ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೂರ್ತಿಯ ಉದ್ಯಮಿ: ಇರಲಿ ಮುನ್ನುಗ್ಗುವ ಛಾತಿ

Last Updated 10 ಮಾರ್ಚ್ 2021, 19:36 IST
ಅಕ್ಷರ ಗಾತ್ರ

ಬದುಕಿನಲ್ಲಿ ಕೆಲವು ಅನಿರೀಕ್ಷಿತ ತಿರುವುಗಳಿರುತ್ತವೆ. ಅದರಲ್ಲೂ, ನೀವು ನಿಮ್ಮ ಕನಸಿನ ಬೆನ್ನೇರಿ ಹೋಗುವಾಗ ಎದುರಾಗುವ ಅನಿರೀಕ್ಷಿತ ಘಟನೆಗಳು ಅದೆಷ್ಟೋ... ಪದ್ಮಜಾ ರಾವ್‌ ಅವರ ಕಥೆ ಕೂಡ ಇದಕ್ಕೆ ಹೊರತಲ್ಲ. ಪದ್ಮಜಾ ಅವರು 2019ರಲ್ಲಿ ಶುರುವಾದ ಮಾಡ್ಯುಲರ್‌ ಪೀಠೋಪಕರಣಗಳ ತಯಾರಿಕಾ ಸಂಸ್ಥೆ ‘ಅರ್ಬನ್‌ವುಡ್‌ ಇಂಟೀರಿಯರ್ಸ್‌’ನ ಸಹ ಸ್ಥಾಪಕರು ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥರು.

2004ರಲ್ಲಿ ಇನ್ಫೊಸಿಸ್ ಕಂಪನಿಯ ಮೂಲಕ ತಮ್ಮ ವೃತ್ತಿ ಬದುಕು ಆರಂಭಿಸಿದ ಪದ್ಮಜಾ, ನಂತರದಲ್ಲಿ ಡಾಯಿಷ್ ಬ್ಯಾಂಕ್‌ನಲ್ಲಿ ಕೆಲವು ವರ್ಷ ಕೆಲಸ ಮಾಡಿದರು. ಆದರೆ, ಅವರೊಳಗಿನ ಉದ್ಯಮಿಯ ಮನೋಭಾವ ಜಾಗೃತವಾಗಿ ಇತ್ತು. ‘ಒಳಾಂಗಣ ವಿನ್ಯಾಸ ನನ್ನನ್ನು ಸದಾ ಆಕರ್ಷಿಸುತ್ತಲೇ ಇತ್ತು. ಕಾಲೇಜಿನಲ್ಲಿರುವಾಗಲೇ ನಾನು ವಾಸ್ತುಶಿಲ್ಪಿಯಾಗುವ ಮತ್ತು ನನ್ನದೇ ಕಂಪನಿ ಆರಂಭಿಸುವ ಕನಸು ಕಾಣುತ್ತಿದ್ದೆ’ ಎನ್ನುತ್ತಾರೆ ಪದ್ಮಜಾ.

ಕೆಲವು ಮಾಡ್ಯುಲರ್‌ ಫ್ಯಾಕ್ಟರಿಗಳ ಬಿಸಿನೆಸ್‌ ಕನ್ಸಲ್ಟೆಂಟ್‌ ಆಗಿ ಒಳಾಂಗಣ ವಿನ್ಯಾಸ ಕ್ಷೇತ್ರಕ್ಕೆ ಅವರು ಪ್ರವೇಶ ಪಡೆದರು. ಕಂಪನಿಗಳ ಒಳಾಂಗಣ ವಿನ್ಯಾಸಗಳನ್ನು ಮಾರುಕಟ್ಟೆಗೆ ಪರಿಚಯಿಸುವುದು ಅವರ ಕೆಲಸವಾಗಿತ್ತು. ಆದರೆ ಪದ್ಮಜಾ ಅವರಲ್ಲಿ ತಮಗೆ ಇನ್ನೇನೋ ಬೇಕೆನ್ನುವ ತುಡಿತವಿತ್ತು. ತಮ್ಮ ಅನುಭವ ಬಳಸಿಕೊಂಡು ಅವರು ತಮ್ಮದೇ ವಹಿವಾಟು ಆರಂಭಿಸಿದರು. ಅರ್ಬನ್‌ವುಡ್‌ ಹಿಂದಿರುವ ಪ್ರೇರಣೆಯ ಬಗ್ಗೆ ಹೇಳುವ ಪದ್ಮಜಾ, ‘ನನ್ನ ತಾಯಿಯೇ ನನಗೆ ದೊಡ್ಡ ಪ್ರೇರಣೆ. ಅವರು ಸ್ವತಂತ್ರ ಮನೋಭಾವದ ಮಹಿಳೆ. ನಾನೂ ಅವರಂತಾಗಬೇಕು’ ಎನ್ನುತ್ತಾರೆ.

‘ನಮ್ಮ ಪ್ರತಿ ಯೋಜನೆಗೂ ನಾವು ನೂರಕ್ಕೆ ನೂರರಷ್ಟು ಶ್ರಮ ಹಾಕುತ್ತೇವೆ. ಗ್ರಾಹಕರಿಗೆ ತಾವು ನೀಡಿದ ಹಣಕ್ಕೆ ತೃಪ್ತಿ ಸಿಗುವಂತಹ ಕೆಲಸ ನಮ್ಮಿಂದ ಆಗಬೇಕು. ಅವರು ಬಯಸಿದಂತೆ ನಮ್ಮ ಕೆಲಸಗಳು ನಡೆಯಬೇಕು’ ಎಂದು ಪದ್ಮಜಾ ತಮ್ಮ ಯಶಸ್ಸಿನ ಗುಟ್ಟು ಹೇಳುತ್ತಾರೆ.

ಅರ್ಬನ್‌ವುಡ್‌ ಆರಂಭವಾದ ಕೆಲವೇ ಸಮಯದಲ್ಲಿ ಗ್ರಾಹಕರಿಗೆ ಹತ್ತಿರವಾದರೂ ಒಂದು ಹಂತದಲ್ಲಿ ಅಡ್ಡಿ–ಆತಂಕಗಳನ್ನು ಎದುರಿಸಬೇಕಾಯಿತು. ‘ಒಬ್ಬ ಅನನುಭವಿ ಉದ್ಯಮಿಯಾಗಿ, ಸಂಪನ್ಮೂಲಗಳ ಕುರಿತು ಹೆಚ್ಚು ತಿಳಿವಳಿಕೆಯಿಲ್ಲದೆ, ಹೂಡಿಕೆ ಇಲ್ಲದೆಯೇ ನಾನು ಈ ವಹಿವಾಟು ಆರಂಭಿಸಿದ್ದೆ. ನನ್ನ ಕಂಪನಿಯು ಬಹಳ ಬೇಗನೆ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಯಿತು. ಇದೇ ಹೊತ್ತಿಗೆ ಕೋವಿಡ್‌–19 ಪರಿಸ್ಥಿತಿಯೂ ಎದುರಾಯಿತು. ನಮ್ಮ ಎಲ್ಲ ಸಿಬ್ಬಂದಿ ತಮ್ಮ ಊರಿಗೆ ಹಿಂದಿರುಗಿದರು. ಅದು ಬಹಳ ಸಂಕಷ್ಟದ ಸಮಯವಾಗಿತ್ತು’ ಎಂದು ಪದ್ಮಜಾ ನೆನಪಿಸಿಕೊಳ್ಳುತ್ತಾರೆ.

ಸುಲಭಕ್ಕೆ ಸೋಲು ಒಪ್ಪಿಕೊಳ್ಳುವವರಲ್ಲದ ಪದ್ಮಜಾ, ಸವಾಲು ಎದುರಿಸಲು ದೃಢವಾಗಿ ನಿಂತರು. ‘ವಹಿವಾಟುಗಳನ್ನು ಮತ್ತೆ ಹಳಿಗೆ ತರಲು ಇರುವ ಅವಕಾಶಗಳನ್ನು ಹುಡುಕುವಾಗ, ಪ್ರಾಜೆಕ್ಟ್‌ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಬೇರೆಯವರಿಗೆ ಒಪ್ಪಿಸಿ, ಅವರು ಮಾಡುವ ಕೆಲಸಗಳ ಮೇಲ್ವಿಚಾರಣೆ ನಡೆಸುವ ಮಾರ್ಗ ನನಗೆ ಕಂಡಿತು. ಕೆಲವು ಬಡಗಿಗಳ ಜೊತೆ ನಾನು ಮಾತನಾಡಿದೆ. ಅವರು ಪ್ರತಿ ಚದರ ಅಡಿ ಕೆಲಸಕ್ಕೆ ಇಂತಿಷ್ಟು ಎಂದು ಶುಲ್ಕ ವಿಧಿಸುತ್ತಿದ್ದರು. ನಾನು ಅವರಿಗೆ ಅವರ ಸಾಮಾನ್ಯ ಶುಲ್ಕಕ್ಕಿಂತ ಚದರ ಅಡಿಗೆ ₹ 20 ಹೆಚ್ಚು ನೀಡುವುದಾಗಿ ಹೇಳಿದೆ. ಅವರಿಗೂ ಅದು ಸೂಕ್ತ ಅನ್ನಿಸಿತು. ಈ ಮೂಲಕ ಹೊಸ ಗುತ್ತಿಗೆಗಳು ದೊರೆತವು. ಅತಿ ಕಡಿಮೆ ಅವಧಿಯಲ್ಲಿ ಹಲವು ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಲು ನನಗೆ ಸಾಧ್ಯವಾಯಿತು’ ಎಂದು ಪದ್ಮಜಾ ಹೇಳಿದರು.

ಹಿನ್ನಡೆಯಲ್ಲಿದ್ದ ವಹಿವಾಟನ್ನು ಮತ್ತೆ ಮುಂದಕ್ಕೆ ತರಲು ನೆರವಾದ ತಮ್ಮ ಗುಣಗಳ ಬಗ್ಗೆ ಪ್ರಶ್ನಿಸಿದರೆ, ‘ಆಸಕ್ತಿ ಮತ್ತು ಸಾಧಿಸಬೇಕೆಂಬ ಛಲ ಮುಖ್ಯ ಕಾರಣ. ಅಪಾಯವನ್ನು ಎದುರಿಸುವುದು ನನ್ನ ಮನೋಭಾವ. ಉದ್ಯಮಕ್ಕೆ ಕಾಲಿಡಲು ಇದೇ ಕಾರಣ. ಇವುಗಳಿಲ್ಲದೇ ಯಶಸ್ಸು ಸಾಧಿಸಲು ಸಾಧ್ಯವೇ ಇಲ್ಲ’ ಎನ್ನುತ್ತಾರೆ. ಸಹ ಉದ್ಯಮಿಗಳಿಗೆ ಪದ್ಮಜಾ ಅವರು ಸರಳ ಸಲಹೆ ನೀಡುತ್ತಾರೆ: ‘ಪ್ರಾಮಾಣಿಕ ಉದ್ಯಮಿಯಾಗಿ. ನಿಮ್ಮ ವಹಿವಾಟನ್ನೂ ಗ್ರಾಹಕರನ್ನೂ ಚೆನ್ನಾಗಿ ನೋಡಿಕೊಳ್ಳಿ. ವಹಿವಾಟು ನಡೆಸುವಾಗ ವಾಸ್ತವದ ನೆಲೆಯಲ್ಲಿ ಚಿಂತಿಸಿ. ಮುನ್ನುಗ್ಗುವ ಮನೋಭಾವ ಮತ್ತು ಮಾಡುವ ಕೆಲಸದಲ್ಲಿ ಪ್ರೀತಿ ಇಲ್ಲದಿದ್ದರೆ ಯಶಸ್ಸು ಮರೀಚಿಕೆಯಾಗಿಯೇ ಉಳಿಯುತ್ತದೆ.’

ಎಂ. ಶ್ರೀನಿವಾಸ್ ರಾವ್
ಎಂ. ಶ್ರೀನಿವಾಸ್ ರಾವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT