ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಗೇಟ್‌ನಿಂದ ಉದ್ಯೋಗಿಗಳಿಗೆ ಷೇರು ಮರು ಖರೀದಿ ಸೌಲಭ್ಯ

Published 8 ಮಾರ್ಚ್ 2024, 12:29 IST
Last Updated 8 ಮಾರ್ಚ್ 2024, 12:29 IST
ಅಕ್ಷರ ಗಾತ್ರ

ಬೆಂಗಳೂರು: ಮೈಗೇಟ್‌ ಕಂಪನಿಯು ತನ್ನ 50ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಷೇರು ಮರು ಖರೀದಿ ಯೋಜನೆಯನ್ನು ಪ್ರಕಟಿಸಿದೆ.

ನಾಲ್ಕು ವರ್ಷಗಳ ಕಾಲ ಸೇವೆ ಪೂರೈಸಿರುವ ಉದ್ಯೋಗಿಗಳಿಗೆ ಈ ಸೌಲಭ್ಯ ಸಿಗಲಿದೆ. ಸ್ಥಾಪಿತ ಷೇರುಗಳ ಶೇ 20ರಷ್ಟನ್ನು ನಗದೀಕರಿಸುವ ಆಯ್ಕೆ ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ. 

‘ಕಂಪನಿಯ ವೆಚ್ಚವನ್ನು ಕಡಿಮೆಗೊಳಿಸಲಾಗಿದೆ. ಇದರಿಂದ ತ್ರೈಮಾಸಿಕ ಆದಾಯದಲ್ಲಿ ಹೆಚ್ಚಳವಾಗಿದೆ. ಆರ್ಥಿಕ ಸ್ಥಿತಿಯೂ ಸದೃಢವಾಗಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಲಾಭದತ್ತ ಮರಳಿದೆ. ಭವಿಷ್ಯ ಯೋಜನೆಗಳಿಗೆ ಹಣ ವಿನಿಯೋಗಿಸಲು ಉತ್ತಮ ಬಂಡವಾಳವೂ ಇದೆ. ಹಾಗಾಗಿ, ಕಂಪನಿಯ ಅಭಿವೃದ್ಧಿಗೆ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದವರಿಗೆ ಕೃತಜ್ಞತೆಯ ಸೂಚಕವಾಗಿ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ’ ಎಂದು ಮೈಗೇಟ್‌ನ ಸಹ ಸಂಸ್ಥಾಪಕ ಅಭಿಷೇಕ್ ಕುಮಾರ್ ತಿಳಿಸಿದ್ದಾರೆ.

2022–23ನೇ ಹಣಕಾಸು ವರ್ಷದಲ್ಲಿ ಕಂಪನಿಯು ₹40.1 ಕೋಟಿ ಆದಾಯ ಗಳಿಸಿತ್ತು. ಇದಕ್ಕೆ ಹೋಲಿಸಿದರೆ 2023–24ರಲ್ಲಿ ಆದಾಯವು 77.3ರಷ್ಟು ಹೆಚ್ಚಳವಾಗಿದೆ. ಒಟ್ಟು ₹71.10 ಕೋಟಿಗೆ ತಲುಪಿದೆ. 2021–22ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಕಂಪನಿಯು 8.4 ಪಟ್ಟು ಬೆಳೆದಿದೆ ಎಂದು ಕಂಪನಿಗಳ ರಿಜಿಸ್ಟ್ರಾರ್‌ಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.  

2016ರಲ್ಲಿ ವಿಜಯ್ ಅರಿಸೆಟ್ಟಿ, ಅಭಿಷೇಕ್ ಕುಮಾರ್ ಮತ್ತು ಶ್ರೇಯನ್ಸ್ ಡಾಗಾ ಅವರು ಈ ಕಂಪನಿಯನ್ನು ಸ್ಥಾಪಿಸಿದರು.

ಗೇಟೆಡ್ ಸಮುದಾಯಗಳ ಜೀವನಮಟ್ಟದ ಸುಧಾರಣೆಗೆ ಒತ್ತು ನೀಡಲಾಗಿದೆ. 25 ಸಾವಿರಕ್ಕೂ ಹೆಚ್ಚು ಸಮುದಾಯಗಳು ಮತ್ತು 40 ಲಕ್ಷ ಕುಟುಂಬಗಳು ಇದರ ಸೌಲಭ್ಯ ಪಡೆಯುತ್ತಿವೆ. ನೂರು ಕೋಟಿಗೂ ಹೆಚ್ಚು ಸಂದರ್ಶಕರ ನಮೂದುಗಳ ನಿರ್ವಹಣೆಯನ್ನು ಸುಗಮಗೊಳಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT