ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫಲದಾ ಅಗ್ರೊ’ದ ಸಾವಯವ ಯಶಸ್ಸು

Last Updated 12 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಸಾವಯವ ಕೃಷಿ ಉತ್ಪನ್ನಗಳ ವಹಿವಾಟಿನಲ್ಲಿ ತೊಡಗಿಕೊಂಡಿರುವ ಬೆಂಗಳೂರಿನ ಫಲದಾ ಅಗ್ರೊ ರಿಸರ್ಚ್‌ ಫೌಂಡೇಷನ್‌ (Phalada Agro Research Foundation) ಬಹಳ ವರ್ಷಗಳಿಂದಲೂ ಈ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುತ್ತ ಬಂದಿದೆ.

2001ರಲ್ಲಿಯೇ ಸಂಸ್ಥೆಯು ಸಾವಯವ ಕೃಷಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರ ನೀಡಲು ಆರಂಭಿಸಿತ್ತು. ಆರಂಭದಲ್ಲಿ ದೇಶದಲ್ಲಿ ಸಾವಯವ ಉತ್ಪನ್ನಗಳಿಗೆ ವಿಶಾಲ ಮಾರುಕಟ್ಟೆ ಇದ್ದಿರಲಿಲ್ಲ. ಹೀಗಾಗಿ ವಿದೇಶಗಳಲ್ಲಿನ ಅವಕಾಶಗಳ ಬಾಗಿಲು ಬಡಿದಿತ್ತು. ಸದ್ಯಕ್ಕೆ 20 ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ದೇಶಿ ಮಾರುಕಟ್ಟೆಯಲ್ಲಿಯೂ ಸಾವಯವ ಉತ್ಪನ್ನ, ಸಿರಿಧಾನ್ಯಗಳ ಬಗ್ಗೆ ಹೆಚ್ಚಿನ ಒಲವು ಕಂಡು ಬರುತ್ತಿರುವುದರಿಂದ ಈಗ ಸ್ಥಳೀಯ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದೆ. ಈಗಾಗಲೇ ಸಂಸ್ಥೆಯು 160ಕ್ಕೂ ಹೆಚ್ಚು ‍ಪ್ರಮಾಣೀಕೃತ ಉತ್ಪನ್ನಗಳ ವಹಿವಾಟಿನಲ್ಲಿ ತೊಡಗಿದೆ.

ಭಾರತೀಯ ಮಸಾಲೆ ಮಂಡಳಿಯಿಂದ ಸಾವಯವ ಮಸಾಲೆ ಉತ್ಪನ್ನಗಳ ಮುಂಚೂಣಿ ಸಂಸ್ಥೆ ಪ್ರಶಸ್ತಿಗೆ ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದಿಂದ (ಎಫ್‌ಕೆಸಿಸಿಐ) ಸತತ ಮೂರು ವರ್ಷಗಳ ಕಾಲ ‘ಅತ್ಯುತ್ತಮ ರಫ್ತು’ ಸಂಸ್ಥೆ ಪ್ರಶಸ್ತಿಗೆ ಭಾಜನವಾಗಿದೆ. 2011ರಲ್ಲಿ ದೇಶಿ ಮಾರುಕಟ್ಟೆಗೆ ‘ಫಲದಾ ಪ್ಯೂರ್‌ ಆ್ಯಂಡ್‌ ಸ್ಯೂರ್‌’ ಬ್ರ್ಯಾಂಡ್‌ನಡಿ 10 ಉತ್ಪನ್ನಗಳನ್ನು ಪರಿಚಯಿಸಿದ ಸಂಸ್ಥೆಯ ಬಳಿ ಈಗ 160ಕ್ಕೂ ಹೆಚ್ಚು ಬಗೆಯ ಉತ್ಪನ್ನಗಳು ಇವೆ.

1999 ರಲ್ಲಿ ಕೃಷಿಗೆ ಸಂಬಂಧಿಸಿದ ಕಚ್ಚಾ ಸರಕು ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿದ್ದ ಸಂಸ್ಥೆಯು ಕ್ರಮೇಣ ಸಾವಯವ ಉತ್ಪನ್ನಗಳ ವಹಿವಾಟಿನತ್ತ ಗಮನ ಕೇಂದ್ರೀಕರಿಸಿತ್ತು. ಹಲವಾರು ದೇಶಗಳಲ್ಲಿನ ಬೇಡಿಕೆ ಕಾರಣಕ್ಕೆ ಸ್ಥಳೀಯ ರೈತರನ್ನು ಸಾವಯವ ಕೃಷಿಯಲ್ಲಿ ತೊಡಗುವಂತೆ ಪ್ರೇರಣೆ ನೀಡಲು ಸಂಸ್ಥೆಯು 2002ರಲ್ಲಿ ಮುಂದಾಗಿತ್ತು. ಈ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ, ಖರೀದಿ ಭರವಸೆ ನೀಡಿ ಅಗತ್ಯವಾದ ತರಬೇತಿ ಒದಗಿಸಿ, ಲಾಭದಾಯಕ ಬೆಲೆ ಒದಗಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿತ್ತು.

2002ರಲ್ಲಿ ಸಾವಯವ ಉತ್ಪನ್ನಗಳನ್ನು ಬೆಳೆಯಲು ಆಸಕ್ತಿ ತೋರಿದ ರೈತರನ್ನು ಗುರುತಿಸಿ, ಅಂತರರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಅವರಿಗೆ ಪ್ರಮಾಣಪತ್ರ ನೀಡಿ ಗುತ್ತಿಗೆ ಕೃಷಿ ಒಪ್ಪಂದದ ಅಡಿ ಅವರಿಂದ ಸರಕು ಖರೀದಿಸುತ್ತಿದೆ.

ರೈತರು ಸಾವಯವ ಕೃಷಿಯನ್ನು ಕ್ರಮಬದ್ಧವಾಗಿ ಮಾಡುವ ಬಗ್ಗೆ ಸಂಸ್ಥೆಯ ಕ್ಷೇತ್ರ ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸುವ ವ್ಯವಸ್ಥೆ ಇಲ್ಲಿದೆ. ರೈತರು ಎದುರಿಸುವ ಸಮಸ್ಯೆಗಳನ್ನು ಪರಿಹರಿಸಲೂ ಈ ಅಧಿಕಾರಿಗಳು ನೆರವಾಗುತ್ತಾರೆ. ಬೆಳೆದ ಸರಕನ್ನು ಸಂಸ್ಥೆಯೇ ನೇರವಾಗಿ ಖರೀದಿಸುವುದರಿಂದ ರೈತರ ಪಾಲಿಗೆ ಖಚಿತ ಮಾರುಕಟ್ಟೆ ವ್ಯವಸ್ಥೆ ಇಲ್ಲಿದೆ. ಹೀಗಾಗಿ ಈ ಪದ್ಧತಿ ಅಳವಡಿಸಿಕೊಂಡವರು ಸಂಸ್ಥೆಯ ಜತೆಗಿನ ಬಾಂಧವ್ಯವನ್ನು ವರ್ಷಗಳಿಂದ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಸಂಸ್ಥೆಯ ಬಳಿ ಸದ್ಯಕ್ಕೆ ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ ರಾಜ್ಯಗಳಲ್ಲಿ 2000 ರೈತರು ಇದ್ದಾರೆ.

ವಿವಿಧ ಕಡೆಗಳಲ್ಲಿ ಬೆಳೆಯುವ ಉತ್ಪನ್ನವನ್ನು ಬೆಂಗಳೂರು ಹೊರ ವಲಯದ ಮಾಗಡಿ ರಸ್ತೆಯಲ್ಲಿನ 4 ಎಕರೆ ಪ್ರದೇಶದಲ್ಲಿನ ಕಾರ್ಖಾನೆಯಲ್ಲಿ ಸಂಸ್ಕರಿಸಿ 20 ದೇಶಗಳಿಗೆ ಪ್ರತ್ಯೇಕ ಬ್ರ್ಯಾಂಡ್‌ನಡಿ ರಫ್ತು ಮಾಡಲಾಗುತ್ತಿದೆ.

ವಿದೇಶಿ ವಹಿವಾಟು ವಿಸ್ತರಣೆಯಾಗುತ್ತಿರುವುದರ ಜತೆಗೆ ದೇಶದಲ್ಲಿಯೂ ಕ್ರಮೇಣ ಇಂತಹ ಉತ್ಪನ್ನಗಳ ಬಳಕೆ ಬಗ್ಗೆ ಒಲವು ಹೆಚ್ಚತೊಡಗಿತ್ತು. ಹೀಗಾಗಿ ಸಂಸ್ಥೆಯು 2011ರಲ್ಲಿ ದೇಶಿ ಮಾರುಕಟ್ಟೆ ಪ್ರವೇಶಿಸಿತ್ತು. ಸಂಸ್ಥೆಯ ವೈವಿಧ್ಯಮಯ ಉತ್ಪನ್ನಗಳು ಈಗ ಎಲ್ಲ ರಾಜ್ಯಗಳಲ್ಲಿ ದೊರೆಯುತ್ತಿವೆ.

ಇನ್‌ಸ್ಟಂಟ್‌ ಮಿಕ್ಸ್‌, ಪೇಸ್ಟ್‌, ಕುರುಕಲು ತಿಂಡಿ, ಬೇಳೆ, ಧಾನ್ಯ, ಆರೋಗ್ಯಕರ ಪೇಯ ಸೇರಿದಂತೆ 160 ಬಗೆಯ ಉತ್ಪನ್ನಗಳನ್ನು ಸಂಸ್ಥೆಯು ದೇಶಿ ಮಾರುಕಟ್ಟೆಗೆ ಪರಿಚಯಿಸಿದೆ.

ಸ್ಟೋರ್‌ + ಕೆಫೆ ಪರಿಕಲ್ಪನೆ
‘ಈಗ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗಲು, ಅವರಿಗೆ ಸಾವಯವ ಮತ್ತು ಸಿರಿಧಾನ್ಯಗಳ ತಿಂಡಿ, ಆಹಾರ ಪದಾರ್ಥಗಳನ್ನು ಪರಿಚಯಿಸಲು ಸ್ಟೋರ್‌ ಮತ್ತು ಕೆಫೆ ಪರಿಕಲ್ಪನೆಯಲ್ಲಿ ವಹಿವಾಟು ವಿಸ್ತರಿಸಲು ಸಂಸ್ಥೆ ಕ್ರಮ ಕೈಗೊಂಡಿದೆ. ಇಂತಹ ಉತ್ಪನ್ನಗಳ ರುಚಿ ಬಗೆಗಿನ ತಪ್ಪು ಕಲ್ಪನೆ ದೂರ ಮಾಡುವುದು ಈ ಕೆಫೆಯ ಮುಖ್ಯ ಉದ್ದೇಶವಾಗಿದೆ.

‘ಬೆಂಗಳೂರಿನಲ್ಲಿ ನಾಲ್ಕು ಪ್ರಮುಖ ಬಡಾವಣೆಗಳಲ್ಲಿ ಈ ವಿಶಿಷ್ಟ ಕೆಫೆಗಳನ್ನು ಆರಂಭಿಸಲಾಗುವುದು. ಸಂಸ್ಥೆಯು ತನ್ನದೇ ಪಾಕ ವಿಧಾನಗಳನ್ನು ಅಭಿವೃದ್ಧಿಪಡಿಸಿದೆ. ‘ಲೈವ್‌ ಕಿಚನ್‌ ಕಾನ್ಸೆಪ್ಟ್‌’ನಡಿ ಈ ಕೆಫೆಗಳನ್ನು ರೂಪಿಸಲಾಗಿದೆ. ತಿಂಗಳಲ್ಲಿ ಒಂದೆರಡು ದಿನ ಅಡುಗೆ ತಯಾರಿಕೆ ತರಬೇತಿ ಕಾರ್ಯಕ್ರಮವನ್ನೂ ಆಯೋಜಿಸಲಾಗುವುದು. ಕೆಫೆಗಳಿಗಾಗಿ ₹ 4 ರಿಂದ ₹ 5 ಕೋಟಿ ವೆಚ್ಚ ಮಾಡಲಾಗುತ್ತಿದೆ. ಕ್ರಮೇಣ ಫ್ರಾಂಚೈಸಿ ಮಾದರಿಯಲ್ಲಿ ವಹಿವಾಟು ವಿಸ್ತರಣೆ ಮಾಡಲಾಗುವುದು’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸೂರ್ಯ ಶಾಸ್ತ್ರಿ ಹೇಳುತ್ತಾರೆ.

‘ಸಂಸ್ಥೆಯ ಆನ್‌ಲೈನ್‌ ಮಾರುಕಟ್ಟೆ ಬೆಳವಣಿಗೆಯೂ ಪ್ರಗತಿಯಲ್ಲಿ ಇದೆ. ಅಮೆಜಾನ್‌, ಬಿಗ್‌ಬಾಸ್ಕೆಟ್‌ಗಳ ಮೂಲಕ, ಸ್ವಂತದ ಆನ್‌ಲೈನ್‌ ಮಾರುಕಟ್ಟೆ ಮೂಲಕ ಮಾರಾಟ ಮಾಡಲಾಗುತ್ತಿದೆ.

‘ಜಪಾನ್‌, ಯುರೋಪ್‌, ಅಮೆರಿಕದ ರಫ್ತು ಮಾನದಂಡಕ್ಕೆ ಅನುಗುಣವಾಗಿ ಉತ್ಪನ್ನ ರಫ್ತು ಮಾಡಲಾಗುತ್ತಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಐ) ‘ಜೈವಿಕ್‌ ಭಾರತ್‌’ ಹೆಸರಿನಡಿ ಸಾವಯವ ಉತ್ಪನ್ನಗಳಿಗೆ ಪ್ರತ್ಯೇಕ ಮಾನದಂಡ ನಿಗದಿಪಡಿಸಿದೆ. ಅದಕ್ಕೆ ಅನುಗುಣವಾಗಿಯೇ ಉತ್ಪನ್ನಗಳನ್ನು ತಯಾರಿಸಲಾಗುವುದು’ ಎಂದೂ ಅವರು ಹೇಳುತ್ತಾರೆ.

‘ರಫ್ತು ವಹಿವಾಟಿನಲ್ಲಿ ಇದಕ್ಕೂ ಮೊದಲು ಮಸಾಲೆಯಂತಹ ಒಣ ಉತ್ಪನ್ನಗಳನ್ನಷ್ಟೆ ರಫ್ತು ಮಾಡಲಾಗುತ್ತಿತ್ತು. ಈಗ ತಾಜಾ ಕೃಷಿ ಉತ್ಪನ್ನಗಳನ್ನು ವಿದೇಶಕ್ಕೆ ನೇರವಾಗಿ ರಫ್ತು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

‘ಸಂಸ್ಥೆಯು ಮಾಗಡಿ, ಕೊಳ್ಳೆಗಾಲ, ಗದಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸ್ವಂತಕ್ಕೆ 200 ಎಕರೆ ಭೂಮಿ ಹೊಂದಿದೆ. ಇಲ್ಲಿ ರೈತರಿಗೆ ಪ್ರಾಯೋಗಿಕ ಅನುಭವ ನೀಡಲಾಗುವುದು. ಎಳೆ ಹಲಸಿನ ಹಣ್ಣಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಮಾಂಸ ಸೇವನೆ ತ್ಯಜಿಸುವವರಿಗೆ ಎಳೆ ಹಲಸಿನ ಹಣ್ಣು, ಮಾಂಸ ಸೇವನೆಯ ಬಾಯಿ ರುಚಿ ಕೊಡುವ ಕಾರಣಕ್ಕೆ ಅದರ ಬಳಕೆ ಹೆಚ್ಚುತ್ತಿದೆ. ಹೀಗಾಗಿ ರೈತರನ್ನು ವಾಣಿಜ್ಯ ಉದ್ದೇಶಕ್ಕೆ ಹಲಸು ಬೆಳೆಸಲು ಪ್ರೋತ್ಸಾಹಿಸಲಾಗುತ್ತಿದೆ’ ಎಂದೂ ಅವರು ಹೇಳುತ್ತಾರೆ.

ತಂದೆ ಸ್ಥಾಪಿಸಿದ್ದ ಕಂಪನಿಯಲ್ಲಿ 2008ರಲ್ಲಿ ಸೇರಿಕೊಂಡ ಸೂರ್ಯ ಶಾಸ್ತ್ರಿ ಅವರು, ವಿವಿಧ ವಿಭಾಗಗಳಲ್ಲಿ ತರಬೇತಿ ಪಡೆದು ಈಗ ವ್ಯವಸ್ಥಾಪಕ ಹುದ್ದೆ ನಿಭಾಯಿಸುತ್ತಿದ್ದಾರೆ.

***
* 75;25 : ಸಂಸ್ಥೆಯ ರಫ್ತು ಮತ್ತು ದೇಶಿ ವಹಿವಾಟಿನ ಅನುಪಾತ
* ₹ 2,500 ರಿಂದ ₹ 3,000 ಕೋಟಿ: ಸಾವಯವ ಉತ್ಪನ್ನಗಳ ಮಾರುಕಟ್ಟೆ ಗಾತ್ರ
* ₹ 400 ಕೋಟಿಗಳಿಂದ ₹ 500 ಕೋಟಿ; ಸಂಘಟಿತ ರೂಪದ ದೇಶಿ ಮಾರುಕಟ್ಟೆ ಗಾತ್ರ
* 20 %: ದೇಶಿ ವಹಿವಾಟಿನ ವಾರ್ಷಿಕ ಬೆಳವಣಿಗೆ ದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT