ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿಯಾಗಲು ಕನಸು ಮುಖ್ಯ

ಸ್ಫೂರ್ತಿಯ ಉದ್ಯಮಿ
Last Updated 2 ಡಿಸೆಂಬರ್ 2020, 19:49 IST
ಅಕ್ಷರ ಗಾತ್ರ

ಮನೋಚಿಕಿತ್ಸಕರಾದ ಲಿಯಾನ್ ರೋಸ್ ಪಾಯಸ್ ಅವರು 2017ರಿಂದಲೂ ಬೆಂಗಳೂರಿನಲ್ಲಿ ತಮ್ಮ ವೃತ್ತಿ ನಡೆಸುತ್ತಿದ್ದಾರೆ. ಅವರು ವ್ಯಕ್ತಿಗಳಿಗೆ, ದಂಪತಿಗೆ, ಕೆಲವು ಕುಟುಂಬಗಳಿಗೆ ಮುಖಾಮುಖಿಯಾಗಿ ಸಲಹೆ–ಸಾಂತ್ವನ ಹೇಳುತ್ತಿದ್ದರು. ಹಾಗೆಯೇ, ವಿಡಿಯೊ ಮೂಲಕ ಕೂಡ ಈ ಕೆಲಸ ಮಾಡುತ್ತಿದ್ದರು. ಆದರೆ ಕೋವಿಡ್ ಸಾಂಕ್ರಾಮಿಕ ಅಪ್ಪಳಿಸಿದ ನಂತರ ಎಲ್ಲವೂ ಬದಲಾಯಿತು. ಅವರ ಅನೇಕ ಕಕ್ಷಿದಾರರು ಅವರು ಹಿಂದೆ ನೀಡಿದ್ದ ಸಲಹೆಗಳ ಟಿಪ್ಪಣಿಯನ್ನು ಕೇಳಲಾರಂಭಿಸಿದರು. ಆರಂಭದಲ್ಲಿ ಪಾಯಸ್ ಅವರು ಚಿಕ್ಕ ಲೇಖನಗಳನ್ನು ಕಳಿಸುತ್ತಿದ್ದರು. ಆದರೆ ನಂತರ, ಅನೇಕ ಜನರಿಗೆ ಉಪಯುಕ್ತವಾಗುವಂತೆ ಇನ್ನೂ ಹೆಚ್ಚು ಮಾಹಿತಿಯನ್ನು ನೀಡಬಹುದು ಎಂದು ಅವರಿಗೆ ಅನಿಸಿತು.

ಆಗ ಪಾಯಸ್ ಅವರು ಇನ್‌ಸ್ಟಾಗ್ರಾಂನಲ್ಲಿ ‘ದಿ ಅನ್‌ಓಪನ್ಡ್‌ ಬಾಕ್ಸ್‌’ (The Unopened Box) ಎಂಬ ಹೆಸರಿನಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪುಟವನ್ನು ಸೃಷ್ಟಿಸಿದರು. ಇದು ಈ ಸಂಕಷ್ಟದ ಸಮಯದಲ್ಲಿ ಜನರಿಗೆ ಮಾನಸಿಕವಾಗಿ ಭರವಸೆ ನೀಡುವಂತಹ ವಸ್ತುವಿಷಯ ಹೊಂದಿತ್ತು. ಇಲ್ಲಿ ಇದ್ದಿದ್ದೆಲ್ಲ ಪಾಯಸ್ ಅವರು ಬರೆದ ಬರಹಗಳಾಗಿದ್ದವು. ಈ ಬರಹಗಳಿಗೆ ಜನರಿಂದ ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಯಿತು. ಅವರಿಗೆ ಹೆಚ್ಚು ಕಕ್ಷಿದಾರರು, ಕೆಲಸಗಳು ಸಿಕ್ಕಿದವು. ಕೆನಡಾ ಮತ್ತು ದುಬೈನಿಂದ ಸಂಸ್ಥೆಗಳು ಅವರನ್ನು ಸಂದರ್ಶನಕ್ಕಾಗಿ ಕರೆದವು.

ಅನೇಕ ಜನ ಉದ್ಯಮಶೀಲರ ಹಾಗೆ ಪಾಯಸ್ ಅವರಿಗೂ ಒಂದು ಕನಸಿತ್ತು. ಆದರೆ, ಒಂದು ಸಂಸ್ಥೆಯನ್ನು ಮುನ್ನಡೆಸುವುದು ಅಥವಾ ಒಂದು ತಂಡ ರಚಿಸಿ ಮುನ್ನಡೆಸುವುದು ಹೇಗೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಮೂಲತಃ ಅವರು ಏಕಾಂಗಿಯಾಗಿ ತಮ್ಮ ಕೆಲಸ ತಾವು ಮಾಡುವ ಮನೋಭಾವದವರಾಗಿದ್ದರು. ತಮ್ಮ ಉದ್ಯಮಶೀಲತೆಯ ಕನಸನ್ನು ಹೇಗೆ ನನಸಾಗಿ ಮಾಡಿಕೊಳ್ಳಬೇಕು ಎಂಬ ಕಲ್ಪನೆ ಅವರಲ್ಲಿ ಇರಲಿಲ್ಲ. ಹಾಗಾಗಿ ಹೊರಗಿನ ವ್ಯಕ್ತಿ/ಸಂಸ್ಥೆಗಳ ನೆರವು ಪಡೆಯಲು ನಿರ್ಧರಿಸಿದರು. ಆಗ ಬೆಂಗಳೂರಿನ ಆಡಳಿತ ನಿರ್ವಹಣಾ ಸಂಸ್ಥೆಯಲ್ಲಿ (ಐಐಎಂ–ಬಿ) ಮಹಿಳೆಯರಿಗಾಗಿ ನಡೆದ ‘ನಿಮ್ಮ ಉದ್ಯಮ ಆರಂಭಿಸಿ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿದರು. ಅದರಿಂದಾಗಿ ಅವರ ಕನಸಿಗೆ ಒಂದು ರೂಪ ಬರಲಾರಂಭಿಸಿತು. ಅವರು ಸೃಜನಾತ್ಮಕವಾಗಿ, ಆಲೋಚನೆಗಳು ಕಾರ್ಯರೂಪಕ್ಕೆ ಬರುವ ರೀತಿಯಲ್ಲಿ ಆಲೋಚಿಸಲು ಕಲಿತರು.

ಇಂತಹ ಸಂದರ್ಭದಲ್ಲಿ ಕೋವಿಡ್ ಸಾಂಕ್ರಾಮಿಕ ಸ್ಥಿತಿ ಅವರಿಗೆ ವರದಾನವಾಗಿ ಪರಿಣಮಿಸಿತು! ಪಾಯಸ್ ಅವರು ಹೆಚ್ಚು ಓದಲಾರಂಭಿಸಿದರು, ಹೆಚ್ಚು ಅಧ್ಯಯನ ಮಾಡಿದರು ಮತ್ತು ತಮ್ಮ ಕ್ಷೇತ್ರದ ಇತರ ಜನರೊಂದಿಗೆ ಸಂಪರ್ಕ ಬೆಳೆಸಿ ಸಕ್ರಿಯವಾಗಿ ತೊಡಗಿಕೊಳ್ಳಲಾರಂಭಿಸಿದರು. ಮೊದಲ ಬಾರಿಗೆ ಲಿಯಾನ್ The Unopened Box ಆರಂಭಿಸಿದಾಗ, ಅದರ ಮೂಲಕ ನೀಡುವ ಸೇವೆಗಳನ್ನು ಉಚಿತವಾಗಿ ಕೊಡಲು ಯೋಚಿಸಿದ್ದರು. ಕೋವಿಡ್‍ನ ಪರಿಣಾಮದಿಂದ ತಮ್ಮ ಯೋಜನೆಗಳನ್ನು ಮರುರೂಪಿಸಿಕೊಳ್ಳಲು, ಬದಲಾಯಿಸಿಕೊಳ್ಳಲು ಅವರಿಗೊಂದು ಅವಕಾಶ ಸಿಕ್ಕಿತು. ಈಗ ತಮ್ಮ ಉದ್ದಿಮೆಯನ್ನು ಹೇಗೆ ಬೆಳೆಸಬೇಕು ಎಂಬುದರ ಸ್ಪಷ್ಟ ಕಲ್ಪನೆ ಅವರಿಗಿದೆ.

ಉದ್ಯಮಿಗಳಾಗಲು ಬಯಸುವವರು ಕನಸು ಕಾಣುತ್ತಲೇ ಇರಬೇಕೆಂದು ಲಿಯಾನ್ ಸಲಹೆ ನೀಡುತ್ತಾರೆ. ‘ದೊಡ್ಡ ಕನಸನ್ನು ಕಂಡು ಚಿಕ್ಕ ಚಿಕ್ಕ ಹೆಜ್ಜೆಗಳೊಂದಿಗೆ ಕಾರ್ಯ ಆರಂಭಿಸಿ. ಕನಸನ್ನು ವಿಸ್ತರಿಸಲು ಮಾರ್ಗಗಳನ್ನು ಹುಡುಕಿ. ಅತ್ಯಂತ ಚಿಕ್ಕ ಗುರಿ ಹಾಕಿಕೊಂಡು ಅದನ್ನು ತಲುಪಲು ಪ್ರಯತ್ನಿಸಿ, ಆಗ ಮುಂದಿನ ಗುರಿಯತ್ತ ಸಾಗಲು ನಿಮಗೆ ಉತ್ಸಾಹ ಬರುತ್ತದೆ’ ಎನ್ನುವುದು ಅವರ ಸಲಹೆ. ‘ಪ್ರಯತ್ನಗಳನ್ನು ಮುಂದುವರಿಸುತ್ತ ಹೋದರೆ, ನೀವು ಅಂದುಕೊಂಡದ್ದಕ್ಕಿಂತ ಬೇಗನೆ ಗುರಿ ತಲುಪಿ, ಕನಸು ನನಸಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ನೀವು ಮಾಡುವ ಕೆಲಸವನ್ನು ಆಳವಾಗಿ ಪ್ರೀತಿಸಿ. ನಿಮ್ಮ ಗುರಿ, ಕನಸಿನ ಬಗ್ಗೆ ನೀವು ಆಳವಾದ ಪ್ರೀತಿ ಹೊಂದಿದ್ದರೆ, ಸವಾಲುಗಳು, ಸಮಸ್ಯೆಗಳು ಎದುರಾದರೂ ನೀವು ವಿಚಲಿತರಾಗುವುದಿಲ್ಲ, ಖಿನ್ನರಾಗುವುದಿಲ್ಲ. ಇದೇ ನನ್ನಲ್ಲಿ ಬದಲಾವಣೆ ತಂದಿದ್ದು’ ಎನ್ನುತ್ತಾರೆ ಪಾಯಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT