ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೂರ್ತಿಯ ಉದ್ಯಮಿ: ಕೂಲಿಕಾರನ ಮಗನ ಸ್ವಂತ ಉದ್ದಿಮೆ

Last Updated 28 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಮಂಡ್ಯ ಜಿಲ್ಲೆಯ ಗುಡಿಗೇನಹಳ್ಳಿಯಲ್ಲಿ ಹುಟ್ಟಿ-ಬೆಳೆದ ಮಂಜು ಬಾಲ್ಯದಲ್ಲಿಯೇ ತಮ್ಮ ತಾಯಿಯನ್ನು ಕಳೆದುಕೊಂಡರು. ಮಂಜು ಅವರ ತಂದೆ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ತಂದೆಯ ಅನಾರೋಗ್ಯದ ಕಾರಣ ಮಂಜು ಉನ್ನತ ಶಿಕ್ಷಣವನ್ನು ಮೊಟಕುಗೊಳಿಸಿ, ಕುಟುಂಬದ ಪೋಷಣೆಗಾಗಿ ದುಡಿಮೆ ಆರಂಭಿಸಬೇಕಾಯಿತು.

ಹೊಟ್ಟೆಪಾಡಿಗಾಗಿ ಕೂಲಿ ಮಾಡುತ್ತಿದ್ದ ತಂದೆ ಸಾಲ ಮಾಡಿದ್ದರು. ಆ ಸಾಲ ತೀರಿಸಲು ಮಂಜು ಕೂಡ ಕೂಲಿ ಕೆಲಸವನ್ನೇ ಮಾಡಬೇಕಾಯಿತು. ಸಾಲ ತೀರಿಸಿದ ನಂತರ ಮಂಜು ತಮ್ಮ ಗೆಳೆಯರ ಸಹಾಯದಿಂದ ಸ್ನ್ಯಾಕ್ಸ್ ಮತ್ತು ಜಾಮ್‌ ಪೂರೈಕೆ ಮಾಡುವ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಈ ಕೆಲಸದ ಭಾಗವಾಗಿ ಮಂಜು, ಬೇಕರಿಗಳು ಮತ್ತು ದಿನಸಿ ಅಂಗಡಿಗಳಿಗೆ ಸಾಮಗ್ರಿಗಳನ್ನು ತಲುಪಿಸಲು ಹೋಗಬೇಕಿತ್ತು. ಇದಕ್ಕೆ ಪ್ರತಿಯಾಗಿ ಅವರಿಗೆ ಸಿಗುತ್ತಿದ್ದ ಸಂಬಳ ತಿಂಗಳಿಗೆ ₹ 3,000. ಸ್ವಲ್ಪ ದಿನಗಳ ನಂತರ ಮಂಜು ಮೊಬೈಲ್ ಅಂಗಡಿಯೊಂದರಲ್ಲಿ ಸ್ವಲ್ಪ ಹೆಚ್ಚಿನ ಸಂಬಳ ಸಿಗುವ ಕೆಲಸಕ್ಕೆ ಸೇರಿಕೊಂಡರು.

ಈ ಸಮಯದಲ್ಲಿ ತಮ್ಮ ಕೌಶಲವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಅವರು, ರುಡ್ ಸೆಟಿ ಸಂಸ್ಥೆಯು ವಿಜಯಾ ಬ್ಯಾಂಕ್ ಮೂಲಕ ಆಯೋಜಿಸಿದ್ದ ಮೊಬೈಲ್ ರಿಪೇರಿ ಮತ್ತು ರಿಚಾರ್ಜ್ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ತನ್ನ ಸಹೋದರನ ಸಲಹೆ ಮೇರೆಗೆ ಮಂಜು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಏಜೆಂಟ್ ಆಗಿ ಕೂಡ ದುಡಿಯಲಾರಂಭಿಸಿದರು. ಆದರೆ ವಿಮೆ ಮಾಡಿಸುವುದಕ್ಕಾಗಿ ಗ್ರಾಹಕರ ಜೊತೆ ಮಾತುಕತೆ ನಡೆಸಲು ತನ್ನ ಸಂಕೋಚದ ಪ್ರವೃತ್ತಿಯು ಅವಕಾಶ ಮಾಡಿಕೊಡುವುದಿಲ್ಲ ಎಂಬುದನ್ನು ಮಂಜು ತಿಳಿದುಕೊಂಡರು. ಸೈನ್ಯ ಸೇರಿಕೊಳ್ಳುವ ಉದ್ದೇಶದಿಂದ, ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು; ದೈಹಿಕ ಸಾಮರ್ಥ್ಯದ ಪರೀಕ್ಷೆಯಲ್ಲಿ ಸೋಲು ಕಂಡರು.

ಈ ವೈಫಲ್ಯಗಳ ನಂತರ ಮಂಜು ಯಾರಲ್ಲೂ ಕೆಲಸ ಕೇಳದಿರುವ, ಸ್ವಂತ ವಹಿವಾಟು ಆರಂಭಿಸುವ ತೀರ್ಮಾನ ಕೈಗೊಂಡರು. ಗೆಳೆಯರು ಮತ್ತು ಕುಟುಂಬದ ಸದಸ್ಯರ ಸಹಾಯದಿಂದ ₹ 30 ಸಾವಿರ ಬಂಡವಾಳ ಹೂಡಿ ಮೊಬೈಲ್ ರಿಪೇರಿ, ರಿಚಾರ್ಜ್ ಮತ್ತು ಜೆರಾಕ್ಸ್ ಅಂಗಡಿ ಪ್ರಾರಂಭಿ ಸಿದರು. ಆರಂಭದಲ್ಲಿ ವರಮಾನ ಕಡಿಮೆ ಇದ್ದ ಕಾರಣ ತಮ್ಮ ನೆರೆಯವರೊಂದಿಗೆ ಪಾಲುದಾರಿಕೆಯಲ್ಲಿ ಹಾಲು ಡೇರಿ ವ್ಯವಹಾರವನ್ನು ಅರೆಕಾಲಿಕವಾಗಿ ಮಾಡಲಾರಂಭಿಸಿದರು. ಇದರಿಂದಾಗಿ ಅವರ ವರಮಾನ ವೃದ್ಧಿಯಾಯಿತಲ್ಲದೆ ಅವರ ಅಂಗಡಿಗೆ ಹೆಚ್ಚಿನ ಗ್ರಾಹಕರು ಬರುವಂತಾಯಿತು.

ಮಂಜು ‘1ಬ್ರಿಜ್‌’ ಗ್ರಾಮೀಣ ವಾಣಿಜ್ಯ ನೆಟ್‌ ವರ್ಕ್ ಕಡೆಗೆ ಆಕರ್ಷಿತರಾದರು. 1ಬ್ರಿಜ್‌ನ ಸಲಹೆ ಗಾರರಾಗಿ ಕೂಡ ಕೆಲಸ ಮಾಡಲಾರಂಭಿಸಿದರು. ಆನ್‌ಲೈನ್ ಮುಖಾಂತರ ಡಿಶ್‌ ರಿಚಾರ್ಜ್, ಮೊಬೈಲ್ ರಿಚಾರ್ಜ್, ಪಾನ್ ಕಾರ್ಡ್ ಸೇವೆಗಳು ಇತ್ಯಾದಿಗಳನ್ನು ಒದಗಿಸಲಾರಂಭಿಸಿದರು. ಮೊಬೈಲ್ ರಿಪೇರಿ ಮತ್ತು ರಿಚಾರ್ಜ್ ವ್ಯವಹಾರವನ್ನು ಮುಂದುವರೆಸುವ ತೀರ್ಮಾನವು ಮಂಜು ಅವರಿಗೆ ಕೋವಿಡ್–19 ಸಾಂಕ್ರಾಮಿಕ ಸೃಷ್ಟಿಸಿದ ಸಮಸ್ಯೆಗಳನ್ನು ಎದುರಿಸಲು ನೆರವಾಯಿತು. ಲಾಕ್‌ಡೌನ್ ಕಾರಣದಿಂದ ಇತರ ವಾಣಿಜ್ಯ ವ್ಯವಹಾರಗಳು ಕುಸಿತ ಕಂಡರೂ, ಮಂಜು ತಮ್ಮ ಮೊಬೈಲ್ ಅಂಗಡಿಯನ್ನು ಯಶಸ್ವಿಯಾಗಿ ನಡೆಸಿದರು. ಅವರ ಗ್ರಾಮದಲ್ಲಿ ವಿವಿಧ ಸೇವೆಗಳನ್ನು ಒದಗಿಸುವ ಮತ್ತಾವುದೇ ಅಂಗಡಿ ಇಲ್ಲವಾದ ಕಾರಣ ಮಂಜು ಅವರಿಗೆ ತಮ್ಮ ವಹಿವಾಟಿನಲ್ಲಿ ಕುಸಿತ ಎದುರಾಗಲಿಲ್ಲ.

ಮಂಜು ಅವರ ವರಮಾನವು ಕಾಲಕ್ರಮೇಣ ಹೆಚ್ಚಳವಾಯಿತು. ಕೂಲಿ ಕೆಲಸಕ್ಕೆ ಹೋಗುವುದು ಸಾಕು ಎಂದು ತಮ್ಮ ತಂದೆಗೆ ಸಲಹೆ ನೀಡಿದರು. ‘ನಾನು ಸುಮಾರು ₹ 10 ಸಾವಿರ ವ್ಯಯಿಸಿ ನನ್ನ ತಂದೆಯವರಿಗೆ ಎಂಟು ಕುರಿಗಳನ್ನು ಖರೀದಿಸಿ ಕೊಟ್ಟೆ. ಈಗ ನಮ್ಮ ಬಳಿ 24 ಕುರಿಗಳ ಮಂದೆಯಿದೆ. ನನ್ನ ವ್ಯವಹಾರದೊಂದಿಗೆ ನನ್ನ ತಂದೆ ಕೂಡ ಈಗ ಕುರಿ ಸಾಕಾಣಿಕೆಯಲ್ಲಿ ತೊಡಗಿದ್ದಾರೆ’ ಎಂದು ಮಂಜು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT