ಬುಧವಾರ, ಆಗಸ್ಟ್ 17, 2022
25 °C

ಸಕ್ಕರೆ ರಹಿತ ತಿನಿಸು ಉದ್ಯಮದ ಸಿಹಿ!

ಎಂ. ಶ್ರೀನಿವಾಸ ರಾವ್ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನ ಐಸ್‌ಕ್ರೀಮ್‌ ಪ್ರಿಯರಿಗೆ ಡಸರ್ಟ್‌ ಬ್ರ್ಯಾಂಡ್‌ ‘ಆರ್ಟಿನ್ಸಿ’ಯ ಪರಿಚಯ 2017ರಲ್ಲಿ ಆಗಿತ್ತು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಬೆಂಗಳೂರಿಗರು ಎರಡೇ ವರ್ಷಗಳಲ್ಲಿ ಈ ‘ಶುಗರ್‌ ಫ್ರೀ’ ಬ್ರ್ಯಾಂಡ್‌ಅನ್ನು ಹೆಚ್ಚು ಆಸ್ಥೆಯಿಂದ ಸ್ವೀಕರಿಸಿದ್ದಾರೆ.

ಸಕ್ಕರೆ ರಹಿತ ತಿನಿಸುಗಳು ಕೂಡ ಇತರ ಸಿಹಿ ತಿನಿಸುಗಳಂತೆಯೇ ರುಚಿಯಾಗಿರಬೇಕು ಎನ್ನುವುದು ಆರತಿ ಲಕ್ಷ್ಮಣ್‌ ರಸ್ತೋಗಿ ಅವರ ಕಾಳಜಿ. ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅವರು ನಂತರದಲ್ಲಿ ಜುಲಾಟೊ (ಇಟಾಲಿಯನ್ ಶೈಲಿಯ ಐಸ್‌ಕ್ರೀಮ್‌) ತಯಾರಕಿ ಆಗಿ ಬದಲಾದರು. ಅವರೇ ‘ಆರ್ಟಿನ್ಸಿ’ ಬ್ರ್ಯಾಂಡ್‌ ಆರಂಭಿಸಿದರು. ಬೋರ್ಡ್‌ರೂಮ್‌ನಿಂದ ವೃತ್ತಿಪರ ಅಡುಗೆ ಮನೆಗೆ ಬಂದ ಬಗೆಯ ಬಗ್ಗೆ ಪ್ರಶ್ನಿಸಿದರೆ ಆರತಿ ಹೇಳುವುದಿಷ್ಟು: ‘ನಾನು ಮಧುಮೇಹಿಗಳು ಇರುವ ಕುಟುಂಬದಿಂದ ಬಂದವಳು. ನಾನು ಹತ್ತು ವರ್ಷ ವಯಸ್ಸಿನ ಬಾಲಕಿಯಾಗಿದ್ದಾಗ ಮಧುಮೇಹದ ಬಗ್ಗೆ ತಿಳಿದುಕೊಂಡೆ. ಆಗ ತಂದೆಗೆ ಮಧುಮೇಹ ಇರುವುದು ಗೊತ್ತಾಗಿತ್ತು. ಅಂದಿನಿಂದ ಮಧುಮೇಹಿಗಳಿಗೆ ಆರೋಗ್ಯಕರ ಪರ್ಯಾಯವನ್ನು ಹುಡುಕುವುದನ್ನೇ ಆಸಕ್ತಿಯ ವಿಷಯವಾಗಿಸಿಕೊಂಡೆ. ಸಿಹಿ ತಿನಿಸಿಗೆ ಹಾತೊರೆಯದಿರುವುದು ಬಹಳ ಕಷ್ಟ. ಹಾಗಾಗಿ ಆರ್ಟಿನ್ಸಿ ಬ್ರ್ಯಾಂಡ್‌ಅನ್ನು ಆರೋಗ್ಯಕರ ಪರ್ಯಾಯವಾಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ’.

ತನ್ನ ಸಹಜ ಐಸ್‌ಕ್ರೀಮ್‌ ರುಚಿಗೆ ಹೆಸರಾಗಿರುವ ‘ಆರ್ಟಿನ್ಸಿ’ ಇಂದು ಕಾರ್ಬೊಹೈಡ್ರೇಟ್‌ ಪ್ರಮಾಣ ಕಡಿಮೆ ಇರುವ ಐಸ್‌ಕ್ರೀಮ್‌ಗಳಷ್ಟೇ ಅಲ್ಲದೆ ಇತರ ಜನಪ್ರಿಯ ಸಕ್ಕರೆ ರಹಿತ ತಿನಿಸುಗಳಾದ ಕುಕಿಗಳು, ಚೀಸ್‌ಕೇರ್‌ ಮತ್ತು ಬ್ರೌನಿಗಳನ್ನೂ ಮಾರಾಟ ಮಾಡುತ್ತಿದೆ.

ಬ್ರ್ಯಾಂಡ್‌ ಬೆಳೆದು ಬಂದ ಬಗೆಯನ್ನು ಸ್ಮರಿಸಿಕೊಳ್ಳುವ ಆರತಿ ಅವರು, ಮಧುಮೇಹಿಗಳಿಗೆ ಸಿಹಿ ತಿನಿಸಿಗೆ ಪರ್ಯಾಯವಾದ ಆರೋಗ್ಯಕಾರಿ ತಿನಿಸು ಮಾರುಕಟ್ಟೆಯಲ್ಲಿ ಲಭ್ಯವಿಲ್ಲದಿದ್ದುದು ‘ಆರ್ಟಿನ್ಸಿ’ ರೂಪುಗೊಳ್ಳುವುದಕ್ಕೆ ಮುಖ್ಯ ಕಾರಣ ಆಗಿರಬಹುದು ಎಂದು ಹೇಳುತ್ತಾರೆ.

ಆದರೆ ಕೋವಿಡ್‌–19 ಹರಡುವುದನ್ನು ತಡೆಯುವ ಉದ್ದೇಶದಿಂದ ಲಾಕ್‌ಡೌನ್‌ ಜಾರಿಗೊಳಿಸಿದ ನಂತರ ಎಲ್ಲ ಉದ್ಯಮಗಳಿಗೂ ಹಿನ್ನಡೆ ಆಗಿದೆ. ಲಾಕ್‌ಡೌನ್‌ ಅವಧಿಯನ್ನು ಆರ್ಟಿನ್ಸಿ ಹೇಗೆ ನಿಭಾಯಿಸಿತು ಎಂಬ ಪ್ರಶ್ನೆಗೆ ಆರತಿ ಅವರು ಕೊಡುವ ಉತ್ತರ ಅಚ್ಚರಿ ಮೂಡಿಸುವಂತೆ ಇದೆ: ‘ಒಂದು ಕಡೆಯಲ್ಲಿ ಕೋವಿಡ್‌–19 ಸಾಂಕ್ರಾಮಿಕವು ಬಹಳ ಸಮಸ್ಯೆಗಳನ್ನು ಸೃಷ್ಟಿಸುತ್ತಿತ್ತು. ಆದರೆ, ಇನ್ನೊಂದೆಡೆ ನಮ್ಮ ವಹಿವಾಟು ಮಾತ್ರ ಊಹಿಸಲು ಆಗದ ರೀತಿಯಲ್ಲಿ ಬೆಳವಣಿಗೆ ಕಂಡಿದೆ. ಕೋವಿಡ್‌–19 ಹರಡುವುದನ್ನು ತಡೆಯಲು ರಾಜ್ಯಗಳ ನಡುವೆ ಸಂಚಾರ ಮತ್ತು ಸಾಗಾಟವನ್ನು ನಿರ್ಬಂಧಿಸಿದ್ದರಿಂದ ಆಂಧ್ರಪ್ರದೇಶದ ಮೂಲಕ ಕರ್ನಾಟಕಕ್ಕೆ ಐಸ್‌ಕ್ರೀಮ್‌ ಸಾಗಿಸುವುದು ಸಾಧ್ಯವಿರಲಿಲ್ಲ. ಮನೆಯಲ್ಲಿಯೇ ಉಳಿದುಕೊಂಡಿದ್ದ, ಸಿಹಿ ತಿನಿಸು ಮತ್ತು ಐಸ್‌ಕ್ರೀಮ್‌ ಪ್ರಿಯರಿಗೆ ಬಹಳ ಸೀಮಿತ ಆಯ್ಕೆಗಳಿದ್ದವು. ಇದರ ಪ್ರಯೋಜನ ಪಡೆದುಕೊಂಡ ನಾವು ದೊಡ್ಡ ಪ್ರಮಾಣದಲ್ಲಿ ಗ್ರಾಹಕರನ್ನು ತಲುಪಿದೆವು. ಬೇಡಿಕೆ ಇದೆ ಎಂದು ಗೊತ್ತಾದಾಗ ಸಕ್ಕರೆ ರಹಿತ ಇತರ ತಿನಿಸುಗಳತ್ತಲೂ ಗಮನ ಹರಿಸಿದೆವು. ಕುಕಿ, ಬ್ರೌನಿ ಮತ್ತು ಚೀಸ್‌ಕೇಕ್‌ಗಳಂಥ ವಿಶಿಷ್ಟ ತಿನಿಸುಗಳನ್ನು ತಯಾರಿಸಲು ಬೇಕರ್‌ಗಳನ್ನು ನೇಮಿಸಿಕೊಂಡೆವು. ಇದಕ್ಕೆ ಗ್ರಾಹಕರಿಗೆ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿತು. ಬೇಡಿಕೆ ಎಷ್ಟಿತ್ತೆಂದರೆ ಫುಡ್‌ ಡೆಲಿವರಿ ಆ್ಯಪ್‌ಗಳಿಗಷ್ಟೇ ಸೀಮಿತವಾಗಿದ್ದ ನಾವು ಇ–ಕಾಮರ್ಸ್‌ ತಾಣಗಳಲ್ಲಿಯೂ ನಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕಾಯಿತು’.

ಆರ್ತಿ ಅವರಿಗೆ ಶ್ರವಣದೋಷವಿದೆ. ಇತರ ಉದ್ಯಮಿಗಳಿಗಾಗಿ ನಿಮ್ಮ ಸಂದೇಶ ಏನು ಎಂಬ ಪ್ರಶ್ನೆಗೆ ಅವರು, ‘ಎಲ್ಲ ಪ್ರಯಾಣಗಳಲ್ಲಿ ಇರುವಂತೆಯೇ ಔದ್ಯಮಿಕ ಪಯಣದಲ್ಲಿಯೂ ಹಲವು ಸವಾಲುಗಳಿವೆ. ಆದರೆ ತಮ್ಮ ವಹಿವಾಟಿನಲ್ಲಿರುವ ಆಸಕ್ತಿಯನ್ನು ಉಳಿಸಿಕೊಳ್ಳಬೇಕು. ಹಾಗಿದ್ದಲ್ಲಿ ಯಾವುದೇ ಎತ್ತರ ಏರುವುದು ಕಷ್ಟಕರವಲ್ಲ’ ಎನ್ನುತ್ತಾರೆ.


ಎಂ. ಶ್ರೀನಿವಾಸ್ ರಾವ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು