ನಾನು ಸರ್ಕಾರಿ ನೌಕರನಾಗಿದ್ದು, ಈ ವರ್ಷದ ಜೂನ್‌ನಲ್ಲಿ ನಿವೃತ್ತಿ ಹೊಂದುತ್ತೇನೆ. ಆಗ ನನಗೆ ನಿವೃತ್ತಿ ಉಪಾಧನದ ಜೊತೆಗೆ ಎಲ್ಲಾ ಉಳಿತಾಯ ಸೇರಿ ಸುಮಾರು ₹70 ಲಕ್ಷ ಬರುತ್ತದೆ. ನಿವೃತ್ತಿ ವೇತನ ₹35,540 (ತುಟ್ಟಿಭತ್ಯೆ ಬಿಟ್ಟು) ಸಿಗಲಿದೆ. ಇದು ನನ್ನ ಜೀವಮಾನದ ಗಳಿಕೆ-ಉಳಿಕೆಯೂ ಹೌದು.
ಇದುವರೆಗೂ ನಾನು ಯಾವುದೇ ಆಸ್ತಿಪಾಸ್ತಿ ಮಾಡಲಾಗಿಲ್ಲ. ನನ್ನ ಇಬ್ಬರು ಪುತ್ರರ ವಿದ್ಯಾಭ್ಯಾಸ, ನಾಲ್ವರು ಸಹೋದರಿಯರು ಹಾಗೂ ಸಹೋದರನ ಮದುವೆ, ತಂದೆ ತಾಯಿಯ ಅನಾರೋಗ್ಯ ಹೀಗೆ ನಿರಂತರ ಖರ್ಚುಗಳೇ ಇದಕ್ಕೆ ಕಾರಣ. ಮಕ್ಕಳ ಪೈಕಿ ಒಬ್ಬ ಸಿವಿಲ್ ಎಂಜಿನಿಯರ್; ಮತ್ತೊಬ್ಬ ಕಂಪ್ಯೂಟರ್ ಎಂಜಿನಿಯರಿಂಗ್ ಓದಿ ಸಾಕಷ್ಟು ಸ್ಪರ್ಧಾತ್ಮಕ ಪರೀಕ್ಷೆ ಬರೆದು ನಿರಾಶರಾಗಿ ಖಾಸಗಿ ಕಂಪನಿಗಳಲ್ಲಿ ಅತಿ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ.
ನನ್ನ ಮುಖ್ಯ ಸಮಸ್ಯೆ ಏನೆಂದರೆ ನಮಗೊಂದು ನಮ್ಮದೇ ಆದ ಜಾಗ ಹಾಗೂ ಮನೆ ಬೇಕಿದೆ. ಅಲ್ಲಿ ವಿಶ್ರಾಂತ ಜೀವನ ನಡೆಸಬೇಕು ಎಂಬುದೇ ನನ್ನಾಸೆ. ಇದರ ನಡುವೆ ದೊಡ್ಡ ಮಗನಿಗೆ 32ನೇ ವರ್ಷ. ಚಿಕ್ಕವನಿಗೆ 25 ವರ್ಷ. ಆತನಿಗೆ ಮದುವೆ ಮಾಡಬೇಕು. ಆತ ದುಡಿಯಲು ಆಸ್ಟ್ರೇಲಿಯಾಕ್ಕೆ ಹೋಗಬೇಕು ಅಂತಿದ್ದಾನೆ. ಅದಕ್ಕೆ ನನ್ನಿಂದ ಕನಿಷ್ಠ ₹6 ಲಕ್ಷ ನಿರೀಕ್ಷಿಸಿದ್ದಾನೆ. ಕಾರು ಸಾಲ ₹10 ಲಕ್ಷ ಇದೆ. ಇದನ್ನು ಹೊರತುಪಡಿಸಿ ಬೇರಾವುದೇ ಸಾಲಗಳಿಲ್ಲ.
ಹೀಗಿರುವಾಗ ಈಗಿನ ನನ್ನ ಕನಸಿನ ಜಾಗ-ಮನೆ, ಮಕ್ಕಳ ಮದುವೆ, ಮುಂದೆ ನನ್ನ ವಿಶ್ರಾಂತ ಬದುಕನ್ನು ಹೇಗೆ ನೆಮ್ಮದಿಯಾಗಿ ಕಟ್ಟಿಕೊಳ್ಳಬಹುದು ಎಂಬ ಬಗ್ಗೆ ತಿಳಿಸಿಕೊಡಿ.
–ಹೆಸರು ಬೇಡ, ಉಡುಪಿ.
ನಿಮ್ಮ ವಿಚಾರ ಹೃದಯಸ್ಪರ್ಶಿಯಾಗಿದೆ. ಆರ್ಥಿಕ ಸಂವೇದನೆ ಹಾಗೂ ಸಾಂಸಾರಿಕ ಕಳಕಳಿಯ ನೆಲಗಟ್ಟಿನಲ್ಲಿ ಕಟ್ಟಿಕೊಂಡ ಬದುಕಿನ ಸ್ಥಿತಿಗತಿಗೆ ಕನ್ನಡಿ ಹಿಡಿಯುತ್ತದೆ. ನಿಮ್ಮ ಮಾಹಿತಿ ಪ್ರಕಾರ ನಿವೃತ್ತಿ ವೇಳೆಗೆ ₹70 ಲಕ್ಷ ಸಿಗಲಿದೆ. ಬಾಕಿ ವಾಹನ ಸಾಲ ₹10 ಲಕ್ಷ. ಪುತ್ರನ ವಿದೇಶಿ ಪ್ರಯಾಣಕ್ಕೆ ಎತ್ತಿಡಬೇಕಾದ ಮೊತ್ತ ₹6 ಲಕ್ಷ.
ವಾಹನ ಸಾಲಕ್ಕೆ ಇರುವ ಬಡ್ಡಿ ಶೇ 10ರಷ್ಟು ಇರಬಹುದೆಂದು ನಿರೀಕ್ಷಿಸಿದರೂ ಈ ಸಾಲದ ಮೊತ್ತವನ್ನು ನಿಮ್ಮ ನಿವೃತ್ತಿ ಸಮಯದಲ್ಲಿ ಸಿಗುವ ಹಣದಿಂದ ಸಾಲದ ಷರತ್ತು ನೋಡಿಕೊಂಡು ಅವಕಾಶವಿದ್ದರೆ ಸಂಪೂರ್ಣ ಪಾವತಿ ಮಾಡಿ ಸಾಲದಿಂದ ಮುಕ್ತರಾಗಿ. ಈ ಎರಡು ಪಾವತಿ ಮಾಡಿದ ಮೇಲೆ ಉಳಿಯುವ ಮೊತ್ತ ₹54 ಲಕ್ಷ ಎಂದಿಟ್ಟುಕೊಳ್ಳಿ. ನಿಮ್ಮ ನಿರ್ಧಾರವು ನಿರ್ಣಯವಾಗುವ ತನಕ ತಾತ್ಕಾಲಿಕವಾಗಿ ಈ ಮೊತ್ತವನ್ನು ಬ್ಯಾಂಕ್ ಠೇವಣಿ, ಅಂಚೆ ಖಾತೆಯಲ್ಲಿ ಜಮೆ ಮಾಡಿ ಬಡ್ಡಿ ಪಡೆಯಿರಿ.
ಈ ಮೊತ್ತದಲ್ಲಿ ನಿಮಗೆ ಸೂಕ್ತ ಸ್ಥಳ ಹಾಗೂ ನಿಮ್ಮ ಉಳಿತಾಯದ ಮೊತ್ತದಲ್ಲಿ ಖರೀದಿಸಲು ಬರುವ ಭೂಮಿಯನ್ನು ಆಯ್ಕೆ ಮಾಡುವ ಬಗ್ಗೆ ಯೋಚಿಸಿ. ನಂತರವಷ್ಟೇ ಮನೆ ನಿರ್ಮಾಣದ ಬಗ್ಗೆ ನಿರ್ಧರಿಸಿ. ಈ ಭೂಮಿಯನ್ನು ಮನೆಯ ನಿರ್ಮಾಣಕ್ಕೆ ಸಾಲ ಭದ್ರತೆಗಾಗಿ ಬಳಸಿಕೊಳ್ಳಬಹುದು. ಅಲ್ಲದೆ, ಮಕ್ಕಳ ಉದ್ಯೋಗ ಆಧರಿಸಿ ಗೃಹ ಸಾಲ ಪಡೆಯುವುದು ಸಾಧ್ಯವಾದೀತು. ನೀವು ಸರ್ಕಾರಿ ಉದ್ಯೋಗಿ ಆಗಿರುವ ಕಾರಣ ನಿಮ್ಮ ಪಿಂಚಣಿ ಆಧರಿಸಿ ಸಾಲ ಸಿಗಬಹುದು. ಆದರೆ, ಇದಕ್ಕಾಗಿ ನಿಮ್ಮ ಕುಟುಂಬದ ಸದಸ್ಯರನ್ನೂ ಒಳಗೊಂಡು ಜಂಟಿ ಸಾಲ ಪಡೆಯಬೇಕಾಗ ಬಹುದು. ಹೆಚ್ಚುವರಿಯಾಗಿ ಸಹಕಾರ ಬ್ಯಾಂಕ್‌ಗಳನ್ನೂ
ಸಂಪರ್ಕಿಸಬಹುದು. ನಿಮ್ಮ ವಿಚಾರದಲ್ಲಿ ನಿರಾಶೆ ಬಿಟ್ಟು ಇರುವ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಿ.
ಪ್ರಸಕ್ತ ಸನ್ನಿವೇಶದಲ್ಲಿ ₹2,000 ಮುಖಬೆಲೆಯ ನೋಟುಗಳ ವಿನಿಮಯ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಲು ಕೋರಿಕೆ.
–ಶಶಿಕಾಂತ್, ಬಾಗಲಕೋಟೆ.
₹2,000 ಮುಖಬೆಲೆಯ ನೋಟುಗಳನ್ನು 2016ರ ನೋಟು ಅಮಾನ್ಯದ ಸಂದರ್ಭದಲ್ಲಿ ಮುದ್ರಿಸಿ ಚಲಾವಣೆಗೆ ತರಲಾಯಿತು. ನಂತರ 2018-19ರಿಂದ ಇದರ ಮುದ್ರಣವನ್ನು ನಿಲ್ಲಿಸಿ ಸಣ್ಣ ಮುಖಬೆಲೆಯ ನೋಟುಗಳನ್ನು ಸಾಕಷ್ಟು ಪ್ರಮಾಣದಲ್ಲಿ ನಾಗರಿಕರಿಗೆ ಹಾಗೂ ಆರ್ಥಿಕ ವಲಯದಲ್ಲಿ ಸಿಗುವಂತೆ ನೋಡಿಕೊಳ್ಳಲಾಯಿತು.
ಸುಮಾರು ನಾಲ್ಕೈದು ವರ್ಷದ ಅವಧಿಯಲ್ಲಿ ಅಧಿಕ ಚಲಾವಣೆ ಕಂಡ ಈ ನೋಟಿನ ಗುಣಮಟ್ಟ ಕುಸಿತವಾಗಿರುವ ಬಗ್ಗೆ ಗಮನಿಸಿದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ‘ಸ್ವಚ್ಛ ನೋಟು’ ನಿಯಮಾವಳಿಯ ಭಾಗವಾಗಿ ಹಂತ ಹಂತವಾಗಿ ಈ ಮುಖಬೆಲೆಯ ನೋಟುಗಳನ್ನು ಸಾರ್ವಜನಿಕ ಮಾಹಿತಿ ನೀಡಿ ಹಿಂಪಡೆಯುವ ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರವು ₹2,000 ಮುಖಬೆಲೆಯ ನೋಟುಗಳನ್ನು ಸಾರ್ವಜನಿಕ ವಲಯದಲ್ಲಿ ಬಳಸುವುದನ್ನು ತಗ್ಗಿಸುವುದೇ ಆಗಿತ್ತೇ ಹೊರತು ಆ ನೋಟುಗಳನ್ನು ಅಮಾನ್ಯ ಮಾಡುವುದಾಗಿರಲಿಲ್ಲ. ಹೀಗಾಗಿ, ಯಾವುದೇ ಆತಂಕ ಬೇಡ.
ಇದರ ಭಾಗವಾಗಿ 2023ರ ಅಕ್ಟೋಬರ್ 7ರ ವರೆಗೆ ಸಾರ್ವಜನಿಕರಿಗೆ ಯಾವುದೇ ಬ್ಯಾಂಕ್‌ನ ಶಾಖೆಗಳಲ್ಲಿ ಈ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಲಾಗಿತ್ತು. ನಂತರದ ಅವಧಿಯಲ್ಲಿ ನೋಟುಗಳ ವಿನಿಮಯ ಮಾಡಿಕೊಳ್ಳಲು ಕರ್ನಾಟಕದಲ್ಲಿ ಆರ್‌ಬಿಐನ ಬೆಂಗಳೂರು ವಲಯ ಕಚೇರಿ ಸೇರಿ ಆರ್‌ಬಿಐನ ಯಾವುದೇ ವಲಯ ಕಚೇರಿಗಳಿಗೆ ಭೇಟಿ ನೀಡಿ ಹಣ ವಿನಿಮಯ ಮಾಡಿಕೊಳ್ಳಲು ಪರ್ಯಾಯ ಅವಕಾಶವಿದೆ. ಇದು ಮುಂದಿನ ಬದಲಾವಣೆ ನಿಗದಿಪಡಿಸುವ ತನಕ ಮುಂದುವರಿಯಲಿದೆ.
ಆದರೆ, ಇದಕ್ಕೆ ಅಗತ್ಯವಾಗಿ ನಿಮ್ಮ ಕೆವೈಸಿ ದಾಖಲೆ ಸಲ್ಲಿಸುವ ಅಗತ್ಯವಿದೆ. ಒಂದು ವೇಳೆ ದೂರದ ಊರಿನ ನಾಗರಿಕರು ವಲಯ ಕಚೇರಿಗೆ ಈ ವಿಚಾರಕ್ಕಾಗಿ ಭೇಟಿ ನೀಡುವುದು ಆರ್ಥಿಕವಾಗಿ ಲಾಭದಾಯಕವಲ್ಲದಿದ್ದರೆ ಅಥವಾ ಪ್ರಯಾಣ ಅಸಾಧ್ಯವಾದರೆ ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡಿ ಈ ಸೌಲಭ್ಯ ಪಡೆದುಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡುವ ಅವಕಾಶವಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಸ್ಥಳೀಯ ಅಂಚೆ ಕಚೇರಿ ಸಂಪರ್ಕಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.