ಶುಕ್ರವಾರ, ಜುಲೈ 1, 2022
24 °C
ಸ್ಫೂರ್ತಿಯ ಉದ್ಯಮಿ

ಆಹಾರೋದ್ಯಮದ ಆಕಸ್ಮಿಕ ಆರಂಭ

ಎಂ. ಶ್ರೀನಿವಾಸ ರಾವ್ Updated:

ಅಕ್ಷರ ಗಾತ್ರ : | |

Prajavani

ಆಹಾರೋದ್ಯಮ ಕ್ಷೇತ್ರಕ್ಕೆ ಉಷಾ ಅವರ ಪ್ರವೇಶ ಒಂದು ಆಕಸ್ಮಿಕ. ‘ಆರೋಗ್ಯಕರ ಆಹಾರ’ದ ಲಭ್ಯತೆ ಸೀಮಿತ ಎಂಬ ವಿಚಾರವಾಗಿ ಮನೆಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಉಷಾ ಅವರಿಗೆ ತಾವೇ ಏಕೆ ಒಂದು ಉದ್ಯಮ ಆರಂಭಿಸಬಾರದು ಎಂಬ ಆಲೋಚನೆ ಬಂತು. ವೃತ್ತಿಯಿಂದ ಆಗಷ್ಟೇ ದೀರ್ಘಕಾಲದ ರಜೆ ಪಡೆದಿದ್ದ ಉಷಾ ಅವರ ಮನದಲ್ಲಿ ‘ಆರೋಗ್ಯಕರ ಆಹಾರ’ದ ಪರಿಕಲ್ಪನೆ ಪದೇಪದೇ ಕಾಡಲಾರಂಭಿಸಿತ್ತು.

ನ್ಯೂಟ್ರಿಷನ್ ವಿಷಯದಲ್ಲಿ ಪದವಿ ಪಡೆದು ಅಭಿವೃದ್ಧಿ ಕಾರ್ಯಗಳ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಉಷಾ, ಸಣ್ಣ ಮಟ್ಟಿಗೆ ತರಬೇತಿ ಪಡೆದಿರುವ ಅಥವಾ ಯಾವುದೇ ಕೌಶಲ ಹೊಂದಿರದ ಇಬ್ಬರು ಮಹಿಳೆಯರು ನಡೆಸಬಹುದಾದ ಸಣ್ಣ ಅಡುಗೆ ಮನೆ ಮಾದರಿ ರೂಪಿಸಿದರು. ಈ ಮಾದರಿಯ ಕಾರ್ಯಕ್ಷಮತೆಯನ್ನು ಪರೀಕ್ಷಿಸುವ ಸಲುವಾಗಿ ಉಷಾ, ಬೆಂಗಳೂರು ಸಮೀಪದ ಹೊಸೂರಿನ ತಮ್ಮ ಸಂಬಂಧಿಯ ಗ್ಯಾರೇಜಿನಲ್ಲಿ ಸಣ್ಣ ಪ್ರಮಾಣದಲ್ಲಿ ಆಹಾರೋದ್ಯಮ ಪ್ರಾರಂಭಿಸಿದರು. ತಮಗೆ ನೆರವು ನೀಡಲು ಇಬ್ಬರು ಮಹಿಳೆಯರನ್ನು ನೇಮಕ ಮಾಡಿಕೊಂಡರು.

ಹೊಸೂರು ಒಂದು ಔದ್ಯಮಿಕ ಪಟ್ಟಣ. ಇಲ್ಲಿ ಪ್ರತಿದಿನ ಎರಡು ಲಕ್ಷಕ್ಕೂ ಹೆಚ್ಚು ಪ್ಲೇಟ್ ಭೋಜನ ಸರಬರಾಜಾಗುತ್ತದೆ ಎಂಬುದನ್ನು ತಿಳಿದ ಉಷಾ ಅವರಿಗೆ ಇಲ್ಲಿ ಉದ್ಯಮ ಆರಂಭಿಸುವ ಅವಕಾಶ ಇರುವುದು ಕಂಡುಬಂತು. ಪರಿಣಾಮವಾಗಿ ‘ಪೂರಣ’ ಪ್ರಾರಂಭವಾಯಿತು. ಮೊದಲು ಪ್ರತಿದಿನ ಕೇವಲ 10 ಪ್ಲೇಟ್‌ ಊಟಕ್ಕೆ ಆರ್ಡರ್ ಬರುತ್ತಿತ್ತು, ಇಷ್ಟನ್ನು ಇಬ್ಬರು ಮಹಿಳೆಯರು ಸಿದ್ಧಪಡಿಸುತ್ತಿದ್ದರು. ಉದ್ಯಮ ಪ್ರಾರಂಭಿಸಿದ ಕೇವಲ ಮೂರು ತಿಂಗಳ ಅವಧಿಯಲ್ಲಿ ಬರುವ ಆರ್ಡರ್‌ಗಳ ಸಂಖ್ಯೆ ದಿನವೊಂದಕ್ಕೆ ಐದುನೂರನ್ನು ಮೀರಿತು. 15 ಮಹಿಳೆಯರನ್ನು ಆಹಾರ ತಯಾರಿಕೆಗಾಗಿ ನೇಮಕ ಮಾಡಿಕೊಳ್ಳಲಾಯಿತು. ಗ್ರಾಹಕರ ಸಂಖ್ಯೆ ಹೆಚ್ಚಿದಂತೆ ವಿಶಾಲವಾದ ಕಟ್ಟಡದ ಅವಶ್ಯಕತೆಯೂ ಎದುರಾಯಿತು.

ಗ್ಯಾರೇಜಿನಿಂದ ಹೊರಬಂದ ‘ಪೂರಣ’ ವಿಶೇಷಆರ್ಥಿಕ ವಲಯದಲ್ಲಿ, ಉದ್ಯಮಗಳಿಗೆ ಸನಿಹವಾದ ಸ್ಥಳದಲ್ಲಿ ಕಾರ್ಯಾರಂಭ ಮಾಡಿತು. ಪ್ರಾರಂಭದ ದಿನಗಳಲ್ಲಿ ಉಷಾ ಅವರು ಎದುರಿಸಿದ ಪ್ರಮುಖ ಸವಾಲು ಮಹಿಳೆಯರಿಗೆ ಕೌಶಲಗಳನ್ನು ಕಲಿಸಿಕೊಡುವುದು. ಈ ಉದ್ದೇಶಕ್ಕಾಗಿಯೇ ವೃತ್ತಿನಿರತ ಬಾಣಸಿಗರನ್ನು ನೇಮಕ ಮಾಡಿಕೊಂಡರೂ, ಪ್ರತಿ ಹೆಜ್ಜೆಯಲ್ಲೂ ಅವರು ತಮ್ಮ ನೌಕರರಿಗೆ ಮಾರ್ಗದ ರ್ಶನ ನೀಡಬೇಕಿತ್ತು. ನೌಕರರಲ್ಲಿ ಅಶಿಕ್ಷಿತರಿದ್ದರು, ಪೂರ್ತಿ ಯಾಗಿ ಶಿಕ್ಷಣ ಪಡೆಯದವರೂ ಇದ್ದರು. ಇಂಡೆಂಟ್ ತಯಾರಿಸುವುದು ಮತ್ತಿತ್ತರ ಲೆಕ್ಕಚಾರಗಳಲ್ಲಿ ಉಷಾ, ಅವರಿಗೆ ಮಾರ್ಗದರ್ಶನ ನೀಡಬೇಕಾಗುತ್ತಿತ್ತು. ಈ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಉಷಾ ಉಪಾಯವೊಂದನ್ನು ಕಂಡುಕೊಂಡರು.‌

ಚಿತ್ರಗಳು ಮತ್ತು ಸಂಖ್ಯೆಗಳನ್ನೊಳಗೊಂಡ ಚಾರ್ಟ್‌ ಗಳನ್ನು ಅವರು ಸಿದ್ಧಪಡಿಸಿದರು. ಈ ಚಾರ್ಟ್‌ಗಳ ಮೂಲಕ ಸಿಬ್ಬಂದಿಗೆ ಉದ್ಯಮದ ಹಣಕಾಸಿನ ವಿಚಾರಗಳ ಬಗ್ಗೆ ಮಾಹಿತಿಯನ್ನು ಸುಲಭವಾಗಿ ತಿಳಿಸಲಾಯಿತು. ಮಹಿಳಾ ಸಿಬ್ಬಂದಿ ಹಂತಹಂತವಾಗಿ ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಆರಂಭಿಸಿದರು. ಉದ್ಯಮ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದಂತೆಯೇ ಉಷಾ ಅವರು ಮತ್ತೊಂದು ಸವಾಲನ್ನು ಎದುರಿಸಬೇಕಾಯಿತು. ಅವರು ಬಾಡಿಗೆ ಪಡೆದಿದ್ದ ಕಟ್ಟಡದ ಮಾಲೀಕ ಕೂಡ ಅಂಥದ್ದೇ ಉದ್ಯಮ ಪ್ರಾರಂಭಿಸಲು ನಿರ್ಧ ರಿಸಿ, ಈ ಉದ್ದೇಶಕ್ಕಾಗಿ ಕಟ್ಟಡವನ್ನು ಖಾಲಿ ಮಾಡುವಂತೆ ಉಷಾ ಅವರಿಗೆ ತಿಳಿಸಿದರು!

ಐದು ವರ್ಷಗಳ ಅವಧಿಯ ಬಾಡಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಕೈಗಾರಿಕಾ ಸಂಸ್ಥೆಗಳು ಮತ್ತು ಕೆಲವು ಗಣ್ಯ ವ್ಯಕ್ತಿಗಳ ಮಧ್ಯಸ್ಥಿಕೆಯ ನಂತರ, ಕಟ್ಟಡದ ಮಾಲೀಕ ತನ್ನ ಆಗ್ರಹ ಕೈಬಿಟ್ಟು, ಉಷಾ ಅವರು ತಮ್ಮ ಉದ್ಯಮವನ್ನು ಅದೇ ಕಟ್ಟಡದಲ್ಲಿ ಮುಂದುವರಿಸಿಕೊಂಡು ಹೋಗಲು ಸಮ್ಮತಿಸಿದರು.

ಕೋವಿಡ್–19 ಕಾರಣದಿಂದಾಗಿ ವಿಶೇಷ ಆರ್ಥಿಕ ವಲಯದಲ್ಲಿನ ಎಲ್ಲ ಕೈಗಾರಿಕೆಗಳ ಬಾಗಿಲು ಮುಚ್ಚುವಂತಾಯಿತು. ಊಟಕ್ಕೆ ಬೇಡಿಕೆಯಿಲ್ಲದ ಕಾರಣ ‘ಪೂರಣ’ದ ಕೆಲಸ ಸಂಪೂರ್ಣ ಸ್ಥಗಿತಗೊಂಡಿತು. ಈ ಸಂಕಷ್ಟದ ಅವಧಿಯನ್ನು ಉಷಾ ಅವಕಾಶವನ್ನಾಗಿ ಪರಿವರ್ತಿಸಿಕೊಂಡರು. ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಉತ್ಪನ್ನಗಳ ಕುರಿತು ಮಾಹಿತಿ ಪಡೆದು, ಇಡ್ಲಿ ಮತ್ತು ದೋಸೆ ಹಿಟ್ಟು ತಯಾರಿಕೆ, ಸ್ನ್ಯಾಕ್‌ಗಳು, ಜಾಮ್ ಮತ್ತು ಉಪ್ಪಿನಕಾಯಿಗಳನ್ನು ತಯಾರು ಮಾಡುವ ತರಬೇತಿಯನ್ನು ತಮ್ಮ ಸಿಬ್ಬಂದಿಗೆ ನೀಡಿದರು.

ಈ ಉತ್ಪನ್ನಗಳನ್ನು ಸ್ಥಳೀಯ ಅಂಗಡಿಗಳಿಗೆ ಸರಬರಾಜು ಮಾಡಲಾರಂಭಿಸಿದರು. ಜೂನ್ ತಿಂಗಳಲ್ಲಿ ‘ಪೂರಣ’ ಪುನಃ ಕಾರ್ಯಾರಂಭ ಮಾಡಿದರೂ, ಊಟದ ಬೇಡಿಕೆ ಶೇಕಡ 75ರಷ್ಟಕ್ಕಿಂತ ಹೆಚ್ಚು ಕುಸಿದಿತ್ತು. ಕೈಗಾರಿಕೆಗಳು ಕನಿಷ್ಠ ಸಂಖ್ಯೆಯ ಕೆಲಸಗಾರರೊಂದಿಗೆ ಕಾರ್ಯಾಚರಣೆ ಮಾಡುತ್ತಿದ್ದವು. ಹೀಗಾಗಿ ಇಡ್ಲಿ/ದೋಸೆ ಹಿಟ್ಟು, ಸ್ನ್ಯಾಕ್ಸ್‌, ಜಾಮ್ ಮತ್ತು ಉಪ್ಪಿನಕಾಯಿ ತಯಾರಿಕೆಯನ್ನು ಅವರು ಮುಂದುವರಿಸಿದರು. ಅವರ ಪ್ರಯತ್ನಕ್ಕೆ ಫಲ ದೊರೆಯಿತು. ಕಾಲಕ್ರಮೇಣ ಬೇಡಿಕೆ ಹೆಚ್ಚಾಯಿತು. ಮುಂದೆ ಪ್ರತಿದಿನ 500ಕ್ಕೂ ಹೆಚ್ಚು ಮಂದಿಗೆ ಊಟ ಸರಬರಾಜು ಮಾಡುವ ಭರವಸೆಯನ್ನು ಉಷಾ ಮತ್ತು ಅವರ ಸಿಬ್ಬಂದಿ ಹೊಂದಿದ್ದಾರೆ.

ಮಹಿಳೆಯರು ಸವಾಲುಗಳನ್ನು ಸ್ವೀಕರಿಸುವ ಮತ್ತು ಯಾವುದೇ ಅಡಚಣೆಯನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದು ಉಷಾ ಅವರ ದೃಢ ನಂಬಿಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು