ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಪ್ರಶ್ನೋತ್ತರ: ಆದಾಯ ತೆರಿಗೆಯಲ್ಲಿ ನನಗೆ ವಿನಾಯಿತಿ ದೊರಕಬಹುದೇ?

Published 13 ಜೂನ್ 2023, 18:03 IST
Last Updated 13 ಜೂನ್ 2023, 18:03 IST
ಅಕ್ಷರ ಗಾತ್ರ

ಪ್ರಮೋದ ಶ್ರೀಕಾಂತ ದೈತೋಟ

ಹೆಸರು ಬೇಡ, ಬೆಂಗಳೂರು

ಪ್ರ

ನಾನು 77 ವರ್ಷ ವಯಸ್ಸಿನ ನಿವೃತ್ತ ಉದ್ಯೋಗಿ. 2002ರಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಬೆಂಗಳೂರಿನ ಯಲಹಂಕದಲ್ಲಿ ಮೂರು ಬೆಡ್ ರೂಂ ಮನೆ ಖರೀದಿಸಿದ್ದೆ. ನೋಂದಣಿ ಶುಲ್ಕ, ಕಾರು ಪಾರ್ಕಿಂಗ್ ಮೊತ್ತ ಇತ್ಯಾದಿ ಎಲ್ಲವೂ ಸೇರಿ ಅದರ ಅಂದಿನ ಬೆಲೆ ₹8.70 ಲಕ್ಷ. 2006ರಲ್ಲಿ ಇದಕ್ಕೆ ಬಣ್ಣ ಬಳಿದು, ಅಗತ್ಯವಿರುವ ಗ್ರಿಲ್, ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಅರ್ಧ ಗೋಡೆ ಕಟ್ಟಿ ಅದಕ್ಕೂ ಗ್ರಿಲ್ ಹಾಕಿಸಿದೆ. ಈ ಫ್ಲ್ಯಾಟ್ಅನ್ನು 2022ರ ಏಪ್ರಿಲ್‌ನಲ್ಲಿ ₹40 ಲಕ್ಷಕ್ಕೆ ಮಾರಾಟ ಮಾಡಿದೆ. ಇದಕ್ಕೆ ಬರುವ ಬಂಡವಾಳ ವೃದ್ಧಿ ತೆರಿಗೆ ಎಷ್ಟು? ಮಾರಾಟದಿಂದ ಬಂದ ಹಣವನ್ನು ಬೇರೆ ಆಸ್ತಿ ಖರೀದಿಯಲ್ಲಿ ತೊಡಗಿಸಿದರೆ ತೆರಿಗೆ ಕಟ್ಟಬೇಕಾಗಿಲ್ಲವೇ? ಬಂಡವಾಳ ವೃದ್ಧಿ ತೆರಿಗೆಯಿಂದ ಹೇಗೆ ವಿನಾಯಿತಿ ಪಡೆಯಬಹುದು?

ನೀವು ಮನೆ ನವೀಕರಿಸಿದ ಮಾಹಿತಿ ನೀಡಿದ್ದೀರಿ. ಯಾವುದೇ ಕಟ್ಟಡ ಅಥವಾ ಮನೆಯನ್ನು ಅದರ ಉಪಯೋಗ, ಸೌಕರ್ಯ, ಭದ್ರತೆ ಇತ್ಯಾದಿಗಳನ್ನು ಹೆಚ್ಚಿಸುವ ಸಲುವಾಗಿ ನವೀಕರಿಸಿದಾಗ ಅದು ಕಟ್ಟಡದ ಭಾಗವಾಗುತ್ತದೆ ಮತ್ತು ಮೂಲದಲ್ಲಿ ಪಾವತಿಸಿದ ಮೌಲ್ಯ ಸಹಜವಾಗಿ ಹೆಚ್ಚುವಂತೆ ಮಾಡುತ್ತದೆ. ಅಂತಹ ಬಂಡವಾಳ ವೆಚ್ಚವನ್ನು ಪ್ರತ್ಯೇಕವಾಗಿ, ಹಣದುಬ್ಬರ ಸೂಚ್ಯಂಕದ ಆಧಾರದಂತೆ ಆಯಾ ವರ್ಷದಿಂದ ಮಾರಾಟದ ವರ್ಷದವರೆಗೆ ಕಟ್ಟಡದ ಖರೀದಿ/ನಿರ್ಮಾಣ ಮೊತ್ತಕ್ಕೆ ಸೇರಿಸಲು ಅವಕಾಶವಿದೆ. ಆದರೆ ಕಟ್ಟಡದ ಮೌಲ್ಯವೃದ್ಧಿಗೆ ನೇರವಾಗಿ ನೆರವಾಗದ ಯಾವುದೇ ದುರಸ್ತಿ, ಕಾಮಗಾರಿ ಖರ್ಚನ್ನು ಇದರ ಭಾಗವಾಗಿ ಪರಿಗಣಿಸುವುದಕ್ಕೆ ಅವಕಾಶವಿಲ್ಲ. ನಿಮ್ಮ ವಿಚಾರದಲ್ಲಿ ಇಂತಹ ದುರಸ್ತಿ ವೆಚ್ಚ ಬಿಟ್ಟು ಉಳಿದ ಮೊತ್ತವನ್ನು ಪರಿಗಣಿಸಬಹುದು.

ನಿಮ್ಮ ಮನೆ ಮಾರಾಟವಾದ ವರ್ಷದ ಹಣದುಬ್ಬರ ಸೂಚ್ಯಂಕ (331) ಹಾಗೂ 2006ನೇ ಸಾಲಿನ ಸೂಚ್ಯಂಕ (122) ಬಳಸಿ ಕಟ್ಟಡದ ಪ್ರಸ್ತುತ ಮೌಲ್ಯ ನಿರ್ಧರಿಸಬೇಕು. ಇದರಂತೆ, ಕಟ್ಟಡದ ಪ್ರಸಕ್ತ ಬೆಲೆ ಸುಮಾರು ₹23.60 ಲಕ್ಷ. ನಿಮ್ಮ ಮಾರಾಟ ಮೌಲ್ಯ ಇದಕ್ಕಿಂತ ಎಷ್ಟು ಅಧಿಕ ಇದೆಯೋ ಅದು ನಿಮ್ಮ ಲಾಭಾಂಶ. ಬಂದ ಲಾಭಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 112ಎ ಅಡಿ ಶೇಕಡ 20.8ರಷ್ಟು ಸೆಸ್ ಸಹಿತ ತೆರಿಗೆ ಇರುತ್ತದೆ. ತೆರಿಗೆ ಪಾವತಿಗೆ ಪರ್ಯಾಯವಾಗಿ, ಕೆಲವು ಕಾಲ ಮಿತಿಯೊಳಗೆ ಮಾಡಿದ ಹೂಡಿಕೆಗಳಿಗಷ್ಟೇ ತೆರಿಗೆ ವಿನಾಯಿತಿಗೆ ಅವಕಾಶವಿದೆ.

ತೆರಿಗೆ ಉಳಿತಾಯ ಮಾಡಲು, ಮಾರಾಟ ಆದಾಗಿನಿಂದ ಎರಡು ವರ್ಷದೊಳಗೆ ಹೊಸ ಮನೆಯ ಖರೀದಿ, ಅಥವಾ ಮೂರು ವರ್ಷದೊಳಗೆ ಮನೆಯ ನಿರ್ಮಾಣಕ್ಕೆ ಅವಕಾಶವಿದೆ. ಇದನ್ನು ನಿಮ್ಮ ತೆರಿಗೆ ವಿವರ ಸಲ್ಲಿಸುವ ಮೊದಲು ಹೂಡಿಕೆ ಮಾಡಿ. ಖರೀದಿ ಇನ್ನೂ ನಿರ್ಧಾರವಾಗದಿದ್ದರೆ, ಈ ಅವಧಿಯಲ್ಲಿ ಬಂದ ಮೊತ್ತವನ್ನು ‘ಕ್ಯಾಪಿಟಲ್ ಗೇನ್ಸ್ ಅಕೌಂಟ್ ಸ್ಕೀಂ’ (ಬಂಡವಾಳ ವೃದ್ಧಿ ಖಾತೆ ಯೋಜನೆ) ಖಾತೆಯನ್ನು ಬ್ಯಾಂಕಿನಲ್ಲಿ ತೆರೆದು ಮೇಲಿನ ಸಮಯದೊಳಗೆ ಮನೆ ಖರೀದಿ/ನಿರ್ಮಾಣಕ್ಕೆ  ಉಪಯೋಗಿಸಲು ಅವಕಾಶವಿದೆ. ನಿಮ್ಮ ವಿಚಾರದಲ್ಲಿ ಇದನ್ನು ಕೂಡಲೇ ಮಾಡಿ. ಇದಲ್ಲದೆ, ನಿರ್ದಿಷ್ಟ ಬಾಂಡ್‌ಗಳಲ್ಲಿ 5 ವರ್ಷದ ಅವಧಿಗೆ ಗರಿಷ್ಠ ₹50 ಲಕ್ಷದ ತನಕ ಹೂಡಿಕೆ ಮಾಡುವ ಮೂಲಕವೂ ತೆರಿಗೆ ವಿನಾಯಿತಿ ಪಡೆಯಬಹುದು. ಆದರೆ, ಇದಕ್ಕೆ ಕಾಲಮಿತಿ ಮಾರಾಟವಾದ ನಂತರದ 6 ತಿಂಗಳು. ಹೆಚ್ಚಿನ ವಿವರಗಳೊಂದಿಗೆ ಸಮೀಪದ ತೆರಿಗೆ ಸಲಹೆಗಾರರನ್ನು ಖುದ್ದಾಗಿ ಸಂಪರ್ಕಿಸಿ

ಪ್ರೊಫೆಸರ್ ಬಿ. ಜಯದೇವಪ್ಪ, ಶಿವಮೊಗ್ಗ

ಪ್ರ

ನಾನು ನಿವೃತ್ತ ನೌಕರ, ತಿಂಗಳ ಪಿಂಚಣಿ ₹1 ಲಕ್ಷದ ಮೇಲಿದೆ. ಆದಾಯ ತೆರಿಗೆ ಕಟ್ಟುತ್ತಿದ್ದೇನೆ. ನನ್ನ ಮಗ ಆಸ್ಟ್ರೇಲಿಯಾದಲ್ಲಿ ನೌಕರಿ ಮಾಡುತ್ತಿದ್ದಾನೆ. ಆತ ನನಗೆ ಪ್ರತಿ ತಿಂಗಳೂ ಹಣ ಕಳಿಸುತ್ತಿದ್ದಾನೆ. ಅದು ಆಸ್ಟ್ರೇಲಿಯಾದ ಕರೆನ್ಸಿಯಿಂದ ರೂಪಾಯಿಗೆ ಪರಿವರ್ತನೆಯಾಗಿ ಬರುತ್ತಿದೆ. ಬ್ಯಾಂಕ್ ಖಾತೆಗೆ ಬರುವ ಹಣದ ವರ್ಗಾವಣೆ ಸಂದೇಶದಲ್ಲಿ ‘ಗಿಫ್ಟ್’ ಎಂಬ ಮಾಹಿತಿ ಇದೆ. ನನ್ನ ಪ್ರಶ್ನೆಗಳೆಂದರೆ: ನಾನು ಡಾಲರ್ ತರುತ್ತಿರುವ ಕಾರಣ ಆದಾಯ ತೆರಿಗೆಯಲ್ಲಿ ನನಗೆ ವಿನಾಯಿತಿ ದೊರಕಬಹುದೇ? ಆಸ್ಟ್ರೇಲಿಯಾದಲ್ಲಿ ಈಗಾಗಲೇ ತೆರಿಗೆ ಕಟ್ಟಿದ ಹಣದಿಂದ ನನಗೆ ಈ ಮೊತ್ತ ಬರುತ್ತಿದೆ. ಈ ಹಣಕ್ಕೆ ನಾನು ಆದಾಯ ತೆರಿಗೆ ಕಟ್ಟಬೇಕೇ?

ಯಾವುದೇ ರಫ್ತು ವ್ಯವಹಾರ ಕೈಗೊಳ್ಳುವ ಸಂಸ್ಥೆಗಳು ವಿದೇಶಿ ವಿನಿಮಯ ಮೊತ್ತವನ್ನು ಭಾರತಕ್ಕೆ ತರುವುದನ್ನು ಪ್ರೋತ್ಸಾಹಿಸುವ ಸಲುವಾಗಿ ಕೆಲವೊಂದು ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಆದರೆ, ನಿಮ್ಮ ವಿಚಾರದಲ್ಲಿ ವಿದೇಶದಿಂದ ಬರುತ್ತಿರುವ ಹಣವು, ಮಗ ನಿಮಗೆ ಮಾಡುವ ಆರ್ಥಿಕ ನೆರವು, ಉಡುಗೊರೆ ಅಥವಾ ಖರ್ಚು ವೆಚ್ಚಕ್ಕಾಗಿ ಕಳಿಸುವ ಮೊತ್ತ. ಹೀಗಾಗಿ ನಿಮಗೆ ಯಾವುದೇ ವಿಶೇಷ ತೆರಿಗೆ ವಿನಾಯಿತಿಗಳಿಲ್ಲ.

ನಿಮ್ಮ ಮಗ ಆಸ್ಟ್ರೇಲಿಯಾದಿಂದ ಕಳುಹಿಸುತ್ತಿರುವ ಮೊತ್ತವನ್ನು ಭಾರತದಲ್ಲಿ ಸ್ವೀಕರಿಸುವುದಕ್ಕೆ ಇರುವ ತೆರಿಗೆಯ ಬಗ್ಗೆ ನೋಡೋಣ. ಮಕ್ಕಳು ಸೇರಿದಂತೆ ನಿರ್ದಿಷ್ಟ ಸಂಬಂಧಿಕರಿಂದ ಉಡುಗೊರೆಯಾಗಿ ಬರುವ ಮೊತ್ತ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 56(2)ರ ನಿಬಂಧನೆಗಳ ವ್ಯಾಪ್ತಿಯಿಂದ ಹೊರಗಿದೆ. ಹೀಗಾಗಿ ಈ ಮೊತ್ತಕ್ಕೆ ತೆರಿಗೆ ಇಲ್ಲ. ಆದರೆ, ನಿಮಗೆ ಅಂತಹ ಮೊತ್ತ ಜಮಾ ಆಗುವ ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ನಿಮಗೆ ಬಂದಿರುವ ಹಣದ ಮೂಲದ ಬಗ್ಗೆ ಮಾಹಿತಿ ನೀಡಬೇಕು. ಇದಲ್ಲದೆ, ವಿದೇಶಿ ವಿನಿಮಯ ಒಳಹರಿವಿನ ಪ್ರಮಾಣಪತ್ರ ಅಥವಾ ‘ಎಫ್‌ಐಆರ್‌ಸಿ’ ದಾಖಲೆ ನೀಡುವ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿ. ಇದು ಭಾರತಕ್ಕೆ ಹಣ ಬಂದಿರುವುದರ ಪುರಾವೆಯಾಗಿ ಕಾರ್ಯನಿರ್ವಹಿಸುವ ದಾಖಲೆ.

ನಿಮ್ಮ ಮಗ ವಿದೇಶದಲ್ಲಿ ತಮ್ಮ ಆದಾಯಕ್ಕೆ ತೆರಿಗೆ ಕಟ್ಟಿರುವುದಾಗಿ ಹೇಳಿದ್ದೀರಿ. ಅವರ ಖಾತೆಯೊಂದು ಭಾರತದಲ್ಲಿದ್ದರೆ ಅದಕ್ಕೆ ಹಣ ವರ್ಗಾಯಿಸಿ ಅಗತ್ಯ ದಾಖಲೆಗಳ ಮೂಲಕ ಅಲ್ಲಿಂದ ನಿಮ್ಮ ಖಾತೆಗೆ ಜಮಾ ಮಾಡಿಸಬಹುದು. ಈ ಬಗ್ಗೆ ನಿಮ್ಮ ಬ್ಯಾಂಕಿನಲ್ಲೂ ವಿಚಾರಿಸಿ. ಯಾವುದೇ ಮೊತ್ತವನ್ನು ಭಾರತಕ್ಕೆ ವರ್ಗಾವಣೆ ಮಾಡಿದಾಗ, ಬಂದಿರುವ ಮೊತ್ತ ಮೊದಲ ಹಂತದಲ್ಲಿ ವಿದೇಶದಲ್ಲಿ ಅದಾಗಲೇ ತೆರಿಗೆಗೊಳಪಟ್ಟಿದೆಯೇ ಎಂಬ ಬಗ್ಗೆ ಮೊದಲು ಗಮನಿಸಲಾಗುತ್ತದೆ. ಅಂತಹ ಸಂದರ್ಭದಲ್ಲೂ ತಮ್ಮದೇ ಮೊತ್ತವನ್ನು ಭಾರತದ ತಮ್ಮದೇ ಖಾತೆಗೆ ವರ್ಗಾಯಿಸುವಾಗ ಮತ್ತೆ ತೆರಿಗೆ ಪಾವತಿಸುವ ಅಗತ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT