ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ಮುಂದುವರಿದ ಕರಡಿ ಕುಣಿತ: ₹8.50 ಲಕ್ಷ ಕೋಟಿ ಸಂಪತ್ತು ಇಳಿಕೆ

ಸೆನ್ಸೆಕ್ಸ್‌ 1,053, ನಿಫ್ಟಿ 333 ಅಂಶ ಇಳಿಕೆ
Published 23 ಜನವರಿ 2024, 15:45 IST
Last Updated 23 ಜನವರಿ 2024, 15:45 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ ಮಂಗಳವಾರ 1,053 ಅಂಶ ಇಳಿಕೆ ಆಗಿದ್ದರಿಂದ ಒಂದೇ ದಿನ ಹೂಡಿಕೆದಾರರ ಸಂಪತ್ತು ₹8.50 ಲಕ್ಷ ಕೋಟಿ ಕರಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಎಸ್‌ಬಿಐ ಷೇರುಗಳ ಇಳಿಕೆಯಿಂದ ಸೆನ್ಸೆಕ್ಸ್‌ 70,370 ಅಂಶಕ್ಕೆ ಅಂತ್ಯಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 333 ಅಂಶ ಇಳಿಕೆ ಕಂಡು 21,238ಕ್ಕೆ ಮುಟ್ಟಿತ್ತು.

ಉದ್ಯಮ ಸಂಸ್ಥೆಗಳ ತ್ರೈಮಾಸಿಕ ಫಲಿತಾಂಶವು ಆಶಾದಾಯಕವಾಗಿಲ್ಲದ ಕಾರಣ ಷೇರು ಮಾರಾಟದ ಒತ್ತಡ ಸೃಷ್ಟಿಯಾಯಿತು ಎಂದು ಷೇರು ದಲ್ಲಾಳಿಗಳು ಹೇಳಿದ್ದಾರೆ. 

‘ಇಂದು ಮಾರುಕಟ್ಟೆಯು ಸಕಾರಾತ್ಮಕವಾಗಿಯೇ ಆರಂಭವಾದರೂ ಬಳಿಕ ನಿರಂತರ ಕುಸಿತವನ್ನೇ ದಾಖಲಿಸಿತು. ಹಣಕಾಸಿನಂತಹ ಪ್ರಮುಖ ಕ್ಷೇತ್ರಗಳು  ಭಾರಿ ನಷ್ಟಕ್ಕೆ ಒಳಗಾದವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಷೇರು ಮಾರಾಟಕ್ಕೆ ಇಳಿದರು. ಮಧ್ಯಪ್ರಾಚ್ಯದಲ್ಲಿನ ಸಂಘರ್ಷ, ಮಾರುಕಟ್ಟೆಯು ಇತ್ತೀಚೆಗೆ ಸ್ವಲ್ಪ ಮಟ್ಟಿನ ಏರಿಕೆ ಕಂಡದ್ದರ ಲಾಭ ಪಡೆಯುವ ಧಾವಂತದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರು ಮಾರಾಟ ಮಾಡಿದರು’ ಎಂದು ಜಿಯೊಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ವಿನೋದ್‌ ನಾಯರ್‌ ಹೇಳಿದ್ದಾರೆ. 

ಇಂಡಸ್‌ಇಂಡ್‌ ಬ್ಯಾಂಕ್ (ಶೇ 6.13), ಎಸ್‌ಬಿಐ (ಶೇ 3.99), ಹಿಂದೂಸ್ತಾನ್‌ ಯೂನಿಲಿವರ್‌ (ಶೇ 3.82), ಆಕ್ಸಿಸ್‌ ಬ್ಯಾಂಕ್‌ (ಶೇ 3.41) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ (ಶೇ 3.23) ಷೇರುಗಳು ಇಳಿಕೆ ಆಗಿವೆ. ಸನ್‌ಫಾರ್ಮಾ, ಭಾರ್ತಿ ಏರ್‌ಟೆಲ್‌, ಐಸಿಐಸಿಐ ಬ್ಯಾಂಕ್‌, ಪವರ್‌ಗ್ರಿಡ್‌, ಟಿಸಿಎಸ್‌ ಮತ್ತು ಬಜಾಜ್‌ ಫಿನ್‌ಸರ್ವ್‌ ಗಳಿಕೆ ಕಂಡಿವೆ.

ಬಿಎಸ್‌ಇ ಮಿಡ್‌ಕ್ಯಾಪ್‌ ಶೇ 2.95ರಷ್ಟು ಇಳಿದಿದೆ. ರಿಯಾಲ್ಟಿ (ಶೇ 5.46), ಸೇವೆ (ಶೇ 4.06), ಲೋಹ (ಶೇ 3.97), ತೈಲ ಮತ್ತು ಅನಿಲ (ಶೇ 3.96), ಇಂಧನ (ಶೇ 3.70) ಸರಕು, ಎಫ್‌ಎಂಸಿಜಿ, ಹಣಕಾಸು ಸೇವೆ ಇಳಿಕೆ ಕಂಡಿವೆ. ಹೆಲ್ತ್‌ಕೇರ್‌ ಸೂಚ್ಯಂಕ ಶೇ 1.02ರಷ್ಟು ಏರಿಕೆ ಆಗಿದೆ.

ಹಾಂಗ್‌ಕಾಂಗ್‌ನ ಹ್ಯಾಂಗ್‌ ಶೆಂಗ್‌ ಶೇ 2.63, ಚೀನಾದ ಶಾಂಘೈ ಕಾಂಪೋಸಿಟ್‌ ಶೇ 0.52ರಷ್ಟು ಏರಿದ್ದರೆ, ಜಪಾನ್‌ನ ನಿಕೇಯ್‌ ಶೇ 0.8ರಷ್ಟು ಇಳಿದಿದೆ. ಬ್ರೆಂಟ್‌ ಕಚ್ಚಾ ತೈಲ ಪ್ರತಿ ಬ್ಯಾರಲ್‌ಗೆ ಶೇ 0.40ರಷ್ಟು ಕಡಿಮೆ ಆಗಿ, 79.74 ಡಾಲರ್‌ ಆಗಿದೆ.

ಗಳಿಕೆ ಕಂಡ ಕಂಪನಿಗಳು

7.05; ಸಿಪ್ಲಾ

3.93; ಸನ್‌ಫಾರ್ಮಾ

3.05; ಭಾರ್ತಿ ಏರ್‌ಟೆಲ್‌

2.02; ಐಸಿಐಸಿಐ ಬ್ಯಾಂಕ್‌

0.97; ಹೀರೊ ಮೋಟೋಕಾರ್ಪ್

ಇಳಿಕೆ ಕಂಡ ಕಂಪನಿಗಳು

–6.10;ಇಂಡಸ್‌ಇಂಡ್‌ ಬ್ಯಾಂಕ್‌

–5.89; ಕೋಲ್‌ ಇಂಡಿಯಾ

–5.02; ಒಎನ್‌ಜಿಸಿ

–4.69; ಅದಾನಿ ಪೋರ್ಟ್ಸ್‌

–4.62; ಎಸ್‌ಬಿಐ ಲೈಫ್‌ ಇನ್ಶೂರೆನ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT