿಕ್ವಿಡ್ ಕ್ಯಾಷ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತೇನೆ. ಯಾವುದಾದರೂ ಉತ್ತಮ ಹೂಡಿಕೆಗೆ ಮಾರುಕಟ್ಟೆ ಸಜ್ಜಾದಾಗ ಅಂದರೆ ಒಂದು ಹಂತಕ್ಕೆ ಮಾರುಕಟ್ಟೆ ಇಳಿದಾಗ ನಾನು ಈ ಮೊತ್ತವನ್ನು ಈಕ್ವಿಟಿ ಅಥವಾ ಬ್ಯಾಲೆನ್ಸ್ಡ್ ಫಂಡ್ ಇತ್ಯಾದಿಗಳಲ್ಲಿ ಹೆಚ್ಚಿನ ಲಾಭಕ್ಕಾಗಿ ಮರು ಹೂಡಿಕೆ ಮಾಡುತ್ತೇನೆ.

ನನ್ನ ಪ್ರಶ್ನೆ ಇರುವುದು ಏನೆಂದರೆ, ಇತ್ತೀಚೆಗೆ ಒಂದು ಹಂತಕ್ಕೂ ಮೀರಿದ ಹೂಡಿಕೆಗೆ, ಆದಾಯ ತೆರಿಗೆ ವಿಭಾಗಕ್ಕೆ ನಮ್ಮ ಆರ್ಥಿಕ ವಹಿವಾಟಿನ ಮಾಹಿತಿ ರವಾನೆಯಾಗುತ್ತದೆ ಎನ್ನುವುದು. ಈ ರೀತಿ ಯಾವ ಎಲ್ಲಾ ಮಾಹಿತಿ ಆದಾಯ ತೆರಿಗೆ ಇಲಾಖೆ ಹೊಂದಿರುತ್ತದೆ. ಈ ಮಾಹಿತಿ ರವಾನೆಯಾಗದೆ ಯಾವುದಾದರೂ ರೀತಿ ನಾವು ನಿರ್ವಹಿಸಲು ಸಾಧ್ಯವೇ?

–ರತ್ನಾಕರ್, ಮಂಗಳೂರು.

ಉತ್ತರ: ಕೆಲವು ನಿರ್ದಿಷ್ಟ ಆರ್ಥಿಕ ವ್ಯವಹಾರವಾದ ಸಂದರ್ಭದಲ್ಲಿ, ತೆರಿಗೆ ವಂಚನೆಯನ್ನು ತಪ್ಪಿಸುವ ಬಗ್ಗೆ ನಿಗಾ ಇಡಲು ಹಾಗೂ ಸರಿಯಾದ ಆರ್ಥಿಕ ವಹಿವಾಟಿನ ಮಾಹಿತಿ ತೆರಿಗೆದಾರರಿಂದ ಸಲ್ಲಿಕೆಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಆದಾಯ ತೆರಿಗೆ ಇಲಾಖೆಯು ಕೆಲವೆಲ್ಲಾ ಮಾಹಿತಿಯನ್ನು ಅನೇಕ ಸಂಸ್ಥೆಗಳಿಂದ ಪಡೆದುಕೊಳ್ಳುತ್ತದೆ. ಇಂತಹ ಮಾಹಿತಿಯನ್ನು ನಿಗದಿಪಡಿಸಿದ ಸಂಸ್ಥೆಗಳು ವರ್ಷಕ್ಕೊಮ್ಮೆ ಸಲ್ಲಿಸಬೇಕು.
 
ಆದಾಯ ತೆರಿಗೆಯ ಸೆಕ್ಷನ್ 285ಬಿಎ ಪ್ರಕಾರ ಕೆಲವು ನಿರ್ದಿಷ್ಟ ಸಂಸ್ಥೆಗಳು ಅಂದರೆ, ಬ್ಯಾಂಕ್‌ಗಳು, ಕೋ ಆಪರೇಟಿವ್ ಬ್ಯಾಂಕ್‌ಗಳು, ಅಂಚೆ ಕಚೇರಿಗಳು, ಕ್ರೆಡಿಟ್ ಕಾರ್ಡ್ ವಿತರಿಸುವ ಸಂಸ್ಥೆಗಳು, ಷೇರು, ಬಾಂಡ್, ಡಿಬೆಂಚರ್ ಇತ್ಯಾದಿ ಬಿಡುಗಡೆ ಮಾಡುವಾಗ ಹಣ ಸಂಗ್ರಹಿಸುವ ಕಂಪನಿಗಳು, ಮ್ಯೂಚುವಲ್ ಫಂಡ್ ಟ್ರಸ್ಟಿಗಳು, ಸಬ್ ರಿಜಿಸ್ಟ್ರಾರ್, ಮೋಟರ್ ವಾಹನ ನೋಂದಣಿ ಇಲಾಖೆ ಹೀಗೆ ಇನ್ನೂ ಅನೇಕ ಸಂಸ್ಥೆಗಳು ನಿಗದಿತ ಆರ್ಥಿಕ ವಹಿವಾಟು ಮೊತ್ತಕ್ಕಿಂತ ಅಧಿಕ ಮೊತ್ತದ ವ್ಯವಹಾರ ಆದಾಗ ಅಂತಹ ಮಾಹಿತಿಯನ್ನು ತೆರಿಗೆದಾರರ ಪ್ಯಾನ್‌ ಸಂಖ್ಯೆ ಸಹಿತ ಸಲ್ಲಿಕೆ ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ಹಾಗೂ ವಹಿವಾಟಿಗೆ ಸಂಬಂಧಿಸಿದ ಆರ್ಥಿಕ ಮಿತಿಯನ್ನು ಆದಾಯ ತೆರಿಗೆಯ ಅಂತರ್ಜಾಲ ತಾಣದಲ್ಲಿ ಮೇಲೆ ತಿಳಿಸಿರುವ ಸೆಕ್ಷನ್ ಹುಡುಕಿ ನೋಡಬಹುದು.  
   
ಇನ್ನು ನಿಮ್ಮ ಪ್ರಶ್ನೆ ಏನೆಂದರೆ, ಇಂತಹ ಮಾಹಿತಿಯನ್ನು ತೆರಿಗೆದಾರರು ಗೋಪ್ಯವಾಗಿ ಇಡಬಹುದೇ ಅಥವಾ ನಿಯಂತ್ರಿಸಬಹುದೇ ಎನ್ನುವುದು. ಮ್ಯೂಚುವಲ್ ಫಂಡ್‌ಗಳಲ್ಲಿ ವರ್ಷದಲ್ಲಿ ₹10 ಲಕ್ಷಕ್ಕಿಂತ ಅಧಿಕ ಹೂಡಿಕೆ ಮಾಡಿದಾಗ ಫಂಡ್ ಟ್ರಸ್ಟಿಗಳು ಈ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ನೀಡಬೇಕಾಗಿರುತ್ತದೆ.

ಅದೇ ರೀತಿ, ಮೇಲಿನ ಸಂಸ್ಥೆಗಳೆಲ್ಲ ಅವುಗಳದ್ದೇ ಆದ ಮಾಹಿತಿ ಸಲ್ಲಿಕೆ ವಿಧಾನಗಳನ್ನು ಹೊಂದಿವೆ. ಎಲ್ಲಾ ಮಾಹಿತಿಗಳು ವಿದ್ಯುನ್ಮಾನ ಮಾಧ್ಯಮದ ಮೂಲಕ ಕಾರ್ಯ ನಿರ್ವಹಿಸುತ್ತವೆ. ಒಂದು ವೇಳೆ ಅಂತಹ ಸಂಸ್ಥೆಗಳು, ಯಾವುದೇ ಉದ್ದೇಶ ಪೂರ್ವಕ ಮಾಹಿತಿ ಮರೆಮಾಚುವ ಪ್ರಯತ್ನ ನಡೆಸಿದರೂ ಅದಕ್ಕೆ ಅವರೂ ಬಾಧ್ಯಸ್ಥರು. ಹೀಗಾಗಿ ಮೊದಲು ಅಂತಹ ಸಂಸ್ಥೆಗಳು ಸಮರ್ಪಕ ಮಾಹಿತಿ ನೀಡದಿದ್ದರೂ ಕಾನೂನು ಕ್ರಮದ ವ್ಯಾಪ್ತಿಗೊಳಪಡುತ್ತವೆ. ಮಾತ್ರವಲ್ಲ, ಇವೆಲ್ಲ ವೈಯಕ್ತಿಕ ತೆರಿಗೆದಾರರ ನಿಯಂತ್ರಣದ ಹೊರತಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT