ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಸಾ ಏರ್‌‌ಲೈನ್‌: ಇದು ರಾಕೇಶ್ ಜುಂಝನ್‌ವಾಲಾರ ಕಡಿಮೆ ವೆಚ್ಚದ ವಿಮಾನಯಾನ ಯೋಜನೆ

Last Updated 31 ಜುಲೈ 2021, 4:01 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಕೋಟ್ಯಧಿಪತಿ ರಾಕೇಶ್ ಜುಂಝನ್‌ವಾಲಾ ಅವರು ತೀರಾ ಕಡಿಮೆ ವೆಚ್ಚದ ವಿಮಾನಯಾನ ಕಂಪನಿಯನ್ನು ಆರಂಭಿಸುವ ಯೋಜನೆ ಸಿದ್ಧಪಡಿಸಿದ್ದಾರೆ. ಇದು, ಜೆಟ್‌ ಏರ್‌ವೇಸ್ ಕಂಪನಿಯ ಪತನದ ನಂತರ ವಿಮಾನ ತಯಾರಿಕಾ ಕಂಪನಿ ಬೋಯಿಂಗ್‌ಗೆ ಭಾರತದಲ್ಲಿ ಕೈತಪ್ಪಿದ ನೆಲೆಯನ್ನು ಮತ್ತೆ ಕಂಡುಕೊಳ್ಳಲು ಅವಕಾಶ ಮಾಡಿಕೊಡಬಹುದು ಎಂದು ಉದ್ಯಮದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಯಶಸ್ಸು ಕಂಡಿರುವ ಜುಂಝನ್‌ವಾಲಾ ಅವರು ಭಾರತದ ‘ವಾರನ್ ಬಫೆಟ್’ ಎಂದು ಪ್ರಸಿದ್ಧರು. ಅವರು ಈಗ ಇಂಡಿಗೊ ಮತ್ತು ಜೆಟ್‌ ಏರ್‌ವೇಸ್‌ ಕಂಪನಿಗಳ ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ (ಸಿಇಒ) ಜೊತೆ ಸೇರಿ ದೇಶಿ ವಿಮಾನಯಾನ ವಲಯದಲ್ಲಿನ ಬೇಡಿಕೆಗಳಿಗೆ ಸ್ಪಂದಿಸುವ ಯೋಜನೆ ರೂಪಿಸಿದ್ದಾರೆ.

ಕೋವಿಡ್‌ ಸಾಂಕ್ರಾಮಿಕದ ದುಷ್ಪರಿಣಾಮದಿಂದಾಗಿ ಭಾರತದ ವಿಮಾನಯಾನ ಉದ್ಯಮವು ಸಮಸ್ಯೆ ಎದುರಿಸುತ್ತಿರುವ ಹೊತ್ತಿನಲ್ಲಿಯೇ ಜುಂಝನ್‌ವಾಲಾ ಅವರು ಆಕಾಸಾ ಏರ್‌ ಕಂಪನಿಯನ್ನು ಆರಂಭಿಸಲು ಯೋಚಿಸಿದ್ದಾರೆ. ಸಾಂಕ್ರಾಮಿಕದಿಂದಾಗಿ ವಿಮಾನಯಾನ ಕಂಪನಿಗಳು ಕೋಟ್ಯಂತರ ರೂಪಾಯಿ ಕಳೆದುಕೊಂಡಿವೆ. ಆದರೆ ಭವಿಷ್ಯದಲ್ಲಿ ಈ ಉದ್ಯಮ ವಲಯ ಹೊಂದಿರುವ ಅವಕಾಶಗಳನ್ನು ಗಮನಿಸಿದರೆ, ಬೋಯಿಂಗ್‌ ಮತ್ತು ಏರ್‌ಬಸ್‌ನಂತಹ ವಿಮಾನ ತಯಾರಿಕಾ ಕಂಪನಿಗಳಿಗೆ ಒಳ್ಳೆಯ ಮಾರುಕಟ್ಟೆ ಸೃಷ್ಟಿಯಾಗಲಿದೆ.

‘ಏರ್‌ಬಸ್‌ ಹಾಗೂ ಬೋಯಿಂಗ್‌ ನಡುವೆ ಸ್ಪರ್ಧೆ ಏರ್ಪಡಲಿದೆ’ ಎಂದು ಸರೀನ್‌ ಆ್ಯಂಡ್‌ ಕಂಪನಿಯ ಪಾಲುದಾರ ನಿತಿನ್ ಸರೀನ್ ಹೇಳಿದರು. ಈ ಕಂಪನಿಯು ವಿಮಾನಯಾನ ಕಂಪನಿಗಳಿಗೆ ಕಾನೂನು ಸಲಹೆ ನೀಡುತ್ತದೆ. ‘ಸ್ಪೈಸ್‌ಜೆಟ್‌ ಹೊರತುಪಡಿಸಿದರೆ ಬೋಯಿಂಗ್‌ ಕಂಪನಿಯ 737 ಮಾದರಿಯ ವಿಮಾನಗಳನ್ನು ಖರೀದಿಸುವ ಪ್ರಮುಖ ಕಂಪನಿ ಭಾರತದಲ್ಲಿ ಮತ್ಯಾವುದೂ ಇಲ್ಲ. ಹಾಗಾಗಿ ಈಗ ಬಂದಿರುವ ಅವಕಾಶವು ಬೋಯಿಂಗ್‌ಗೆ ತನ್ನ ನೆಲೆ ವಿಸ್ತರಿಸಿಕೊಳ್ಳಲು ಬಹಳ ಮಹತ್ವದ್ದು’ ಎಂದು ಸರೀನ್ ಹೇಳಿದರು.

ಜುಂಝನ್‌ವಾಲಾ ಅವರ ಕಂಪನಿಯ ಬಗ್ಗೆ ಹೆಚ್ಚಿನ ವಿವರಗಳು, ಅವರು ವಿಮಾನ ಖರೀದಿಗೆ ಮುಂದಾಗಿದ್ದಾರೆಯೇ ಎಂಬ ಮಾಹಿತಿ ಅಧಿಕೃತವಾಗಿ ಬಹಿರಂಗ ಆಗಿಲ್ಲ. ಆಕಾಸಾ ಕಂಪನಿಯಲ್ಲಿ ತಾವು ಶೇಕಡ 40ರಷ್ಟು ಷೇರು ಹೊಂದುವುದಾಗಿ, ಈ ಕಂಪನಿಯು ನಾಲ್ಕು ವರ್ಷಗಳ ಅವಧಿಯಲ್ಲಿ 180 ಆಸನಗಳ 70 ವಿಮಾನಗಳನ್ನು ಹೊಂದಲಿರುವುದಾಗಿ ಜುಂಝನ್‌ವಾಲಾ ಅವರು ಬ್ಲೂಮ್‌ಬರ್ಗ್‌ಗೆ ತಿಳಿಸಿದ್ದಾರೆ.

ಈ ವರದಿಗೆ ಬೋಯಿಂಗ್‌ ಕಡೆಯಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಇಂಡಿಗೊ, ಸ್ಪೈಸ್‌ಜೆಟ್‌, ಗೋಫಸ್ಟ್‌ ಮತ್ತು ಏರ್‌ ಏಷ್ಯಾ ಇಂಡಿಯಾ ಕಂಪನಿಗಳು ಭಾರತದ ವಿಮಾನಯಾನ ವಲಯದಲ್ಲಿ ಪ್ರಾಬಲ್ಯ ಹೊಂದಿವೆ. ಇವುಗಳು ಹೆಚ್ಚಾಗಿ ಬಳಸುತ್ತಿರುವುದು ಏರ್‌ಬಸ್‌ ತಯಾರಿಸುವ, ಕಡಿಮೆ ಅಗಲದ ವಿಮಾನಗಳನ್ನು. ಭಾರತದಲ್ಲಿ ಹೆಚ್ಚಿನ ಅಗಲದ ವಿಮಾನಗಳ ಮಾರುಕಟ್ಟೆಯಲ್ಲಿ ಬೋಯಿಂಗ್‌ನ ಪ್ರಾಬಲ್ಯ ಇದೆ. ಆದರೆ, ದರ ಸಮರ ಹಾಗೂ ಹೆಚ್ಚಿನ ವೆಚ್ಚದ ಕಾರಣದಿಂದಾಗಿ ಕಿಂಗ್‌ಫಿಷರ್‌, ಜೆಟ್‌ ಏರ್‌ವೇಸ್‌ ಕಂಪನಿಗಳು ಬಾಗಿಲು ಮುಚ್ಚಿವೆ. ಇದರಿಂದಾಗಿ, ಕಡಿಮೆ ವೆಚ್ಚದ ವಿಮಾನಯಾನ ಕಂಪನಿಗಳು ಮತ್ತು ಏರ್‌ಬಸ್‌ ಪ್ರಾಬಲ್ಯ ಜಾಸ್ತಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT